ವಸತಿ ಶಾಲೆ ಮುಖ್ಯಸ್ಥನಿಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಪ್ರಕರಣದಡಿ ಆರೋಪಿ ದಂಪತಿ ಬಂಧನ
ದೇವನಹಳ್ಳಿಯ ಖಾಸಗಿ ವಸತಿ ಶಾಲೆಯೊಂದರ ಮುಖ್ಯಸ್ಥ ಮತ್ತು ಅವರ ಪತ್ನಿ ಪೋಕ್ಸೋ ಪ್ರಕರಣದಡಿ ಬಂಧಿತರಾಗಿದ್ದಾರೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Published : February 28, 2026 at 9:42 PM IST
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ವಸತಿ ಶಾಲೆಯಲ್ಲಿ 8ನೇ ತರಗತಿಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಸತಿ ಶಾಲೆಯ ಮುಖ್ಯಸ್ಥ ಡಿ.ಎಸ್. ಧನಂಜಯ್ ಮತ್ತು ಶಾಲೆಯ ಪ್ರಾಂಶುಪಾಲರಾದ ಆತನ ಪತ್ನಿಯನ್ನು ಪೋಕ್ಸೋ ಪ್ರಕರಣದಡಿ ಬಂಧಿಸಲಾಗಿದೆ.
ದೇವನಹಳ್ಳಿ ಪಟ್ಟಣದ ಬಳಿ ಇರುವ ವಸತಿ ಶಾಲೆಯಲ್ಲಿ ಬೆಂಗಳೂರು ಮೂಲದ ಬಾಲಕಿಯರು ವ್ಯಾಸಂಗ ಮಾಡುತ್ತಿದ್ದರು, ಅವರ ಮೇಲೆ ಹಾಸ್ಟೆಲ್ ರೂಮ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಸಂತ್ರಸ್ತ ಬಾಲಕಿ ಬೇರೆಯವರ ಫೋನಿನಿಂದ ಮನೆಯವರಿಗೆ ಕರೆ ಮಾಡಿ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಳು. ಆ ಬಳಿಕ ಕೂಡಲೇ ಪೋಷಕರು ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿ ಪ್ರಕರಣ ಆಚೆ ಬರದಂತೆ ವಿದ್ಯಾರ್ಥಿನಿ ಮೇಲೆ ಒತ್ತಡ ಹಾಕಿದ್ದಾರೆ, ವಿದ್ಯಾರ್ಥಿನಿ ಮನೆಗೆ ಕರೆ ಮಾಡಲು ಸಹ ಫೋನ್ ಕೊಡದೆ ಕಿರುಕಳ ನೀಡಿದ್ದರು. ಸಂತ್ರಸ್ತ ಬಾಲಕಿ ಬೇರೆ ಫೋನಿನಿಂದ ಮನೆಯವರಿಗೆ ಕರೆ ಮಾಡಿ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಳು. ಈ ಆಘಾತಕಾರಿ ಮಾಹಿತಿ ತಿಳಿದ ಕೂಡಲೇ ಪೋಷಕರು ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಪತಿ - ಪತ್ನಿ ಇಬ್ಬರನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪತ್ನಿಯು ಪತಿ ಎಸಗಿರುವ ಲೈಂಗಿಕ ದೌರ್ಜನ್ಯದ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿರುವ ಆರೋಪವಿದೆ. ಪ್ರಾಂಶುಪಾಲೆಯಾಗಿದ್ದ ಧನಂಜಯ್ ಪತ್ನಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತರ ಪೋಷಕರು ನೀಡಿರುವ ದೂರಿನಲ್ಲಿ ವಸತಿ ಶಾಲೆಯಲ್ಲಿದ್ದ ಅಕ್ಕ ಮತ್ತು ತಂಗಿ ಆಗಿರುವ ವಿದ್ಯಾರ್ಥಿನಿಯರಿಬ್ಬರಲ್ಲಿ ಹಿರಿಯವಳ ಮೇಲೆ ಎರಡು ಬಾರಿ ಧನಂಜಯ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಆಕೆಯ ತಂಗಿಯ ಮೇಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಆಕೆ ಬಾತ್ರೂಮ್ಲ್ಲಿ ಅಡಗಿ ತಪ್ಪಿಸಿಕೊಂಡಿದ್ದರಿಂದ ದೌರ್ಜನ್ಯದಿಂದ ಪಾರಾಗಿದ್ದಾಳೆಂಬ ಅಂಶಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ತಿಳಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್.ಎಸ್. ಕೋಸಂಬೆ ಅವರು ಶಾಲೆಗೆ ಭೇಟಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಫೆಬ್ರುಬರಿ 9ರಂದು ಖಾಸಗಿ ವಸತಿ ಶಾಲೆಯಲ್ಲಿ ದುರ್ಘಟನೆ ನಡೆದಿದೆ. ಇದಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಕಳವಳ ವ್ಯಕ್ತಪಡಿಸುತ್ತಿದೆ. ಶಾಲೆಯಂದರೆ ಮಕ್ಕಳಿಗೆ ಮನೆಗಿಂತಲೂ ಅತ್ಯಂತ ಸುರಕ್ಷಿತ ಸ್ಥಳವಾಗಿರಬೇಕು. ಮಕ್ಕಳು ವಿದ್ಯಾಭ್ಯಾಸ ಪಡೆಯುವ ಮಕ್ಕಳಿಗೆ ನೀಚ ವ್ಯಕ್ತಿಗಳು ದುಶ್ಕೃತ್ಯವೆಸಗಿರುವುದು ಖಂಡನೀಯ. ಮಕ್ಕಳ ಆಯೋಗ ಇದನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಎಸಿಪಿ ಹರ್ಷ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಇದ್ದಾರೆ. ಎಲ್ಲಾ ರೀತಿಯಲ್ಲಿ ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆಯಾಗಿ ಈ ಆಯೋಗ ಶಾಲೆ ಭೇಟಿ ನೀಡಿ ಘಟನೆ ನಡೆದಿರುವುದು ಕಂಡುಬಂದಿದ್ದು, ಇದು ಶಾಲೆಯಂತೆ ಕಾಣಿಸಿಲ್ಲ. ಇದೊಂದು ನರಕದ ಮನೆಯ ರೀತಿಯಲ್ಲಿ ಭಾವನೆ ಬರುತ್ತಿದೆ. ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ವಸತಿ ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಶಾಲೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಕೃತ್ಯ ಎಸಗಿರುವ ಆರೋಪಿ ಧನಂಜಯ್ ಅವರನ್ನು ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಸ್ಥಾನದಿಂದ ಒಕ್ಕೂಟದ ಪದಾಧಿಕಾರಿಗಳು ವಜಾಗೊಳಿಸಿದ್ದಾರೆ.
ಇದನ್ನೂ ಓದಿ: ಕಾರವಾರದ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತೆ ಆತ್ಮಹತ್ಯೆ ಯತ್ನ; ಆಸ್ಪತ್ರೆಗೆ ಡಿಸಿ ಭೇಟಿ, ತನಿಖೆಗೆ ಆದೇಶ

