ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಪಟ್ಟಿ ಮಾಡಲು ಸೂಕ್ತ ಆದೇಶ ಹೊರಡಿಸಲಾಗುವುದು: ಹೈಕೋರ್ಟ್
ಎಸ್ಸಿ, ಎಸ್ಟಿ ಸಮುದಾಯದವರ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಸಂಬಂಧಿತ ಪೀಠದ ಮುಂದೆ ಪಟ್ಟಿ ಮಾಡಲು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.

Published : January 10, 2026 at 7:15 PM IST
ಬೆಂಗಳೂರು: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಸಂಬಂಧಿತ ಪೀಠದ ಮುಂದೆ ಪಟ್ಟಿ ಮಾಡಲು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.
ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ ಅಡಿ ಏಕ ಪಕ್ಷೀಯ ಮಧ್ಯಂತರ ಆದೇಶ, ತನಿಖೆ ಅಥವಾ ವಿಚಾರಣೆಗೆ ತಡೆ ನೀಡಬಾರದು ಎಂದು ಹೈಕೋರ್ಟ್ ಎಲ್ಲ ಪೀಠಗಳಿಗೆ ನಿರ್ದೇಶನ ಅಥವಾ ಸುತ್ತೋಲೆ ಹೊರಡಿಸಬೇಕು ಎಂದು ಕೋರಿ ಬೆಂಗಳೂರಿನ ಸೋಮಶೇಖರ್ ರಾಜವಂಶಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ಕಾಯ್ದೆ ಅಡಿ ಆರಂಭಿಸಿರುವ ಪ್ರಕ್ರಿಯೆಯನ್ನು ಹೈಕೋರ್ಟ್ ಹಲವು ಪೀಠಗಳು ತಡೆದಿವೆ. ಕಾಯ್ದೆಯ ಕಡ್ಡಾಯ ನಿಬಂಧನೆಗೆ ವಿರುದ್ಧವಾಗಿ ತಡೆ ನೀಡಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ. ಆದರೆ, ಈ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಬಾರದಿತ್ತು ಎಂದು ಆದೇಶ ಮಾಡಲಾಗುವುದಿಲ್ಲ. ಸಂಬಂಧಿತ ಆದೇಶವನ್ನು ನಿರ್ದಿಷ್ಟ ಪೀಠವೇ ಪರಿಗಣಿಸಬೇಕಿದೆ.
ಅದರೆ ದೋಷಪೂರಿತ ಆದೇಶ ಮಾಡಿದ್ದಲ್ಲಿ ಪಕ್ಷಕಾರರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಹಾರ ಲಭ್ಯವಿರಲಿದೆ ಎಂದು ಪೀಠ ತಿಳಿಸಿದೆ. ಅಲ್ಲದೆ, ಅರ್ಜಿದಾರರು ಉಲ್ಲೇಖಿಸಿರುವಂತೆ ಕೆಲವು ಪ್ರಕರಣಗಳಲ್ಲಿ ಸುದೀರ್ಘವಾಗಿ ತಡೆಯಾಜ್ಞೆ ಮುಂದುವರಿದಿದೆ. ಈ ವಿಚಾರದ ಕುರಿತು ಪ್ರಕರಣಗಳನ್ನು ಸಂಬಂಧಿತ ನ್ಯಾಯಾಲಯದ ಮುಂದೆ ಆದ್ಯತೆಯ ಮೇಲೆ ಆ ಪ್ರಕರಣಗಳನ್ನು ಪಟ್ಟಿ ಮಾಡುವ ಕುರಿತು ಈ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ ಎಂದು ಆದೇಶಿಸಿತು.
ವಾದ ಆಲಿಸಿದ ಪೀಠ, ಹೈಕೋರ್ಟ್ ಇತರ ಪೀಠಗಳು ಮಾಡಿರುವ ಆದೇಶಗಳೆಲ್ಲವೂ ನ್ಯಾಯಾಂಗ ಆದೇಶಗಳಾಗಿವೆ. ಕಾಯ್ದೆ ಅಸ್ತಿತ್ವದಲ್ಲಿರುವುದರಿಂದ ಎಲ್ಲರೂ ಪಾಲಿಸಲೇಬೇಕು. ಈ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗುತ್ತಿದ್ದು, ಕಾಯ್ದೆಯ ದುರುಪಯೋಗವೂ ಆಗುತ್ತಿದೆ. ಈ ಕಾಯ್ದೆ ದುರುಪಯೋಗವಾಗುತ್ತಿಲ್ಲ ಎಂದೇನಿಲ್ಲ. 2020 ರಿಂದ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಸಕ್ಷಮ ಪೀಠದ ಮುಂದೆ ಪಟ್ಟಿ ಮಾಡಲು ಸುತ್ತೋಲೆ ಹೊರಡಿಸಲಾಗುವುದು ಎಂದು ಪೀಠ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆಲವು ತಡೆಯಾಜ್ಞೆಗಳನ್ನು ಹೊರಡಿಸಿ ವರ್ಷಗಳೇ ಆಗಿವೆ. ಕೆಲವು ಪ್ರಕರಣಗಳಲ್ಲಿ ನಾಲ್ಕು ವರ್ಷಗಳೇ ಆಗಿವೆ. 24 ತಾಸುಗಳಲ್ಲಿ ತಡೆಯಾಜ್ಞೆ ನೀಡಿರುವ ಪ್ರಕರಣಗಳೂ ಇವೆ. ನೋಟಿಸ್ ಜಾರಿ ಮಾಡಿಲ್ಲ, ಪ್ರತಿವಾದಿಗಳನ್ನು ಆಲಿಸದೆಯೇ ಆದೇಶ ಮಾಡಲಾಗಿದೆ. ಆಸಕ್ತ ಸಮುದಾಯಗಳನ್ನು ರಕ್ಷಿಸಲು ರೂಪಿಸಿರುವ ಕಾಯ್ದೆ ಇದಾಗಿದ್ದು, ಕಡ್ಡಾಯವಾಗಿ ನಿಬಂಧನೆಗಳ ಅನುಸಾರ ಆದೇಶ ಮಾಡಬೇಕಿದೆ. ಆದ್ದರಿಂದ ಎಸ್ಸಿ/ಎಸ್ಟಿ ಕಾಯ್ದೆಯ ಕಡ್ಡಾಯ ನಿಬಂಧನೆಗಳನ್ನು ಪಾಲಿಸುವ ಸಂಬಂಧ ಸುತ್ತೋಲೆ ಹೊರಡಿಸಬೇಕೆಂದು ಪೀಠಕ್ಕೆ ತಿಳಿಸಿದರು.
ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ಸರಿಯಾಗಿ ಪಾಲಿಸಬೇಕು. ಸೆಕ್ಷನ್ 53ಎ ಅಡಿ ಕಡ್ಡಾಯವಾಗಿ ನೋಟಿಸ್ ನೀಡಬೇಕು ಎಂದಿದೆ. ಅಂತೆಯೇ ನೋಟಿಸ್ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಇವುಗಳನ್ನೂ ಓದಿ:

