ETV Bharat / state

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಶ್ನಿಸಿ ಮತ್ತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ

ಸರ್ಕಾರದ ಗಡಿಪಾರು ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

BENGALURU  HIGH COURT  MAHESH TIMARODI DEPORTATION  ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಶ್ನಿಸಿ ಮತ್ತೆ ಹೈಕೋರ್ಟ್ ಅರ್ಜಿ ಸಲ್ಲಿಕೆ (ETV Bharat)
author img

By ETV Bharat Karnataka Team

Published : January 5, 2026 at 4:42 PM IST

2 Min Read
Choose ETV Bharat

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಹೋರಾಟಗಳನ್ನು ನಡೆಸುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂಬತ್ತು ತಿಂಗಳ ಕಾಲ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

2025ರ ಡಿಸೆಂಬರ್ 16 ರಿಂದ 2026ರ ಸೆಪ್ಟೆಂಬರ್​ 16ರ ವರೆಗೂ ಒಟ್ಟು ಒಂಬತ್ತು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಸರಹದ್ದಿಗೆ ಗಡಿಪಾರು ಮಾಡಿರುವ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ. ಅರ್ಜಿಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಅವರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.

ಅರ್ಜಿಯಲ್ಲೇನಿದೆ ? ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹಲವು ರ‍್ಯಾಲಿಗಳನ್ನು ನಡೆಸಿದ್ದಾರೆ. ಇದೇ ಕಾರಣದಿಂದ ಅವರ ವಿರುದ್ಧ ಹಲವು ಮಂದಿ ಕ್ಷುಲ್ಲಕ ಕಾರಣದ ಆರೋಪದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಹಿಂದೆ ಹೊರಡಿಸಿದ್ದ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಹೊಸದಾಗಿ ಆದೇಶಿಸುವುದಕ್ಕೆ ನಿರ್ದೇಶನ ನೀಡಲಾಗಿತ್ತು. ಆದರೆ, ಪುತ್ತೂರು ಉಪವಿಭಾಗಾಧಿಕಾರಿಗಳು ಮತ್ತೊಂದು ಗಡಿಪಾರು ಆದೇಶ ಮಾಡಿದ್ದು, ಈ ಆದೇಶವು ಕರ್ನಾಟಕ ಪೊಲೀಸ್ ಕಾಯಿದೆಯ ವಿವಿಧ ಸೆಕ್ಷನ್​​ಗಳನ್ನು ಉಲ್ಲಂಘಿಸಿದೆ.

ಅರ್ಜಿದಾರರ ವಿರುದ್ಧದ ಆರೋಪಗಳು ಮತ್ತು ಗಡಿಪಾರು ಮಾಡಿರುವ ಆದೇಶಕ್ಕೆ ಯಾವುದೇ ಸಂಬಂಧವಿಲ್ಲ. ಅರ್ಜಿದಾರರ ವಿರುದ್ಧ ಒಟ್ಟು 26 ಪ್ರಕರಣಗಳು ದಾಖಲಾಗಿದ್ದು, 16 ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ. 2 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಇನ್ನೂ 8 ಪ್ರಕರಣಗಳು ತನಿಖಾ ಹಂತದಲ್ಲಿವೆ. ಆದರೆ, ಗಡಿಪಾರು ಆದೇಶ ಹೊರಡಿಸಲು ಇತ್ತೀಚೆಗೆ ದಾಖಲಾಗಿರುವ 5 ಪ್ರಕರಣಗಳನ್ನು ಪರಿಗಣಿಸಿರುವುದಾಗಿ ತಿಳಿಸಿದ್ದು, ಅವೆಲ್ಲವೂ ಕ್ಷುಲ್ಲಕ ಪ್ರಕರಣಗಳಾಗಿವೆ.

ಈ ಎಲ್ಲ ಪ್ರಕರಣಗಳು ಅರ್ಜಿದಾರರು ತಮ್ಮ ಊರಿನಲ್ಲಿಯೇ ನೆಲೆಸುವುದರಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಪುರಾವೆಗಳಿಲ್ಲ. ಅಲ್ಲದೇ, ಅರ್ಜಿದಾರರ ಚಟುವಟಿಕೆಗಳು ಯಾವುದೇ ವ್ಯಕ್ತಿ ಸಾರ್ವಜನಿಕ ಆಸ್ತಿಗಳಿಗೆ ಅಪಾಯವುಂಟಾಗಲಿದೆ ಎಂದು ಸೂಚಿಸುವ ಸಂಬಂಧ ಯಾವುದೇ ವರದಿಯೂ ಇಲ್ಲ. ಹೀಗಾಗಿ ಅರ್ಜಿದಾರರನ್ನು ಗಡಿಪಾರು ಮಾಡುವ ಸಂಬಂಧ ಆದೇಶ ಹೊರಡಿಸುವುದಕ್ಕೆ ಸೂಕ್ತವಾದ ಕಾರಣಗಳನ್ನು ನೀಡುವುದಕ್ಕೆ ಉಪವಿಭಾಗಾಧಿಕಾರಿಗಳು ವಿಫಲರಾಗಿದ್ದು, ದುರುದ್ದೇಶ ಪೂರ್ವಕವಾದ ಆದೇಶ ಮಾಡಿದ್ದಾರೆ.

ಅಲ್ಲದೇ, ಈ ಹಿಂದೆ ಹೊರಡಿಸಿದ್ದ ಗಡಿಪಾರು ಆದೇಶ ರದ್ದುಪಡಿಸಿದ ಸಂದರ್ಭದಲ್ಲಿ ಹೈಕೋರ್ಟ್, ಅರ್ಜಿದಾರರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಇರುವ ಎಲ್ಲ ನಿಯಮಗಳನ್ನು ಅನುಸರಿಸಿ ಮತ್ತೆ ಗಡಿಪಾರು ಆದೇಶ ಮಾಡಬಹುದು ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ, ಅರ್ಜಿದಾರರ ವಿರುದ್ಧ 1992ರಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಸ್ತು ಸ್ಥಿತಿಯ ವಿವರಣೆ ನೀಡದೇ ಖುಲಾಸೆ ಆಗಿರುವ, ವಿಚಾರಣೆ ಹಾಗೂ ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.

ಜತೆಗೆ, ಅರ್ಜಿದಾರರ ನಡವಳಿಕೆ ಮತ್ತು ಚಟುವಟಿಕೆಗಳು ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯುಂಟುಮಾಡುತ್ತದೆ ಎಂಬುದನ್ನು ತೀರ್ಮಾನಿಸುವುದಕ್ಕೆ ಅಗತ್ಯ ಸಾಕ್ಷ್ಯಗಳ ಆಧಾರದ ಮೇಲೆ ಆದೇಶ ಹೊರಡಿಸುವಲ್ಲಿ ವಿಫಲವಾಗಿದೆ. ಅರ್ಜಿದಾರರು ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಧಕ್ಕೆಯಾಗುವಂತೆ ನಡೆದುಕೊಳ್ಳಲಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ದಾಖಲೆಗಳನ್ನು ನೀಡಿಲ್ಲ.

ಆದರೆ, ಅರ್ಜಿದಾರರನ್ನು ಗಡಿಪಾರು ಮಾಡಿ ಆದೇಶಿಸುವುದಕ್ಕಾಗಿ ಪೂರ್ವಭಾವಿಯಾಗಿ ಪೊಲೀಸರು ಸರಣಿ ಪ್ರಕರಣಗಳಲ್ಲಿ ದಾಖಲಿಸಿದ್ದಾರೆ. ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿ, ಗಡಿಪಾರು ಆದೇಶ ಮಾಡಿದ್ದು, ಈ ಆದೇಶವು ಸಂವಿಧಾನದಲ್ಲಿ ಲಭ್ಯವಿರುವ ಮೂಲಭೂತ ಹಕ್ಕಗಳ ಸ್ಪಷ್ಟ ಉಲ್ಲಘನೆಯಾಗಿದ್ದು, ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ತಿಮರೋಡಿ, ಇತರರ ಹಣಕಾಸಿನ ಮೂಲದ ತನಿಖೆಗೆ ಕೋರಿ ಅರ್ಜಿ: ಪೊಲೀಸರಿಂದ ವಿವರ ಕೇಳಿದ ಹೈಕೋರ್ಟ್