ಗದಗ: ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ತಂದೆಯನ್ನ ಕೊಂದು ಠಾಣೆಗೆ ಶರಣಾದ ಮಗ
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನು ಕೊಲೆ ಮಾಡಿದ ಮಗ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

Published : February 28, 2026 at 2:05 PM IST
ಗದಗ: ಕುಡಿದು ಮನೆಗೆ ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ತಂದೆಯನ್ನು ಮಗನೇ ಹೊಡೆದು ಕೊಂದು, ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಶಂಕರಗೌಡ ದ್ಯಾಮನಗೌಡ್ರ (60) ಎಂದು ಗುರುತಿಸಲಾಗಿದೆ. ಆರೋಪಿತ ಮಗ ಪ್ರಭು ದ್ಯಾಮನಗೌಡ್ರ (23). ಶನಿವಾರ ರಾತ್ರಿ ಮದ್ಯದ ಮತ್ತಿನಲ್ಲಿ ಮನೆಗೆ ಬಂದ ಶಂಕರಗೌಡ ಗಲಾಟೆ ಆರಂಭಿಸಿದ್ದರಿಂದ ತಂದೆ – ಮಗನ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಪ್ರಭು ಕೈಯಿಂದಲೇ ತಂದೆಯ ತಲೆ ಹಾಗೂ ಮರ್ಮಾಂಗಗಳಿಗೆ ಬಲವಾಗಿ ಹೊಡೆದ ಪರಿಣಾಮ ಶಂಕರಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಪ್ರಭು ಸ್ವಯಂ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕುಡಿದು ಪದೇಪದೇ ಕಾಟ ಕೊಡುತ್ತಿದ್ದ ಕಾರಣಕ್ಕೆ ಹೊಡೆದು ಕೊಲೆ ಮಾಡಿದ್ದೇನೆ ಎಂದು ಪ್ರಾಥಮಿಕ ಹೇಳಿಕೆ ನೀಡಿದ್ದಾನೆ. ಜೊತೆಗೆ ತಂದೆ –ಮಗನ ನಡುವೆ ಎರಡು ಎಕರೆ ಜಮೀನಿನ ಹಂಚಿಕೆ ವಿಚಾರವಾಗಿ ವೈಮನಸ್ಸು ಇತ್ತು ಎನ್ನಲಾಗಿದ್ದು, ಆಸ್ತಿ ವಿವಾದವೂ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ: ಯುವಕನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಮಹ್ಮದ್ ಫಾರೂಕ್ ಶೇಖ್ ಸನದಿ (25) ಎಂದು ಗುರುತಿಸಲಾಗಿದೆ.
ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ನಿವಾಸಿಯಾಗಿರುವ ಮಹ್ಮದ್ ಫಾರೂಕ್ ಶೇಖ್ ಸನದಿ ಸದ್ಯ ಶಿಗ್ಲಿ ಗ್ರಾಮದಲ್ಲಿ ವಾಸವಾಗಿದ್ದ. ಇದೀಗ ಲಕ್ಷ್ಮೇಶ್ವರ ಸಮೀಪದ ಜಮೀನೊಂದರಲ್ಲಿ ಆತನ ಶವ ಪತ್ತೆಯಾಗಿದೆ.
ಕಿಡಿಗೇಡಿಗಳು ಕತ್ತು ಕೊಯ್ದು ಯುವಕನ ಹತ್ಯೆ ನಡೆಸಿ, ಬಳಿಕ ಶವವನ್ನು ಹೊಲದಲ್ಲಿ ಬಿಸಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಹಲವು ಸುಳಿವುಗಳನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ: ಆಸ್ತಿಗಾಗಿ ಪತಿ ಕೊಲೆ ಮಾಡಿಸಿದ ಪತ್ನಿ! ಪುತ್ರ ಸೇರಿ ನಾಲ್ವರ ಬಂಧನ: ಕೊಲೆ ಕೇಸ್ ಬೇಧಿಸಿದ ಕಿತ್ತೂರು ಪೊಲೀಸರು

