ರೈತ ಸಂಘಟನೆಗಳ ಜೊತೆ ಸಿಎಂ ಸಭೆ: ರೈತರನ್ನ ವಿವಾಹವಾಗುವವರಿಗೆ 10 ಲಕ್ಷ ರೂ. ಠೇವಣಿ, ಸರ್ಕಾರಿ ಕೆಲಸದಲ್ಲಿ ಶೇ 20ರಷ್ಟು ಮೀಸಲಾತಿಗೆ ಮನವಿ
ರೈತರ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮನವಿ ಪತ್ರ ಸಲ್ಲಿದೆ.

Published : February 17, 2026 at 3:50 PM IST
ಬೆಂಗಳೂರು: ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದೆ.
ವಿಧಾನಸೌಧದಲ್ಲಿ ನಡೆದ ರೈತ ಸಂಘಟನೆಗಳ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಮನವಿ ಮಾಡಿದೆ. ರೈತ ಯುವಕರು ಮದುವೆ ಆಗಲು ವಧು ಸಿಗದೇ ಇರುವುದು ಒಂದು ಸಾಮಾಜಿಕ ಪಿಡುಗಾಗಿರುವುದು ವಿಷಾದನೀಯ. ಈ ಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯಬೇಕು. ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಮದುವೆಯಾಗುವ ಹೆಣ್ಣುಮಗಳಿಗೆ ಉದ್ಯೋಗದಲ್ಲಿ ಶೇ 20ರಷ್ಟು ಮೀಸಲಾತಿ: ರೈತರ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ ಶೇಕಡಾ 20ರಷ್ಟು ಮೀಸಲಾತಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮನವಿ ಪತ್ರ ಸಲ್ಲಿದೆ.
ಕೃಷಿಕರು ಯಾವಾಗಲು ಅನಿಶ್ಚಿತತೆ ಎದುರಿಸುತ್ತಾ ಅಭದ್ರತೆಗೆ ಒಳಗಾಗಿದ್ದಾರೆ. ಈ ಸಾಲಿನ ಆಯವ್ಯಯ ಕೃಷಿಕರನ್ನು ಮೇಲೆತ್ತುವ ದೃಷ್ಟಿಯಿಂದ ಕೃಷಿವಲಯಕ್ಕೆ ಪ್ರಥಮ ಆಧ್ಯತೆ ನೀಡಿ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮಾತು ಕೊಟ್ಟಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತ ಸ್ನೇಹಿ ಆಗಿ ಗಟ್ಟಿಗೊಳಿಸಬೇಕು. ಬಿಜೆಪಿ ಸರ್ಕಾರ ತಂದಿರುವ ಜಾನುವಾರು ಹತ್ಯೆ ನಿಷೇದ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
ನಂಜುಂಡಸ್ವಾಮಿ ಹುಟ್ಟೂರು ಮಾದರಿ ಗ್ರಾಮ ಮಾಡಿ: 2013-18ನೇ ಸಾಲಿನ ತಮ್ಮ ನೇತೃತ್ವದ ಸರ್ಕಾರ ದೇಶದಲ್ಲಿ ಮೊದಲನೇ ಬಾರಿಗೆ ಕೃಷಿ ಬೆಲೆ ಆಯೋಗವನ್ನು ಸ್ಥಾಪನೆ ಮಾಡಿರುವ ಹೆಗ್ಗಳಿಕೆ ಇದೆ. ಆದರೆ, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಬಲ ನೀಡದೇ ಇರುವುದರಿಂದ ಅದರ ಶಿಫಾರಸುಗಳನ್ನು ಯಾವುದೂ ಜಾರಿಗೆ ಬರುತ್ತಿಲ್ಲ. ಕೃಷಿ ಬೆಲೆ ಆಯೋಗವನ್ನು ಶಾಸ್ವತ ಆಯೋಗವಾಗಿ ಘೋಷಿಸಿ, ಶಾಸನಾತ್ಮಕ ಅಧಿಕಾರವನ್ನು ನೀಡಬೇಕು. ಪ್ರೊ.ಎಂ.ಡಿ.ನಂಜುಂಡಸ್ವಾಮಿರವರ ಹುಟ್ಟೂರು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಾಡ್ರಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಮಾಡಲು ವಿಶೇಷ ಅನುದಾನವನ್ನು ನೀಡಬೇಕು. ಮತ್ತು ವಿಚಾರಗಳ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ 2025, ಬೀಜ ಮಸೂದೆ 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು. ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 20 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕು. ಸಮಗ್ರ ಪಡಿತರ ವ್ಯವಸ್ಥೆಯನ್ನು ರೂಪಿಸಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಎಣ್ಣೆಕಾಳು, ಸಿರಿದಾನ್ಯ ಮುಂತಾದ ಅವಶ್ಯಕ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ರೈತರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು.
ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಲು ತೊಡಕಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಘೋಷಿಸಬೇಕು. 2013ರ ಭೂ-ಸ್ವಾಧೀನ ಕಾಯ್ದೆಯನ್ನು ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಅನ್ವಯ ಮಾಡಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೂ ಈ ಕಾಯ್ದೆಯನ್ನು ಅನ್ವಯಿಸಬೇಕು. ಕರ್ನಾಟಕದ ಕೃಷಿಯ ಹೆಚ್ಚು ಭೂಮಿ ಮರಳು ಭೂಮಿಯಾಗಿ ಪರಿವರ್ತನೆ ಆಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಇದನ್ನು ತಡೆಗಟ್ಟಲು ವಿಶೇಷ ಕಾಳಜಿಯ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಆಗ್ರಹಿಸಿಸಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ ಮರುಜಾರಿ ಮಾಡಿ: ಕಿಸಾನ್ ಸಮ್ಮಾನ್ ಯೋಜನೆ ಪುನಃ ಜಾರಿಗೆ ತಂದು ರೈತರಿಗೆ ಹತ್ತು ಸಾವಿರ ಧನ ಸಹಾಯ ನೀಡುವಂತೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.
ಕಬ್ಬಿನ ಬೆಲೆ ನಿಗದಿ ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಟಾವು ಸಾಗಾಣಿಕೆ ಕಾರ್ಖಾನೆಗಳು ಭರಿಸುವಂತಾಗಬೇಕು. ರಾಜ್ಯಾದ್ಯಂತ ಎಲ್ಲಾ ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸಾಗಿಸುವುದು. ಎಪಿಎಂಸಿ ಗಳಲ್ಲಿ ರೈತರ ಉತ್ಪನ್ನಗಳ ಅಡಮಾನ ಸಾಲ ನೀಡುವ ಯೋಜನೆಗೆ ಹೆಚ್ಚು ಹಣಕಾಸು ನೀಡಿ ಸದೃಢಗೊಳಿಸುವುದು. ಕಳಪೆ ಕೀಟನಾಶಕ .ಬೀಜ ನಕಲಿ ಗೊಬ್ಬರ. ನರ್ಸರಿ ಸಸಿಗಳು ಮಾರಾಟ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಎಲ್ಲಾ ಬೆಳೆಗಳಿಗೂ ಬೆಳೆವಿಮೆ ಜಾರಿಗೆ ತರಬೇಕು ಅತಿವೃಷ್ಟಿ, ಮಳೆ ಹಾನಿ, ಅನಾವೃಷ್ಟಿ, ಪ್ರಕೃತಿ ವಿಕೋಪ ಬೆಳೆ ನಷ್ಟಕ್ಕೆ ವಿಮಾ ಪರಿಹಾರ ಸಿಗುವಂತಾಗಬೇಕು. ಬ್ಯಾಂಕುಗಳಲ್ಲಿ ಕೃಷಿ ಸಾಲ ನೀತಿ ಬದಲಾಗಬೇಕು ರೈತರ ಭೂಮಿಯ ಮೌಲ್ಯಕ್ಕೆ 75 ರಷ್ಟು ಸಾಲ ನೀಡುವ ಯೋಜನೆ ಜಾರಿಗೆ ತರಬೇಕು. ಕಬ್ಬಿನ ಅಲ್ಪಾವಧಿ ಬೆಳೆ ಸಾಲ 18 ತಿಂಗಳಿಗೆ ವಿಸ್ತರಣೆ ಮಾಡಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪರೀಕ್ಷೆ ಮಾಡಲು ಪರಿಣಿತ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಬೇಕು. ಕಬ್ಬಿಗೆ ಹೆಚ್ಚುವರಿ ದರ ನೂರು ರೂ ನಿಗದಿ ಮಾಡಿರುವ ಬಾಪ್ತು ಸರ್ಕಾರದ 50 ರೂ ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಭೆ ಬಳಿಕ ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಬಜೆಟ್ ನ್ನ ಬಹಳ ನಿರ್ದಿಷ್ಟ ಮಾಡ್ತಿದ್ದಾರೆ. ಸಣ್ಣ ನೀರಾವರಿಗೆ ಒತ್ತು ಕೊಡಬೇಕು. ನೇರವಾಗಿ ರೈತರ ಪಿಡಿಎ ಸಿಸ್ಟಮ್ ಮಾಡಬೇಕು. ಸುಮಾರು 20-25 ಅಂಶಗಳನ್ನು ಸಿಎಂ ಮುಂದೆ ಹೇಳಿದ್ದೇವೆ. ಈ ಸಾಲಿನ ಬಜೆಟ್ ಕೃಷಿಕರ ಪರವಾಗಿರಬೇಕು ಎಂದು ಒತ್ತಾಯ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಸಿಎಂ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬ್ಬು ಬೆಳೆಗಾರರಿಗೆ ಸಿಎಂ 100 ರೂಪಾಯಿ ಹೆಚ್ಚಿಳ ಮಾಡಿದ್ರು. ದರದಲ್ಲಿ ಮೋಸ ಆಗ್ತಿದೆ ಅದರ ಬಗ್ಗೆ ತಾಂತ್ರಿಕ ಸಮಿತಿ ಆಗಬೇಕು. ಕರ್ನಾಟಕ ರಾಜ್ಯ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ತಡೆಗಟ್ಟುವ ಕ್ರಮ ಆಗಬೇಕು. ಬೆಳೆವಿಮೆ ಪದ್ದತಿಯಲ್ಲಿ ಬದಲಾವಣೆ ತರಬೇಕು. ಹೀಗೆ ಎಲ್ಲಾ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಬಜೆಟ್ ನಲ್ಲಿ ಏನು ಕೊಡ್ತಾರೆ ಅನ್ನೋದನ್ನು ಕಾದುನೋಡುತ್ತೇವೆ ಎಂದರು.
ಇದನ್ನೂ ಓದಿ: ರೈತರಿಗೆ ಕನ್ಯೆ ಕೊಡುವವರಿಗೆ 2 ಲಕ್ಷ ರೂ. ಸಹಾಯಧನ ನೀಡಬೇಕು: ಸರ್ಕಾರಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಮನವಿ

