ಸಚಿವ ಮಂಕಾಳ ವೈದ್ಯ - ಶಾಸಕ ಸತೀಶ್ ಸೈಲ್ ನಡುವೆ ವಾಗ್ವಾದ : ಕೆಡಿಪಿ ಸಭೆಯಿಂದ ಹೊರನಡೆದ ಶಾಸಕ
ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಕೊರತೆ ಬಗ್ಗೆ ಚರ್ಚೆ ನಡೆಯುವಾಗ ಕೆಲ ಮಾಹಿತಿಯಿಂದ ಅಸಮಾಧಾನಗೊಂಡ ಶಾಸಕ ಸತೀಶ್ ಸೈಲ್, ಸಭೆಯಿಂದ ಹೊರನಡೆದ ಘಟನೆ ನಡೆದಿದೆ.

Published : March 2, 2026 at 5:43 PM IST
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಆಸ್ಪತ್ರೆಗಳ ಸಮಸ್ಯೆ ಕುರಿತಾದ ಚರ್ಚೆ ತಾರಕಕ್ಕೇರಿದ್ದು, ಶಾಸಕ ಸತೀಶ್ ಸೈಲ್ ಸಭೆಯಿಂದ ಹೊರನಡೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಕೊರತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಅಧಿಕಾರಿಗಳು ಔಷಧಗಳ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು. ಈ ಸುಳ್ಳು ಮಾಹಿತಿಯಿಂದ ಕೆರಳಿದ ಶಾಸಕ ಸತೀಶ್ ಸೈಲ್, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸಭೆಯಲ್ಲಿ ನಡೆದಿದ್ದೇನು?: ಜಿಲ್ಲೆಯಲ್ಲಿ ವೈದ್ಯರ ಕೊರತೆಯೇ ಎದ್ದುಕಾಣುತ್ತಿದೆ. ವೈದ್ಯರೇ ಇಲ್ಲದಿದ್ದ ಮೇಲೆ ರೋಗಿಗಳಿಗೆ ಔಷಧಗಳನ್ನು ಯಾರು ನೀಡುತ್ತಾರೆ? ವಾಸ್ತವ ಹೀಗಿರುವಾಗ ಔಷಧ ಲಭ್ಯವಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಶಾಸಕ ಸತೀಶ್ ಸೈಲ್ ಸಭೆಯ ಗಮನಕ್ಕೆ ತಂದರು.
ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ ಅವರು, ವೈದ್ಯರ ಕೊರತೆ ಇದ್ದರೆ ನೀವೇ (ಶಾಸಕರೇ) ತರಬೇಕು ಎಂದು ಹೇಳಿದರು. ಈ ಮಾತು ಶಾಸಕರನ್ನು ಇನ್ನಷ್ಟು ಕೆರಳಿಸಿತು. ನೀವು ಹೇಳಿದ್ದನ್ನೆಲ್ಲ ಕೇಳಿಕೊಂಡು ಹೋಗಲು ನಾವೇನು ಹೆಬ್ಬೆಟ್ಟು ಗಿರಾಕಿಗಳಲ್ಲ (ಅಂಗೂಟಾ ಛಾಪ್). ಜನರು ಸಮಸ್ಯೆಗಳ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಾರೆ, ಅವರಿಗೆ ನಾವು ಉತ್ತರ ನೀಡಬೇಕು ಎಂದು ಹರಿಹಾಯ್ದರು.
ತಾಲೂಕು ಮಟ್ಟದ ಗಂಭೀರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಚರ್ಚಿಸಬಾರದು ಎನ್ನುವುದಾದರೆ ನಾನು ಇಲ್ಲಿ ಕೂರುವ ಅಗತ್ಯವಿಲ್ಲ ಎಂದು ಹೇಳಿದ ಶಾಸಕರು, ಈ ರೀತಿಯ ಸಭೆ ಮಾಡಲು ನಾನು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಎದ್ದು ಹೊರನಡೆದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ನಡುವಿನ ಈ ಬಹಿರಂಗ ಸಂಘರ್ಷ ಜಿಲ್ಲಾ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಡಿಕೆಶಿ ಕಡೆಯವರ ಸಭೆಗಳ ಮೇಲೆ ನಿಗಾ ಇಡಲು ಸಿಎಂ ಒಬ್ಬ ಎಸ್‌ಪಿ ನೇಮಿಸಿದ್ದಾರೆ: ಆರ್.ಅಶೋಕ್

