ನಟ ಯಶ್ ತಾಯಿ ವಿರುದ್ಧ ಸೈಟ್ ಒತ್ತುವರಿ ಆರೋಪ: ಕಾಂಪೌಂಡ್ - ಶೆಡ್ ತೆರವು ವಿರುದ್ಧ ಠಾಣೆ ಮೆಟ್ಟಿಲೇರಿದ ಪುಷ್ಪಾ ಅರುಣ್ ಕುಮಾರ್
ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರಿಗೆ ಸೇರಿದ ಕಾಂಪೌಂಡ್ ಹಾಗೂ ಶೆಡ್ ಅನ್ನು ದೇವರಾಜ್ ಅವರು ಅಕ್ರಮವಾಗಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

Published : January 5, 2026 at 3:18 PM IST
ಹಾಸನ: ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ವಿರುದ್ಧ ಸೈಟ್ ಒತ್ತುವರಿ ಆರೋಪ ಕೇಳಿ ಬಂದಿದೆ. ತಮ್ಮ ಮನೆಯ ಪಕ್ಕದಲ್ಲಿದ್ದ ಸೈಟ್ ಒತ್ತುವರಿ ಮಾಡಿ ಪುಷ್ಪಾ ಅವರು ಕಾಂಪೌಂಡ್ ಹಾಕಿದ್ದಾರೆ ಎಂದು ಆರೋಪಿಸಿ ದೇವರಾಜ್ ಎಂಬುವರು ನ್ಯಾಯಾಲಯದ ಆದೇಶದಂತೆ ನಿನ್ನೆ (ಭಾನುವಾರ) ಈ ಕಾಂಪೌಂಡ್ ಹಾಗೂ ಶೆಡ್ ಅನ್ನು ಜೆಸಿಬಿ ಬಳಸಿ ತೆರವುಗೊಳಿಸಿದ್ದು, ಈ ತೆರವು ವಿರುದ್ಧ ಪುಷ್ಪಾ ಅವರ ಪರವಾಗಿ ದುರ್ಗಾಪ್ರಸಾದ್ ಎಂಬುವವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಗೆ ದೂರು: ಜಾಗದ ಮೂಲ ಮಾಲೀಕರಾದ ಮೈಸೂರಿನ ಲಕ್ಷ್ಮಮ್ಮ (94) ಅವರ ಸೈಟಿಗೆ ಸಂಬಂಧಿಸಿದ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಹೋಲ್ಡರ್ ದೇವರಾಜ್ ಅವರು ನ್ಯಾಯಾಲಯದ ಆದೇಶದಂತೆ ನಿನ್ನೆ ಬೆಳಗ್ಗೆ ಕಾಂಪೌಂಡ್ ಹಾಗೂ ಶೆಡ್ ಅನ್ನು ಜೆಸಿಬಿ ಬಳಸಿ ತೆರವುಗೊಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪುಷ್ಪಾ ಅವರ ಪರವಾಗಿ ದುರ್ಗಾಪ್ರಸಾದ್ ಎಂಬುವವರು ಇದೀಗ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಟ ಯಶ್ ಅವರ ತಾಯಿ ಪುಷ್ಪಾ ಅವರು ಸದ್ಯ ಬೆಂಗಳೂರಿನಲ್ಲಿದ್ದಾರೆ. ಅವರ ಸೂಚನೆಯಂತೆಯೇ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ಪುಷ್ಪಾ ಅವರ ಮನೆಗೆಲಸದ ಸಿಬ್ಬಂದಿಯೂ ಆದ ದುರ್ಗಾಪ್ರಸಾದ್ ಮಾಹಿತಿ ನೀಡಿದ್ದಾರೆ.
ದೂರಿನಲ್ಲಿ ಇರುವುದೇನು?: ಪುಷ್ಪಾ ಅವರಿಗೆ ಸೇರಿದ ಆಸ್ತಿಯಲ್ಲಿದ್ದ ಕಾಂಪೌಂಡ್ ಹಾಗೂ ಶಡ್ ಅನ್ನು ದೇವರಾಜ್ ಅವರು ಅಕ್ರಮವಾಗಿ ತೆರವು ಮಾಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದರಿಂದ ಗಾಬರಿಗೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸದರಿ ಕೃತ್ಯಕ್ಕೆ ಸಂಬಂಧಪಟ್ಟಂತೆ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿ ಪರಿಸ್ಥಿತಿ ಸುಧಾರಿಸಿದರು. ನ್ಯಾಯಾಲಯದ ಯಾವುದೇ ಆದೇಶ ಇಲ್ಲದಿದ್ದರೂ ದುರುದ್ದೇಶದಿಂದ ಪುಷ್ಪಾ ಅವರಿಗೆ ಸೇರಿದ ನಿವೇಶನದ ಕಾಂಪೌಂಡ್ ಧ್ವಂಸಗೊಳಿಸಿ ಮಾಡಿರುವ ಆಸ್ತಿ ಹಾನಿಗೆ ಸಂಬಂಧಿಸಿದಂತೆ ದೇವರಾಜ್ ಹಾಗೂ ಅವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕೃತ್ಯಕ್ಕೆ ಬಳಸಲಾದ ಜೆಸಿಬಿಯನ್ನು ಸಹ ವಶಕ್ಕೆ ಪಡೆಯಬೇಕು. ಅಲ್ಲದೇ ಪುಷ್ಪಾ ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಮೂಲಕ ದೇವರಾಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಏನಿದು ಘಟನೆ?: ದಶಕಗಳ ಹಿಂದೆ ಹಾಸನದಲ್ಲಿ ಯಶ್ ಕುಟುಂಬ ಮನೆ ಖರೀದಿಸಿದ್ದು, ಅವರ ತಾಯಿ ಪುಷ್ಪಾ ಅಲ್ಲಿ ವಾಸವಾಗಿರುತ್ತಾರೆ. ಮನೆ ಖರೀದಿಸಿದ ನಂತರ ಅಕ್ಕಪಕ್ಕದಲ್ಲಿದ್ದ ಜಮೀನನ್ನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪಿಸಿ ಮೈಸೂರಿನ ಲಕ್ಷ್ಮಮ್ಮ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಈ ವ್ಯಾಜ್ಯವನ್ನ ಪೊಲೀಸರು ತೀರ್ಮಾನಿಸಲು ಸಾಧ್ಯವಾಗದೇ ಕೊನೆಗೆ ಲಕ್ಷ್ಮಮ್ಮ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಲಕ್ಷ್ಮಮ್ಮ ಅವರು ಇಲ್ಲಿನ ಜಾಗವನ್ನು ನೋಡಿಕೊಳ್ಳುವ ಉದ್ದೇಶದಿಂದ 2020ರಲ್ಲಿ ದೇವರಾಜು ಅವರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಿಪಿಎ ಮಾಡಿಕೊಟ್ಟಿದ್ದರು.
ದೇವರಾಜು ಹೇಳುವುದೇನು?: ಲಕ್ಷ್ಮಮ್ಮ ಅವರ ಪ್ರಾಪರ್ಟಿಯನ್ನು ನಾನು ನೋಡಿಕೊಳ್ಳುತ್ತಿದ್ದೆ. ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಜಾಗದ ಮೂಲ ದಾಖಲಾತಿಗಳನ್ನ ನೀಡಲಾಗಿದ್ದು, ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರುವು ಮಾಡುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಕಾಂಪೌಂಡ್ ಕೆಲವುಗೊಳಿಸಿ ಸ್ವಾಧೀನಕ್ಕೆ ಪಡೆದಿದ್ದೇನೆ. ಇನ್ನು ಒತ್ತುವರಿ ಸಂಬಂಧ ಹಲವಾರು ಬಾರಿ ಕೋರ್ಟ್ ಸಮನ್ಸ್ ಹೊರಡಿಸಿದರೂ ಯಶ್ ಅವರ ತಾಯಿ ಕೋರ್ಟ್ಗೆ ಬಾರದೇ ಇದ್ದುದ್ದರಿಂದ ಹಾಗೂ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆ ಕೋರ್ಟ್ ತಮ್ಮ ಪರ ಆದೇಶ ಮಾಡಿದೆ ಎಂದು ದೇವರಾಜ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

