ETV Bharat / state

ಗಲಭೆ ವೇಳೆ ಶ್ರೀರಾಮುಲು ವಿರುದ್ಧ ಅವಾಚ್ಯ ಪದ ಬಳಸಿ ಹಲ್ಲೆಗೆ ಯತ್ನ: ಜನಾರ್ದನ ರೆಡ್ಡಿ ಗಂಭೀರ ಆರೋಪ

ಬಳ್ಳಾರಿ ಗಲಭೆ ಪ್ರಕರಣ ಸಂಬಂಧ ಶಾಸಕ ಜನಾರ್ದನ ರೆಡ್ಡಿ ಅವರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಗಂಭೀರ ಆರೋಪ ಮಾಡಿದ್ದಾರೆ.

JANARDHAN REDDY  SRIRAMULU  BALLARI CONFLICT ಬಳ್ಳಾರಿ ಗಲಭೆ BALLARI CLASH
ಜನಾರ್ದನ ರೆಡ್ಡಿ ಮಾಧ್ಯಮಗೋಷ್ಟಿ (ETV Bharat)
author img

By ETV Bharat Karnataka Team

Published : January 11, 2026 at 7:54 PM IST

2 Min Read
Choose ETV Bharat

ಬಳ್ಳಾರಿ: ಮಾಜಿ ಸಚಿವ ಬಿ ಶ್ರೀರಾಮುಲು ವಿರುದ್ಧ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಹಾಗೂ ಸಹಚರರು ಅವಾಚ್ಯ ಶಬ್ದ ಬಳಸಿದ್ದಲ್ಲದೇ ಹಲ್ಲೆಗೆ ಯತ್ನಿಸಿದ್ದರು ಎಂಬುದನ್ನು ವಿಡಿಯೋಗಳು ಸಾಕ್ಷಿಕರಿಸುತ್ತಿವೆ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಮಾಧ್ಯಮಗೋಷ್ಟಿ ನಡೆಸಿ ಬ್ಯಾನರ್ ಗಲಾಟೆಯ ಮತ್ತೊಂದು ವಿಡಿಯೋ ರಿಲೀಸ್ ಮಾಡಿ ಅವರು ಮಾತನಾಡಿದರು. ಗಲಾಟೆ ವೇಳೆ ಸತೀಶ್ ರೆಡ್ಡಿ ಹಾಗೂ ಸಹಚರರು, ಶ್ರೀರಾಮುಲು ಅವರ ವಿರುದ್ಧ ಜಾತಿ ಹಿಡಿದು ಅವಾಚ್ಯ ಶಬ್ದ ಬಳಸಿದ್ದಲ್ದದೇ, ಹೊಡೆಯಿರಿ ಎಂದು ಹೇಳಿರುವ ವಿಡಿಯೋ ತುಣುಕುಗಳನ್ನು ಬಿಡುಗಡೆಗೊಳಿಸಿರುವೆ. ಗಲಾಟೆ ನಡೆಯುವ ಮೊದಲು ಶ್ರೀರಾಮುಲು ಅವರು, ಸತೀಶ್ ರೆಡ್ಡಿಗೆ ವಿನಾಕಾರಣ ಗಲಭೆ ಬೇಡ ಇಲ್ಲಿಂದ ತೆರಳಿ ಎಂದು ತಿಳಿಸಿದ್ದರು. ಆದರೂ, ಮೈಮೇಲೆ ಬಿದ್ದು ಸತೀಶ್ ರೆಡ್ಡಿ ಹಲ್ಲೆಗೆ ಯತ್ನಿಸಿರುವ ವಿಡಿಯೋಗಳು ಸಾಕ್ಷಿಯಾಗಿವೆ. ಹೀಗಿದ್ದರೂ ಪೊಲೀಸರು, ತನಿಖಾಧಿಕಾರಿಗಳಿಂದ ಯಾರ ಬಂಧನವೂ ಆಗಿಲ್ಲ ಎಂದು ದೂರಿದರು.

ಮಧ್ಯಾಹ್ನ ಬ್ಯಾನರ್ ತೆಗೆಸಿದ ಬಳಿಕ, ರಾತ್ರಿ ಬ್ಯಾನರ್ ಮತ್ತೆ ಕಟ್ಟುವ ನೆಪವೊಡ್ಡಿ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುವ ಸಂಚು ಮೊದಲೇ ಸತೀಶ್ ರೆಡ್ಡಿ ರೂಪಿಸಿದ್ದರು. ಈ ಕಾರಣಕ್ಕೆ ನನ್ನ ನಿವಾಸದ ಎದುರು ಮಾರಕಾಸ್ತ್ರಗಳೊಂದಿಗೆ ಸಾವಿರಾರು ಜನರನ್ನು ಜಮಾಯಿಸಿದ್ದರು. ಶ್ರೀರಾಮುಲು ಅವರ ಮೇಲೆ ಗುಂಡು ಹರಿಸೋಕೆ ಆಗ್ಲಿಲ್ಲ, ಬೈದಾಡಿದ್ದಾರೆ. ನಾನು ಬಂದ ಕೂಡಲೇ ಫೈರಿಂಗ್ ಮಾಡಿದ್ದಾರೆ, ಇದು ನನ್ನ ಹತ್ಯೆಯ ವ್ಯವಸ್ಥಿತ ಸಂಚು ಆರೋಪಿಸಿದರು.

ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಕಣ್ಣೊರೆಸುವ ತಂತ್ರ, ಪ್ರಾಮಾಣಿಕ ಅಧಿಕಾರಿಗಳಾಗಿದ್ದರೆ ಇಷ್ಟೊತ್ತಿಗೆ ಆರೋಪಿಗಳನ್ನು ಬಂಧಿಸುತ್ತಿದ್ದರು. ಘಟನೆ ನಡೆದು 10 ದಿನ ಕಳೆದರೂ ಇಲ್ಲಿವರೆಗೂ ಬಂಧನವಾಗಿಲ್ಲ. ಸಿಐಡಿ ಹಾಗೂ ಪೊಲೀಸರು ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನ್ಯಾಯ ಸಿಗಲಿದೆ. ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನಮ್ಮ ವಿರುದ್ಧ ಪಾದಯಾತ್ರೆ ನಡೆಸಿ, ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಹಾಗೆಯೇ ನಾವು ಕೂಡ ಹೈಕೋರ್ಟ್ ಮೂಲಕ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯ ಮಾಡ್ತೇವೆ ಎಂದರು.

ಭಯ ಇಲ್ಲದಿದ್ದಾಗ ಶಾಸಕರು ಹೀಗೆ ಮಾಡ್ತಾರೆ. ಶ್ರೀರಾಮುಲು ಅಂತಹ ಮಹಾನ್ ನಾಯಕರ ವಿರುದ್ಧ ಸತೀಶ್ ರೆಡ್ಡಿ ಹಗುರವಾಗಿ ಮಾತಾಡ್ತಾನೆ ಅಂದ್ರೆ, ವ್ಯವಸ್ಥೆ ಎಲ್ಲಿಗೆ ತಲುಪಿದೆ, ಏನಾಗಿದೆ ಎಂಬುದು ಬಯಲಾಗಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಹೋರಾಟ ಸ್ವರೂಪ ಬದಲಾಗಲಿದೆ. ಜ.17 ರಂದು ನಗರದಲ್ಲಿ ಘಟನೆ ಖಂಡಿಸಿ ಬೃಹತ್ ಹೋರಾಟ ಮಾಡ್ತೇವೆ. ಜೊತೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಕುರಿತು ಸೋಮವಾರ ನಿರ್ಧಾರವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು ಇದ್ದರು.

ನಗರಕ್ಕೆ ಸಿಐಡಿ ತಂಡ: ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಸಿಐಡಿ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿದೆ. ಸಿಐಡಿ ಎಸ್​ಪಿ ಹರ್ಷ ಪ್ರಿಯವದ ಅವರ ನೇತೃತ್ವದಲ್ಲಿ ಒಟ್ಟು 8 ಮಂದಿ ಅಧಿಕಾರಿಗಳನ್ನೊಳಗೊಂಡ ಸಿಐಡಿ ತಂಡ ಭಾನುವಾರ ಬಳ್ಳಾರಿ ಎಸ್ಪಿ ಕಚೇರಿ ಆಗಮಿಸಿ, ಕೇಸ್ ಫೈಲ್ ಪಡೆಯುವುದರ ಜೊತೆಗೆ ಘಟನೆ ಕುರಿತು ಸ್ಥಳೀಯ ಐಒಗಳ ಜೊತೆಗೆ ಮಾಹಿತಿ ಪಡೆದರು. ಬಳಿಕ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ: ಶಾಸಕ ಜನಾರ್ದನ ರೆಡ್ಡಿ

ಉದ್ದೇಶ ಪೂರ್ವಕವಾಗಿಯೇ ರಾಜಶೇಖರ್​​​​ ರೆಡ್ಡಿ ಹತ್ಯೆ ಮಾಡಲಾಗಿದೆ: ಜನಾರ್ದನ ರೆಡ್ಡಿ ಆರೋಪ