ETV Bharat / state

ಆನೆ ಧಾಮಕ್ಕೆ ಕೇಂದ್ರದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ: ಸಚಿವ ಈಶ್ವರ ಖಂಡ್ರೆ

ಆನೆ ಧಾಮಕ್ಕೆ ಕೇಂದ್ರ ಸರ್ಕಾರದಿಂದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಅರಣ್ಯ ಸಚಿವ ಈಶ್ವರ ಖಂಡ್ರೆ
ಅರಣ್ಯ ಸಚಿವ ಈಶ್ವರ ಖಂಡ್ರೆ (IANS)
author img

By ETV Bharat Karnataka Team

Published : December 17, 2025 at 10:29 PM IST

2 Min Read
Choose ETV Bharat

ಬೆಳಗಾವಿ: ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆ ಧಾಮಕ್ಕೆ ಕೇಂದ್ರ ಸರ್ಕಾರ ಇನ್ನೂ ತನ್ನ ಸಮ್ಮತಿ ನೀಡಿಲ್ಲ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 73ರಡಿಯಲ್ಲಿ ಶಾಸಕ ಎಚ್.ಕೆ.ಸುರೇಶ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಮೃದು ಧಾಮ ಮಾಡಲು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮತ್ತು ಕೇಂದ್ರದ ಅನುಮತಿ ಬೇಕು, ಒಂದೊಮ್ಮೆ ಕೇಂದ್ರ ಅನುಮತಿಸದಿದ್ದರೆ ಪರ್ಯಾಯ ಮಾರ್ಗದ ಚಿಂತನೆಯೂ ಸರ್ಕಾರಕ್ಕಿದೆ ಎಂದರು.

ಪ್ರತಿ ವರ್ಷ ರಾಜ್ಯದಲ್ಲಿ 45 ರಿಂದ 50 ಜನರು ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ ಇದು ನೋವಿನ ಸಂಗತಿ. ಈ ಪೈಕಿ ಆನೆ ದಾಳಿಯಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಅದಕ್ಕಾಗಿಯೇ ಆನೆ ಧಾಮ ಮಾಡಲು ಸಂಪುಟದ ಅನುಮತಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಆನೆ-ಮಾನವ ಸಂಘರ್ಷ ತಗ್ಗಿಸಲು ರಾಜ್ಯ ಸರ್ಕಾರ 428 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದೆ.1775 ಕಿ.ಮೀ ಆನೆ ಕಂದಕ ನಿರ್ಮಿಸಿದ್ದೇವೆ. 1361 ಕಿ.ಮೀ. ಸೌರ ಬೇಲಿ ಹಾಕಿದ್ದೇವೆ. ಆದರೆ ಹಾಸನದಲ್ಲಿ ಮತ್ತು ಕೊಡಗಿನಲ್ಲಿ ಹಲವು ವರ್ಷದಿಂದ ತಲಾ 100ಕ್ಕೂ ಹೆಚ್ಚು ಆನೆಗಳು ಕಾಡಿನಿಂದ ಹೊರಗಿವೆ. ಅಲ್ಲಿ ತೋಟ ಮತ್ತು ಕಾಡು ಒಂದೇ ರೀತಿ ಇದೆ ಎಂದರು.

ತಾವು ಸಚಿವರಾದ ತರುವಾಯ 8 ಬಾರಿ ಹಾಸನಕ್ಕೆ ಭೇಟಿ ನೀಡಿದ್ದು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, ಆನೆಗಳ ಕಾರಿಡಾರ್ ವಿಭಜನೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ರೈತರ ಬೆಳೆ ಹಾನಿ ಆಗದಂತೆ ಕ್ರಮ ಕೈಗೊಳ್ಳುತ್ತಿದೆ. ವನ್ಯಜೀವಿಗಳಿಂದ ಆಗಿರುವ ಬೆಳೆ ಹಾನಿಯ ಸಂಪೂರ್ಣ ಪರಿಹಾರ ನೀಡಲಾಗಿದೆ. ಯಾವುದೇ ಬಾಕಿ ಇರುವುದಿಲ್ಲ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ಸಾಧ್ಯವಿಲ್ಲ: ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಈಶ್ವರ ಬಿ.ಖಂಡ್ರೆ ನಿನ್ನೆ(ಮಂಗಳವಾರ) ವಿಧಾನ ಪರಿಷತ್‌ಗೆ ತಿಳಿಸಿದ್ದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 6 ಅಧಿಸೂಚನೆ ಹೊರಡಿಸಿದೆ. 2024ರಲ್ಲಿ 6ನೇ ಅಧಿಸೂಚನೆಯಾದ ಬಳಿಕ 10 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಂತರ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲೂ ಪರಾಮರ್ಶಿಸಿ, ಸಚಿವ ಸಂಪುಟದಲ್ಲಿ ಕಸ್ತೂರಿ ರಂಗನ್ ವರದಿಗೆ ರಾಜ್ಯದ ಒಪ್ಪಿಗೆ ಇಲ್ಲ ಎಂದು ನಿರ್ಣಯಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಜಾರಿ ಸಾಧ್ಯವಿಲ್ಲ, ಕೇಂದ್ರಕ್ಕೆ ಪತ್ರ ಬರೆದಿದ್ದೇವೆ: ಸಚಿವ ಈಶ್ವರ ಖಂಡ್ರೆ