ಮಹಿಳಾ ದಿನಾಚರಣೆ ವಿಶೇಷ: ತುಳು ಸಿನಿಮಾ ರಂಗದಲ್ಲಿ ನಿರ್ದೇಶನದ ಮೊದಲ ಕ್ಯಾಪ್ ಹಾಕಿದ ಅಶ್ವಿನಿ ಕೋಟ್ಯಾನ್
ನಾಯಕಿ ಪಾತ್ರಕ್ಕಿರುವ ಬೇಡಿಕೆಯನ್ನು ಸವಾಲಾಗಿ ಸ್ವೀಕರಿಸಿದ ಅಶ್ವಿನಿ ಕೋಟ್ಯಾನ್ ಅವರು ತುಳು ಸಿನಿಮಾ ರಂಗದಲ್ಲಿ ನಿರ್ದೇಶನದ ಮೊದಲ ಕ್ಯಾಪ್ ಹಾಕಿದ್ದಾರೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅಶ್ವಿನಿ ಕೋಟ್ಯಾನ್ ಸಾಧನೆಯ ಹಾದಿಯ ಬಗ್ಗೆ ಮಾಹಿತಿ ಇಲ್ಲಿದೆ.

Published : March 4, 2026 at 6:09 PM IST
ವಿಶೇಷ ವರದಿ: ವಿನೋದ್ ಪುದು
ಮಂಗಳೂರು(ದಕ್ಷಿಣ ಕನ್ನಡ): ಸಿನಿಮಾ “ನಾಯಕಿ” ಎಂದರೆ ಗ್ಲಾಮರ್, ಖ್ಯಾತಿ, ಚಪ್ಪಾಳೆ. ಆದರೆ ಅದರ ಹಿಂದೆ ಇರುವ ಒತ್ತಡ, ಅಸಹನೀಯ ಡಿಮ್ಯಾಂಡ್‌ಗಳು ಮತ್ತು ಸವಾಲುಗಳನ್ನು ಎದುರಿಸಿ, ಅದನ್ನೇ ಸವಾಲಾಗಿ ಸ್ವೀಕರಿಸಿ ತುಳು ಚಿತ್ರರಂಗದಲ್ಲಿ ನಿರ್ದೇಶನದ ಮೊದಲ ಕ್ಯಾಪ್ ಹಾಕಿದ ಮಹಿಳೆ ಅಶ್ವಿನಿ ಕೋಟ್ಯಾನ್. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರ ಬದುಕಿನ ಪಯಣದ ಬಗ್ಗೆ ವಿಶೇಷ ವರದಿ ಇಲ್ಲಿದೆ.
ಅಶ್ವಿನಿ ಅವರ ಸಿನಿ ಜೀವನ ಡ್ಯಾನ್ಸರ್ ಆಗಿ ಆರಂಭವಾಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದ ಚಿತ್ರೀಕರಣದ ವೇಳೆ ನಾಲ್ಕು ದಿನಗಳ ಕಾಲ ಹಾಡಿನ ಶೂಟಿಂಗ್‌ನಲ್ಲಿ ಭಾಗವಹಿಸಿದ ಅನುಭವ ಅವರ ಮನಸ್ಸಿನಲ್ಲಿ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸಿತು. “ಸಿನಿಮಾ ಹೇಗೆ ಮೂಡಿ ಬರುತ್ತದೆ?”, “ಕ್ಯಾಮರಾ ಹಿಂದೆ ಏನಾಗುತ್ತದೆ?” ಎಂಬ ಪ್ರಶ್ನೆಗಳೇ ಅವರನ್ನು ಚಿತ್ರರಂಗದತ್ತ ಕರೆದೊಯ್ದವು.
ಕಾಲೇಜು ದಿನಗಳಲ್ಲಿ ಸುಧೀರ್ ರಾಜ್ ಅವರ ಡ್ರಾಮಾ ತಂಡ ಸೇರಿಕೊಂಡ ಅವರು ಹಲವು ಕಡೆಗಳಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಈ ರಂಗಭೂಮಿ ಅನುಭವವೇ ಅವರ ಅಭಿನಯಕ್ಕೆ ಗಟ್ಟಿತನ ನೀಡಿತು. ಬಳಿಕ ‘ಕಾವಳ’ ಆರ್ಟ್ ಫಿಲ್ಮ್‌ನಲ್ಲಿ ಮುಖ್ಯ ಪಾತ್ರದ ಅವಕಾಶ ಸಿಕ್ಕಿದ್ದು, ಏಳು ದಿನಗಳ ಚಿತ್ರೀಕರಣದ ಮೂಲಕ ತಾಂತ್ರಿಕ ಜ್ಞಾನ – ಕ್ಯಾಮರಾ, ಲೈಟ್ಸ್, ಶಾಟ್ ವಿಭಾಗ – ಎಲ್ಲದರ ಅರಿವು ಮೂಡಿಸಿತು.
2011ರಿಂದ ಜಾಹೀರಾತು ಕ್ಷೇತ್ರಕ್ಕೆ ಕಾಲಿಟ್ಟ ಅಶ್ವಿನಿ, ಕ್ರಿಯೇಟಿವ್ ಹಾಗೂ ಕಾನ್ಸೆಪ್ಟ್ ಡೈರೆಕ್ಟರ್ ಆಗಿ 200ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ನಿರಂತರ ಫೋಟೋಶೂಟ್‌ಗಳು, ಪ್ರಚಾರ ಚಿತ್ರೀಕರಣಗಳು, ಎರಡು-ಮೂರು ದಿನಗಳ ಶೂಟ್ ಶೆಡ್ಯೂಲ್‌ಗಳು ಅವರಿಗೆ ಪ್ರಾಯೋಗಿಕ ಅನುಭವ ನೀಡಿದವು. ಸುಮಾರು 11 ವರ್ಷಗಳ ಹಿಂದೆ ನಡೆದ ದೀರ್ಘ ಶೂಟಿಂಗ್ ಅವಧಿ ಅವರ ಜೀವನದಲ್ಲಿ ದೊಡ್ಡ ಸವಾಲಾಗಿತ್ತು. ಆದರೆ ಅದನ್ನೇ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶವನ್ನಾಗಿ ಮಾಡಿಕೊಂಡರು.

ಕನ್ನಡ ಸಿನಿಮಾಕ್ಕೆ ಫ್ಲೈಟ್ನಲ್ಲಿ ಕರೆಸಿಕೊಂಡ ಸಿನಿಮಾ ತಂಡ ಬೇಡಿಕೆಯೊಂದನ್ನು ಇಟ್ಟಿತ್ತು. ಅದನ್ನು ಅಶ್ವಿನಿ ಅವರು ನಿರಾಕರಿಸಿದ್ದರು. ಆಗ ಅವರ ಮುಖದ ಬಣ್ಣವನ್ನು ವ್ಯಂಗ್ಯ ಮಾಡಿ ನೀವು ಮುಖವನ್ನು ಕನ್ನಡಿಯಲ್ಲಿ ನೋಡಿದ್ದೀರ?, ನಮ್ಮ ಬೇಡಿಕೆಗೆ ಒಪ್ಪಿದರೆ ಒಳ್ಳೆ ಅವಕಾಶ ಸಿಗುತ್ತದೆ ಎಂದಿದ್ದರು. ಆಗ ಅಶ್ವಿನಿ ಅವರು ಅದನ್ನು ಸವಾಲಾಗಿ ಸ್ವೀಕರಿಸಿ ತುಳು ಸಿನಿಮಾ ನಿರ್ದೇಶನ ಮಾಡುವ ಸಾಹಸಕ್ಕೆ ಇಳಿದರು.

ಕನ್ನಡ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕಾಗಿ ಎದುರಾಗುವ ಅತಿಯಾದ ನಿರೀಕ್ಷೆಗಳು, ಕೆಲವೊಮ್ಮೆ ಸಹಿಸಲಾರದ ಡಿಮ್ಯಾಂಡ್‌ಗಳು ಅವರ ಮನಸ್ಸಿನಲ್ಲಿ ಬೇಸರ ಮೂಡಿಸಿದವು. ಪಾತ್ರಕ್ಕಿಂತ ಬೇರೆ ಅಂಶಗಳಿಗೆ ಹೆಚ್ಚಿನ ಒತ್ತು ನೀಡುವ ಪರಿಸ್ಥಿತಿಯನ್ನು ಅವರು ಪ್ರಶ್ನಿಸಿದರು. ಅದೇ ಸಂದರ್ಭದಲ್ಲಿ “ನಾನು ಕಥೆ ಹೇಳುವವರಾಗಬಾರದೇ?” ಎಂಬ ಆಲೋಚನೆ ಮೂಡಿ, ನಿರ್ದೇಶನದತ್ತ ಹೆಜ್ಜೆ ಇಟ್ಟರು.

2016ರಲ್ಲಿ ಅವರು ನಮ್ಮ ಕುಡ್ಲ ಎಂಬ ಸಂಪೂರ್ಣ ತುಳು ಚಿತ್ರವೊಂದನ್ನು ನಿರ್ದೇಶಿಸಿ ಬಿಡುಗಡೆ ಮಾಡಿದರು. ಪ್ರಕಾಶ್ ಶೆಟ್ಟಿ ಬರೆದ ಕಥೆಗೆ ಅವರು ಜೀವ ತುಂಬಿದರು. ಮೊದಲಿಗೆ ಬೇರೆ ಹೀರೋ ಆಯ್ಕೆ ಮಾಡಿದರೂ, ದಿನಾಂಕ ಸಮಸ್ಯೆಯಿಂದ ಪ್ರಕಾಶ್ ಶೆಟ್ಟಿ ಸ್ವತಃ ಹೀರೋ ಆಗಿ ಸಿನಿಮಾ ಪೂರ್ಣಗೊಂಡಿತು. ಚಿತ್ರ ನಿರೀಕ್ಷಿತ ವಾಣಿಜ್ಯ ಯಶಸ್ಸು ಕಾಣದಿದ್ದರೂ, ಅಶ್ವಿನಿಗೆ ಅದು ಜೀವನದ ಅತ್ಯುತ್ತಮ ಕಲಿಕೆಯಾಗಿದೆ. “ತುಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದು ಕಷ್ಟವಾದರೂ, ಇಲ್ಲಿ ಸಿಗುವ ಜ್ಞಾನ ಅಮೂಲ್ಯ” ಎಂದು ಅವರು ಹೇಳುತ್ತಾರೆ.

ಇದರ ಮಧ್ಯೆ ಅವರು ನಿರ್ಮಿಸಿದ ಮತ್ತೊಂದು ಆರ್ಟ್ ಸಿನಿಮಾ ತಂಬಿಲ ಸುಮಾರು ₹50–60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದರೂ, ನಿರ್ಮಾಪಕರ ಅಸಮ್ಮತಿಯಿಂದ ಬಿಡುಗಡೆಯಾಗದೇ ಉಳಿದಿರುವುದು ಅವರ ಮನಸ್ಸಿಗೆ ನೋವಾಗಿದೆ. ಆದರೂ ಸೆಂಟ್ರಲ್ ಮಾರ್ಕೆಟ್ ಹಾಗೂ ರಾಮಕೃಷ್ಣ ಗೋವಿಂದ ಎಂಬ ಎರಡು ಚಿತ್ರಗಳ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಸೂಕ್ತ ಸಮಯದ ನಿರೀಕ್ಷೆಯಲ್ಲಿದ್ದಾರೆ.
“ನಾಯಕಿ ಪಾತ್ರಕ್ಕೆ ಕೆಲವೊಮ್ಮೆ ಸಹಿಸಲಾರದಷ್ಟು ಡಿಮ್ಯಾಂಡ್ ಇರುತ್ತದೆ. ಆದರೆ ಅದನ್ನು ನಾನು ಸವಾಲಾಗಿ ತೆಗೆದುಕೊಂಡೆ. ಪ್ರತಿಯೊಂದು ಅನುಭವವೂ ನನಗೆ ಪಾಠ ಕಲಿಸಿತು. ತುಳು ಇಂಡಸ್ಟ್ರಿ ಕಷ್ಟಕರವಾದರೂ ಕಲಿಕೆಯ ವೇದಿಕೆ. ನಾನು ಮತ್ತೆ ಉತ್ತಮ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದೇನೆ” ಎಂದು ಅಶ್ವಿನಿ ಕೋಟ್ಯಾನ್ ಹೇಳಿದ್ದಾರೆ.
ಸದ್ಯ ಅವರು ಜಾಹೀರಾತು, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಹಾಗೂ ಈವೆಂಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 2016ರ ಚಿತ್ರ ನಂತರ ಎರಡು ವರ್ಷಗಳ ನಿರುತ್ಸಾಹದ ಅವಧಿ ಕಂಡರೂ, 2018ರಿಂದ ಮತ್ತೆ ಹೊಸ ಉತ್ಸಾಹದೊಂದಿಗೆ ಕೆಲಸ ಆರಂಭಿಸಿದ್ದಾರೆ. ತುಳು ಚಿತ್ರರಂಗದಲ್ಲಿ ಮಹಿಳೆಯರಿಗೂ ನಿರ್ದೇಶನದ ದಾರಿ ತೆರೆದ ಅಶ್ವಿನಿ ಕೋಟ್ಯಾನ್, ಮಹಿಳಾ ದಿನಾಚರಣೆಯ ನಿಜವಾದ ಸ್ಪೂರ್ತಿ.
ಇವುಗಳನ್ನೂ ಓದಿ:

