ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ: ಬೆಳಗಾವಿ ಪೊಲೀಸ್ ಅಧಿಕಾರಿಗೆ ಐರನ್ ಮ್ಯಾನ್ ಕಿರೀಟ!
ಸಂಗಮೇಶ್ 90 ಕಿ.ಮೀ. ಸೈಕ್ಲಿಂಗ್ ಅನ್ನು 2 ಗಂಟೆ 51 ನಿಮಿಷದಲ್ಲಿ ಕ್ರಮಿಸಿದರೆ, ಹಾಫ್ ಮ್ಯಾರಥಾನ್ 21.1 ಕಿ.ಮೀ. ಅನ್ನು 2 ಗಂಟೆ 15 ನಿಮಿಷದಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

Published : February 28, 2026 at 4:14 PM IST
ವಿಶೇಷ ವರದಿ: ಸಿದ್ದನಗೌಡ ಪಾಟೀಲ್
ಬೆಳಗಾವಿ: ಅಂತಾರಾಷ್ಟ್ರೀಯ ಮಟ್ಟದ 'ಐರನ್ ಮ್ಯಾನ್' ಸ್ಪರ್ಧೆಯಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಯೊಬ್ಬರು ಅಮೋಘ ಸಾಧನೆ ಮೆರೆದಿದ್ದಾರೆ. ಈ ಸಾಧನೆಗೈದ ರಾಜ್ಯದ ನಾಲ್ಕನೇಯ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಬೆಳಗಾವಿ ಕೀರ್ತಿ ಹೆಚ್ಚಿಸಿರುವ ಅವರಿಗೆ ಅಭಿನಂದನೆಗಳ ಸುರಿಮಳೆಗೈಯಲಾಗುತ್ತಿದೆ.
ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಸಿ.ಎ.ಆರ್. ಘಟಕದಲ್ಲಿ ಆರ್.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಗಮೇಶ ಆನಿ ಶ್ರೀಲಂಕಾದ ಕೊಲಂಬೋದಲ್ಲಿ ಫೆ.22ರಂದು ನಡೆದ ಐರನ್ ಮ್ಯಾನ್ 70.3 ಸ್ಪರ್ಧೆಯಲ್ಲಿ ಸಾಧನೆ ಮೆರೆದು ಭಾರತದ ಕೀರ್ತಿ ಪತಾಕೆಯನ್ನು ಶ್ರೀಲಂಕಾದಲ್ಲಿ ಹಾರಿಸಿದ್ದಾರೆ. ಫಿಟ್ ಆ್ಯಂಡ್ ಫೈನ್ ಆಗಿರುವ ಈ ಪೊಲೀಸ್ ಅಧಿಕಾರಿ ಸಾಧನೆ ಇತರೆ ಪೊಲೀಸರಿಗೂ ಮಾದರಿ ಆಗಿದೆ.
ಫೆ.22ರಂದು ವರ್ಡ್ ಟ್ರೈಥ್ಲಾನ್ ಕಾರ್ಪೊರೇಷನ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 50 ದೇಶದ ಸುಮಾರು 560 ಸ್ಪರ್ಧಿಗಳು ಭಾಗವಹಿಸಿದ್ದರು. ಇದು ಸಾಮರ್ಥ್ಯ ಸಾಬೀತುಪಡಿಸುವ ಒಂದು ಕಠಿಣ ಸ್ಪರ್ಧೆಯಾಗಿದೆ. ಭಾರತವನ್ನು ಪ್ರತಿನಿಧಿಸಿದ್ದ 29 ವರ್ಷದ ಸಂಗಮೇಶ್ 90 ಕಿ.ಮೀ. ಸೈಕ್ಲಿಂಗ್ ಅನ್ನು 2 ಗಂಟೆ 51 ನಿಮಿಷದಲ್ಲಿ ಕ್ರಮಿಸಿದರೆ, ಹಾಫ್ ಮ್ಯಾರಥಾನ್ 21.1 ಕಿ.ಮೀ. ಅನ್ನು 2 ಗಂಟೆ 15 ನಿಮಿಷದಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದರು. ಒಟ್ಟು 5 ಗಂಟೆ 6 ನಿಮಿಷಗಳಲ್ಲಿ ಗುರಿಯನ್ನು ತಲುಪಿ, ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಮೆರೆದಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಶುರುವಾದ ಇವರ ಸ್ಪರ್ಧೆಯು ಮಧ್ಯಾಹ್ನ 12ಕ್ಕೆ ಮುಗಿಸಿದರು. ಸೈಕ್ಲೋನ್ ಪರಿಣಾಮ ಮತ್ತು ಮೊಸಳೆ ಕಾಟದಿಂದ ಆಯೋಜಕರು ಸ್ವಿಮ್ಮಿಂಗ್ ರದ್ದುಗೊಳಿಸಿದ್ದರು. ಆದರೆ, ಸಂಗಮೇಶ್ ಈಜಿನಲ್ಲೂ ಪರಾಕ್ರಮ ಮೆರೆಯಲು ಸಜ್ಜಾಗಿದ್ದರು.
ಇನ್ನು ಐರನ್ ಮ್ಯಾನ್ ಹಿರಿಮೆ ಗಳಿಸಿದ ಬಳಿಕ ಬೆಳಗಾವಿಗೆ ಸಂಗಮೇಶ ಆನಿ ಆಗಮಿಸುತ್ತಿದ್ದಂತೆ ಅವರ ಸಹೋದ್ಯೋಗಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಅಲ್ಲದೇ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಬರಮನಿ ಅವರು ಸತ್ಕರಿಸಿ ಗೌರವಿಸಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಶುಭಾಶಯ ಕೋರಿದರು.

ಮೂಲತಃ ವಿಜಯಪುರ ಜಿಲ್ಲೆಯ ಕೊರ್ತಿ ಕೊಲ್ಹಾರದ ಸಂಗಮೇಶ ಆನಿ ಅವರ ತಂದೆ ಸಂಕಪ್ಪ, ತಾಯಿ ನಾಗಪ್ಪ. ಬಡ ಮಧ್ಯಮ ವರ್ಗದಲ್ಲಿ ಜನಿಸಿರುವ ಸಂಗಮೇಶ ಬಿಎಸ್ಸಿ ಪದವಿ ಪಡೆದಿದ್ದಾರೆ. ತಮ್ಮ ಕಠಿಣ ಅಭ್ಯಾಸ ಮತ್ತು ಪರಿಶ್ರಮದಿಂದ 2021ರಲ್ಲಿ ಆರ್.ಎಸ್.ಐ. ಆಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಸಿವಿಲ್ ಕಾನ್ಸ್ಟೇಬಲ್ ಸೇರಿ ನಾಲ್ಕು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದ ಪ್ರತಿಭಾನ್ವಿತ ಇವರು.
ಸಂಗಮೇಶ ಆನಿ ಅವರಿಗಿಂತ ಮೊದಲು ಅಂತಾರಾಷ್ಟ್ರೀಯ ಮಟ್ಟದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಐಜಿಪಿ ಸಂದೀಪ್ ಪಾಟೀಲ್, ಸಿಪಿಐ ಮುರುಗೇಶ್ ಚನ್ನಣ್ಣವರ, ಸಿಪಿಐ ಶ್ರೀಶೈಲ ಬ್ಯಾಕೂಡ ಅವರು ಈ ಸಾಧನೆಗೈದಿದ್ದಾರೆ. ಸಂದೀಪ್ ಪಾಟೀಲ್ ಅವರು ಬೆಳಗಾವಿ ಎಸ್ಪಿ ಆಗಿ ಕೆಲಸ ಮಾಡಿದ್ದಾರೆ. ಶ್ರೀಶೈಲ ಬ್ಯಾಕೂಡ, ಸಂಗಮೇಶ್ ಆನಿ ಬೆಳಗಾವಿ ಜಿಲ್ಲೆಯಲ್ಲೇ ಸೇವೆ ಸಲ್ಲಿಸುತ್ತಿದ್ದು, ಈ ಮೂವರು ಐರನ್ ಮ್ಯಾನ್ ಆಗಿದ್ದು ವಿಶೇಷ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಐರನ್ ಮ್ಯಾನ್ ಸಂಗಮೇಶ ಆನಿ, ಶ್ರೀಲಂಕಾಗೆ ಹೋಗುವ ಮೊದಲು ಮೈಸೂರಿನಲ್ಲಿ "ಬರ್ಗ್‌ಮನ್" ಮೈಸೂರು ಟ್ರೈಥ್ಲಾನ್ನಲ್ಲಿ ಕೆಆರ್ಎಸ್ ಡ್ಯಾಮ್ ಹಿನ್ನೀರಿನಲ್ಲಿ 2 ಕಿ.ಮೀ. ಸ್ವಿಮ್ಮಿಂಗ್, 80 ಕಿ.ಮೀ. ಸೈಕ್ಲಿಂಗ್ ಮತ್ತು 20 ಕಿ.ಮೀ. ರನ್ನಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನನ್ನ ವಯಸ್ಸಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಈಗ ಅಂತಾರಾಷ್ಟ್ರೀಯ ಮಟ್ಟದ ಐರನ್ ಮ್ಯಾನ್ನಲ್ಲಿ ಸಾಧನೆ ಮಾಡಿದ್ದು, ಬಹಳಷ್ಟು ಖುಷಿ ತಂದಿದೆ. ಅಪ್ಪ, ಅವ್ವ, ನಮ್ಮ ಹಿರಿಯ ಅಧಿಕಾರಿಗಳು ಸೇರಿ ಎಲ್ಲರೂ ಬಹಳಷ್ಟು ಸಂತಸಗೊಂಡಿದ್ದಾರೆ ಎಂದರು.
ಹಿರಿ-ಕಿರಿಯರ ಸಹಕಾರ: ಪ್ರತಿದಿನ ನನ್ನ ಕರ್ತವ್ಯದ ಜೊತೆಗೆ ಸ್ವಿಮ್ಮಿಂಗ್, ರನ್ನಿಂಗ್, ಸೈಕ್ಲಿಂಗ್ ಅಭ್ಯಾಸ ಮಾಡುತ್ತಿದ್ದೆ. ನನಗೆ ಸ್ವಿಮ್ಮಿಂಗ್ ಬರುತ್ತಿರಲಿಲ್ಲ. ಕಳೆದ ವರ್ಷ ನವೆಂಬರ್ನಲ್ಲಿ ಸ್ವಿಮ್ಮಿಂಗ್ ಕಲಿಯಲು ಶುರು ಮಾಡಿದ್ದೆ. ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಡಿಸಿಪಿಗಳಾದ ನಾರಾಯಣ್ ಬರಮನಿ, ನಿರಂಜನ್ ರಾಜೇ ಅರಸ್, ಸಿಎಆರ್ ಡಿಸಿಪಿ ಎಂ.ವೈ.ಕಾಶಪ್ಪನವರ, ಆರ್.ಪಿ.ಐ. ಸಂಗಮೇಶ್ ಬಿರಾದಾರ ಸೇರಿ ಅನೇಕರು ನನಗೆ ಬಹಳಷ್ಟು ಸಹಕಾರ ನೀಡಿದ್ದಾರೆ. ಅದೇ ರೀತಿ ಶಾಸಕರಾದ ಆಸೀಫ್ ಸೇಠ್ ಅವರು ನನಗೆ ಪ್ರೋತ್ಸಾಹಿಸಿದ್ದರು ಎಂದು ನೆನಪಿಸಿಕೊಂಡರು.
ಸಂದೀಪ್ ಪಾಟೀಲ್ ಸರ್ ಪ್ರೇರಣೆ: ಸಂದೀಪ್ ಪಾಟೀಲ ಅವರು 2025ರ ಆಗಸ್ಟ್ ತಿಂಗಳಲ್ಲಿ ನಡೆದ ಐರನ್ ಮ್ಯಾನ್ 140.6 ಕಿಲೋಮೀಟರ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದರು. ಅವರಿಂದ ಪ್ರೇರಣೆ ಪಡೆದು, ಐರನ್ ಮ್ಯಾನ್ 70.3 ಕಿಲೋಮೀಟರ್ ಅಲ್ಲಿ ಸಾಧನೆ ಮಾಡಿದ್ದೇನೆ. ಮುಂದೆ ಅವರ ಸಾಧನೆ ಮುಟ್ಟುವ ತವಕದಲ್ಲಿದ್ದೇನೆ. ಅದಕ್ಕೆ ಬೇಕಾದ ಕಠಿಣ ಅಭ್ಯಾಸ ಮಾಡುತ್ತೇನೆ ಎಂಬುದು ಇವರ ವಿಶ್ವಾಸದ ಮಾತು.

ದುಶ್ಚಟ ಬಿಡಿ, ಫಿಟ್ನೆಸ್ ಕಡೆ ಗಮನ ಕೊಡಿ: ಅನೇಕ ಯುವಕರು ದುಶ್ಚಟಗಳಿಗೆ ಬಲಿ ಆಗುತ್ತಿರುವುದು, ಅತ್ಯಂತ ನೋವಿನ ಸಂಗತಿ. ಭಾರತ ಯುವಕರ ದೇಶ. ಯುವಕರು ದೇಶದ ಆಸ್ತಿ. ಹಾಗಾಗಿ, ದುಶ್ಚಟಗಳಿಂದ ದೂರ ಉಳಿದು, ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು. ಅದೇ ರೀತಿ ಪೊಲೀಸರು ಎಂದರೆ ಡೊಳ್ಳುಹೊಟ್ಟೆ ಎಂಬ ಮಾತು ಜನರಲ್ಲಿದೆ. ಅದನ್ನು ಹೋಗಲಾಡಿಸಬೇಕಿದೆ. ನಮ್ಮ ಪೊಲೀಸರು ಫಿಟ್ನೆಸ್ ಕಡೆ ಗಮನ ಕೊಡಬೇಕು. ದಿನದಲ್ಲಿ ಒಂದು ಗಂಟೆ ದೇಹ ದಂಡಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಗೆ ಹೆಮ್ಮೆ: ಆರ್.ಪಿ.ಐ. ಸಂಗಮೇಶ ಬಿರಾದಾರ ಮಾತನಾಡಿ, ಸಂಗಮೇಶ ಆನಿ ಸಾಧನೆ ಪೊಲೀಸ್ ಇಲಾಖೆಗೆ ಹೆಮ್ಮೆ. ಇಡೀ ಭಾರತ ದೇಶಕ್ಕೆ ಹೆಸರು ತಂದಿದ್ದಾರೆ. ಒಬ್ಬ ರೈತನ ಮಗನಾಗಿ ಕಷ್ಟಪಟ್ಟು ಓದಿ ಆರ್.ಎಸ್.ಐ. ಆಗಿದ್ದರು. ಈಗ ಕಠಿಣ ಅಭ್ಯಾಸ ಮಾಡಿ, ಐರನ್ ಮ್ಯಾನ್ ಆಗಿ ಹೊರ ಹೊಮ್ಮಿದ್ದಾರೆ. ನಮ್ಮ ಎಲ್ಲ ಪೊಲೀಸರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಹುಮಾನಕ್ಕೆ ಶಿಫಾರಸು ಮಾಡುತ್ತೇನೆ: ಟ್ರೈಥ್ಲಾನ್ ಅತ್ಯಂತ ಕಠಿಣ ಸ್ಪರ್ಧೆ. ಕರ್ನಾಟಕದ 1 ಲಕ್ಷ ಪೊಲೀಸರ ಪೈಕಿ ನಾಲ್ವರು ಮಾತ್ರ ಈ ಸಾಧನೆಗೈದಿದ್ದಾರೆ. ಅದರಲ್ಲಿ ನಮ್ಮ ಸಂಗಮೇಶ ಆನಿ ಸಾಧನೆ ಮಾಡಿರುವುದು ಖುಷಿ ಮತ್ತು ಹೆಮ್ಮೆಯ ಸಂಗತಿ. ಎಲ್ಲ ಪೊಲೀಸರಿಗೆ ಮಾದರಿ ಆಗಿದ್ದಾರೆ. ಅವರಿಗೆ ನಾವು ಸತ್ಕರಿಸಿದ್ದೇವೆ. ಸೂಕ್ತ ಬಹುಮಾನ ನೀಡುವ ಸಂಬಂಧ ಡಿಜಿ ಅವರಿಗೆ ಪತ್ರ ಕೂಡ ಬರೆಯುತ್ತೇನೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಹೇಳಿದರು.
ಇದನ್ನೂ ಓದಿ: 78ರ ವಯಸ್ಸಿನಲ್ಲಿ 28ರ ಸಾಧನೆ: ಅಥ್ಲೆಟಿಕ್ಸ್ನಲ್ಲಿ ಮಿಂಚು ಹರಿಸುತ್ತಿರುವ ರಾಮ ಸುಬ್ಬಮ್ಮ

