ETV Bharat / state

1 ಗಂಟೆ, 100ಕ್ಕೂ ಹೆಚ್ಚು ಮಾಡೆಲ್‌ಗಳಿಗೆ ಮೇಕಪ್: ಮಂಗಳೂರಿನಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆ ಪ್ರಯತ್ನ

100ಕ್ಕೂ ಹೆಚ್ಚು ಮಾಡೆಲ್​ಗಳಿಗೆ ಸಮಾನ ಸಂಖ್ಯೆಯಲ್ಲಿ ಮೇಕಪ್​ ಕಲಾವಿದರು ಒಂದೇ ವೇದಿಕೆಯಲ್ಲಿ ಒಂದು ಗಂಟೆಯಲ್ಲಿ ಮೇಕಪ್​ ಮಾಡಿದ್ದಾರೆ.

DAKSHINA KANNADA  ALL INDIA HAIR BEAUTY ASSOCIATION  LIMCA BOOK OF RECORDS  ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್
1 ಗಂಟೆ, 100ಕ್ಕೂ ಹೆಚ್ಚು ಮಾಡೆಲ್‌ಗಳಿಗೆ ಮೇಕಪ್ (ETV Bharat)
author img

By ETV Bharat Karnataka Team

Published : March 4, 2026 at 5:50 PM IST

2 Min Read
Choose ETV Bharat

ಮಂಗಳೂರು: ಕರಾವಳಿಯ ಸೌಂದರ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುವ ಪ್ರಯತ್ನವಾಗಿ, All India Hair & Beauty Association ವತಿಯಿಂದ ಮಂಗಳೂರಿನಲ್ಲಿ ವಿಶಿಷ್ಟ ದಾಖಲೆ ಯತ್ನ ನಡೆಯಿತು. 100ಕ್ಕೂ ಹೆಚ್ಚು ಮಾಡೆಲ್‌ಗಳಿಗೆ ಒಂದು ಗಂಟೆಯಲ್ಲಿ ಮೇಕಪ್​ ಎಂಬ ಸವಾಲಿನೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಲಿಮ್ಕಾ ರೆಕಾರ್ಡ್​​ ನಿರೀಕ್ಷೆಯಲ್ಲಿದೆ.

ಮಾರ್ಚ್​​​ 3ರಂದು ಬೆಂದೂರಿನ ಸೆಂಟ್​​​​ ಸೆಬಾಸ್ಟಿಯನ್​​ ಜುಬಿಲಿ ಹಾಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳ ಜೊತೆಗೆ ಹೊರ ರಾಜ್ಯಗಳಿಂದಲೂ ಮೇಕಪ್ ಕಲಾವಿದರು ಮತ್ತು ಮಾಡೆಲ್‌ಗಳು ಭಾಗವಹಿಸಿದರು. ನಿಗದಿತ 60 ನಿಮಿಷಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಮಾಡೆಲ್‌ಗಳಿಗೆ ಮೇಕಪ್ ಪೂರ್ಣಗೊಳಿಸುವುದು ಮುಖ್ಯ ಗುರಿಯಾಗಿತ್ತು. ಸಮಯಪಾಲನೆಗಾಗಿ ಟೈಮರ್ ವ್ಯವಸ್ಥೆ ಮಾಡಲಾಗಿದ್ದು, ನಿಗದಿತ ಸಮಯದೊಳಗೆ ಮೇಕಪ್ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.

ಈ ದಾಖಲೆ ಪ್ರಯತ್ನಕ್ಕಾಗಿ ಕಳೆದ ಆರು ತಿಂಗಳಿನಿಂದ ಸಿದ್ಧತೆ ನಡೆಸಲಾಗಿತ್ತು. ಲಿಮ್ಕಾ ದಾಖಲೆಗೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಪೂರ್ವಭಾವಿಯಾಗಿ ಸಲ್ಲಿಸಲಾಗಿದ್ದು, ಪ್ರತಿ ಮೇಕಪ್​ ಕಲಾವಿದರ ಗುರುತಿನ ಚೀಟಿ, ಆರೋಗ್ಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಚಿತ್ರಗಳನ್ನು ದಾಖಲಿಸಿ ಲಿಮ್ಕಾ ಬುಕ್ ಅಫ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಅಧಿಕೃತ ಪರಿಶೀಲನೆಯ ನಂತರ ದಾಖಲೆ ಮಾನ್ಯತೆ ಸಿಗುವ ನಿರೀಕ್ಷೆಯಿದೆ.

ಕಾರ್ಯಕ್ರಮದ ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ವೈದ್ಯರು, ಪ್ರಾಂಶುಪಾಲರು ಹಾಗೂ ಇತರ ಗಣ್ಯರು ವೀಕ್ಷಕರಾಗಿ ಹಾಜರಿದ್ದರು. ವೃತ್ತಿಪರ ಫೋಟೋಗ್ರಾಫರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳು ಹಲವು ಕೋನಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು. ಸೌಂದರ್ಯ ಕ್ಷೇತ್ರದಲ್ಲಿ ಮಂಗಳೂರಿನ ಪ್ರತಿಭೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶವೇ ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.

DAKSHINA KANNADA  ALL INDIA HAIR BEAUTY ASSOCIATION  LIMCA BOOK OF RECORDS  ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್
ಆಲ್ ಇಂಡಿಯಾ ಹೇರ್ & ಬ್ಯೂಟಿ ಅಸೋಸಿಯೇಷನ್ ವತಿಯಿಂದ ಆಯೋಜನೆ. (ETV Bharat)

ಈ ದಾಖಲೆ ಯತ್ನವು ಕೇವಲ ವೇಗದ ಸವಾಲು ಮಾತ್ರವಲ್ಲದೆ ಬ್ಯೂಟಿ ಇಂಡಸ್ಟ್ರಿಯ ವೃತ್ತಿಪರತೆ, ಸಂಯೋಜನೆ ಪ್ರತೀಕವಾಗಿ ಮೂಡಿಬಂದಿತು. ಮಂಗಳೂರಿನಲ್ಲಿ ಇಂಥ ದೊಡ್ಡ ಪ್ರಮಾಣದ ಆಯೋಜನೆ ನಡೆದಿರುವುದು ಹೆಮ್ಮೆ ತಂದಿದೆ.

ಈ ಬಗ್ಗೆ ಆಯೋಜಕರಾದ ಮರ್ಸಿ ವೀಣಾ ಡಿಸೋಜಾ ಮಾತನಾಡಿ, "ಇತಿಹಾಸ ನಿರ್ಮಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 100ಕ್ಕೂ ಹೆಚ್ಚು ಮಾಡೆಲ್​ಗಳು ಮತ್ತು ಸಮಾನ ಸಂಖ್ಯೆಯ ಮೇಕಪ್​ ಕಲಾವಿದರು ಒಂದೇ ವೇದಿಕೆಯಲ್ಲಿ ಒಂದು ಗಂಟೆಯಲ್ಲಿ ಕಾರ್ಯ ಪೂರ್ಣಗೊಳಿಸಿರುವುದು ಹೊಸ ಮೈಲಿಗಲ್ಲು. ಆರು ತಿಂಗಳ ಸಿದ್ಧತೆ ಮಾಡಲಾಗಿತ್ತು. ಬ್ಯೂಟಿ ಇಂಡಸ್ಟ್ರಿಗೆ ಒಂದು ಹೊಸ ಮಾನದಂಡ ನಿರ್ಮಿಸುವುದೇ ತಮ್ಮ ಉದ್ದೇಶ" ಎಂದರು.

ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಮಾಡೆಲ್ ಗೀತಾ ಮಾತನಾಡಿ, "ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ತಮಗೆ ಮೇಕಪ್ ಮಾಡಿದ ಕಲಾವಿದರ ಮೇಲೆ ವಿಶ್ವಾಸವಿದ್ದು, ಇಂತಹ ದಾಖಲೆ ಪ್ರಯತ್ನದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ" ಎಂದು ಹೇಳಿದರು.

ಮೇಕಪ್ ಆರ್ಟಿಸ್ಟ್ ರಚನಾ ಅವರು, "ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಈ ರೀತಿಯ ದೊಡ್ಡ ವೇದಿಕೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿರುವುದು ವಿಶೇಷ ಅನುಭವ" ಎಂದು ಅಭಿಪ್ರಾಯಪಟ್ಟರು.

DAKSHINA KANNADA  ALL INDIA HAIR BEAUTY ASSOCIATION  LIMCA BOOK OF RECORDS  ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆ ಪ್ರಯತ್ನ (ETV Bharat)

ಸುರಕ್ಷಾ ಬ್ಯೂಟಿ ಅಕಾಡೆಮಿಯ ಸುರಕ್ಷಾ ಮಾತನಾಡಿ, "ಬಹುಕಾಲದ ಕನಸು ನನಸಾಗಿದೆ. ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ದೊರೆತಿರುವುದು ಸಂತೋಷ ತಂದಿದ್ದು, ಆಯೋಜಕರಿಗೆ ಧನ್ಯವಾದ" ಅರ್ಪಿಸಿದರು.

ಕಿರಣ್ ಕುಮಾರ್ ಅವರು ಮಾತನಾಡಿ, "ಈ ಕಾರ್ಯಕ್ರಮವನ್ನು ಐತಿಹಾಸಿಕ ಸಾಧನೆ. ಬ್ಯೂಟಿ ಕ್ಷೇತ್ರದಲ್ಲಿ ಹೊಸ ಬೆಂಚ್ಮಾರ್ಕ್ ನಿರ್ಮಾಣವಾಗಿದೆ. ಇಂತಹ ವೇದಿಕೆಗಳು ಪ್ರತಿಭೆಯನ್ನು ಉತ್ತೇಜಿಸುತ್ತವೆ" ಎಂದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ಅಧಿಕೃತ ದೃಢೀಕರಣ ದೊರೆತರೆ, ಮಂಗಳೂರು ಸೌಂದರ್ಯ ಕ್ಷೇತ್ರಕ್ಕೆ ಇದು ಮಹತ್ವದ ಸಾಧನೆಯಾಗಿ ದಾಖಲೆಯಾಗಲಿದೆ.

ಇದನ್ನೂ ಓದಿ: ಗದಗ: ಚಂದ್ರ ಗ್ರಹಣದ ದಿನವೇ ದಾಂಪತ್ಯಕ್ಕೆ ಕಾಲಿಟ್ಟ ಸರ್ವಧರ್ಮದ 19 ಜೋಡಿ!