ETV Bharat / state

ತನಿಖಾಧಿಕಾರಿ ಸೋಗಿನಲ್ಲಿ ವಂಚನೆ: 17 ಪ್ರಕರಣಗಳ ಕುಖ್ಯಾತ ವಂಚಕ ಸ್ಯಾಮ್ ಪೀಟರ್ ಸಿಸಿಬಿ ಬಲೆಗೆ

17 ಪ್ರಕರಣಗಳ ಕುಖ್ಯಾತ ವಂಚಕ ಸ್ಯಾಮ್ ಪೀಟರ್ 3 ವರ್ಷಗಳ ಬಳಿಕ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

MANGALURU  DAKSHINA KANNADA  POSING AS NIA OFFICER  CHEATING CASE  CCB OPERATION
ಸ್ಯಾಮ್ ಪೀಟರ್ (ETV Bharat)
author img

By ETV Bharat Karnataka Team

Published : September 1, 2026 at 5:00 PM IST

2 Min Read
Choose ETV Bharat

ಮಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಯ ಸೋಗಿನಲ್ಲಿ ಸಾರ್ವಜನಿಕರಿಗೆ ವಂಚನೆ, ಸುಲಿಗೆ ಎಸಗಿದ ಪ್ರಕರಣದಲ್ಲಿ ಜಾಮೀನು ಪಡೆದು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಂತಾರಾಜ್ಯ ಆರೋಪಿ ಸ್ಯಾಮ್ ಪೀಟರ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕೇರಳದ ಕೊಲ್ಲಂ ಮೂಲದವನಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಲಕ್ನೋದಲ್ಲಿ ವಾಸವಿದ್ದ ಸ್ಯಾಮ್ ಪೀಟರ್ ಯಾನೆ ಡ್ಯಾನಿ ತಾರಕನ್ ಯಾನೆ ಆಂಟನಿ (64) ಬಂಧಿತ ಆರೋಪಿ.

ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿ ಸೋಗು: ಆರೋಪಿ ಸ್ಯಾಮ್ ಪೀಟರ್ ತನ್ನದೇ ಗ್ಯಾಂಗ್ ರಚಿಸಿಕೊಂಡು, ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ನಿರ್ದೇಶಕ/ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ. ಹಣಕಾಸು ವಿವಾದ, ಬ್ಯಾಂಕ್ ವಂಚನೆ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸಂಪರ್ಕಿಸಿ, ಪ್ರಕರಣ ಇತ್ಯರ್ಥಪಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮತ್ತು ವಂಚನೆ ನಡೆಸಿದ ಆರೋಪದ ಮೇಲೆ 2019ರ ಆಗಸ್ಟ್ 16ರಂದು ಮಂಗಳೂರಿನ ಪಂಪ್‌ವೆಲ್‌ನ ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿದ್ದ ಕದ್ರಿ ಪೊಲೀಸರು, ಈತನ ಗ್ಯಾಂಗ್‌ನ 8 ಮಂದಿಯನ್ನು ಬಂಧಿಸಿದ್ದರು. ಬಳಿಕ 2023ರ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ವಿಚಾರಣೆಗೆ ಹಾಜರಾಗದೆ ಪುನಃ ತಲೆಮರೆಸಿಕೊಂಡು ಕೃತ್ಯ ಮುಂದುವರಿಸಿದ್ದನು.

11 ನಕಲಿ ಹೆಸರು, ಇಂಟರ್‌ಪೋಲ್ ರೆಡ್​ಕಾರ್ನರ್ ನೊಟೀಸ್: ಗುರುತು ಮರೆಮಾಚಲು ನಿರಂತರವಾಗಿ ಹೆಸರು ಹಾಗೂ ಸ್ಥಳ ಬದಲಾಯಿಸುತ್ತಿದ್ದ ಈತನಿಗೆ ಆಂಟನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ರಾಬಿನ್ ಸನ್, ಆಂಟೋನಿ ಫ್ರಾನ್ಸಿಸ್, ಶಾರೂನ್ ಫ್ರಾನ್ಸಿಸ್ ಹಾಗೂ ಡ್ಯಾನಿ ತಾರಕನ್ ಸೇರಿದಂತೆ 11 ನಕಲಿ ಹೆಸರುಗಳಿದ್ದವು. 'ರಾಹುಲ್ ಪೀಟರ್' ಎಂಬ ಹೆಸರಿನಲ್ಲಿದ್ದಾಗ ಈತನ ವಿರುದ್ಧ 2001ರಿಂದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (RCN) ಕೂಡ ಜಾರಿಯಾಗಿತ್ತು.

ಹಲವು ರಾಜ್ಯಗಳಲ್ಲಿ 17 ಪ್ರಕರಣಗಳು: ಆರೋಪಿಯ ವಿರುದ್ಧ ಕರ್ನಾಟಕದ ಮಂಗಳೂರು ಪೂರ್ವ (ಕದ್ರಿ), ಉಳ್ಳಾಲ, ಕೊಣಾಜೆ, ಬೆಂಗಳೂರು, ಚಿಕ್ಕಬಳ್ಳಾಪುರ, ಉಡುಪಿ, ಕುಶಾಲನಗರ ಸೇರಿದಂತೆ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸುಮಾರು 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಉಳ್ಳಾಲ ಠಾಣೆಯ ಪ್ರಕರಣದಲ್ಲಿ 17 ಬಾರಿ ಹಾಗೂ ಪೂರ್ವ ಠಾಣೆಯ ಪ್ರಕರಣದಲ್ಲಿ 14 ಬಾರಿ ವಾರಂಟ್​​ ಹೊರಡಿಸಿ ಪ್ರೊಕ್ಲಮೇಷನ್ (ಘೋಷಿತ ಅಪರಾಧಿ) ಮಾಡಲಾಗಿತ್ತು.

ಪೊಲೀಸ್ ಕಮಿಷನರ್ ಶ್ಲಾಘನೆ: ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, "ಆರೋಪಿಯು ನಿರಂತರವಾಗಿ ಹೆಸರು ಮತ್ತು ಸ್ಥಳ ಬದಲಾಯಿಸುತ್ತಾ ಕೃತ್ಯ ಎಸಗುತ್ತಿದ್ದ ಕುಖ್ಯಾತ ಅಪರಾಧಿ. 2019ರಲ್ಲಿ ಈತನನ್ನು ಬಂಧಿಸಿದ ಬಳಿಕ ಆರ್‌ಸಿಎನ್ ರದ್ದಾಗಿದ್ದರೂ, 2023ರಲ್ಲಿ ಜಾಮೀನು ಪಡೆದು ಮತ್ತೆ ತಲೆಮರೆಸಿಕೊಂಡು ಅಪರಾಧಗಳನ್ನು ಮುಂದುವರಿಸಿದ್ದ. ಆತನನ್ನು ಪತ್ತೆಹಚ್ಚಿ ಬಂಧಿಸಿದ ಸಿಸಿಬಿ ಪೊಲೀಸರ ಕಾರ್ಯ ಶ್ಲಾಘನೀಯ" ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ರಾಮನಗರ: ಖೋಟಾ ನೋಟು ತಯಾರಿಕಾ ಜಾಲ ಪತ್ತೆ, ಏಳು ಆರೋಪಿಗಳ ಬಂಧನ