ಯುದ್ಧದ ಮಧ್ಯೆ ಅಬುಧಾಬಿಯಿಂದ ಬೆಂಗಳೂರಿಗೆ ಬಂದವು ಎರಡು ವಿಮಾನ: ತಾಯ್ನಾಡಿಗೆ ಆಗಮಿಸಿ ನಿಟ್ಟುಸಿರು ಬಿಟ್ಟ ಪ್ರಯಾಣಿಕರು
ಇರಾನ್-ಇಸ್ರೇಲ್ ಯುದ್ಧದಿಂದ ವಿಮಾನ ಸೇವೆ ಬಂದ್ ಆಗಿ ಸಂಕಷ್ಟದಲ್ಲಿದ್ದ ಪ್ರಯಾಣಿಕರು ಎರಡು ವಿಮಾನಗಳಲ್ಲಿ ತಾಯ್ನಾಡಿಗೆ ಆಗಮಿಸಿದ್ದಾರೆ.

Published : March 3, 2026 at 10:10 AM IST
ದೇವನಹಳ್ಳಿ: ಇರಾನ್-ಇಸ್ರೇಲ್ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿನ ಉದ್ವಿಗ್ನತೆಯ ಮಧ್ಯೆ ಅಬುಧಾಬಿಯಿಂದ ಪ್ರಯಾಣಿಕರನ್ನು ಹೊತ್ತು ಎರಡು ವಿಮಾನಗಳು ಬೆಂಗಳೂರು ಏರ್ಪೋರ್ಟ್ಗೆ ಬಂದಿವೆ. ಎರಡು ದಿನಗಳಿಂದ ಆತಂಕದಲ್ಲಿದ್ದ ಪ್ರಯಾಣಿಕರು ತಾಯ್ನಾಡಿಗೆ ಮರಳಿ ಸಂತಸ ವ್ಯಕ್ತಪಡಿಸಿದರು.
ಯುದ್ಧದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನಯಾನ ಸೇವೆ ಬಂದ್ ಆಗಿತ್ತು. ಪರಿಣಾಮ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರದಲ್ಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಿಲುಕಿದ್ದರು. ಇದರಿಂದ ಪ್ರಯಾಣಿಕರು ಮತ್ತು ಅವರ ಕುಟುಂಬಸ್ಥರು ಆತಂಕದಲ್ಲಿದ್ದರು.
ಎರಡು ದಿನದ ಬಳಿಕ ಅಬುಧಾಬಿಯಿಂದ ವಿಮಾನಯಾನ ಪ್ರಾರಂಭವಾಗಿದೆ. ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ 10 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಮೊದಲ ವಿಮಾನದಲ್ಲಿ 210 ಪ್ರಯಾಣಿಕರಿದ್ದರು.
ಎರಡನೇ ವಿಮಾನ ಮಂಗಳವಾರ ನಸುಕಿನ ಜಾವ 3:20ಕ್ಕೆ ಬೆಂಗಳೂರಿಗೆ ಬಂದಿಳಿದಿದೆ. ಈ ವಿಮಾನದಲ್ಲಿ 300 ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ.
ಅಬುಧಾಬಿಯಿಂದ ಸುರಕ್ಷಿತವಾಗಿ ಬೆಂಗಳೂರು ಏರ್ಪೋರ್ಟ್ಗೆ ಆಗಮಿಸಿದ ಗಿರಿಮಲ್ಲಪ್ಪ ಎಂಬವರು ಮಾಧ್ಯಮದೊಂದಿಗೆ ಮಾತನಾಡುತ್ತಾ, "ಯುದ್ಧದಿಂದಾಗಿ ವಿಮಾನಯಾನ ಬಂದ್ ಆಗಿತ್ತು. ಸಹಜವಾಗಿ ನಾವು ಆತಂಕಗೊಂಡೆವು. ಸುರಕ್ಷಿತವಾಗಿ ಹೊಟೇಲ್‌ನಲ್ಲಿ ಇದ್ದೆವು. ವಿಮಾನಯಾನ ಪ್ರಾರಂಭವಾಯಿತು. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಪ್ರತಿದಿನ ದಿನ 15 ವಿಮಾನಗಳ ಹಾರಾಟ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಹೊಟೇಲ್ನಿಂದ ಏರ್ಪೋರ್ಟ್ಗೆ ಸುರಕ್ಷಿತವಾಗಿ ಕರೆದುಕೊಂಡು ಬಂದರು" ಎಂದರು.
'ಎರಡು ದಿನಗಳ ಹಿಂದೆ ನಾವು ಅಬುಧಾಬಿಗೆ ಬಂದಾಗ ಕ್ಷೀಪಣಿ ದಾಳಿ ನಡೆಯುತ್ತಿತ್ತು. ನಾವಿದ್ದ ಹೋಟೆಲ್ ಸುತ್ತಮುತ್ತ ಹಲವು ಸ್ಫೋಟಗಳು ಆಗುತ್ತಿರುವ ಶಬ್ದ ಕೇಳುತ್ತಿತ್ತು. ಜೊತೆಗೆ ವಿಮಾನ ನಿಲ್ದಾಣದ ಮೇಲಿಂದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದರಿಂದ ತುಂಬಾ ಭಯವಾಗಿತ್ತು. ಭಾರತದಲ್ಲಿ ವಿಮಾನ ಲ್ಯಾಂಡ್ ಆಗುವವರೆಗೂ ನಮಗೆ ಭಯ ಕಾಡುತ್ತಿತ್ತು. ಕೊನೆಗೂ ದೇಶಕ್ಕೆ ಬಂದಿರುವುದು ತುಂಬಾ ಖುಷಿಯಾಗುತ್ತಿದೆ' ಎಂದು ಆಂಧ್ರಪ್ರದೇಶ ಮೂಲದ ಯೋಗನಂದ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯರ ರಕ್ಷಣೆಗೆ ಮುಂದಾದ ಸರ್ಕಾರ: ಯುದ್ಧ ವಾತಾವರಣದಿಂದಾಗಿ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವ ಸಾವಿರಾರು ಭಾರತೀಯರ ರಕ್ಷಣೆಗೆ ಮುಂದಾಗಿರುವ ಭಾರತ ಸರ್ಕಾರ, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವ ಕಾರ್ಯಾಚರಣೆ ಆರಂಭಿಸಿದೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯ ದೇಶಗಳು ತಮ್ಮ ವಾಯು ಪ್ರದೇಶವನ್ನು ಮುಚ್ಚಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದುಗೊಂಡಿದೆ.
ಇವುಗಳನ್ನೂ ಓದಿ:

