ETV Bharat / state

ಕೋಗಿಲು ಬಳಿಕ ಥಣಿಸಂದ್ರದಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ: 60 ಮನೆಗಳ ಮೇಲೆ ಜೆಸಿಬಿ ಸದ್ದು, ಸಂತ್ರಸ್ತರ ಕಣ್ಣೀರು

ಬಿಡಿಎ ಎರಡು ಎಕರೆ ಜಾಗದಲ್ಲಿ ಅಕ್ರಮವಾಗಿ ಮನೆಗಳ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು 60 ಮನೆಗಳನ್ನು ನೆಲಸಮ ಮಾಡಿದ್ದಾರೆ.

After Kogilu, Demolition Drive Hits Thanisandra; Homes Flattened by JCBs, 60 Families Displaced in Bengaluru
ಥಣಿಸಂದ್ರದಲ್ಲಿ ಅತಿಕ್ರಮಣ ತೆರವು (ETV Bharat)
author img

By ETV Bharat Karnataka Team

Published : January 9, 2026 at 6:13 PM IST

3 Min Read
Choose ETV Bharat

ಬೆಂಗಳೂರು: ಕೋಗಿಲುವಿನಲ್ಲಿ ಅತಿಕ್ರಮಣ ಕಟ್ಟಡಗಳ ಒತ್ತುವರಿ ಘಟನೆ ವಿವಾದ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಮತ್ತೊಂದು ಬೃಹತ್​​ ಕಾರ್ಯಾಚರಣೆ ಕೈಗೊಂಡಿದೆ. ಥಣಿಸಂದ್ರದ ಅಶ್ವತ್​ ನಗರ ಮತ್ತು ಸರೈ ಪಾಳ್ಯದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ 60ಕ್ಕೂ ಹೆಚ್ಚು ಮನೆ ಮತ್ತು ಶೆಡ್​ಗಳನ್ನು ಜೆಸಿಬಿಗಳನ್ನು ಬಳಸಿ ನೆಲಸಮಗೊಳಿಸಲಾಗಿದೆ. ಯಾವುದೇ ನೋಟಿಸ್​ ನೀಡದೇ ನಡೆಸಿರುವ ಈ ಕ್ರಮವೂ ನಿವಾಸಿಗಳಲ್ಲಿ ಆಕ್ರೋಶ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ಬಿಡಿಎ ಅಧಿಕಾರಿಗಳ ಪ್ರಕಾರ, ಈ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದು, ಪ್ರಾಧಿಕಾರದ ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಗುರುವಾರ ಮುಂಜಾನೆ 6ಕ್ಕೆ ಬಿಗಿ ಪೊಲೀಸ್​ ಭದ್ರತೆಯೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳದಲ್ಲಿ 200ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

After Kogilu, Demolition Drive Hits Thanisandra; Homes Flattened by JCBs, 60 Families Displaced in Bengaluru
ಥಣಿಸಂದ್ರದಲ್ಲಿ ಅತಿಕ್ರಮಣ ತೆರವು (ETV Bharat)

ಈ ಕುರಿತು ಅರಿವಿಲ್ಲ ಎಂದ ನಿವಾಸಿಗಳು: ಗುರುವಾರ ಬೆಳಗ್ಗೆ ನಿವಾಸಿಗಳು ಎಚ್ಚರಗೊಳ್ಳುವ ಮುನ್ನವೇ ಅವರ ಮನೆಗಳ ನೆಲಸಮಕ್ಕೆ ವಾಹನಗಳು ಸಿದ್ಧವಾಗಿ ನಿಂತಿರುವುದು ಕಂಡಿದೆ. ತಮ್ಮ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಸಮಯ ನೀಡದೇ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಅನೇಕ ಕುಟುಂಬಗಳು ಈ ಪ್ರದೇಶದಲ್ಲಿ ಎರಡು ದಶಕಗಳಿಂದ ಇದ್ದು, ಇದಕ್ಕೆ ಸಂಬಂಧಿಸಿದ ಇ ಖಾತಾ ದಾಖಲೆ, ವಿದ್ಯುತ್​ ಮತ್ತು ನೀರಿನ ಬಿಲ್​ ಹಾಗೂ ತೆರಿಗೆ ಪಾವತಿ ರಶೀದಿಯನ್ನು ಪ್ರದರ್ಶಿಸಿದರು.

ನಾವು ಇಲ್ಲಿ ಸಾಕಷ್ಟು ವರ್ಷಗಳಿಂದ ವಾಸವಿದ್ದೇವೆ. ಈ ಭೂಮಿಯನ್ನು ಹಣಕೊಟ್ಟು ಪಡೆದಿದ್ದು, ಬಂಗಾರ ಮಾರಿ ಮನೆಗಳನ್ನು ಕಟ್ಟಿದ್ದೇವೆ. ಇದು ಸರ್ಕಾರದ ಭೂಮಿಯಾದರೆ, ಆಸ್ತಿ ದಾಖಲೆ ಹೇಗೆ ಸಾಧ್ಯವಾಯಿತು. ಇಷ್ಟು ವರ್ಷ ನಾವು ತೆರಿಗೆ ಕಟ್ಟಿಲ್ಲವೇ ಎಂದು ನಿವಾಸಿಗಳು ಪ್ರಶ್ನಿಸಿದರು.

ಮತ್ತೆ ಕೆಲವರು ಇಲ್ಲಿ ತಾವು ಬಾಡಿಗೆಗೆ ಇದ್ದು, ಈ ಭೂಮಿ ಕುರಿತು ಯಾವುದೇ ಮಾಹಿತಿ ತಿಳಿದಿಲ್ಲ ಎಂದಿದ್ದಾರೆ. ಯಾವುದೇ ಪೂರ್ವ ಸೂಚನೆ ನೀಡದೇ ಮತ್ತು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಸಮಯವನ್ನೂ ನೀಡದೇ ಈ ರೀತಿ ಕ್ರಮ ನಡೆಸಿರುವುದು ಸರಿಯಲ್ಲ. ಕನಿಷ್ಠ ಪಕ್ಷ ಕೆಲವು ದಿನಗಳ ಮುಂಚೆ ಹೇಳಿದ್ದರೆ, ನಾವು ಬೇರೆ ಸ್ಥಳಕ್ಕೆ ಹೋಗುತ್ತಿದ್ದೆವು ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು.

ಕಾನೂನು ಹಕ್ಕು- ದುರುಪಯೋಗದ ಆರೋಪ: ನ್ಯಾಯಾಲಯವು ಭೂಮಿಯನ್ನು ಬಿಡಿಎ ಆಸ್ತಿ ಎಂದು ಘೋಷಿಸಿದ ಆದೇಶದ ಮೇರೆಗೆ ತೆರವು ಕಾರ್ಯ ನಡೆಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲೇ ನೋಟಿಸ್‌ಗಳನ್ನು ನೀಡಲಾಗಿದ್ದು, ನಿವಾಸಿಗಳು ಸ್ವಯಂಪ್ರೇರಣೆಯಿಂದ ಖಾಲಿ ಮಾಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ನಿವಾಸಿಗಳು ಸರ್ಕಾರದ ಈ ವಾದಕ್ಕೆ ವಿರೋಧಿಸಿದ್ದಾರೆ. ಸಂತ್ರಸ್ತ ಕುಟುಂಬಗಳನ್ನು ಪ್ರತಿನಿಧಿಸಿದ ವಕೀಲ ಹುಸೇನ್ ಮಾತನಾಡಿ, ಜನರು ಈ ಆಸ್ತಿಗಳನ್ನು ಖರೀದಿಸಲು ಮತ್ತು ನೋಂದಾಯಿಸಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅವರ ಬಳಿ ಅಧಿಕೃತ ದಾಖಲೆಗಳಿದ್ದು, ನಿಯಮಿತವಾಗಿ ತೆರಿಗೆ ಪಾವತಿಸಿದ್ದಾರೆ. ಅಧಿಕಾರಿಗಳು ಹೈಕೋರ್ಟ್ ಆದೇಶ ಎನ್ನುತ್ತಿದ್ದಾರೆ. ಆದರೆ, ನ್ಯಾಯಾಲಯದ ಮುಂದೆ ತಪ್ಪಾದ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮಾನವಾಗಿದೆ ಎಂದಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ತಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆ ಭರವಸೆ ಏನಾಯಿತು. ಎಂದು ಸ್ಥಳೀಯ ನಿವಾಸಿಯೊಬ್ಬರು ಪ್ರಶ್ನಿಸಿದ್ದು, ಈ ಧ್ವಂಸವನ್ನು ನಂಬಿಕೆ ದ್ರೋಹ ಎಂದಿದ್ದಾರೆ.

ಪರ್ಯಾಯ ವ್ಯವಸ್ಥೆಯ ಭರವಸೆ: ಕಟ್ಟಡ ನೆಲಸಮ ಪ್ರಕ್ರಿಯೆ ವೇಳೆ ಚಿನ್ನ, ಬೆಳ್ಳಿ ಆಭರಣ, ಹಣ ಮತ್ತು ಮನೆ ವಸ್ತುಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ ಎಂದು ಅನೇಕ ನಿವಾಸಿಗಳು ಆರೋಪಿಸಿದ್ದು, ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿಯೇ ಕಳ್ಳತನ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಮ್ಮ ಮನೆ ಮತ್ತು ಅಲ್ಲಿ ಉಳಿದಿದ್ದ ಅಲ್ಪಸ್ವಲ್ಪವನ್ನೂ ಕಳೆದುಕೊಂಡಿದ್ದೇವೆ ಎಂದು ನಿವಾಸಿಯೊಬ್ಬರು ತಿಳಿಸಿದರು.

ಅತಿಕ್ರಮಣ ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಗೊಂಡಿದ್ದು, ಅವರಲ್ಲಿ ಹಲವರು ತಾತ್ಕಾಲಿಕ ಆಶ್ರಯಕ್ಕಾಗಿ ದಿನವಿಡೀ ಹುಡುಕಾಟ ನಡೆಸಿದ್ದಾರೆ. ಸಾರ್ವಜನಿಕರ ಆಕ್ರೋಶದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹ ಕುಟುಂಬಗಳಿಗೆ ಮಾನವೀಯ ಆಧಾರದ ಮೇಲೆ ಪರ್ಯಾಯ ವಸತಿ ಸೌಕರ್ಯವನ್ನು ಒದಗಿಸುವ ಬಗ್ಗೆ ಸರ್ಕಾರ ಪರಿಗಣಿಸುವುದಾಗಿ ತಿಳಿಸಿದ್ದಾರೆ.

ಪುನರ್ವಸತಿ ಮತ್ತು ನ್ಯಾಯಕ್ಕಾಗಿ ತಮ್ಮ ಬೇಡಿಕೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತ ನಿವಾಸಿಗಳು ಎಚ್ಚರಿಸಿದ್ದಾರೆ.

ಇವುಗಳನ್ನೂ ಓದಿ:

ಕೋಗಿಲು ಲೇಔಟ್ ಒತ್ತುವರಿ ಪ್ರಕರಣ; ನಾಲ್ವರ ವಿರುದ್ಧ ಎಫ್ಐಆರ್

ಕೋಗಿಲು ಒತ್ತುವರಿದಾರರ ಪೈಕಿ 26 ಮಂದಿಗೆ ಮನೆ ನೀಡಲು ತೀರ್ಮಾನ: ಸಚಿವ ಜಮೀರ್ ಅಹಮದ್ ಖಾನ್