'ಪಿಎಫ್ ಮೊತ್ತ ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ದಿ.ಚಂದ್ರಶೇಖರನ್ ಕುಟುಂಬಕ್ಕೆ ಈಗಾಗಲೇ ಒದಗಿಸಲಾಗಿದೆ'
ದಿ.ಚಂದ್ರಶೇಖರನ್ ಕುಟುಂಬಕ್ಕೆ ಪಿಎಫ್ ಮೊತ್ತ 3.5 ಲಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

Published : September 2, 2026 at 2:58 PM IST
ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಅವರ ಕುಟುಂಬಕ್ಕೆ ನೀಡಬೇಕಾದ ಸೌಲಭ್ಯಗಳ ಕುರಿತು ಸ್ಪಷ್ಟನೆ ನೀಡಲಾಗಿದ್ದು, ಬಾಕಿ ಇರುವ ಪಿಎಫ್ ಮೊತ್ತ 3.5 ಲಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ.
ಮೈಸೂರಿನ ಪೇಪರ್ ಮಿಲ್ಸ್‌ನಿಂದ ಚಂದ್ರಶೇಖರನ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವಿಲೀನಗೊಳಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಘಟನೆ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ ನಿರ್ದೇಶನದಂತೆ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ನೌಕರರ ಶಾಸನಬದ್ಧ ಕಡಿತಗಳ ಮೊತ್ತವನ್ನು ಜಮಾ ಮಾಡುವ ಉದ್ದೇಶಕ್ಕಾಗಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ ನೀಡಲಾಯಿತು.
ಅದರಂತೆ 22.07.2026ರಂದು ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಬಾಕಿ ಇರುವ 3.5 ಲಕ್ಷ ರೂಪಾಯಿ ಪಿಎಫ್ ಮೊತ್ತವನ್ನು ಸಹ ಶೀಘ್ರದಲ್ಲೇ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಮೃತ ಚಂದ್ರಶೇಖರನ್ ಪತ್ನಿ ಹಾಗೂ ಕುಟುಂಬದವರು ತಮಗೆ ಇನ್ನೂ ಚಂದ್ರಶೇಖರನ್ ಅವರ ಪಿಎಫ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಇತ್ತೀಚಿಗೆ ಆರೋಪ ಮಾಡಿದ್ದರು. ಈ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.
ನನ್ನ ಪತಿಯ ಸಾವಿಗೆ ನ್ಯಾಯ ಕೊಡಿ: 2024ರ ಮೇ 26ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರಾಜ್ಯ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಕುಟುಂಬ ನ್ಯಾಯಕ್ಕಾಗಿ ಮತ್ತೆ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ''ನಾಗೇಂದ್ರ ಅವರು ಇದೀಗ ಎರಡನೇ ಬಾರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಅವರಿಗಾದ ಮುಖಭಂಗ. ಆದರೆ, ನನ್ನ ಪತಿಯ ಸಾವಿಗೆ ನ್ಯಾಯ ಕೊಡಿ ಎನ್ನುವುದು ನನ್ನ ಬೇಡಿಕೆಯಾಗಿದೆ'' ಎಂದು ಮೃತ ಚಂದ್ರಶೇಖರನ್ ಪತ್ನಿ ಕವಿತಾ ತಮ್ಮ ವ್ಯಥೆಯನ್ನು ಹೇಳಿಕೊಂಡಿದ್ದರು.
''ವಾಲ್ಮೀಕಿ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಹಾಗೂ ಒಬ್ಬರು ಬ್ಯಾಂಕ್ ಅಧಿಕಾರಿ ತಮ್ಮ ಪಾಡಿಗೆ ಆರಾಮಾಗಿ ಓಡಾಡಿಕೊಂಡಿದ್ದಾರೆ. ಕೆಲಸಕ್ಕೆ ಬರುತ್ತಿದ್ದಾರೆ, ಸರಿಯಾಗಿ ಸಂಬಳ ತೆಗೆದುಕೊಳ್ಳುತ್ತಿದ್ದಾರೆ, ಎಲ್ಲರೂ ಆರಾಮಾಗಿದ್ದಾರೆ. ಅವರಿಗೆ ಕಾನೂನಾತ್ಮಕವಾಗಿ ಯಾವ ಶಿಕ್ಷೆ ಕೂಡ ಆಗಲಿಲ್ಲ. ಅಮಾನತೋ, ಮತ್ತೊಂದು ಮಗದೊಂದು ಯಾವುದನ್ನೂ ಮಾಡಿಲ್ಲ. ಅವರೆಲ್ಲರೂ ಆರಾಮಾಗಿದ್ದಾರೆ. ಆದರೆ, ನನ್ನ ಪತಿಯ ಸಾವಿಗೆ ನ್ಯಾಯ ಎಲ್ಲಿ ಸಿಕ್ಕಂತಾಯಿತು?'' ಎಂದು ಪ್ರಶ್ನಿಸಿದ ಕವಿತಾ, ''ಬಡವರ ಹಣ ಈವರೆಗೂ ವಾಪಸ್ ಬರಲಿಲ್ಲ. ನನ್ನ ಪತಿಯ ಪಿಎಫ್ ಹಣ ಕೂಡ ಬಂದಿಲ್ಲ. ಎರಡು ವರ್ಷ ಆಯ್ತು ಕೇಳಿ ಕೇಳಿ ಸಾಕಾಯ್ತು'' ಎಂದು ಬೇಸರ ಹೊರಹಾಕಿದ್ದರು.
ಇವುಗಳನ್ನೂ ಓದಿ:

