ETV Bharat / state

ಮಾರಿಷಸ್‌ನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ಯುವಕ ಸಾವು

ಮಾರಿಷಸ್ ನಲ್ಲಿ ಜಲಪಾತ ವೀಕ್ಷಣೆಗೆ ಹೋಗಿದ್ದ ಸುಳ್ಯದ ಯುವಕ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ನಂದನ್ ಎಸ್.ಭಟ್
ನಂದನ್ ಎಸ್.ಭಟ್ (ETV Bharat)
author img

By ETV Bharat Karnataka Team

Published : October 15, 2025 at 10:49 PM IST

2 Min Read
Choose ETV Bharat

ಸುಳ್ಯ(ದಕ್ಷಿಣ ಕನ್ನಡ): ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಸುಳ್ಯದ ನಾಲ್ಕೂರು ಗ್ರಾಮದ ಹಲ್ಗುಜಿ ಜಯಲಕ್ಷ್ಮಿ ಎಂಬವರ ಪುತ್ರ ನಂದನ್ ಎಸ್.ಭಟ್ (26) ಮೃತರು. ಇವರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ನಂದನ್ ಮಾರಿಷಸ್‌ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಟೂರಿಸಮ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿ ವೀಸಾದಲ್ಲಿದ್ದ ಅವರು ಸೋಮವಾರ ಅಲ್ಲಿನ ಜಲಪಾತ ವೀಕ್ಷಣೆಗೆ ಹೋಗಿದ್ದು, ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸೋಮವಾರ ರಾತ್ರಿ ವೇಳೆಗೆ ಘಟನೆಯ ಮಾಹಿತಿ ಮನೆಯವರಿಗೆ ಸಿಕ್ಕಿದೆ.

ಮೃತದೇಹವನ್ನು ಅಲ್ಲಿನ ಸರಕಾರಿ ವ್ಯವಸ್ಥೆಗಳ ಮೂಲಕ ಹಾಗೂ ಭಾರತ ಸರಕಾರದ ಸಹಾಯದಿಂದ ಕರೆತರಲು ವ್ಯವಸ್ಥೆ ಮಾಡುವಂತೆ ಯುವಕನ ತಾಯಿಯ ತಮ್ಮ ಕಾರ್ಕಳದ ಸತ್ಯನಾರಾಯಣ ಭಟ್ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿ ಪೂರಕ ಕ್ರಮಕ್ಕೆ ವಿನಂತಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರೂ ಕೂಡ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ.

ಪತ್ನಿಯನ್ನು ಅರಿವಳಿಕೆ ನೀಡಿ ಕೊಂದ ವೈದ್ಯ ಬಂಧನ: ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ವೈದ್ಯೆಯೊಬ್ಬರ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಫ್ಎಸ್ಎಲ್ ವರದಿಯ ಹಿನ್ನೆಲೆಯಲ್ಲಿ ವೈದ್ಯೆ ಪತ್ನಿಗೆ ಅರಿವಳಿಕೆ ಔಷಧಿ ನೀಡಿ ಕೊಲೆಗೈದ ಗಂಭೀರ ಆರೋಪದ ಮೇಲೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಆರಂಭದಲ್ಲಿ ಯುಡಿಆರ್ (ಅನೈಸರ್ಗಿಕ ಸಾವು ವರದಿ)​ ದಾಖಲಿಸಿದ್ದ ಮಾರತ್​ಹಳ್ಳಿ ಠಾಣೆ ಪೊಲೀಸರು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದಾರೆ. ಈ ಪ್ರಕರಣದ ಕುರಿತು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ವಿವರವಾದ ಮಾಹಿತಿ ನೀಡಿದರು.

ಡಾ.ಕೃತಿಕಾ ಎಂ.ರೆಡ್ಡಿ ಅವರ ಸಾವಿನ ಆರು ತಿಂಗಳ ಬಳಿಕ ಎಫ್ಎಸ್ಎಲ್ ವರದಿಯಲ್ಲಿ ಅಸಲಿ ಸತ್ಯ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

"ಕೃತಿಕಾ ಎಂ.ರೆಡ್ಡಿ ಅವರನ್ನು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ 2025ರ ಏಪ್ರಿಲ್​ 21ರಂದು ಮಾರತ್ತಹಳ್ಳಿ ವ್ಯಾಪ್ತಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ರೋಗಿಯನ್ನು ಪರೀಕ್ಷಿಸಿದ್ದ ವೈದ್ಯರು, ಈಗಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗ ಯುಡಿಆರ್ ಪ್ರಕರಣ ದಾಖಲಾಗಿತ್ತು. ಬಳಿಕ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ ಸೋಕೋ (ಎಸ್.ಒ.ಸಿ.ಒ) ತಂಡದವರು ಸ್ಥಳ ಪರಿಶೀಲನೆ ನಡೆಸಿ ಘಟನಾ ಸಂದರ್ಭದಲ್ಲಿ ಬಳಕೆಯಾಗಿದ್ದ ಕ್ಯಾನೂಲಾ ಸೆಟ್, ಇಂಜೆಕ್ಷನ್ ಟ್ಯೂಬ್ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ಮೃತದೇಹದಿಂದ ವಿಸೆರಾ ಮಾದರಿಗಳನ್ನು ಸಂಗ್ರಹಿಸಿ ಎಫ್​ಎಸ್​​ಎಲ್​ಗೆ ಕಳುಹಿಸಲಾಗಿತ್ತು. ಎಫ್​ಎಸ್​​ಎಲ್​​ನ ತಜ್ಞರು ವಿಸೆರಾ ಮಾದರಿಗಳನ್ನು ಪರೀಕ್ಷಿಸಿ, ಮೃತಳ ದೇಹದ ಅಂಗಾಂಗಗಳಲ್ಲಿ ಈ ಅರಿವಳಿಕೆ (Propofol) ಪದಾರ್ಥ ಪತ್ತೆಯಾಗಿದೆ. ಬಳಿಕ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ, ವೃತ್ತಿಯಲ್ಲಿ ವೈದ್ಯನಾದ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿ, ಕೊಲೆ ಮಾಡಿರಬಹುದೆಂದು 13/10/2025ರಂದು ದೂರು ಸಲ್ಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಉಡುಪಿಯ ಮಣಿಪಾಲದಿಂದ ಬಂಧಿಸಿದ್ದಾರೆ" ಎಂದು ಆಯುಕ್ತರು ಮಾಹಿತಿ ನೀಡಿದರು.

ಈ ಪ್ರಕರಣದ ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು.

ಇದನ್ನೂ ಓದಿ: 6 ತಿಂಗಳ ಹಿಂದೆ ನಡೆದ ವೈದ್ಯೆಯ ಸಾವಿನ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್​: ಅರಿವಳಿಕೆ ನೀಡಿ ಕೊಂದ ಆರೋಪದಲ್ಲಿ ವೈದ್ಯ ಪತಿ ಬಂಧನ