ETV Bharat / state

ಮಲೆನಾಡಿನ ದಸರಾ ಉದ್ಘಾಟಿಸಿದ ನಟ ಶ್ರೀನಾಥ್​: ಕಾರ್ಯಕ್ರಮದಲ್ಲಿ 'ವಂದೇ ಮಾತರಂ' ಗೊಂದಲ

ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾಗೆ ನಟ ಶ್ರೀನಾಥ್ ಅವರು ಭಾನುವಾರ ಚಾಲನೆ ನೀಡಿದ್ದಾರೆ.

SHIVAMOGGA  ಮಲೆನಾಡ ದಸರಾ 2026  ನಟ ಶ್ರೀನಾಥ್  ವಂದೇ ಮಾತರಂ
ಶಿವಮೊಗ್ಗ ದಸರಾ ಉದ್ಘಾಟನೆ (ETV Bharat)
author img

By ETV Bharat Karnataka Team

Published : October 12, 2026 at 7:51 AM IST

2 Min Read
Choose ETV Bharat

ಶಿವಮೊಗ್ಗ: ಮಲೆನಾಡ ದಸರಾಗೆ ಭಾನುವಾರ ಭಕ್ತಿಪೂರ್ವಕವಾದ ಚಾಲನೆ ದೊರೆತಿದೆ. ಕನ್ನಡ ಚಿತ್ರರಂಗದ ಪ್ರಯಣರಾಜ, ನಟ ಶ್ರೀನಾಥ್​ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾಗೆ ಚಾಲನೆ ನೀಡಿದರು.

ನಗರದ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಮುಂದೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಇದಕ್ಕೂ ಮುನ್ನ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಮಹಾನಗರ ಪಾಲಿಕೆಯಿಂದ ಪೂಜೆ ಸಲ್ಲಿಸಿ, ಮೆರವಣಿಗೆಯ ಮೂಲಕ ಚಂಡಿಕಾದುರ್ಗಾಪರಮೇಶ್ವರಿ ದೇವಾಲಯಕ್ಕೆ ತರಲಾಗಿದೆ.

ಮಲೆನಾಡಿನ ದಸರಾ ಉದ್ಘಾಟಿಸಿದ ನಟ ಶ್ರೀನಾಥ್ (ETV Bharat)

ಶಿವಮೊಗ್ಗ ದಸರಾಕ್ಕೆ ಚಾಲನೆ ನೀಡಿd ಬಳಿಕ ಮಾತನಾಡಿದ ನಟ ಶ್ರೀನಾಥ್ ಅವರು, " ಶಿವಮೊಗ್ಗ ದಸರಾ ಉದ್ಘಾಟನೆಗೆ ಬನ್ನಿ ಎಂದಾಗ ನನಗೆ ಮೈಸೂರು ದಸರಾ ನೆನಪಾಯಿತು. ಮೈಸೂರು ನಮ್ಮ ತಾಯಿ ತವರು ಮನೆ. ಅಲ್ಲಿಗೆ ಪ್ರತಿ ದಸರಾದಲ್ಲಿ ನಮ್ಮ ತಾಯಿ ಹೋಗುತ್ತಿದ್ದರು. ನಾನು ಮೈಸೂರಿನಲ್ಲಿ ಮಾತ್ರ ದಸರಾ ನಡೆಯುತ್ತದೆ ಎಂದಾಗ ನಮ್ಮಜ್ಜಿ ನನ್ನ ಕೆನ್ನೆಗೆ ಹೊಡೆದು, ಮೈಸೂರಿನಂತೆ ಶಿವಮೊಗ್ಗದಲ್ಲೂ ದಸರಾ ನಡೆಯುತ್ತದೆ ಎಂದು ಹೇಳಿದ್ದರು" ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

"ನನಗೆ ಶಿವಮೊಗ್ಗ ದಸರಾ ನೋಡಬೇಕು ಎಂಬ ಆಸೆ ಇತ್ತು. ಹೀಗೆ ಇರುವಾಗ ಶಿವಮೊಗ್ಗ ದಸರಾ ಉದ್ಘಾಟನೆಗೆ ಕರೆದಾಗ ನಾನು 'ಏನಂದ್ರಿ ಇನ್ನೊಮ್ಮೆ ಹೇಳಿ' ಎಂದೆ. ಅವರು, 'ನೀವೆ ಶಿವಮೊಗ್ಗ ದಸರಾ ಉದ್ಘಾಟನೆ ಮಾಡಲು ಬರಬೇಕು' ಎಂದಾಗ ಸಂತೋಷವಾಯಿತು. ತಾಯಿ ಚಾಮುಂಡೇಶ್ವರಿ ನನ್ನ ಯಾತ್ರೆ ನೋಡಲು 'ನೀನು ಬಾ' ಎಂದು ತಾಯಿಯೇ ಕರೆದಂತಾಯಿತು‌" ಎಂದರು‌‌ ಸಾರ್ಥಕ ಭಾವ ವ್ಯಕ್ತಪಡಿಸಿದರು.

ವಂದೇ ಮಾತರಂ ಗೊಂದಲ: ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ ಪಾಲಿಕೆ ವತಿಯಿಂದ ವಂದೇ ಮಾತರಂನ ಎರಡು ಚರಣದ ರೆಕಾರ್ಡಿಂಗ್ ಮುಗಿದ ನಂತರ ಬಿಜೆಪಿ ನಾಯಕರು ಪೂರ್ಣವಾಗಿ ಹಾಡಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು, ವಂದೇ ಮಾತರಂ ಗೀತೆ ಹಾಡುವಾಗಲೇ ವೇದಿಕೆಯಿಂದ ಕೆಳಗೆ ಇಳಿದು ಹೋಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಚನ್ನಬಸಪ್ಪ ಅವರು ಮಾತನಾಡಿ, "ಕಾಂಗ್ರೆಸ್​ನವರಿಗೆ ಭಯ. ವಂದೇ ಮಾತರಂ ಗೀತೆಯ 'ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ' ಎಂದು ಹೇಳಿದರೆ ಒಂದು ಕೋಮಿಗೆ ನೋವಾಗುತ್ತದೆ ಎಂದು ಗೀತೆಯನ್ನು ವಿರೋಧ‌ ಮಾಡಿದರೆ ನಾನು ಏನು ಮಾಡಲು ಆಗುತ್ತದೆ. ಚಾಮುಂಡೇಶ್ವರಿ ಅವರಿಗೆ ಒಳ್ಳೆಯ ಬುದ್ಧಿ ನೀಡಲಿ. ವೇದಿಕೆಯಲ್ಲಿ ಸರ್ಕಾರದ ಎರಡು ಚರಣದ ಗೀತೆ ನಿಂತ ಮೇಲೆ ಸಾರ್ವಜನಿಕರು ಪೂರ್ಣ ಗೀತೆಯನ್ನು ಹಾಡಿದ್ದಾರೆ. ಇದರಲ್ಲಿ ಆಯುಕ್ತರ ಪಾತ್ರವೇನು ಇಲ್ಲ. ದೇಶ ಭಕ್ತಿಯ ಪರವಾಗಿರುವವರನ್ನು ವರ್ಗಾವಣೆ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಟಕ್ಕರ್​ ಕೊಟ್ಟರು.

ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ರಾಘವೇಂದ್ರ ಅವರು, "ನಮ್ಮ ರಾಜ್ಯದಲ್ಲಿ ವಂದೇ ಮಾತರಂ ಗೀತೆಯ ಬಗ್ಗೆ ಪದೇ ಪದೇ ಚರ್ಚೆಗಳಾಗುತ್ತಿವೆ. ಗೀತೆಯನ್ನು ಹಾಡುವುದು, ಬಿಡುವುದು ಸಾರ್ವಜನಿಕರಿಗೆ ಬಿಟ್ಟ ವಿಚಾರವಾಗಿದೆ. ದಸರಾ ಉತ್ಸವ ನಮ್ಮ ಶಾಸಕರದು. ಸಂಪೂರ್ಣ ಗೀತೆ ಹೇಳಬೇಕು ಎಂದು ನಮ್ಮದು ಅಪೇಕ್ಷೆ ಇದೆ. ಅದರ ಪ್ರಕಾರ ನಾವೆಲ್ಲಾ ವಂದೇ ಮಾತರಂ ಗೀತೆಯನ್ನು ಹಾಡಿದ್ದೇವೆ. ಅವರ‌ ಪ್ರಕಾರ ಎರಡು ಚರಣ ಹೇಳಿ ಮೈಕ್ ಆಫ್ ಮಾಡಿದರು. ಆದರೆ ಪೂರ್ಣ ಹಾಡನ್ನು ಸಾರ್ವಜನಿಕರು, ನಾವೆಲ್ಲಾ ಸೇರಿ ಒಟ್ಟಾಗಿ ಹೇಳಿದ್ದೇವೆ. ವೇದಿಕೆಯಲ್ಲಿ ಸರ್ಕಾರದ ವಿರುದ್ಧವಾದ ಯಾವುದೇ ರೀತಿಯ ಕೆಲಸವಾಗಿಲ್ಲ. ಆದರೆ ಅವರೆಲ್ಲಾ ವೇದಿಕೆಯಿಂದ ಇಳಿದು ಹೋಗುತ್ತಾರೆಂದು ನಾವೆಲ್ಲಾ ನಿರೀಕ್ಷೆ ಮಾಡಿರಲಿಲ್ಲ‌. ದೇವರು ಅವರಿಗೆ ಗೀತೆಯನ್ನು ಸಂಪೂರ್ಣವಾಗಿ ಹೇಳುವ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದರು.

ವೇದಿಕೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ, ಆಯುಕ್ತರಾದ ಮಾಯಣ್ಣ ಗೌಡ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ: ಕುದ್ರೋಳಿಯಲ್ಲಿ ಶ್ರೀಶಾರದಾ ಮಾತೆ, ನವದುರ್ಗೆಯರ ಪ್ರತಿಷ್ಠಾಪನೆ