ಕರ್ತವ್ಯ ಮುಗಿಸಿ ತೆರಳುತ್ತಿದ್ದ ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯ ಬಂಧನ
ಕರ್ತವ್ಯ ಮುಗಿಸಿ ತೆರಳುತ್ತಿದ್ದ ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಕುಡಿದ ಮತ್ತಿನಲ್ಲಿ ಆಟೋ ಚಾಲಕನೊಬ್ಬನನ್ನು ಹತ್ಯೆ ಮಾಡಿದ ಆರೋಪದಡಿ ಮೂವರನ್ನು ಬಂಧಿಸಿದ ಘಟನೆ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Published : January 3, 2026 at 2:53 PM IST
ಬೆಂಗಳೂರು: ವೈದ್ಯೆಯೊಬ್ಬರಿಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿರುವ 28 ವರ್ಷದ ಮಹಿಳೆ ನೀಡಿದ್ದ ದೂರಿನನ್ವಯ ರಾಕೇಶ್ (21) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಡಿಸೆಂಬರ್ 17ರಂದು ಬೆಳಗಿನ ಜಾವ ಕರ್ತವ್ಯ ಮುಗಿಸಿ ಬರುತ್ತಿದ್ದ ಮಹಿಳಾ ವೈದ್ಯೆಯ ಬಳಿ ಆರೋಪಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ತವ್ಯ ಮುಗಿಸಿ ಬರುತ್ತಿದ್ದ ವೈದ್ಯೆಗೆ ಆಕೆಯ ಪಿಜಿ ಮುಂಭಾಗದಲ್ಲೇ ಎದುರಾಗಿದ್ದ ಆರೋಪಿ, ಬಸ್ ನಿಲ್ದಾಣದ ವಿಳಾಸ ಕೇಳಿದ್ದ. ಆಕೆ ಭಯದಿಂದಲೇ ವಿಳಾಸ ಹೇಳಿ ತನ್ನ ಪಿಜಿ ಗೇಟ್ ತೆರೆಯಲು ಮುಂದಾಗಿದ್ದರು. ಅಷ್ಟರಲ್ಲೇ ಬೈಕ್ ನಿಲ್ಲಿಸಿ ಹತ್ತಿರ ಬಂದಿದ್ದ ಆರೋಪಿ, ಆಕೆಯ ದೇಹ ಸ್ಪರ್ಶಿಸುತ್ತಾ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ. ತಕ್ಷಣ ಆಕೆ ಕಿರುಚಾಡಲಾರಂಭಿಸಿದಾಗ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದ. ಈ ಬಗ್ಗೆ ನೊಂದ ಮಹಿಳೆ ನೀಡಿದ ದೂರು ಆಧರಿಸಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯು ನಂಬರ್ ಪ್ಲೇಟ್ ಇರದ ಬೈಕ್‌ನಲ್ಲಿ ಬಂದು ಕೃತ್ಯ ಎಸಗಿರುವುದು ಪತ್ತೆಯಾಗಿತ್ತು. ಆದರೆ, ಆತನ ಗುರುತು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ವಿರುದ್ಧ ಹಳೆಯ ಪ್ರಕರಣಗಳಿಲ್ಲ. ತುಮಕೂರು ಮೂಲದವನಾದ ಆರೋಪಿ, ತನ್ನ ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾನೆ. ಪರಿಚಿತರನ್ನ ಭೇಟಿಯಾಗಲು ಚಿಕ್ಕಬಾಣಾವರಕ್ಕೆ ಬಂದಾಗ ಈ ರೀತಿ ಕೃತ್ಯ ಎಸಗಿದ್ದ ಎಂದು ಬೆಂಗಳೂರು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್. ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಆಟೋ ಚಾಲಕನ ಹತ್ಯೆ - ಮೂವರ ಬಂಧನ: ಪ್ರತ್ಯೇಕ ಘಟನೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕುಡಿದ ಮತ್ತಿನಲ್ಲಿ ಆಟೋ ಚಾಲಕನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ಮೂಲದ ರೇಚಣ್ಣ ಎಂಬುವರನ್ನ ಕೊಲೆ ಮಾಡಿದ ಆರೋಪದಡಿ ಒಡಿಶಾ ಮೂಲದ ಸಾಗರ್ ದಾಸ್, ಸೌರಬ್ ಬಿಸ್ವಾಲ್ ಹಾಗೂ ಸುಬ್ರಕಾಂತ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ರೇಚಣ್ಣ ಆಟೋ ಚಾಲಕನಾಗಿದ್ದು, ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದರು. ಈತನ ಮನೆ ಪಕ್ಕದಲ್ಲಿ ಮೂವರು ಆರೋಪಿಗಳು ವಾಸವಾಗಿದ್ದರು. ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಮೂವರು ಆರೋಪಿಗಳು, ಕುಡಿದ ಮತ್ತಿನಲ್ಲಿ ಮೃತನ ಮನೆ ಬಾಗಿಲು ತಟ್ಟಿ ಹೋಗಿದ್ದರು. ಈ ಬಗ್ಗೆ ಪ್ರಶ್ನಿಸಲು ಹೋದಾಗ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಪಾನಮತ್ತರಾಗಿದ್ದ ಆರೋಪಿಗಳು ಚಾಕುವಿನಿಂದ ರೇಚಣ್ಣ ಅವರ ಬೆನ್ನು ಸೇರಿ ಇನ್ನಿತರ ಭಾಗಗಳಿಗೆ ಚುಚ್ಚಿ ಪರಾರಿಯಾಗಿದ್ದರು. ತೀವ್ರ ಅಸ್ವಸ್ಥರಾಗಿ ರೇಚಣ್ಣ ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ಧಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್, ಡಿ.31ರ ರಾತ್ರಿ 11.30ಕ್ಕೆ ಕೊಲೆ ಬಗ್ಗೆ ಮಾಹಿತಿ ಬಂದಿತ್ತು. ತಾಯಿಯೊಂದಿಗೆ ವಾಸವಾಗಿದ್ದ ಆಟೋ ಚಾಲಕ ರೇಚಣ್ಣ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಕ್ಷುಲ್ಲಕ ಕಾರಣಕ್ಕಾಗಿ ಪಕ್ಕದ ಮನೆಯಲ್ಲಿ ವಾಸವಿದ್ದ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿ ಮೂವರು ಆರೋಪಿತರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ಹೊಸ ವರ್ಷದ ಮೊದಲ ದಿನವೇ ಮಹಿಳೆಯ ಕೊಲೆ

