ETV Bharat / state

ತುಮಕೂರು: ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುವಾಗ ಅಪಘಾತ; ನಾಲ್ವರು ಭಕ್ತರು ಸಾವು, 7 ಜನರಿಗೆ ಗಾಯ

ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುತ್ತಿದ್ದಾಗ ಅಪಘಾತ ಸಂಭವಿಸಿ ನಾಲ್ವರು ಭಕ್ತರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

TUMAKUR  AYYAPPA SWAMY DEVOTEES DIE  ಅಯ್ಯಪ್ಪ ಸ್ವಾಮಿ ಭಕ್ತರು  ಅಪಘಾತ accident
ತುಮಕೂರು ಬಳಿ ಅಪಘಾತ (ETV Bharat)
author img

By ETV Bharat Karnataka Team

Published : January 9, 2026 at 9:09 AM IST

2 Min Read
Choose ETV Bharat

ತುಮಕೂರು: ರಸ್ತೆ ಬದಿ ನಿಂತಿದ್ದ ಲಾರಿಗೆ ಕ್ರೂಜರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಮೃತಪಟ್ಟ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಕ್ರಾಸ್ ಬಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಇಂದು ನಸುಕಿನ ಜಾವ ನಡೆದಿದೆ.

ಮೃತರನ್ನು ಸಾಕ್ಷಿ (7), ಮಾರುತಪ್ಪ (45), ವೆಂಕಟೇಶ (30), ಗವಿಸಿದ್ದಪ್ಪ (28) ಎಂದು ಗುರುತಿಸಲಾಗಿದ್ದು, ಎಲ್ಲರೂ ಕೊಪ್ಪಳ ಜಿಲ್ಲೆಯ ಕುಕ್ಕನೂರು ಪಟ್ಟಣದವರಾಗಿದ್ದಾರೆ. ಶಬರಿಮಲೆಗೆ ತೆರಳಿ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.

ಎಸ್​ಪಿ ಅಶೋಕ್ ಅವರಿಂದ ಮಾಹಿತಿ (ETV Bharat)

ಗಾಯಾಳುಗಳ ಮಾಹಿತಿ: ಎಲ್ಲ ಗಾಯಾಳುಗಳು ಕೊಪ್ಪಳ ಜಿಲ್ಲೆಯವರಾಗಿದ್ದಾರೆ. ಕುಕ್ಕನೂರು ಮೂಲದ ಪ್ರವೀಣ್ ಕುಮಾರ್, ರಾಜಪ್ಪ, ಹುಲಿಗೆಪ್ಪ, ರಾಕೇಶ್, ತಿರುಪತಿ ಮತ್ತು ಗದ್ದಿಗೆರೆ ತಾಂಡಾದ ಶ್ರೀನಿವಾಸ ಸೇರಿ 7 ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಮುಂಜಾನೆ ಸುಮಾರು 5:30 ಸಂದರ್ಭದಲ್ಲಿ ಕೋರ ಪೊಲೀಸ್ ಠಾಣೆ ಸಿಬ್ಬಂದಿಗಳ ಮೂಲಕ ಕ್ರೂಜರ್ ವಾಹನವು ಲಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ತಕ್ಷಣ ಹೈವೇ ಪೆಟ್ರೋಲಿಂಗ್ ಮತ್ತು ಸ್ಥಳೀಯ ಕೋರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದರು. ತಕ್ಷಣದ ಮಾಹಿತಿ ಪ್ರಕಾರ ನಾಲ್ವರು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಲ್ಲದೆ ಚಾಲಕ ಸೇರಿ 7 ಮಂದಿ ಗಾಯಗೊಂಡಿದ್ದಾರೆ ಎಂದು ಎಸ್​ಪಿ ಅಶೋಕ್ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಕ್ರೂಜರ್ ವಾಹನದ ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದಿದ್ದರಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತುಮಕೂರು ಬಳಿ ಅಪಘಾತದ ಬಗ್ಗೆ ವೈದ್ಯರು, ಗಾಯಾಳುಗಳ ಪ್ರತಿಕ್ರಿಯೆ (ETV Bharat)

ಕ್ರೂಜರ್ ವಾಹನದ ಚಾಲಕ ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಚಾಲಕನ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಗಾಯಗೊಂಡವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಅಲ್ಲದೆ ಅಪಘಾತವಾಗಿರುವ ಕ್ರೂಜರ್ ವಾಹನ ಮತ್ತು ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗಿದೆ ಎಂದು ಎಸ್​ಪಿ ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 7 ಜನ ಗಾಯಗೊಂಡಿದ್ದಾರೆ. ಬೆಳಿಗ್ಗೆ 6ರ ಸುಮಾರಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇನ್ನು ನಾಲ್ವರನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಇನ್ನಿಬ್ಬರ ಆರೋಗ್ಯದಲ್ಲಿ ಚೇತರಿಸಿಕೊಂಡ ಬಳಿಕ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡುತ್ತೇವೆ. ಎಲ್ಲ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತುಮಕೂರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಬಂದಾಗಲೇ ನಮಗೆ ಗೊತ್ತಾಗಿದ್ದು: ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮದಿಂದ ಕ್ರೂಜರ್ ವಾಹನದಲ್ಲಿ ಹತ್ತು ಮಂದಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದೆವು. ದರ್ಶನ ಪಡೆದು ವಾಪಸ್ ಬರುತ್ತಿದ್ದೆವು. ನಾವೆಲ್ಲ ಕ್ರೂಜರ್ ವಾಹನದಲ್ಲಿ ನಿದ್ದೆ ಮಾಡುತ್ತಿದ್ದೆವು. ಅಪಘಾತವಾಗಿರುವ ಸಂಗತಿ ನಮಗೆ ಗಮನಕ್ಕೆ ಬಂದಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಬಂದಾಗ್ಲೇ ನಮಗೆ ಗೊತ್ತಾಗಿದ್ದು ಎನ್ನುತ್ತಾರೆ ಗಾಯಾಳು ರಾಕೇಶ್.

ಇಂದು ನಸುಕಿನ ಜಾವ ಸುಮಾರು 5:30 ಸಂದರ್ಭದಲ್ಲಿ ನಿದ್ರೆಯ ಮಂಪರಿನಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿರಬಹುದು. ಅಲ್ಲದೆ ಅಪಘಾತವಾದ ಬಳಿಕ ನಮಗೆ ಯಾರಿಗೂ ಪ್ರಜ್ಞೆ ಇರಲಿಲ್ಲ. ನಂತರ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಬಂದಾಗ ನಮಗೆ ಪ್ರಜ್ಞೆ ಬಂದಿದೆ ಎಂದು ಗಾಯಾಳು ಹುಲಿಗೆಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ವಿಧಿಯಿಂದಲೂ ಬಿಡಿಸಲಾಗದ ಬಂಧ: ಭೀಕರ ಅಪಘಾತ, ಸಾವಿನಲ್ಲೂ ಒಂದಾದ ಸ್ನೇಹಿತೆಯರು