ETV Bharat / state

ಇಂದಿನಿಂದ ಜಿಬಿಎ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಅರ್ಜಿ ಲಭ್ಯ; ಇನ್ನೆರಡು ತಿಂಗಳಲ್ಲಿ ಪಂಚಾಯತ್​ ಎಲೆಕ್ಷನ್​: ಡಿಸಿಎಂ

ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಭಾನುವಾರ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು.

applications-for-gba-election-ticket-aspirants-are-available-from-today-says-dcm-d-k-shivakumar
ಡಿಸಿಎಂ ಡಿ.ಕೆ.ಶಿವಕುಮಾರ್ (X@DKShivakumar)
author img

By ETV Bharat Karnataka Team

Published : December 28, 2025 at 5:13 PM IST

4 Min Read
Choose ETV Bharat

ಬೆಂಗಳೂರು: ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯತ್​ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಬೇಕಿದೆ.‌‌ ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ, ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲಾತಿ ನಿಗದಿಯಾದ ಮೇಲೆ ಜಿಬಿಎ ಚುನಾವಣೆಗೆ ತಯಾರಿ ನಡೆಸಿದರಾಯಿತು ಎಂದುಕೊಂಡರೆ ನೀವುಗಳು ಗೆಲ್ಲಲು ಸಾಧ್ಯವಿಲ್ಲ. ‌ಏಕೆಂದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ಸಹ ಎಲ್ಲಾ ನಿಗದಿಯಾದಾಗ ಮಾಡುತ್ತೇನೆ ಎಂದರೆ, ಈ ಡಿ.ಕೆ.ಶಿವಕುಮಾರ್ ನಿಮ್ಮನ್ನು ಗುರುತಿಸುವುದಿಲ್ಲ. ಇಂದಿನಿಂದ ಆಕಾಂಕ್ಷಿ‌ ಅಭ್ಯರ್ಥಿಗಳ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ. ಈ ಹಣವು ಕಟ್ಟಡ ನಿಧಿಗೆ ಹೋಗಲಿದೆ. ಏಕೆಂದರೆ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 20 ಕೋಟಿ, ರಾಜ್ಯ ಕಚೇರಿ ನಿರ್ಮಾಣಕ್ಕೆ 60 ಕೋಟಿ ‌ರೂ. ಖರ್ಚಾಗಲಿದೆ.‌ ತಾಲೂಕು ಕಚೇರಿಗಳ ನಿರ್ಮಾಣಕ್ಕೂ ಕೆಪಿಸಿಸಿಯಿಂದ ಹಣ ನೀಡಬೇಕಲ್ಲವೇ? ಎಂಎಲ್​ಎ ಚುನಾವಣೆ ವೇಳೆ 2 ಲಕ್ಷ ರೂ. ಹಣ ನಿಗದಿ ಮಾಡಲಾಗಿತ್ತು. ಇದರಿಂದ 20 ಕೋಟಿ ರೂ. ಹಣ ಸಂಗ್ರಹವಾಯಿತು.‌ ಇದರಿಂದ ಪಕ್ಷದ ಪರವಾಗಿ ಜಾಹೀರಾತು ನೀಡಲು ಸಾಧ್ಯವಾಯಿತು. ಮಹಿಳೆಯರಿಗೆ ರಿಯಾಯಿತಿ ಇಲ್ಲ, ಒಂದು ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ತಿಳಿದಿದೆ‌ ಎಂದು ಹೇಳಿದರು.

ಮಹಿಳೆಯರಿಗೆ ಹಾಗೂ ಒಬಿಸಿಗಳಿಗೆ ರಿಯಾಯಿತಿ ನೀಡಿ ಎಂದು ಸಭಿಕರು ಕೂಗಿದ ವೇಳೆಯಲ್ಲಿ, ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ, ಉಚಿತ ‌ಬಸ್ ಪ್ರಯಾಣ ನೀಡಲಾಗುತ್ತಿದೆ. ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಹ ಒಬಿಸಿ, ಒಕ್ಕಲಿಗರು ಒಬಿಸಿ ಎಂದು ತಿಳಿದಿದೆಯೇ? ಲಿಂಗಾಯತರು ಒಬಿಸಿ, ಆದಾಯ ಇಲ್ಲದ ಬ್ರಾಹ್ಮಣರು ಒಬಿಸಿ ಎಂದರು.

ಮಹಿಳೆಯರಿಗೆ 25 ಸಾವಿರ ಅರ್ಜಿ ಶುಲ್ಕ: ಇದೇ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ‌ಸಿದ್ದರಾಮಯ್ಯ, ಮಹಿಳೆಯರಿಗೆ 25 ಸಾವಿರ ಇರಲಿ ಎಂದರು. ಆಗ ಡಿಸಿಎಂ ಶಿವಕುಮಾರ್ ಅವರು, ಸಿಎಂ ಹಾಗೂ ಜಾರ್ಜ್ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25 ಸಾವಿರ ರೂಪಾಯಿ ನಿಗದಿ ಮಾಡಲಾಗುತ್ತಿದೆ. ನಿಮ್ಮ ದುಡ್ಡು ನನಗೆ ಬೇಡ, ಮುಂದಿನ ಜನವರಿ 15ನೇ ತಾರೀಕಿನ ಒಳಗೆ ಅರ್ಜಿ ಹಾಕಬೇಕು. 369 ವಾರ್ಡ್​​ಗಳಿಂದ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದ 10 ಮಂದಿ‌‌ ಮಹಿಳೆಯರಾದರೂ ಅರ್ಜಿ ಸಲ್ಲಿಕೆ ಮಾಡಬೇಕು. ಯಾರೇ ಆದರೂ ಚೆನ್ನಾಗಿ ಕೆಲಸ ಮಾಡಿರಬೇಕು. ಅಂತಹವರಿಗೆ ಪ್ರಾಮುಖ್ಯತೆ ನೀಡಲಾಗುವುದು. ಯಾರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಾರೋ ಅವರಿಗೆ ಅವಕಾಶ. ಸಿದ್ದರಾಮಯ್ಯ, ಶಿವಕುಮಾರ್ ಹಿಂದೆ ತಿರುಗಿದರೆ ಅವಕಾಶವಿಲ್ಲ‌. ಕೆಲಸ ಮಾಡಿದವರಿಗೆ ಹೆಚ್ಚು ಆದ್ಯತೆ ಎಂಬ ಸಂದೇಶವನ್ನು ಡಿಕೆಶಿ ತಿಳಿಸಿದರು.

ಬಿಜೆಪಿ ರಾಜ್ಯಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಅಸಾಧ್ಯ: ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಇಂದಿಗೆ 101 ವರ್ಷವಾಗಿದೆ. ಕಳೆದ ವರ್ಷ ಬೆಳಗಾವಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದೆವು. ಇಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವ ಕೆಲಸ ಮಾಡಲಾಗುತ್ತಿದೆ. ನಿನ್ನೆ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆ ತಂದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡಲು ಮುಂದಾಗಿದೆ. ಈ ಯೋಜನೆಯಲ್ಲಿ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಳ್ಳುವ ಬದಲಾವಣೆ ತಂದಿದ್ದಾರೆ. ಬರಗಾಲ ಪ್ರದೇಶದಲ್ಲಿ ವರ್ಷಕ್ಕೆ 150 ಮಾನವ ದಿನಗಳ ಉದ್ಯೋಗ ನೀಡಲು ಕಾನೂನಿನಲ್ಲಿ ಸೂಚಿಸಲಾಗಿತ್ತು. ಆದರೆ ಅವರು ನಮ್ಮ ರಾಜ್ಯಕ್ಕೆ ಬರಗಾಲ ಇದ್ದಾಗಲೂ ನೀಡಲಿಲ್ಲ, ಕೋವಿಡ್ ಸಮಯದಲ್ಲೂ ನೀಡಲಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ತರಲಾಗಿರುವ 60:40 ಅನುಪಾತದ ನೂತನ ತಿದ್ದುಪಡಿ ಯೋಜನೆಯನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಸಹ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಈ ಹಿಂದೆ ಮನರೇಗಾ ಯೋಜನೆಯನ್ನು ನನ್ನ ತಾಲೂಕಿನಲ್ಲಿ ಬಹಳ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿತ್ತು. ಇಡೀ ದೇಶದಲ್ಲಿ ಕನಕಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಇದರಲ್ಲಿ ಹಣ ಲೂಟಿ ಮಾಡಿರಬಹುದು ಎಂದು ಪರಿಶೀಲನೆ ಮಾಡಲು ಕೇಂದ್ರ ಸರ್ಕಾರ ಸುಮಾರು 10 ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿತ್ತು. ನಂತರ ಕೇಂದ್ರ ಸರ್ಕಾರ ನಮ್ಮ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಿದೆ. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ಪಂಚಾಯತ್​ ಅಧ್ಯಕ್ಷರನ್ನು ಕರೆದು ಅವರಿಗೆ ಪ್ರಶಸ್ತಿ ಕೊಟ್ಟರು ಎಂದು ಹೇಳಿದರು.

ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ: ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಈ ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಅವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ? ಎಲ್ಲದಕ್ಕೂ ಕೊನೇ ಎಂಬುದು ಇರಲೇ ಬೇಕಲ್ಲವೇ? ಎಂತೆಂತಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಅಲೆಗ್ಸಾಂಡರ್ ದಿ ಗ್ರೇಟ್ ಇಡೀ ಪ್ರಪಂಚದ ಮುಕ್ಕಾಲು ಪಾಲು ಗೆದ್ದವರೇ ಶಾಶ್ವತವಲ್ಲ. ಸದ್ದಾಂ ಹುಸೇನ್ ಕೂಡ ಕೊನೆಗಾಲದಲ್ಲಿ ಅವಿತುಕೊಳ್ಳಬೇಕಾಯಿತು. ಇನ್ನು ಬೇರೆಯವರದು ಯಾವ ಲೆಕ್ಕ? ಮನರೇಗಾ ಹೆಸರು ಬದಲಾವಣೆ ವಿರೋಧಿಸಿ 2026ರ ಜನವರಿ 5ರಂದು ಹೊಸ ಹೋರಾಟ ರೂಪಿಸಲಾಗುವುದು. ಪಂಚಾಯತ್ ಮಟ್ಟದಿಂದ ಈ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.

ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೆ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150ರಿಂದ 200 ಇದ್ದು, ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ. ಚಂದ್ರಶೇಖರ್ ‌ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದರು.

ಇದನ್ನೂ ಓದಿ: ರಾಜ್ಯ ಪೊಲೀಸರ ಸಹಕಾರದಿಂದ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ: ಪರಮೇಶ್ವರ್