ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ: ಮೂರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ
ಮಳೆಯ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯಲ್ಲಿ ಇಂದು ರಜೆ ಘೋಷಿಸಲಾಗಿದೆ.

Published : July 7, 2026 at 7:19 AM IST
ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದರಿಂದ ಜಿಲ್ಲೆಯ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯಲ್ಲಿ ಶಾಲಾ ಕಾಲೇಜುಗಳಿಗೆ ಇಂದು (ಮಂಗಳವಾರ) ರಜೆ ಘೋಷಿಸಲಾಗಿದೆ.
ಸಾಗರದಲ್ಲಿ ಶಾಲೆಗಳಿಗೆ ಮಾತ್ರ ರಜೆ; ಸಾಗರ ತಾಲೂಕಿನಲ್ಲಿ ಕೇವಲ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಕಾಲೇಜು, ಡಿಪ್ಲೋಮೊ ತರಗತಿಗಳು ಎಂದಿನಂತೆ ನಡೆಯಲಿವೆ. ಉಳಿದಂತೆ ಮಳೆ ಹೆಚ್ಚಿರುವ ಕಾರಣಕ್ಕೆ ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸಾಗರ ತಹಶೀಲ್ದಾರ್ ಪ್ರತಿಭಾ ಅವರು ಕೇವಲ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿದ್ದಾರೆ. ಕಾಲೇಜುಗಳು, ಡಿಪ್ಲೋಮಾ ತರಗತಿಗಳು ಎಂದಿನಂತೆ ನಡೆಯಲಿದೆ. ಹೊಸನಗರ ತಹಶೀಲ್ದಾರ್ ಭರತ್ ರಾಜ್ ಅವರು ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಶೈಕ್ಷಣಿಕ ತರಗತಿಗಳಿಗೆ ರಜೆ ಘೋಷಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಇಂದು ರಜೆ ಘೋಷಿಸಲಾಗಿದೆ. ತಾಲೂಕಿನಾದ್ಯಂತ ಎಲ್ಲಾ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ರಂಜಿತ್ ಅವರು ಆದೇಶ ಹೊರಡಿಸಿದ್ದಾರೆ. ಮಂಗಳವಾರ ನೀಡುವ ರಜೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ತರಗತಿ ತೆಗೆದುಕೊಂಡು ಸರಿದೂಗಿಸಬೇಕೆಂದು ಸೂಚಿಸಲಾಗಿದೆ.
ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ : ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಬೆಳಗಾವಿ ತಾಲೂಕು ಮತ್ತು ಖಾನಾಪುರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ/ಪ್ರೌಢಶಾಲೆಗಳು ಹಾಗೂ ಪಿಯುಸಿ (12ನೇ ತರಗತಿಯವರೆಗಿನ) ಕಾಲೇಜುಗಳಿಗೆ ಮಂಗಳವಾರ(ಜುಲೈ 7) ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ತಾಲೂಕುಗಳಾದ ಚಿಕ್ಕೋಡಿ ಹಾಗೂ ನಿಪ್ಪಾಣಿಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿವೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬರೋಬ್ಬರಿ 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರ ಜೊತೆಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದಲೂ ಸುಮಾರು 40 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
ಇದನ್ನೂ ಓದಿ : ಮುಂದುವರಿದ ಮಳೆ ಆರ್ಭಟ: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

