ETV Bharat / state

ಮಗುವಿನ ಉಪನಾಮದಲ್ಲಿ ತಾಯಿ ಹೆಸರು ಸೇರಿಸಿದ್ದಲ್ಲಿ ತಂದೆಯ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮಗುವಿನ ಉಪನಾಮದಲ್ಲಿ ತಾಯಿ ಹೆಸರು ಸೇರಿಸಿದರೆ ತಂದೆಯ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ಹೈಕೋರ್ಟ್​ ನಿರ್ದೇಶನ ನೀಡಿದೆ.

High Court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : February 27, 2026 at 1:59 PM IST

3 Min Read
Choose ETV Bharat

ಬೆಂಗಳೂರು : ಲಿವ್-ಇನ್(ಮದುವೆಯಾಗದೇ ಪುರುಷ - ಮಹಿಳೆ ಒಟ್ಟಿಗೆ ವಾಸ) ಸಂಬಂಧದಿಂದ ಜನಿಸಿದ ಮಗುವಿನ ಉಪ ನಾಮದಲ್ಲಿ ತಾಯಿಯ ವಂಶಾವಳಿಯನ್ನು ಗುರುತಿಸಿರುವ ಹೈಕೋರ್ಟ್, ಎಂಟು ವರ್ಷದ ಬಾಲಕಿಯ ಹೆಸರನ್ನು ತಂದೆಯ ಬದಲಿಗೆ ತಾಯಿಯ ಕುಟುಂಬದೊಂದಿಗೆ ಸೇರಿಸಲು ಜನನ ಮತ್ತು ಮರಣ ನೋಂದಣಿ ಇಲಾಖೆಗೆ ನಿರ್ದೇಶನ ನೀಡಿದೆ.

ಜನನ ಪ್ರಮಾಣ ಪತ್ರದಲ್ಲಿ ಮಗಳ ಉಪನಾಮವನ್ನು ಬದಲಾಯಿಸುವಂತೆ ಸಲ್ಲಿಸಿದ್ದ ಮನವಿಯನ್ನು ಯಾವುದೇ ಕಾರಣವನ್ನು ನೀಡದೇ ತಿರಸ್ಕರಿಸಿದ್ದ ಜನನ ಮತ್ತು ಮರಣ ನೋಂದಣಿ ಇಲಾಖೆಯ ಅಧಿಕಾರಿಗಳ ಕ್ರಮ ಪ್ರಶ್ನಿಸಿ, ಮಗುವಿನ ತಾಯಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಜನನ ಪ್ರಮಾಣ ಪತ್ರದಲ್ಲಿ ಜೈವಿಕ ತಂದೆಯ ಹೆಸರನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.

ತಾಯಿ ಏಕೈಕ ಆರೈಕೆದಾರ ಮತ್ತು ನೈಸರ್ಗಿಕ ಪೋಷಕರಾಗಿದ್ದರೆ, ವಾಸ್ತವವಾಗಿ, ತಾಯಿಯ ವಂಶಾವಳಿಯನ್ನು ಮಗುವಿನ ಉಪನಾಮದ ಗುರುತು ಎಂದು ಗುರುತಿಸುವಲ್ಲಿ ಯಾವುದೇ ಸಾಂವಿಧಾನಿಕ ಅಡಚಣೆಯಿಲ್ಲ. ತಾಯಿಯ ಗುರುತನ್ನು ಸೇರಿಸುವುದರಿಂದ ತಂದೆಯ ಸ್ಥಾನಮಾನ ಕಡಿಮೆ ಆಗುವುದಿಲ್ಲ. ಇದು ಸಮಾನತೆಯ ಸಂಕೇತವಾಗಿದೆ ಎಂದು ಪೀಠ ಹೇಳಿದೆ.

ಮಕ್ಕಳು ತಂದೆಯ ಉಪನಾಮವನ್ನೇ ಹೊಂದಿರಬೇಕು ಎಂಬ ಕಲ್ಪನೆ ಸಾಂವಿಧಾನಿಕ ಆದೇಶವಲ್ಲ. ಆದರೆ, ಅದೊಂದು ಸಾಮಾಜಿಕ ಸಂಪ್ರದಾಯವಾಗಿದೆ. ಪೋಷಕತ್ವದ ಗುರುತಿಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಸ್ಥಾನಮಾನ ಇರಲಿದೆ ಎಂದು ಸಾಂವಿಧಾನಿಕ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಪೀಠ ತಿಳಿಸಿದೆ.

ಜನನ ಪ್ರಮಾಣ ಪತ್ರದಲ್ಲಿನ ಹೆಸರಿನಲ್ಲಿ ಉಪ ನಾಮ ಬದಲಾವಣೆಗೆ ನಮಗೆ ಅಧಿಕಾರವಿಲ್ಲ ಎಂದು ಜನನ ಮತ್ತು ಮರಣ ನೋಂದಣಿ ಇಲಾಖೆಯ ಅಧಿಕಾರಿಗಳ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಗೊಂದಲಗಳನ್ನು ಸರಿಪಡಿಸಲು ಇಲಾಖೆಯ ರಿಜಿಸ್ಟ್ರಾರ್‌ಗೆ ಅಧಿಕಾರವಿರಲಿದೆ. ಅದರಂತೆ ಹೆಸರಿನಲ್ಲಿನ ದೋಷಗಳನ್ನು ಮಾತ್ರವಲ್ಲದೇ ವಿಷಯ ವಸ್ತುವನ್ನೂ ಸರಿಪಡಿಸಬಹುದಾಗಿದೆ ಎಂದು ಪೀಠ ಹೇಳಿದೆ.

ಅಲ್ಲದೇ, ಜನನ ಪ್ರಮಾಣ ಪತ್ರದಿಂದ ತಂದೆಯ ಹೆಸರನ್ನು ಅಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿಲ್ಲ. ತಂದೆಗೆ ಸಂಬಂಧಿಸಿದ ನಮೂನೆಯಲ್ಲಿ ಜೈವಿಕ ತಂದೆಯ ಹೆಸರನ್ನು ಹಾಗೆ ಉಳಿಸುವುದರ ಜತೆಗೆ ತಾಯಿಯ ಕುಟುಂಬದ ಹೆಸರನ್ನು ಸೇರಿಸಿ ಮಗುವಿನ ಉಪನಾಮಕ್ಕೆ ಮಾತ್ರ ಬದಲಾವಣೆಗೆ ಕೋರಿದ್ದಾರೆ ಎಂದು ಪೀಠ ಹೇಳಿದೆ.

ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ 3ನೇ ವಿಧಿ ಮತ್ತು ಭಾರತದ ಸಂವಿಧಾನದ 21ನೇ ವಿಧಿಯಲ್ಲಿ ಪ್ರತಿಪಾದಿಸಲಾದ "ಮಗುವಿನ ಹಿತಾಸಕ್ತಿ" ಎಂಬ ತತ್ವವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಉಪನಾಮದಲ್ಲಿನ ಬದಲಾವಣೆಯು ಮಗುವಿನ ಗುರುತು, ಘನತೆ, ಯೋಗಕ್ಷೇಮದ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ತಿಳಿಸಿದೆ.

ಜತೆಗೆ, ಮಗುವಿನ ಉಪನಾಮವನ್ನು ಬದಲಾಯಿಸುವುದರಿಂದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ನಿರ್ವಹಣೆಯ ಹಕ್ಕುಗಳು ಸೇರಿ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿ ಮಗುವಿಗೆ ಜೈವಿಕ ತಂದೆಯಿಂದ ಇರಬಹುದಾದ ಯಾವುದೇ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರ ಮಹಿಳೆ ನೇಪಾಳ ಮೂಲದ ಪುರುಷನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದರು. ಪರಿಣಾಮ ಅವರಿಗೆ 2017ರ ಫೆಬ್ರವರಿಯಲ್ಲಿ ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಮಗು ಜನಿಸಿತು. ಮಗು ಜನನದ ಬಳಿಕ ತಂದೆ ಮಹಿಳೆ ಮತ್ತು ಮಗುವಿನಿಂದ ದೂರ ನೆಲೆಸಿದ್ದರು. ಆದ ಕಾರಣ ಮಹಿಳೆಗೆ ಮಗುವಿನ ತಂದೆ ನಂತರ ಸಂಬಂಧ ಮುಂದುವರಿಸಲು ಇಷ್ಟವಿರಲಿಲ್ಲ. ಅಲ್ಲದೆ, ಮಗುವಿನ ಲಾಲನೆ ಮತ್ತು ಪಾಲನೆಗೆ ತಂದೆಯಿಂದ ಯಾವುದೇ ನೆರವು ಇರಲಿಲ್ಲ. ತನ್ನ ತಾಯಿ ಕುಟುಂಬದ ನೆರವಿನೊಂದಿಗೆ ಮಗುವನ್ನು ಬೆಳೆಸುತ್ತಿದ್ದರು.

ಈ ನಡುವೆ ಮಗುವಿನ ಜನನ ಪ್ರಮಾಣ ಪತ್ರದಲ್ಲಿನ ಉಪನಾಮವನ್ನು ತಂದೆಯ ಬದಲಿಗೆ ತಾಯಿಯ ಹೆಸರನ್ನು ಬದಲಾವಣೆ ಮಾಡಲು ಜನನ ಮತ್ತು ಮರಣ ನೋಂದಣಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ತಿರಸ್ಕರಿಸಿದ್ದ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಹಿಂಬರಹವನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆಯಲ್ಲಿ ಬೆಂಕಿ ಹಚ್ಚಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್​