ಮಹಿಳೆಯರ, ಮಕ್ಕಳ ರಕ್ಷಣೆಗೆ ದಾವಣಗೆರೆಯಲ್ಲೂ ಅಕ್ಕ ಪಡೆ ಸಿದ್ಧ: ಪುಂಡರೇ ಹುಷಾರ್!; ರೌಂಡ್ಸ್ ಹಾಕಲಿದೆ ಈ ಸ್ತ್ರೀ ಪಡೆ
ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ಕ ಪಡೆಗೆ ಚಾಲನೆ ಸಿಕ್ಕಿದ್ದು, ಜಿಲ್ಲಾದ್ಯಂತ ಕಾರ್ಯನಿರ್ವಹಿಸಲಿದೆ.

Published : January 10, 2026 at 2:41 PM IST
ದಾವಣಗೆರೆ/ಶಿವಮೊಗ್ಗ: ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ಕ ಪಡೆಗೆ ಚಾಲನೆ ದೊರೆತಿದೆ. ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯವೆಸಗುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಈ ಅಕ್ಕ ಪಡೆ ಟೊಂಕ ಕಟ್ಟಿ ನಿಲ್ಲಲಿದೆ.
ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಪಡೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಈ ಪಡೆ ರಚನೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ.
ದಾವಣಗೆರೆಯಲ್ಲಿ ಅಕ್ಕ ಪಡೆಯ ವಾಹನಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಎಸ್ಪಿ ಕಚೇರಿ ಬಳಿ ಹಸಿರು ನಿಶಾನೆ ತೋರಿಸಿ ಗುರುವಾರ ಉದ್ಘಾಟಿಸಿದರು. ಈ ಹಿಂದೆ ದಾವಣಗೆರೆಯಲ್ಲಿ ಇದ್ದ ದುರ್ಗಾ ಪಡೆಯನ್ನು ಅಕ್ಕ ಪಡೆಯೊಂದಿಗೆ ಸೇರಿಸಲಾಗಿದೆ. ದುರ್ಗಾಪಡೆಯಲ್ಲಿದ್ದ ಮಹಿಳಾ ಪೊಲೀಸರು ಅಕ್ಕ ಪಡೆಯ ವಾಹನದಲ್ಲಿ ಕೆಲಸ ಮಾಡುತ್ತಾ, ಮಹಿಳೆಯರ ಮಕ್ಕಳ ರಕ್ಷಣೆ ಮಾಡಲಿದ್ದಾರೆ. ಹಾಗೆಯೇ, ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯುವಕರಿಂದ ಯುವತಿಯರಿಗೆ ತೊಂದರೆಯಾಗುತ್ತಿದ್ದಲ್ಲಿ ಅಲ್ಲಿ ಅಕ್ಕ ಪಡೆ ಹಾಜರ್ ಆಗಲಿದೆ. ಇದು ಇಡೀ ಜಿಲ್ಲೆಯಲ್ಲಿ ಸಂಚರಿಸಲಿದೆ.

4 ಗೃಹ ರಕ್ಷಕ ಸಿಬ್ಬಂದಿಗಳೊಂದಿಗೆ 4 ಜಿಲ್ಲಾ ಪೊಲೀಸ್ ಮಹಿಳಾ ಸಿಬ್ಬಂದಿಗಳು: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದಂದು ಈ ಅಕ್ಕ ಪಡೆಯನ್ನು ಸರ್ಕಾರ ಬೆಂಗಳೂರಿನಲ್ಲಿ ಚಾಲನೆ ನೀಡಿತ್ತು. ಇದೀಗ ಎರಡನೇ ಹಂತದಲ್ಲಿ ದಾವಣಗೆರೆಯಲ್ಲೂ ಅಕ್ಕ ಪಡೆಗೆ ಹಸಿರು ನಿಶಾನೆ ತೋರಲಾಗಿದೆ. ಈ ಅಕ್ಕ ಪಡೆಯ ವಾಹನದಲ್ಲಿ ತರಬೇತಿ ಪಡೆದ 04 ಗೃಹ ರಕ್ಷಕ ಸಿಬ್ಬಂದಿಗಳೊಂದಿಗೆ 04 ಜಿಲ್ಲಾ ಪೊಲೀಸ್ ಮಹಿಳಾ ಸಿಬ್ಬಂದಿ ಇರಲಿದ್ದಾರೆ. ದಿನದಲ್ಲಿ 2 ಪಾಳಿಯಲ್ಲಿ ಎರಡು ತಂಡಗಳಾಗಿ ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ.

"ದಾವಣಗೆರೆ ಜಿಲ್ಲೆಯಲ್ಲಿ ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ. ಈ ಹಿಂದೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ "ದುರ್ಗಾಪಡೆ"ಯ ಕಾರ್ಯವೈಖರಿಯು ಈ ನೂತನ ಅಕ್ಕ ಪಡೆ ಕಾರ್ಯವೈಖರಿಯಲ್ಲಿ ಮುಂದುವರೆಯುತ್ತದೆ" ಎಂದು ಎಸ್ಪಿ ಉಮಾಪ್ರಶಾಂತ್ ಅವರು ತಿಳಿಸಿದ್ದಾರೆ.
ಅಕ್ಕ ಪಡೆಯ ಪ್ರಮುಖ ಚಟುವಟಿಕೆಗಳು:
- ಸೂಕ್ಷ್ಮ ಪ್ರದೇಶಗಳಲ್ಲಿ patrolling
- ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತ ಸ್ಪಂದನೆ
- ಶಾಲೆ, ಕಾಲೇಜು, ಮಾರುಕಟ್ಟೆ ಮತ್ತು ನೆರೆಹೊರೆಗಳಲ್ಲಿ ಜಾಗೃತಿ ಅಭಿಯಾನ (ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು, ಸಹಾಯವಾಣಿ)
- ಮಕ್ಕಳ ಕಲ್ಯಾಣ ಸಮಿತಿಗಳು (CWCs), ಮಹಿಳಾ ಸಹಾಯವಾಣಿಗಳು, ಸರ್ಕಾರೇತರ ಸಂಸ್ಥೆಗಳು(NGOS), ಕಾನೂನು ನೆರವು ಮತ್ತು ಆಶ್ರಯ ತಾಣ (Shelter homes) ಗಳೊಂದಿಗೆ ಸುಗಮ ಸಂಪರ್ಕ ಕಲ್ಪಿಸಿ, ಸಮಾಲೋಚನೆ ಬೆಂಬಲವನ್ನು ನೀಡುವುದು.
- ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹ ಸ್ಥಿತಿಯನ್ನು ಸ್ಥಾಪನೆ.
- ಸಂತ್ರಸ್ತೆಯರು ಮತ್ತು ಕುಟುಂಬಗಳು ಭಯವಿಲ್ಲದ ಸಹಾಯ ಪಡೆಯಲು ಪ್ರೋತ್ಸಾಹ.
ಈ ಬಗ್ಗೆ ಸಂಸದೆ ಹೇಳಿದ್ದೇನು?: ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಶ್ರೀ ಇಂದಿರಾಗಾಂಧಿ ಅವರ ಜನ್ಮದಿನದಂದು ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಕ್ಕ ಪಡೆಯನ್ನು ಉದ್ಘಾಟನೆ ಮಾಡಲಾಗಿದೆ. ಇದೀಗ ಎರಡನೇ ಹಂತದಲ್ಲಿ ದಾವಣಗೆರೆಯಲ್ಲಿ ಅಕ್ಕ ಪಡೆಯನ್ನು ಉದ್ಘಾಟನೆ ಮಾಡಿದ್ದೇವೆ. ಮಹಿಳೆಯರಿಗೆ ಮಕ್ಕಳಿಗೆ ದೌರ್ಜನ್ಯ ಹಿಂಸೆ ನಡೆದಾಗ, ಸಹಾಯಕ್ಕಾಗಿ 1098 ಮತ್ತು 181 ಹಾಗು 112 1930 ಸಹಾಯವಾಣಿಗಳನ್ನು ತೆರೆಯಲಾಗಿದೆ. ಈ ಸಹಾಯವಾಣಿಗಳಿಗೆ ಕರೆ ಮಾಡಿದರೆ ಸಾಕು ಅಕ್ಕ ಪಡೆ ಅಲ್ಲಿ ಹಾಜರ್ ಆಗಲಿದೆ. ಈ ಸಹಾಯವಾಣಿಗಳನ್ನು ಜನರು ಮೊಬೈಲ್ನಲ್ಲಿ ನಮೂದಿಸಿಕೊಳ್ಳಬೇಕಿದೆ. ಕರೆ ಮಾಡಿದರೆ ಸಾಕು ಸಮಸ್ಯೆ ಎದುರಾದ ಸ್ಥಳಕ್ಕೆ ತಕ್ಷಣ ಅಕ್ಕ ಪಡೆ ನೆರವಿಗೆ ಧಾವಿಸಲಿದೆ. ಇದರಲ್ಲಿ ಮಹಿಳಾ ಪೇದೆಗಳು, ಹೋಮ್ಗಾರ್ಡ್ಗಳು ಕಾರ್ಯ ನಿರ್ವಹಿಸಲಿದ್ದಾರೆ. ದುರ್ಗಾಪಡೆಯಲ್ಲಿದ್ದ ಸಿಬ್ಬಂದಿ ಅಕ್ಕ ಪಡೆಯಲ್ಲಿ ಕೆಲಸ ಮಾಡಲಿದ್ದಾರೆ" ಎಂದರು.
ಜಾಗೃತಿ ಮೂಡಿಸಲಿದೆ ಈ ಅಕ್ಕ ಪಡೆ: ಎಸ್ಪಿ ಉಮಾಪ್ರಶಾಂತ್ ಅವರು ಮಾತನಾಡಿ "ದುರ್ಗಾ ಪಡೆ ದಾವಣಗೆರೆ ನಗರದಲ್ಲಿ ಕೆಲಸ ಮಾಡುತ್ತಿತ್ತು. ಇದೀಗ ಅಕ್ಕ ಪಡೆಯನ್ನು ಇಡೀ ಜಿಲ್ಲೆಗೆ ವಿಸ್ತರಣೆ ಮಾಡಲಾಗಿದೆ. ಸಂಸದರು ಇದಕ್ಕೆ ಚಾಲನೆ ನೀಡಿದ್ದಾರೆ. ಈ ಅಕ್ಕ ಪಡೆ ಮಹಿಳಾ ಮಕ್ಕಳ ರಕ್ಷಣೆ, ಫೋಕ್ಸೊ ಪ್ರಕಣಗಳ ಬಗ್ಗೆ, ದೌರ್ಜನ್ಯದ ಬಗ್ಗೆ ಸೈಬರ್ ಕ್ರೈಂ, ಜಾಗೃತಿ ಮೂಡಿಸುವಂತ ಕೆಲಸ ಮಾಡಲಿದೆ. ಅಲ್ಲದೇ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಜಿಲ್ಲಾವಾರು ನಾಳೆಯಿಂದ ಆರಂಭಿಸಲಾಗುತ್ತದೆ. ದುರ್ಗಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಕ್ಕ ಪಡೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದರಲ್ಲಿ ಹೋಮ್ಗಾರ್ಡ್ಗಳು ಇರಲಿದ್ದಾರೆ. ಅವರಿಗೆ ತರಬೇತಿ ಕೊಡಲಾಗುತ್ತದೆ. ಪೊಲೀಸರು ಕೂಡ ಹೋಮ್ಗಾರ್ಡ್ ಜೊತೆಯಲ್ಲಿರಲಿದ್ದಾರೆ" ಎಂದು ತಿಳಿಸಿದರು.
ಶಿವಮೊಗ್ಗದಲ್ಲೂ ಅಕ್ಕ ಪಡೆ ವಾಹನಕ್ಕೆ ಚಾಲನೆ: ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗ ಎಸ್ಪಿ ನಿಖಿಲ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಅವರು ಜಂಟಿಯಾಗಿ ಅಕ್ಕ ಪಡೆ ವಾಹನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಎಸ್ಪಿ ನಿಖಿಲ್, "ಅಕ್ಕ ಪಡೆಯನ್ನು ರಚನೆ ಮಾಡಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಖಾತೆಯಿಂದ ಪ್ರಾರಂಭ ಮಾಡಲಾಗಿದೆ. ಪ್ರತಿಯೊಂದು ಜಿಲ್ಲೆಗೂ ಒಂದು ವಾಹನವನ್ನು ನೀಡಿ ಅದಕ್ಕೆ ಗೃಹ ರಕ್ಷಕದಳದ ಮಹಿಳೆಯನ್ನು ನೇಮಕ ಮಾಡಿ, ವಿಶೇಷವಾದ ಯೂನಿಫಾರಂನ್ನು ನೀಡಿಲಾಗಿದೆ. ಅಕ್ಕ ಪಡೆಯ ಈ ವಾಹನ ಶಾಲಾ - ಕಾಲೇಜು ಬಳಿ ಬೆಳಗ್ಗೆ ಮತ್ತು ಸಂಜೆ ಓಡಾಡುತ್ತಿರುತ್ತದೆ. ಹಿಂದೆ ಇದ್ದ ಓಬವ್ವನ ಪಡೆ ಹೇಗೆ ಕರ್ತವ್ಯ ನಿರ್ವಹಿಸುತ್ತಿತ್ತೋ ಅದೇ ರೀತಿ ಇದು ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಬಳಕೆ ಮಾಡಿಕೊಳ್ಳಲಾಗುತ್ತದೆ. ಫೋಕ್ಸೋ ಬಗ್ಗೆ ತಿಳುವಳಿಕೆಗೆ ನೀಡುವುದು ಕೂಡ ಅಕ್ಕ ಪಡೆಯ ಮುಖ್ಯ ಉದ್ದೇಶವಾಗಿದೆ. ಈಗ ಫೋಕ್ಸೋ ಬಗ್ಗೆ ಜಾಗೃತಿ ಹೆಚ್ಚಾದ ಕಾರಣದಿಂದ ಪ್ರಕರಣ ಹೆಚ್ಚು ಬೆಳಕಿಗೆ ಬರುತ್ತಿದೆ" ಎಂದರು.

ಇನ್ನು ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ. ಈ ಪಡೆ ಕಾರ್ಯನಿರ್ವಹಣೆಗಾಗಿ ಹೊಸ ವಾಹನವನ್ನು ನೀಡಿದ್ದು, ಈ ವಾಹನವು ಪಡೆಯೊಂದಿಗೆ ಶಾಲಾ-ಕಾಲೇಜು, ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಕುರಿತು ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ. ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದೆ.
ಇದನ್ನೂ ಓದಿ: ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ರಾಯಚೂರಲ್ಲಿ 'ಅಕ್ಕ ಪಡೆ' ಕಾರ್ಯಾರಂಭ

