ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ: ಸಿಎಂ ಸಿದ್ದರಾಮಯ್ಯ ಭರವಸೆ
ಕೋಗಿಲು ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

Published : December 29, 2025 at 10:47 PM IST
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು. ಕೋಗಿಲುಯಿಂದ 7 ಕಿಮೀ ವ್ಯಾಪ್ತಿಯಲ್ಲೇ ಬದಲಿ ಮನೆ ಕೊಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿರ್ಮಾಣ ತೆರವು ಸಂಬಂಧ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಸಿಎಂ ಮಾತನಾಡಿದರು. ಮುಂದೆ ಸರ್ಕಾರದ ಜಮೀನು ಅಕ್ರಮ ಒತ್ತುವರಿ ಆದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ ಕ್ರಮ ವಹಿಸಲಾಗುವುದು. ಜನವರಿ 1 ರ ಹೊಸ ವರ್ಷದಂದೇ ಶೆಡ್ ಕಳೆದುಕೊಂಡವರಿಗೆ ಹೊಸ ಮನೆ ಹಂಚಿಕೆ ಮಾಡಲಾಗುವುದು. ಅಲ್ಲೇ ಸಮೀಪದ ಬೈಯ್ಯಪ್ಪನಹಳ್ಳಿಯ ಸರ್ವೇ ನಂ.23 ರಲ್ಲಿ ಸುಮಾರು 1087 ಮನೆಗಳಿವೆ, ಅಧಿಕಾರಿಗಳಿಂದ ಪಟ್ಟಿ ಬಂದ ನಂತರ ಅವರಿಗೆ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆ ಮಾಡುತ್ತೇವೆ ಎಂದರು.
ಇದು ಕೋಗಿಲುಯಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಒಂದು ಮನೆಗೆ ಸುಮಾರು ₹11.20 ಲಕ್ಷ ವೆಚ್ಚವಾಗಿದ್ದು, ಇವನ್ನು ಕೊಡುತ್ತೇವೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಬ್ಸಿಡಿ ಲಭ್ಯವಿದೆ, ಜೊತೆಗೆ ಜಿಬಿಎ ಇಂದ ಪ್ರತಿ ಮನೆಗೆ 5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಿದ್ದೇನೆ. ಜನರಲ್‌ಗೆ ಎಲ್ಲಾ ಸಬ್ಸಿಡಿ ಸೇರಿ 8 ಲಕ್ಷದ 70 ಸಾವಿರ ರೂಪಾಯಿ ಬರುತ್ತದೆ. ಎಸ್‌ಸಿ ಎಸ್‌ಟಿಗಳಾದರೆ 9.50 ಲಕ್ಷ ಬರುತ್ತದೆ. ಆಮೇಲೆ ಜನರಲ್‌ಗೆ 2.5 ಲಕ್ಷವನ್ನು ಸಾಲದ ರೂಪದಲ್ಲಿ ಕೊಡತಕ್ಕಂತದ್ದು. ಎಸ್‌ಸಿಎಸ್‌ಟಿಗೆ 1.70 ಲಕ್ಷ ಸಾಲ ಕೊಡಿಸಲಾಗುತ್ತದೆ ಎಂದು ತಿಳಿಸಿದರು.
ಕೋಗಿಲು ಬಡಾವಣೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿದ್ದ ಸುಮಾರು 167 ಶೆಡ್‌ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಅವರೆಲ್ಲರಿಗೂ ನೋಟಿಸ್ ನೀಡಿ, ಸರ್ಕಾರದ ಜಾಗವಾಗಿದ್ದು ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು. ಆದರೂ ಅವರು ಖಾಲಿ ಮಾಡಿರಲಿಲ್ಲ. ನಿನ್ನೆ ನಾನು ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ನನ್ನ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್ ಅವರನ್ನು ಸ್ಥಳಕ್ಕೆ ಕಳಿಸಿಕೊಟ್ಟಿದ್ದೆ. ಇಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕೂಡ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದಾರೆ ಎಂದರು.
ಕಸ ವಿಲೇವಾರಿ ಮಾಡುವ ಉದ್ದೇಶಕ್ಕೆ 15 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು. ಬಂಡೆ ಕ್ವಾರಿ ಕೂಡ ಅಲ್ಲಿದೆ. ಪಾಲಿಕೆಯವರು ಕಸ ಹಾಕುತ್ತಿದ್ದು, ಭೂಮಿ ಅವರ ಸ್ವಾಧೀನದಲ್ಲೇ ಇದೆ. ಸುಮಾರು 2020-21 ರಿಂದ ಈ ರೀತಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡು ವಾಸ ಮಾಡುತ್ತಿದ್ದರು, ಹೀಗಾಗಿ ಅಲ್ಲಿನ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ತಹಶೀಲ್ದಾರರಿಗೆ, ಶಿರಸ್ಥೆದಾರರಿಗೆ ಗೊತ್ತಿಲ್ಲದೆ ಒತ್ತುವರಿ ಆಗಲು ಸಾಧ್ಯವಿಲ್ಲ. ಇನ್ನು ಮುಂದೆ ಇಂತಹ ಘಟನೆ ಮರುಕಳಿಬಾರದು ಎಂಬ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂಬ ಎಚ್ಚರಿಕೆ ನೀಡಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ. ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿ ವಾಸವಿದ್ದವರಲ್ಲಿ ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ, ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದು ಸ್ಪಷ್ಟಪಡಿಸಿದರು.
ಈ ವಿಚಾರದ ಬಗ್ಗೆ ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು ನನ್ನೊಂದಿಗೆ ಮತ್ತು ನಂತರ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಸಂತ್ರಸ್ತರಿಗೆ ಊಟ, ವಸತಿ, ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದೆ, ಅದರಂತೆ ಮೂರು ಕಡೆ ಈ ರೀತಿಯ ವ್ಯವಸ್ಥೆ ಮಾಡಿದ್ದರೂ ಅಲ್ಲಿನ ನಿವಾಸಿಗಳು ಹೋಗಿಲ್ಲ. ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್, ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರ ಜೊತೆ ಮಾತನಾಡಿ, ಪರ್ಯಾಯ ವ್ಯವಸ್ಥೆ ಮಾಡುವ ಸಂಬಂಧ ಚರ್ಚಿಸಿದ್ದೇನೆ ಎಂದು ವಿವರಿಸಿದರು.
ನಾಳೆ, ನಾಡಿದ್ದು ಎರಡು ದಿನ ಪರಿಶೀಲನೆ ಮಾಡುತ್ತಾರೆ. ಜನವರಿ 1ರಂದು ಹೊಸ ವರ್ಷ ಪ್ರಾರಂಭದ ದಿನ ಇವರಿಗೆ ವಾಸಕ್ಕೆ ಮನೆಯನ್ನು ಒದಗಿಸಿಕೊಡುವ ಜವಾಬ್ದಾರಿಯನ್ನು ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಲಾಗಿದೆ. ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಮಾನವೀಯತೆ ದೃಷ್ಟಿಯಿಂದ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. 1 ಲಕ್ಷ ಮನೆಗಳನ್ನು ನಾವು ಕಟ್ಟಿಸಿರುವುದೇ ಬಡವರಿಗೆ ಸೂರು ಒದಗಿಸಿಕೊಡಲೆಂದು ಎಂದರು.
ಈ ಪ್ರಕರಣಕ್ಕೆ ಮಾತ್ರ ಸೀಮಿತ: ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದು ಇದೊಂದು ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ. ಅಕ್ರಮವಾಗಿ ಶೆಡ್ ನಿರ್ಮಿಸಲು ಬಿಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ಅಕ್ರಮ ನಡೆದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ: ಡಿಸಿಎಂ
ಕೆ.ಸಿ. ವೇಣುಗೋಪಾಲ್ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ನಮಗೆ ಅನೇಕ ವಿಚಾರಗಳ ಬಗ್ಗೆ ಸಲಹೆ ನೀಡಿದ್ದಾರೆ, ಆದರೆ ಅವರು ಎಂದಿಗೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ನಾಯಕರು, ನಮಗೆ ಸಲಹೆ ನೀಡುವ ಎಲ್ಲಾ ಅಧಿಕಾರ ಅವರಿಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ಸಲಹೆ ನೀಡುತ್ತಾರೆ. ಈ ಹಿಂದೆಯೂ ಅನೇಕ ಸಲಹೆ ನೀಡಿದ್ದಾರೆ, ಈಗಲೂ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ ಎಂದು ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಅನೇಕರು ತಮಗೆ ಬೇರೆ ಕಡೆ ಮನೆಗಳಿದ್ದರೂ ಇಲ್ಲಿ ಗುಡಿಸಲು ಹಾಕಿಕೊಂಡಿದ್ದರು. ಉದ್ಯೋಗ ಅರಸಿ ಬಂದು ಇಲ್ಲಿ ವಾಸವಾಗಿದ್ದಾರೆ. ಯಾರಿಗೆ ನಿಜವಾಗಿಯೂ ವಾಸಕ್ಕೆ ಮನೆ ಇಲ್ಲವೊ ಅವರಿಗೆ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು. ಇದಕ್ಕೆ ಅವರು ಒಂದೂವರೆಯಿಂದ ಎರಡು ಲಕ್ಷ ಹಣ ಪಾವತಿಸಬೇಕು. ಇದಕ್ಕೆ ಸಾಲ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ವಹಿಸಲಾಗಿದೆ. ನಾವು ಮನೆ ನೀಡುವ ಮುನ್ನ, ಅವರು ಯಾರು, ಎಲ್ಲಿಂದ ಬಂದಿದ್ದಾರೆ ಎಂದೆಲ್ಲಾ ಆಧಾರ್ ಹಾಗೂ ಇತರೆ ದಾಖಲೆ ಪರಿಶೀಲಿಸುತ್ತೇವೆ. ಅಲ್ಲಿಯವರೆಗೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೋಗಿಲು ಗ್ರಾಮದಲ್ಲಿ ತೆರವು: ಚಳಿಯಲ್ಲೇ ಸಂತ್ರಸ್ತರು; ಸ್ಥಳಕ್ಕೆ ಮಾನವ ಹಕ್ಕುಗಳ ಆಯೋಗ ಭೇಟಿ

