ನಾರದ ಜಯಂತಿ ನಿಮಿತ್ತ ತ್ರಿಲೋಕ ಸಂಚಾರ ಕಾರ್ಯಕ್ರಮ : 60 ವರ್ಷ ಮೇಲ್ಪಟ್ಟವರಿಗೆ ವಿಶೇಷ ವಾಕಿಂಗ್ ಸ್ಪರ್ಧೆ ಆಯೋಜನೆ
ಚಿಕ್ಕಮಗಳೂರಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ವಿಶೇಷ ವಾಕಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

Published : May 5, 2026 at 1:35 PM IST
|Updated : May 5, 2026 at 3:41 PM IST
ಚಿಕ್ಕಮಗಳೂರು : ನಾರದ ಜಯಂತಿ ಪ್ರಯುಕ್ತ ‘ತ್ರಿಲೋಕ ಸಂಚಾರ’ ವಿಶೇಷ ವಾಕಿಂಗ್ ಸ್ಪರ್ಧೆಯನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ನಗರದಲ್ಲಿ ಆಯೋಜನೆ ಮಾಡಲಾಗಿತ್ತು.
ಕಾಫಿನಾಡಲ್ಲಿ ನಾರದ ಜಯಂತಿ ಪ್ರಯುಕ್ತ ನಡೆದ ವಿಶಿಷ್ಟ ಕಾರ್ಯಕ್ರಮವೊಂದು ಸ್ಥಳೀಯರ ಗಮನ ಸೆಳೆದಿದೆ. ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರುವ ನಾರದ ಜಯಂತಿಯನ್ನು ಈ ಬಾರಿ ವಿಭಿನ್ನವಾಗಿ ಆಚರಿಸಲಾಗಿದ್ದು, 60 ವರ್ಷ ಮೇಲ್ಪಟ್ಟ ಹಿರಿಯರಿಗೆ ವಾಕಿಂಗ್ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಆಯಾಮ ನೀಡಲಾಗಿದೆ.
ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ “ತ್ರಿಲೋಕ ಸಂಚಾರ” ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಯಿತು. 60 ವರ್ಷ ಮೇಲ್ಪಟ್ಟವರು ಉತ್ಸಾಹದಿಂದ ಭಾಗವಹಿಸಿದ್ದ ದೃಶ್ಯವನ್ನು ಕಂಡ ಸ್ಥಳೀಯರು ಕ್ಷಣಕಾಲ ಬೆರಗಾದರು. ಸುಮಾರು 50ಕ್ಕೂ ಹೆಚ್ಚು ಹಿರಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿಸಿದರು.
ಹಿಂದೂ ಪುರಾಣಗಳಲ್ಲಿ ನಾರದ ಮುನಿಗಳು 'ನಾರಾಯಣ, ನಾರಾಯಣ' ಎಂದು ಭಗವಂತ ವಿಷ್ಣುವಿನ ಮಹಿಮೆಗಳನ್ನು ತ್ರಿಲೋಕಗಳಲ್ಲಿ ಹರಡುವ ದೂತನಾಗಿ ಪ್ರಸಿದ್ಧರಾಗಿದ್ದಾರೆ. ಅವರ ನಿರಂತರ ಸಂಚಾರವನ್ನು ಪ್ರತೀಕಾತ್ಮಕವಾಗಿ ತೋರಿಸುವ ಉದ್ದೇಶದಿಂದ ಈ ವಾಕಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
ಹಿರಿಯ ನಾಗರಿಕರಿಗೆ ಆರೋಗ್ಯದ ಮಹತ್ವವನ್ನು ಮನದಟ್ಟು ಮಾಡಿಸುವುದರ ಜೊತೆಗೆ, ನಾರದ ಜಯಂತಿಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಸುಮಾರು 3 ಕಿಲೋಮೀಟರ್ ದೂರದ ವಾಕಿಂಗ್ ಸ್ಪರ್ಧೆಯಲ್ಲಿ ಮಹಿಳಾ ಮತ್ತು ಪುರುಷರ ವಿಭಾಗಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಗಿದ್ದು, ಪ್ರಥಮ ಬಹುಮಾನವಾಗಿ ₹3,333, ದ್ವಿತೀಯ ಬಹುಮಾನವಾಗಿ ₹2,222 ಮತ್ತು ತೃತೀಯ ಬಹುಮಾನವಾಗಿ ₹1,111 ನೀಡಲಾಯಿತು. ಜೊತೆಗೆ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಪುರುಷರ ವಿಭಾಗದಲ್ಲಿ ನಿಂಗಪ್ಪ ಸಿ ಪ್ರಥಮ ಸ್ಥಾನ ಪಡೆದರೆ, ಶಾಂತಕುಮಾರ್ ದ್ವಿತೀಯ ಹಾಗೂ ಸುಧಾಕರ್ ಸಿ. ಆರ್. ತೃತೀಯ ಸ್ಥಾನ ಪಡೆದರು.
ಮಹಿಳಾ ವಿಭಾಗದಲ್ಲಿ ಮಂಜುಳಾ ಟಿ ಪ್ರಥಮ, ತಾರಾ ಎಸ್ ದ್ವಿತೀಯ ಮತ್ತು ಹೆಚ್. ಎಂ. ಪುಷ್ಪಲತಾ ತೃತೀಯ ಸ್ಥಾನ ಗಳಿಸಿದರು.
ಈ ವಯಸ್ಸಿನಲ್ಲಿಯೂ ಹಿರಿಯರು ತೋರಿದ ಉತ್ಸಾಹ, ಶಕ್ತಿ ಮತ್ತು ಸ್ಪರ್ಧಾತ್ಮಕ ಮನೋಭಾವ ಎಲ್ಲರಲ್ಲೂ ಪ್ರೇರಣೆ ಮೂಡಿಸಿತು. ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ಸಾರ್ವಜನಿಕರು ಹಿರಿಯರ ಚುರುಕುತನವನ್ನು ಮೆಚ್ಚಿ ಕೊಂಡಾಡಿದರು.
ಈ ಕುರಿತು ಈಟಿವಿ ಭಾರತಕ್ಕೆ ಕಾರ್ಯಕ್ರಮ ಆಯೋಜಕ ಪ್ರೀತೇಶ್ ಪ್ರತಿಕ್ರಿಯೆ ನೀಡಿದ್ದು, 'ನಾವು ಈ ದಿನ ವಿಶೇಷವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಈ ಕಾರ್ಯಕ್ರಮದ ಹೆಸರು ತ್ರಿಲೋಕ ಸಂಚಾರ. ಇಂದು ನಾರದ ಜಯಂತಿ ಇರುವ ಕಾರಣ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನಾರದರು ಎಂದರೆ ತಕ್ಷಣ ನಮಗೆ ನೆನಪಿಗೆ ಬರುವುದು ನಾಮಸ್ಮರಣೆ ಹಾಗೂ ತ್ರಿಲೋಕ ಸಂಚಾರ. ಎರಡು ಕೂಡ ಹಿರಿಯರಿಗೆ ಅತ್ಯಂತ ಪ್ರಮುಖವಾದ ವಿಚಾರವಾಗಿದೆ. ನಾಮಸ್ಮರಣೆಯನ್ನು ಮಾಡಿದರೆ ಮನಸ್ಸಿನಲ್ಲಿ ಇರುವ ಗೊಂದಲ ಹೋಗುತ್ತದೆ ಹಾಗೂ ನೆಮ್ಮದಿಯಿಂದ ಇರಬಹುದಾಗಿದೆ. ತ್ರಿಲೋಕ ಸಂಚಾರ ಎಂದರೆ ವಾಕಿಂಗ್ ಮಾಡುವುದು. ಈ ನೆಲೆಯಲ್ಲಿ ವಾಕಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ, ವಿಶೇಷ ಅನುಭವ ಉಂಟಾಯಿತು' ಎಂದು ತಿಳಿಸಿದರು.
ಇದನ್ನೂ ಓದಿ : ಕ್ರೀಡಾಪಟು, ಕ್ರೀಡಾಭಿಮಾನಿಗಳಿಗೆ ಗುಡ್ನ್ಯೂಸ್: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ತಲೆಎತ್ತಲಿದೆ ವೀಕ್ಷಣಾ ಗ್ಯಾಲರಿ

