ETV Bharat / state

ನೇಪಾಳದಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್: 30 ಗಂಟೆ ವಿಮಾನದಲ್ಲೇ ಪ್ರಯಾಣಿಕರ ಪರದಾಟ, ಏರ್ ಇಂಡಿಯಾ ವಿರುದ್ಧ ಆಕ್ರೋಶ

ನೇಪಾಳದ ಕಠ್ಮಂಡುವಿನಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆಗದೇ ವಾಪಸ್ ಬೆಂಗಳೂರಿಗೆ ಮರಳಿರುವುದರಿಂದ ಪ್ರಯಾಣಿಕರು ಪರದಾಡಿದರು.

BENGALURU AIRPORT PROTEST  PASSENGERS STUCK AT FLIGHT  BENGALURU  ಏರ್ ಇಂಡಿಯಾ ವಿಮಾನ  AIR INDIA FLIGHT
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಪ್ರತಿಭಟನೆ (ETV Bharat)
author img

By ETV Bharat Karnataka Team

Published : February 28, 2026 at 10:27 AM IST

|

Updated : February 28, 2026 at 10:41 AM IST

2 Min Read
Choose ETV Bharat

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ಕಠ್ಮಂಡುಗೆ ತೆರಳಿದ್ದ 170 ಪ್ರಯಾಣಿಕರಿದ್ದ ವಿಮಾನ ಅಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸಾಗಿದೆ. ಇದರಿಂದ 30 ಗಂಟೆಗಳ ಕಾಲ ವಿಮಾನದಲ್ಲಿ ಓಡಾಟ ನಡೆಸುವಂತಾಗಿದೆ ಎಂದು ಆರೋಪಿಸಿರುವ ಪ್ರಯಾಣಿಕರು, ಏರ್ ಇಂಡಿಯಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ಕಠ್ಮಂಡುಗೆ ತೆರಳಿದ್ದ ಏರ್ ಇಂಡಿಯಾ ವಿಮಾನ ಹವಾಮಾನ ವೈಪರಿತ್ಯದಿಂದ ಲ್ಯಾಂಡ್ ಆಗದೇ ವಾಪಸ್ ಮತ್ತೆ ಬೆಂಗಳೂರು ಏರ್​​​ಪೋರ್ಟ್​ಗೆ ಬಂದಿದೆ.

ಗುರುವಾರ (ಫೆಬ್ರವರಿ 26) ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನವು ಮಧ್ಯಾಹ್ನ 1:25ಕ್ಕೆ ಕಠ್ಮಂಡುವಿನಲ್ಲಿ ಇಳಿಯಬೇಕಿತ್ತು. ಆದರೆ, ಪ್ರಯಾಣಿಕರಿಗೆ ಸ್ಪಷ್ಟವಾಗಿ ತಿಳಿಸದೆ, ವಿಮಾನವು ಕಠ್ಮಂಡುವಿನಲ್ಲಿ ಇಳಿಯದೆ, ಬೆಂಗಳೂರಿಗೆ ಹಿಂತಿರುಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಪ್ರತಿಭಟನೆ (ETV Bharat)

ಬಳಿಕ ಅದೇ ವಿಮಾನವು ಶುಕ್ರವಾರ ಬೆಳಗ್ಗೆ ಮತ್ತೆ ಹೊರಟು, ಮತ್ತೊಮ್ಮೆ ಕಠ್ಮಂಡುವಿನಲ್ಲಿ ಇಳಿಯಲು ವಿಫಲವಾಯಿತು. ಕಠ್ಮಂಡುವಿನಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಮಧ್ಯಾಹ್ನ 3:15ರ ಸುಮಾರಿಗೆ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಂದ ಶುಕ್ರವಾರ ಸಂಜೆ 5:15ಕ್ಕೆ ಮತ್ತೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಹಿಂತಿರುಗಿಸಲಾಗಿದೆ ಎಂದು ಪ್ರಯಾಣಿಕರು ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಏರ್ ಇಂಡಿಯಾ ವಿರುದ್ಧ ಆಕ್ರೋಶ: ಸತತ 30 ಗಂಟೆಗಳ ಕಾಲ ವಿಮಾನದಲ್ಲಿಯೇ ಸುತ್ತಾಡಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಏರ್ ಇಂಡಿಯಾ ಸಿಬ್ಬಂದಿಯ ನಿರ್ಲರ್ಕ್ಷ್ಯದ ವಿರುದ್ಧ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಪ್ರಯಾಣಿಕರು ಪ್ರತಿಭಟನೆ ಸಹ ನಡೆಸಿದ್ದಾರೆ.

ಕೋಲಾರ ಮೂಲದ 32 ಪ್ರಯಾಣಿಕರು ಇದೇ ವಿಮಾನದಲ್ಲಿ ಕಠ್ಮಂಡು ಪ್ರವಾಸಕ್ಕೆ ತೆರಳುತ್ತಿದ್ದರು. ಆದರೆ, ಬೆಂಗಳೂರಿಗೆ ವಾಪಸ್ ಆಗಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಪ್ರಯಾಣಿಕರಿಗೆ ಊಟ ತಿಂಡಿಯನ್ನು ಕೊಡದೇ ಆಸ್ಪತ್ರೆ ಪಾಲು ಮಾಡುತ್ತಿದ್ದಾರೆ. ವಯಸ್ಸಾದ ಪ್ರಯಾಣಿಕರಿದ್ದು, 30 ಗಂಟೆಗಳ ಕಾಲ ವಿಮಾನದಲ್ಲಿಯೇ ಸುತ್ತಾಡಿಸಿರುವುದು ಅವರ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ. ಏರ್ ಇಂಡಿಯಾ ಸಂಸ್ಥೆಯ ನಿರ್ಲಕ್ಷ್ಯದಿಂದ ಪ್ರವಾಸದ ಪಾಕೇಜ್ ರದ್ದಾಗಿದೆ, ಸುಮಾರು 18 ಲಕ್ಷದಷ್ಟು ನಷ್ಟವಾಗಿದೆ ಎಂದು ಪ್ರವಾಸದ ಅಯೋಜಕರಾದ ಸುಧಾಕರ್ ಎಂಬುವರು ಏರ್ ಇಂಡಿಯಾ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.

"ಕಠ್ಮಂಡುವಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಇಳಿಯಲು ಅನುಮತಿ ನಿರಾಕರಿಸಲಾಯಿತು. ಪರಿಣಾಮ, ಪ್ರಯಾಣಿಕರು ವಾರಣಾಸಿ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ಕಾಯಬೇಕಾಯಿತು. 166 ಪ್ರಯಾಣಿಕರನ್ನು ಹೊತ್ತ ವಿಮಾನವನ್ನು ನಂತರ ಬೆಂಗಳೂರಿಗೆ ವಾಪಸ್ ಕಳುಹಿಸಲಾಯಿತು" ಎಂದು ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ಹೇಳಿದ್ದಾರೆ.

"ಕಠ್ಮಂಡುವಿನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ, ಫೆಬ್ರವರಿ 26 ಮತ್ತು 27ರಂದು ನಮ್ಮ ಬೆಂಗಳೂರು-ಕಠ್ಮಂಡು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು. ನಿನ್ನೆಯ ಸಮಸ್ಯೆ ಹಿನ್ನೆಲೆಯಲ್ಲಿ, ನಮ್ಮ ಪ್ರಯಾಣಿಕರನ್ನು ಇಂದು ಕಾರ್ಯಾಚರಣೆ ನಡೆಸಲಾಗುತ್ತಿದ್ದ ಹೆಚ್ಚುವರಿ ವಿಮಾನಗಳಲ್ಲಿ ಕಳಿಸಿದ್ದು, ಅವು ಸಹ ಅದೇ ಕಾರಣಕ್ಕಾಗಿ ಬೇರೆಡೆಗೆ ಡೈವರ್ಟ್​ ಆಗಿವೆ. ಈಗ ಪ್ರಯಾಣಿಕರಿಗಾಗಿ ನಾಳೆ ಹೆಚ್ಚುವರಿ ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ" ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತ: 15 ಮಂದಿ ಸಾವು, ಹಲವು ಕಾರುಗಳು ನಾಶ

Last Updated : February 28, 2026 at 10:41 AM IST