ಏರ್ ಗನ್‌ನಿಂದ ಅಚಾನಕ್ಕಾಗಿ ಉದ್ಯಮಿಗೆ ಗುಂಡು ತಗುಲಿದ ಪ್ರಕರಣ: ಕಾನೂನು ವಿದ್ಯಾರ್ಥಿ ಬಂಧನ
ಉದ್ಯಮಿ ಏರ್ ಗನ್‌ನಿಂದ ಅಚಾನಕ್ಕಾಗಿ ಗುಂಡು ತಗುಲಿ ಗಾಯಗೊಂಡಿದ್ದು, ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Published : December 14, 2025 at 7:30 AM IST
ಬೆಂಗಳೂರು: ನಗರದ ಬಸನನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣರಾವ್ ಪಾರ್ಕ್ ನಲ್ಲಿ ಉದ್ಯಮಿ ಮೇಲೆ ಏರ್ ಗನ್ ನಿಂದ ಗುಂಡು ಹಾರಿಸಿದ ಆರೋಪದಡಿ ಕಾನೂನು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಮೊಹಮ್ಮದ್ ಅಫ್ಜಲ್ ಬಂಧಿತ ವಿದ್ಯಾರ್ಥಿ.
ಡಿ.10 ರಂದು ಸಂಜೆ ಪಾರ್ಕ್ ನಲ್ಲಿ ಉದ್ಯಮಿ ರಾಜಗೋಪಾಲ್ ಎಂಬುವರು ವಾಯು ವಿಹಾರ ಮಾಡುತ್ತಿದ್ದಾಗ ಕುತ್ತಿಗೆ ಹಿಂಭಾಗಕ್ಕೆ ಏರ್ ಗನ್ ನಿಂದ ಹಾರಿದ ಗುಂಡು ತಗುಲಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡ ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಡಿಸೆಂಬರ್ 10ರ ರಾತ್ರಿ 8:30ರ ಸುಮಾರಿನಲ್ಲಿ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಬಳಿ ಈ ಘಟನೆ ನಡೆದಿತ್ತು. ನರ್ತಕಿ ಹಾಗೂ ಕಾರ್ಗಿಲ್ ಬಾರ್ ಮಾಲೀಕ ರಾಜಗೋಪಾಲ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ಏರ್ ಗನ್ ಗುಂಡು ಅವರ ಕತ್ತಿನ ಭಾಗಕ್ಕೆ ತಗುಲಿ ಗಾಯವಾಗಿತ್ತು. ತಕ್ಷಣವೇ ಅವರನ್ನು ಜಯನಗರದ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸರು ತನಿಖೆ ಕೈಗೊಂಡಾಗ, ಗಾಯಗೊಂಡ ಉದ್ಯಮಿ ರಾಜಗೋಪಾಲ್ ಅವರಿಗೆ ಯಾರ ಮೇಲೂ ಅನುಮಾನವಿರಲಿಲ್ಲ. ತಮಗೆ ಯಾವುದೇ ಬೆದರಿಕೆ ಕರೆಗಳು ಬಂದಿರಲಿಲ್ಲ, ಹಾಗೂ ಫೈರಿಂಗ್ ಯಾಕೆ ನಡೆಯಿತು ಅಥವಾ ಯಾರು ಮಾಡಿದರು ಎಂಬುದು ಸಹ ತಿಳಿದಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು. ದೂರುದಾರರು ನೀಡಿದ ಮಾಹಿತಿ ಆಧರಿಸಿ ಬಸವನಗುಡಿ ಪೊಲೀಸರು ತನಿಖೆ ಮುಂದುವರಿಸಿದ್ದರು.
ಗಾಯಾಳು ರಾಜಗೋಪಾಲ್ ಅವರಿಂದ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಾಗದಿದ್ದಾಗ, ಗುಂಡು ಎಲ್ಲಿಂದ ಬಂದಿರಬಹುದು ಎಂದು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದರು. ಗುಂಡು ಬಂದಿರುವ ಸಾಧ್ಯತೆಯಿರುವ ವಿವಿಧ ಕೋನಗಳನ್ನು ಪರಿಶೀಲಿಸಿದಾಗ, ಅದು ಹೊರಗಿನಿಂದ ಬಂದಿರುವ ಬಗ್ಗೆ ಅನುಮಾನ ವ್ಯಕ್ತವಾಯಿತು. ಆ ರಸ್ತೆಯಲ್ಲಿನ ಕೆಲವು ಫ್ಲಾಟ್‌ಗಳನ್ನು ಪರಿಶೀಲಿಸಿದಾಗ, ಅಫ್ಜಲ್ ಎಂಬಾತನ ಫ್ಲಾಟ್‌ನಿಂದ ಗುಂಡು ಹಾರಿಸಿರುವುದು ಪತ್ತೆಯಾಯಿತು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ, ಆರೋಪಿ ಅಫ್ಜಲ್ ಕಾನೂನು ವಿದ್ಯಾರ್ಥಿಯಾಗಿದ್ದು, ತನ್ನ ಫ್ಲಾಟ್‌ನಲ್ಲಿ ಏರ್ ಗನ್‌ನಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕಿಟಕಿಯ ಬಳಿ ಗುರಿ ಇಟ್ಟು ಅಭ್ಯಾಸ ಮಾಡುತ್ತಿದ್ದಾಗ, ಗುಂಡು ಗುರಿ ತಪ್ಪಿ ಹೊರಗೆ ಹೋಗಿದೆ. ಅದೇ ಸಮಯದಲ್ಲಿ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ರಾಜಗೋಪಾಲ್ ಅವರಿಗೆ ಆ ಗುಂಡು ತಗುಲಿ ಗಾಯಗಳಾಗಿವೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಪ್ರೇಮಿಗಳಿಗೆ ಸಪೋರ್ಟ್ ಮಾಡಿದರೆಂದು ಚಾಕುವಿನಿಂದ ಇರಿದು ಇಬ್ಬರ ಕೊಲೆ: ಐವರ ಬಂಧನ

