ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯ ಕಾಮೆಂಟ್ ಪ್ರಕರಣ: ಆರೋಪಿ ಬಂಧನ
ಉಳ್ಳಾಲ ಮಸೀದಿ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಕಾಮಂಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Published : March 3, 2026 at 10:06 PM IST
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವೆ ಎಂದು ಕಾಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಂಕರ್ ಮಸ್ತಪ್ಪ ಮೊಗೇರ್ (35) ಎಂದು ಗುರುತಿಸಲಾಗಿದೆ.
ಸೋಮವಾರ (ಮಾರ್ಚ್ 2) ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಮೇಲ್ಕಂಡ ಬೆದರಿಕೆ ಬರಹ ಪೋಸ್ಟ್ ಮಾಡಲಾಗಿತ್ತು. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣವನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 41/2026ರಂತೆ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(2), 197(2), 299, 353(2) ಹಾಗೂ ಇತರ ಅನ್ವಯಿಸುವ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತನಿಖೆ ಮುಂದುವರಿಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಶಂಕರ್ ಮಸ್ತಪ್ಪ ಮೊಗೇರ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಡಿ ಗ್ರಾಮದ ದೇವಿನಗರ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿಯ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ ಕಾಮೆಂಟ್ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದರು.
ಈ ಕುರಿತು 'ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಈ ರೀತಿಯ ಕಾಮೆಂಟ್ ಸ್ಪಷ್ಟವಾಗಿ ಅಪರಾಧವಾಗಿದೆ. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗುತ್ತದೆ. ಅಪರಾಧ ಮಾಡಿದವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

