ಚಾರ್ಮಾಡಿ ಘಾಟ್ನಲ್ಲಿ ಲಾರಿಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಸುಟ್ಟುಹೋದ ಮೆಕ್ಕೆಜೋಳ ತುಂಬಿದ ಲಾರಿ
ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೆಕ್ಕೆಜೋಳ ತುಂಬಿದ್ದ ಲಾರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

Published : January 10, 2026 at 11:24 AM IST
ಚಿಕ್ಕಮಗಳೂರು: ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಮೇಲೆ ಹಾದುಹೋಗುವಂತಹ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಘಟನೆ ಸಂಭವಿಸಿದೆ.
ಚಿಕ್ಕಮಗಳೂರಿನಿಂದ ಮೂಡಬಿದಿರೆ ಕಡೆಗೆ ಮೆಕ್ಕೆಜೋಳದ ಲೋಡು ತೆಗೆದುಕೊಂಡು ಹೋಗುತ್ತಿದ್ದ KA-13-AA-4758 ನಂಬರಿನ ಲಾರಿ ಜ.9 ರಂದು ಮಧ್ಯರಾತ್ರಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಲಾರಿಯಲ್ಲಿದ್ದ ಚಾಲಕ ಸೇರಿ ಮೂವರು ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಬೆಂಕಿಗಾಹುತಿಯಾಗಿದೆ.
ಲಾರಿಯ ಟಯರ್ ಭಾಗದಿಂದ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಲಾರಿಗೆ ವ್ಯಾಪಿಸಿದ್ದು, ಲಾರಿಯಲ್ಲಿದ್ದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ. ಲಾರಿಯೂ ಸಹ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಯಿಂದ ಚಾರ್ಮಾಡಿ ಘಾಟ್‌ನ ಅರಣ್ಯ ಪ್ರದೇಶಕ್ಕೂ ಅಗ್ನಿ ವ್ಯಾಪಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಯವಕರು ಬೆಳ್ತಂಗಡಿ ಅಗ್ನಿಶಾಮಕ ದಳ ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಬಳಿಕ ಸುಗಮ ಸಂಚಾರಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಕ್ರಮ ಕೈಗೊಂಡರು. ಲಾರಿ ಬೆಂಕಿಗಾಹುತಿಯಾದ ವಿಡಿಯೋಗಳು ವೈರಲ್ ಆಗಿದೆ.
ಪದೇ ಪದೆ ಈ ರೀತಿಯ ಘಟನೆಗಳು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ನಡೆಯುತ್ತಿದ್ದು, ಈ ಘಟನೆಗಳು ಏಕೆ ನಡೆಯುತ್ತಿದೆ ಎಂಬುದು ಯಾರಿಗೂ ಸರಿಯಾಗಿ ತಿಳಿಯುತ್ತಿಲ್ಲ. ಮತ್ತೊಂದು ಕಡೆ ಅತಿ ಹೆಚ್ಚಾಗಿ ಅಪಘಾತಗಳು ಈ ಭಾಗದಲ್ಲಿ ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಈ ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಬಡಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸಿಂಧನೂರಲ್ಲಿ ಅಂಗಡಿಗಳಿಗೆ ಬೆಂಕಿ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು 7 ಅಂಗಡಿಗಳು ಹೊತ್ತಿ ಸುಟ್ಟುಹೋಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಗುರುವಾರ ತಡರಾತ್ರಿ ನಡೆದಿತ್ತು.
ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ ಬರುವ 7 ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಅಂಗಡಿಗಳು ಭಸ್ಮವಾಗಿತ್ತು. ಆರನೇೆ ವಾರ್ಡ್ನಲ್ಲಿ ಬರುವ ದೆಹಲಿ ಬಜಾರ್, ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕ್ಕನ್ ಶಾಪ್, ಜನರಲ್ ಸ್ಟೋರ್, ಹಗ್ಗ ಮಾರಾಟ ಕೇಂದ್ರ ಸೇರಿದಂತೆ ಒಟ್ಟು 7 ಅಂಗಡಿಗಳಿಗೆ ಬೆಂಕಿ ಹತ್ತಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿ ಸಂಭವಿಸಿತ್ತು.
ಇದನ್ನೂ ಓದಿ: ಸಿಂಧನೂರಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ 7 ಅಂಗಡಿಗಳು

