ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳ ವರದಿ ಪರಿಗಣಿಸಿ ಮಾಫಿ ಸಾಕ್ಷಿ ಅಂಗೀಕಾರ ವಿಚಾರ: ನಾಳೆ ಆದೇಶ ಪ್ರಕಟಿಸುವುದಾಗಿ ತಿಳಿಸಿದ ಹೈಕೋರ್ಟ್
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ 2ನೇ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯ ಸಂಬಂಧ ನಾಳೆ ಬೆಳಗ್ಗೆ ಆದೇಶ ಪ್ರಕಟಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.

Published : September 1, 2026 at 8:28 PM IST
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ಎಸ್. ರಾವ್ ಅಲಿಯಾಸ್ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಪ್ರೊಬೇಷನರಿ ಅಧಿಕಾರಿ ವರದಿ ಪರಿಗಣಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಪಡಿಸಿ, ಮರು ಪರಿಗಣಿಸುವುದಕ್ಕೆ ಆದೇಶಿಸಲಾಗುವುದು ಎಂದು ಹೈಕೋರ್ಟ್ ಮೌಖಿಕವಾಗಿ ತಿಳಿಸಿದೆ.
ಪ್ರಕರಣದಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಎರಡನೇ ಆರೋಪಿ ದರ್ಶನ್ ಅಲಿಯಾಸ್ ಡಿ.ಬಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯ ಸಂಬಂಧ ನಾಳೆ(ಬುಧವಾರ) ಬೆಳಗ್ಗೆ ಆದೇಶ ಪ್ರಕಟಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಅರ್ಜಿಯಲ್ಲಿ ದರ್ಶನ್ ಡಿ.ಬಾಸ್ ಅಂತ ಹಾಕಲಾಗಿದೆ. ಹಾಗಂದರೆ ಏನು ಎಂದು ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು, ಆರೋಪ ಪಟ್ಟಿಯಲ್ಲಿಯ ಕಾಸ್ ಲಿಸ್ಟ್ನಲ್ಲಿ ಆ ರೀತಿಯಲ್ಲಿ ಹಾಕಲಾಗಿದೆ ಎಂದು ತಿಳಿಸಿದರು. ವಾದ ಮುಂದುವರೆದಿದ ವಕೀಲರು, ಪ್ರದೋಷ್ ಅವರ ಮಾಫಿ ಸಾಕ್ಷಿಯನ್ನು ಪರಿಗಣಿಸುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು ಪ್ರದೋಷ್ ಅವರ ಹಿನ್ನೆಲೆ ಕುರಿತಂತೆ ಪ್ರೊಬೇಷನರಿ ಅಧಿಕಾರಿಯಿಂದ ವರದಿಯನ್ನು ಪಡೆದುಕೊಂಡಿದೆ.
ಆ ವರದಿಯಲ್ಲಿ ಪ್ರದೋಷ್ ವಿವಾಹಿತನಾಗಿದ್ದು, ವಿಧವೆ ತಾಯಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಇಡೀ ಕುಟುಂಬ ಅವರನ್ನೇ ಅವಲಂಬಿಸಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಸಮಾಜದಲ್ಲಿ ಉತ್ತಮ ನಡವಳಿಕೆ ಹೊಂದಿದ್ದಾರೆ. ಅವರು ಯಾವುದೇ ಸುಳ್ಳುಗಳನ್ನು ಹೇಳುವುದಿಲ್ಲ. ಅವರು ಮಾಫಿ ಸಾಕ್ಷಿಯಾಗುವುದರಿಂದ ಇತರ ಸಾಕ್ಷಿಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ವರದಿಯನ್ನು ಪರಿಗಣಿಸಿದೆ. ಕಾನೂನಿನಲ್ಲಿ ಈ ರೀತಿಯಲ್ಲಿ ವರದಿ ಪಡೆದ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ಆದೇಶಿಸುವುದಕ್ಕೆ ಅವಕಾಶವಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆದು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಮಾಫಿ ಸಾಕ್ಷಿಗಳನ್ನು ಪರಿಗಣಿಸುವುದಕ್ಕೆ ಅವಕಾಶವಿಲ್ಲ ಆದ್ದರಿಂದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ(ಸಿಐಡಿ) ಪರ ವಕೀಲರು, ನಿಯಮಗಳ ಪ್ರಕಾರ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, ಪ್ರಾಸಿಕ್ಯೂಷನ್ ಇದಕ್ಕೆ ಮನವಿ ಮಾಡಿರಲಿಲ್ಲ. ಆದರೂ, ವಿಚಾರಣಾ ನ್ಯಾಯಾಲಯ ವರದಿಯನ್ನು ಪಡೆದಿದೆ ಎಂದು ತಿಳಿಸಿದರು. ಇದಕ್ಕೆ ಪೀಠ, ಕಾನೂನು ಪ್ರಕಾರವೇ ನಡೆಯಬೇಕು. ಅಧಿಕಾರಿಯಿಂದ ವರದಿ ಪಡೆದಿರುವ ಅಂಶದ ಕುರಿತ ಆದೇಶವನ್ನು ರದ್ದುಪಡಿಸಿ, ಪ್ರಕರಣವನ್ನು ಮರುಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗುವುದು. ವಿಚಾರಣಾ ನ್ಯಾಯಾಲಯದ ಮುಂದಿನ ಆದೇಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿ, ಆದೇಶವನ್ನು ನಾಳೆ ಪ್ರಕಟಿಸುವುದಾಗಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ 2026ರ ಆಗಸ್ಟ್ 25 ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಸಂದರ್ಭದಲ್ಲಿ ಪ್ರೊಬೇಷನ್ ಅಧಿಕಾರಿಯ ವರದಿ ಕರೆಸಿಕೊಂಡ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನು ಬಾಹಿರವಾಗಿದೆ. ಪ್ರೊಬೇಷನ್ ಅಧಿಕಾರಿಯ ಪಾತ್ರವೇನಿದ್ದರೂ ಶಿಕ್ಷೆ ವಿಧಿಸಿದ ನಂತರದ ಹಂತಕ್ಕೆ ಸೀಮಿತವಾಗಿದ್ದು, ಅಪರಾಧಿಯನ್ನು ಪ್ರೊಬೇಷನ್ ಮೇಲೆ ಬಿಡುಗಡೆ ಮಾಡಲು ಮಾತ್ರ ಅನ್ವಯಿಸುತ್ತದೆ. ಈ ವರದಿಯನ್ನು ಆಧರಿಸಿ ಕ್ಷಮಾದಾನ ನೀಡಿರುವುದು ಕಾನೂನುಬಾಹಿರ. ಅಲ್ಲದೇ, ಆರೋಪಿಯ ಕುಟುಂಬ ಹಿನ್ನೆಲೆ, ಆತನ ನಡತೆ ಹಾಗೂ ಸಮಾಜದಲ್ಲಿನ ಒಳ್ಳೆಯ ಸಂಬಂಧವನ್ನು ಆಧಾರವಾಗಿಟ್ಟುಕೊಂಡು ಕ್ಷಮಾದಾನ ನೀಡಿರುವುದು ಸಾಕ್ಷ್ಯ ಕಾಯ್ದೆಗೆ ವಿರುದ್ಧವಾಗಿದೆ. ಸಾಕ್ಷ್ಯ ಕಾಯ್ದೆಯ ಸೆಕ್ಷನ್ 54ರ ಪ್ರಕಾರ ಅಪರಾಧ ವಿಚಾರಣೆಯಲ್ಲಿ ಒಳ್ಳೆಯ ನಡತೆ ಅಪ್ರಸ್ತುತವಾಗಿದೆ ಆದ್ದರಿಂದ ಮಾಫಿ ಸಾಕ್ಷಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇವುಗಳನ್ನೂ ಓದಿ:
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ: ಸಿಐಡಿ ಮುಂದೆ ಅಭ್ಯರ್ಥಿಗಳಿಂದ ತಪ್ಪೊಪ್ಪಿಗೆ
ಹೆಂಡತಿ ಸಾವಿನ ಬಗ್ಗೆ ಅನುಮಾನ, ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ: 28 ವರ್ಷದ ಬಳಿಕ ಪೊಲೀಸರಿಗೆ ದೂರು ನೀಡಿದ ಗಂಡ

