ETV Bharat / state

ರಾಸಾಯನಿಕ ಕೃಷಿಯಿಂದ ನೈಸರ್ಗಿಕ ಕೃಷಿಯತ್ತ: ಮಹಾರಾಷ್ಟ್ರದ ಕೃಷಿತಜ್ಞ ಡಾ.ಸುಭಾಷ್​ ಪಾಳೇಕರ್‌ ಕೃಷಿ ಪಾಠ

ಕೃಷಿ ತಜ್ಞ ಡಾ.ಸುಭಾಷ್​ ಪಾಳೇಕರ್‌ ನೈಸರ್ಗಿಕ ಕೃಷಿ, ಸಹಜ ಕೃಷಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

Agriculture expert Dr. Subhash Palekar from Maharashtra, Agriculture Workshop to Farmers
ಮಹಾರಾಷ್ಟ್ರದ ಕೃಷಿತಜ್ಞ ಡಾ.ಸುಭಾಷ್​ ಪಾಳೇಕರ್‌ ಕೃಷಿಪಾಠ (ETV Bharat)
author img

By ETV Bharat Karnataka Team

Published : January 9, 2026 at 2:46 PM IST

3 Min Read
Choose ETV Bharat

ಹಾವೇರಿ: ಜಿಲ್ಲೆ ಕಳೆದ ಮೂರು ವರ್ಷಗಳಲ್ಲಿ ರೈತರ ಆತ್ಮಹತ್ಯೆಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿದೆ. ಒಂದು ವರ್ಷ ಮೊದಲು, ಮತ್ತೊಮ್ಮೆ ಎರಡನೇ, ಮತ್ತೊಮ್ಮೆ ಮೂರನೇ ಸ್ಥಾನದಲ್ಲಿರುತ್ತದೆ. ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ರೈತ ಸಂಘಟನೆಗಳು ಅವಿರತ ಶ್ರಮಿಸುತ್ತಿವೆ. ಆದರೂ ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳಿಗೆ ಕಡಿವಾಣ ಬೀಳುತ್ತಿಲ್ಲ. ಈ ಮಧ್ಯ ಹಾವೇರಿ ರೈತ ಸಂಘ ಜಿಲ್ಲೆಯ ರೈತರನ್ನು ರಾಸಾಯನಿಕ ಮುಕ್ತ ಕೃಷಿಯತ್ತ ಸೆಳೆಯುತ್ತಿದೆ.

ಇದರಿಂದ ರೈತ ಸ್ವಾವಲಂಬಿಯಾಗುತ್ತಾನೆ. ರೈತನು ತಾನು ಬೆಳೆದ ಬೆಳೆಗೆ ತಾನೇ ದರ ನಿಗದಿ ಮಾಡುತ್ತಾನೆ ಎನ್ನುವುದು ರೈತ ಸಂಘದ ಆಶಯ. ಈ ಹಿನ್ನೆಲೆಯಲ್ಲಿ ಹಾವೇರಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ರೈತ ಸಂಘ ನೈಸರ್ಗಿಕ ಕೃಷಿಯ ತಜ್ಞ ಮಹಾರಾಷ್ಟ್ರದ ಡಾ.ಸುಭಾಷ್​ ಪಾಳೇಕರ್‌ ಅವರಿಂದ ಹಾವೇರಿ ಜಿಲ್ಲೆಯ ರೈತರಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಮಹಾರಾಷ್ಟ್ರದ ಕೃಷಿತಜ್ಞ ಡಾ.ಸುಭಾಷ್​ ಪಾಳೇಕರ್‌ ಕೃಷಿಪಾಠ (ETV Bharat)

ಕಾರ್ಯಾಗಾರಕ್ಕೆ ಪಾಳೇಕಾರ ಚಾಲನೆ: ಕಾರ್ಯಾಗಾರಕ್ಕೆ ನೈಸರ್ಗಿಕ ಕೃಷಿ ತಜ್ಞ ಸುಭಾಷ್​ ಪಾಳೇಕರ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್, ರೈತ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ, ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ವಿವಿಧ ರೈತ ಮುಖಂಡರು ಪಾಲ್ಗೊಂಡಿದ್ದರು.

ನೈಸರ್ಗಿಕ ಕೃಷಿ, ಸಹಜ ಕೃಷಿಯೆಂದರೆ ಏನು? ಈ ಕೃಷಿ ಸಾವಯುವ ಮತ್ತು ರಾಸಾಯನಿಕ ಕೃಷಿಯಿಂದ ಏಕೆ ವಿಭಿನ್ನ ಎನ್ನುವುದನ್ನು ಸುಭಾಷ್​ ಪಾಳೇಕರ್ ರೈತರಿಗೆ ವಿವರಿಸಿದರು. "ಕೇವಲ ಒಂದೇ ಒಂದು ಜವಾರಿ ಹಸುವಿನಿಂದ ಸುಮಾರು 15 ಎಕರೆ ಭೂಮಿಯಲ್ಲಿ ಲಾಭದಾಯಕ ಕೃಷಿ ಮಾಡಬಹುದು. ನಾನು ಎಲ್ಲಿಯೂ ಬರೆದಿರುವುದನ್ನು ಹೇಳುತ್ತಿಲ್ಲ. ಬೇಕಾದರೆ ನೀವೇ ನನ್ನ ಜಮೀನಿಗೆ ಬಂದು ಪರೀಕ್ಷಿಸಬಹುದು" ಎಂದು ತಿಳಿಸಿದರು.

"ಕ್ರೀಮಿಗಳಿಲ್ಲ, ಕೀಟಗಳಿಲ್ಲ ಎಲ್ಲವನ್ನೂ ನಿಸರ್ಗ ನಿಯಂತ್ರಿಸುತ್ತದೆ. ನೈಸರ್ಗಿಕ ಕೃಷಿಯಲ್ಲಿ ಯಾವುದನ್ನೂ ದುಡ್ಡು ಕೊಟ್ಟು ಮಾಡಬೇಕೆಂದಿಲ್ಲ. ದುಡ್ಡು ಕೊಟ್ಟು ಬೀಜ ಖರೀದಿಯಿಲ್ಲ, ಗೊಬ್ಬರ ಖರೀದಿಯಿಲ್ಲ. ಭೂಮಿಯಲ್ಲಿ ಬೆಳೆಯುವ ಸಹಜ ಬೆಳೆಗಳನ್ನು ಬೆಳೆಯುವುದಾಗಿದೆ. ಬೆಳೆಗೆ ನಾವು ಅಂತರ್ಜಲ ಬಳಕೆ ಮಾಡುವುದಿಲ್ಲ" ಎಂದು ಹೇಳಿದರು.

"ಈ ಲೋಕವನ್ನು ಈಶ್ವರ ನಿಯಂತ್ರಿಸುತ್ತಾನೆ. ಮನುಷ್ಯ ನಾಲ್ಕು ಲಕ್ಷ ವರ್ಷಗಳ ಹಿಂದೆ ಭೂಮಿಗೆ ಬಂದಿದ್ದಾನೆ. ಅದಕ್ಕಿಂತಲೂ ಮೊದಲು ಅರಣ್ಯ ಇತ್ತು ಸಸ್ಯಗಳಿದ್ದವು. ಮಾನವನ ಹಸ್ತಕ್ಷೇಪವಿಲ್ಲದೇ ಸಾಕಷ್ಟು ಪ್ರಮಾಣದ ಹಣ್ಣಿನ ಗಿಡಗಳಿದ್ದವು. ನಿಸರ್ಗದಲ್ಲಿ ಯಾವುದೇ ಸಸಿ ಜನಿಸಿದರು ಅದಕ್ಕೆ ಪ್ರಕೃತಿದತ್ತವಾಗಿ ಕ್ರೀಮಿಗಳಿಂದ ಕೀಟಗಳಿಂದ ರಕ್ಷಣೆ ಪಡೆಯುವ ಅಂಶ ಗೊತ್ತಿರುತ್ತದೆ. ಅದಕ್ಕೆ ನಾವು ರಾಸಾಯನಿಕ ಸಿಂಪಡಿಸಿದರೆ ಆ ವ್ಯವಸ್ಥೆ ಚಕ್ರ ಹಾಳಾಗುತ್ತದೆ" ಎಂದು ಪಾಳೇಕರ್​ ತಿಳಿಸಿದರು.

"ನಾನು ಇದೆಲ್ಲ ಪುಸ್ತಕದಲ್ಲಿ ಓದಿದ್ದನ್ನು ಹೇಳುವುದಿಲ್ಲ. ಬದಲಿಗೆ ನನ್ನ ತೋಟದಲ್ಲಿ ನಾನು ಬೆಳೆದಿರುವುದನ್ನು, ಮಾಡಿರುವ ಪ್ರಯೋಗದ ಮೇಲೆ ರೈತರಿಗೆ ಕಾರ್ಯಾಗಾರ ನಡೆಸುತ್ತೇನೆ. ಈ ಕುರಿತಂತೆ ನನ್ನ ತೋಟಕ್ಕೆ, ಗದ್ದೆಗೆ ಬಂದರೆ ರೈತರಿಗೆ ಎಲ್ಲ ರೀತಿಯ ಮಾಹಿತಿ ತರಬೇತಿ ಸಿಗುತ್ತದೆ. ನನ್ನ ಜಮೀನಿನಲ್ಲಿ ಬೆಳೆಯುವ ತರಕಾರಿ, ಹಣ್ಣು, ಸಿರಿಧಾನ್ಯ ಸೇರಿದಂತೆ ವಿವಿಧ ಬೆಳೆಗಳಿಗೆ ಯಾವುದೇ ಸೈನಿಕ ಹುಳುವಿನ ಕಾಟವಿಲ್ಲ. ರಿಂಗ್​ವರ್ಮ್​ ಕಾಟವಿಲ್ಲ. ನಾನು ಯಾವುದೇ ಗೊಬ್ಬರ ಹಾಕುವುದಿಲ್ಲ. ಕ್ರಿಮಿನಾಶಕ ಸಿಂಪಡಣೆ ಮಾಡುವುದಿಲ್ಲ" ಎಂದರು.

ಟ್ರ್ಯಾಕ್ಟರ್ ರೈತನ ಶತ್ರು: "ರೈತನ ಮಹಾಶತ್ರು ಎಂದರೆ ಟ್ರ್ಯಾಕ್ಟರ್. ಭೂಮಿಯಲ್ಲಿ ಟ್ರ್ಯಾಕ್ಟರ್ ಚಲಿಸುವುದರಿಂದ ಭೂಮಿಯೊಳಗಿನ ಸೂಕ್ಷ್ಮಜೀವಿಗಳು ಸಾಯುತ್ತವೆ. ಒಂದು ಅಡಿಯಲ್ಲ 10 ಅಡಿಯವರೆಗೆ ಸೂಕ್ಷ್ಮಜೀವಿಗಳು ಹಾಳಾಗುತ್ತವೆ. ನಾನು ತೋಟದಲ್ಲಿ ಯಾವುದೇ ಪರಿಕರಣಗಳನ್ನು ಬಳಸುವುದಿಲ್ಲ" ಎಂದು ಹೇಳಿದರು.

"ನಾನು ಇರುವ ಮಹರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಹಾವೇರಿ ಜಿಲ್ಲೆಯ ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತ ಸಂಘಟನೆಗಳು ಈ ರೀತಿ ಕಾರ್ಯಾಗಾರ ಆಯೋಜಿಸುವ ಮೂಲಕ ರೈತರನ್ನು ಜಾಗೃತಿ ಮೂಡಿಸಬೇಕು. ರೈತರು ಅಧಿಕ ಲಾಭದ ಆಸೆಯಿಂದ ಪರಾವಲಂಬಿಯಾಗಬಾರದು. ಬಿತ್ತನೆ ಬೀಜ, ಹಸುವಿನ ಗಂಜಲು, ಸೆಗಣಿಯ ಗೊಬ್ಬರ ಸೇರಿದಂತೆ ತಮ್ಮ ಬಿತ್ತನೆ ಬೀಜಗಳನ್ನು ತಾವೇ ಉತ್ಪಾದಿಸಬೇಕು. ತಮ್ಮ ಮಣ್ಣನ್ನು ಆರೋಗ್ಯದಿಂದ ನೋಡಿಕೊಳ್ಳಬೇಕು. ಕಡಿಮೆ ನೀರು ಬಳಸಿಯೂ ಶೂನ್ಯ ಕೃಷಿ, ಸಹಜ ಕೃಷಿ, ನೈಸರ್ಗಿಕ ಕೃಷಿ ಮಾಡಬಹುದು" ಎಂದು ಪಾಳೇಕರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಗ್ರಾಮೀಣ ಆದಾಯದ ಇಂಜಿನ್ ಜೇನು ಕೃಷಿ: ರೈತರ ಆದಾಯ ಹೆಚ್ಚಳ, ವಿಪುಲ ಉದ್ಯೋಗಾವಕಾಶ