ವ್ಹೀಲ್ ಚೇರ್, ಗೂಡಂಗಡಿಯೇ ಆಧಾರ; 3 ತಿಂಗಳಿನಿಂದ ಮಾಸಾಶನವೂ ಇಲ್ಲ; ಈ ಏಕಾಂಗಿ ವಿಕಲಚೇತನನಿಗೆ ಬೇಕಿದೆ ನೆರವು!
ದಾವಣಗೆರೆಯ ಈ ವ್ಯಕ್ತಿ ತನ್ನ ನಿತ್ಯ ಕರ್ಮಗಳನ್ನೂ ಮಾಡಲು ಅಸಾಧ್ಯದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರ ಜೀವನ ಬಂಡಿಯ ಕುರಿತು ನಮ್ಮ ರಿಪೋರ್ಟರ್ ನೂರುಲ್ಲಾ .ಡಿ. ಅವರ ವಿಶೇಷ ವರದಿ ಇಲ್ಲಿದೆ.

Published : May 30, 2026 at 2:38 PM IST
ದಾವಣಗೆರೆ: ಹುಟ್ಟಿನಿಂದಲೇ ವಿಕಲಚೇತನ, ತನ್ನವರಿಂದಲೂ ದೂರ. ಆದರೆ ಬದುಕುವ ಆಸೆಗೆ ಬಲವಾಗಿದ್ದು ಛಲವೊಂದೇ... ಪುಟ್ಟ ಬದುಕು ಕಟ್ಟಿಕೊಂಡು ತಿಂಗಳಿಗೆ ಬರುವ 1400 ರೂಪಾಯಿ ಪೆನ್ಷನ್ (ಮಾಸಾಶನ)ದಲ್ಲಿ ಜೀವನ ಸಾಗಿಸುತ್ತಿದ್ದಾರೆ ಈ ಬಡಪಾಯಿ.
ಹೌದು.. ಯಲ್ಲಮ್ಮ ನಗರದ ನಿವಾಸಿ ವೆಂಕಟ ಸುರೇಶ್ ಅವರು ಹುಟ್ಟಿನಿಂದಲೇ ವಿಕಲಚೇತನರು. ತಮ್ಮ ಸಣ್ಣ ಗೂಡಂಗಡಿ ನಂಬಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಮೂರು ತಿಂಗಳಿಂದ ಮಾಸಾಶನ ಬರದೇ ಸುರೇಶ್ ಅವರು ಕಂಗೆಟ್ಟಿದ್ದಾರೆ. ಮೂರು ಸಾವಿರ ರೂ. ಮನೆ ಬಾಡಿಗೆ ಕಟ್ಟಲಾಗದೆ ಹೈರಾಣಾಗಿದ್ದಾರೆ.
ವ್ಹೀಲ್ ಚೇರ್ ಜೊತೆ ಜೀವನ-ಸ್ನೇಹಿತನೇ ಆಸರೆ: ಸ್ವತಂತ್ರವಾಗಿ ಜೀವನ ಸಾಗಿಸುತ್ತಿರುವ ವೆಂಕಟ ಸುರೇಶ್ ಅವರಿಗೆ ದಾನಿಗಳು ನೀಡಿದ ಎಲೆಕ್ಟ್ರಿಕ್ ವ್ಹೀಲ್ ಚೇರ್ ಆಧಾರ ಸ್ತಂಭವಾಗಿದೆ. ಇದರ ಮೂಲಕವೇ ಎಸ್ಎಸ್ ಬಡಾವಣೆಯ ಗಂಗೂಬಾಯಿ ಹಾನಗಲ್ ಉದ್ಯಾನವನದ ಮುಂಭಾಗದಲ್ಲಿರುವ ತಮ್ಮ ಗೂಡಂಗಡಿಗೆ ತೆರಳಿ ದುಡಿಯುತ್ತಾರೆ. ಸ್ನಾನ ಮಾಡಲು, ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲೂ ಅಸಾಧ್ಯ. ಹಾಗಾಗಿ ಅವರ ಸ್ನೇಹಿತ ಪ್ರಕಾಶ್ ಎಂಬುವರು ಸ್ನಾನ ಮಾಡಿಸುವುದು, ಬಟ್ಟೆ ತೊಡಿಸುವುದು ಎಲ್ಲಾ ಕೆಲಸ ಮಾಡಿಕೊಡುತ್ತಿದ್ದಾರೆ. ಅಪ್ಪು ಅಭಿಮಾನಿಯೂ ಆಗಿರುವ ವೆಂಕಟ ಸುರೇಶ್ ಅವರು ಸದ್ಯ ದಾನಿಗಳ ಸಹಾಯಕ್ಕೆ ಕಾಯುತ್ತಿದ್ದಾರೆ.
ತಮ್ಮ ಸಂಕಷ್ಟದ ಜೀವನದ ಕುರಿತು ಈಟಿವಿ ಭಾರತ ವೆಂಕಟ ಸುರೇಶ್ ಅವರು ಮಾತನಾಡಿ, "ನನ್ನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ನನಗೆ ಈಗ ಬಂಧುಬಳಗ ಯಾರೂ ಇಲ್ಲ, ಎಲ್ಲಾ ದೂರವಾಗಿದ್ದಾರೆ. ನಾಳೆ ಏನೇ ಆದರೂ ನೋಡಿಕೊಳ್ಳುವವರಿಲ್ಲ, ಅಂತಹ ಜೀವನ ಮಾಡುತ್ತಿದ್ದೇನೆ. ಮನೆ, ಮಠ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ಆಶ್ರಮಕ್ಕೆ ಸೇರಿಕೊಲ್ಳೋಣ ಎಂದರೇ ಅವರು ನಿಮ್ಮ ವೈಯಕ್ತಿಕ ಕೆಲಸ ನೀವೆ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ. ವೈಯಕ್ತಿಕ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿಲ್ಲಿ ನಾನಿಲ್ಲ. ಮನೆ ಬಾಡಿಗೆ 3 ಸಾವಿರ ರೂ. ಇದ್ದು, ನನಗೆ ಸರ್ಕಾರದಿಂದ ಬರುತ್ತಿರುವ ಮಾಸಾಶನ 1400 ರೂ, ಆದರೆ ಮೂರು ತಿಂಗಳಿಂದ ಅದು ಬಂದಿಲ್ಲ, ಹೀಗಾಗಿ ಮನೆ ಬಾಡಿಗೆ ಕಟ್ಟಿಲ್ಲ. ಸರ್ಕಾರ ನಮ್ಮ ಮಾಸಾಶನ ಹೆಚ್ಚು ಮಾಡಿಲ್ಲ. ದಿನಕ್ಕೆ ನೂರಾರು ರೂಪಾಯಿ ಖರ್ಚು ಇದೆ. ಜೀವನ ನಡೆಸಲು ಪುಟ್ಟ ಗೂಡಂಗಡಿ ಮಾಡಿಕೊಂಡಿದ್ದು, 12 ವರ್ಷಗಳು ಕಳೆದಿವೆ. ಕೆಲವರು ಧನ ಸಹಾಯ ಮಾಡಿದ್ದು, ಅದರಲ್ಲೇ ಅಂಗಡಿ ನಡೆಸುತ್ತಿದ್ದೇನೆ" ಎಂದು ಅಳಲು ತೋಡಿಕೊಂಡರು.

ದುಸ್ಥಿತಿಗೆ ತಲುಪಿರುವ ವ್ಹೀಲ್ ಚೇರ್: "ಬೀದಿ ಪಾಲಾಗುವ ಹಂತಕ್ಕೆ ಬಂದಿದ್ದೇನೆ. ಗೂಡಂಗಡಿ ಮಾಡಿದ್ದು ಅದರಲ್ಲೂ ಬದುಕು ನಡೆಸಲು ಆಗುತ್ತಿಲ್ಲ. 50 ರೂಪಾಯಿ ದುಡಿದ್ರೇ ಅದು ಊಟಕ್ಕಷ್ಟೇ ಸಾಕಾಗುತ್ತದೆ. ನನಗೆ ಹೋಗಲು ಬರಲು ಅನುಕೂಲ ಆಗಿರುವ ಎಲೆಕ್ಟ್ರಿಕ್ ವ್ಹೀಲ್ ಚೇರ್ಅನ್ನು ಸಹ ದಾನಿಗಳು ಕೊಟ್ಟಿದ್ದು, ಅದು ಕೂಡ ಹಾಳಾಗಿದೆ. ಬಹಳ ಜನ ಫೋಲ್ಡಿಂಗ್ ವ್ಹೀಲ್ ಚೇರ್ ಕೊಡಲು ಬಂದರು, ಆದರೆ ಅದು ನನಗೆ ಉಪಯೋಗ ಆಗಲ್ಲ. ಬದಲಿಗೆ ಎಲೆಕ್ಟ್ರಿಕ್ ವ್ಹೀಲ್ ಚೇರ್ ಅವಶ್ಯಕತೆ ಇದೆ. ಯಾರಾದರು ದಾನ ಮಾಡಿದ್ರೇ, ಇನ್ನು 10 ವರ್ಷ ಬದುಕಲು ಸಹಕಾರಿ ಆಗಲಿದೆ" ಎಂದು ಬೇಡಿಕೊಂಡರು.

ಪುನೀತ್ ರಾಜಕುಮಾರ್ ಅಭಿಮಾನಿ: "ನಾನು ಪಕ್ಕ ದಿ. ಪುನೀತ್ ರಾಜಕುಮಾರ್ ಅಭಿಮಾನಿ. ದಿನಾಲೂ ಅಂಗಡಿ ತೆರೆದಾಗ ಅಪ್ಪು ಅವರ ಫೋಟೊ ನೋಡಿಯೇ ವ್ಯಾಪಾರ ಆರಂಭ ಮಾಡುವುದು. ಅಪ್ಪು ಅವರು ಜೀವಂತವಾಗಿ ಇದ್ದಿದ್ದರೆ ಅವರು ಸಹಾಯ ಮಾಡ್ತಿದ್ರೋ ಏನೋ, ಆ ಅದೃಷ್ಟ ನನಗೆ ಲಭಿಸಲಿಲ್ಲ. ಇಲ್ಲಿಂದ ಒಂದು ಕಿಮೀ ಹೋಗುವುದೇ ನನಗೆ ಕಷ್ಟ. ಅಂತಹದರಲ್ಲಿ ಬೆಂಗಳೂರಿಗೆ ಹೋಗುವುದು ಅಸಾಧ್ಯದ ಮಾತು. ಅವರ ಕುಟುಂಬಸ್ಥರನ್ನು ಭೇಟಿ ಮಾಡಲು ಸಾಧ್ಯ ಆಗ್ತಿಲ್ಲ. ಆದ್ದರಿಂದ ಅಪ್ಪು ಅವರ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತಾ ಜೀವನ ಸಾಗಿಸುತ್ತಿದ್ದೇನೆ. ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಬಳಿ ಕಷ್ಟ ಹೇಳಿಕೊಂಡು ಸಹಾಯ ಕೇಳುವ ಹಂಬಲ ಇದೆ. ಆದರೇ ಅವರ ವಿಳಾಸ, ದೂರವಾಣಿ ಕರೆ ಮಾಡಲು ಆಗುತ್ತಿಲ್ಲ. ನನಗೆ ಬೇರೆಯವರ ಸಹಾಯ ಬೇಕೇ ಬೇಕು" ಎಂದು ಮನವಿ ಮಾಡಿದರು.

ಲಾಕ್ಡೌನ್ನಲ್ಲಿ ನಟ ಉಪೇಂದ್ರ ಸಹಾಯ: "ಲಾಕ್ ಡೌನ್ ಸಮಯದಲ್ಲಿ ಜೀವನ ನಡೆಸುವುದು ಬಹಳ ಕಷ್ಟಕರವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನನ್ನ ಪರಿಸ್ಥಿತಿ ನೋಡಿ ನಟ ಉಪೇಂದ್ರ ಅವರು 10 ಸಾವಿರ ಹಣ ಸಹಾಯ ಮಾಡಿದ್ದರು. ಮೊದಲು ನಾನು ಅಂಗಡಿಯಲ್ಲೇ ಇರುತ್ತಿದ್ದೆ. ಈ ವೇಳೆ ನನ್ನ ಹೊಡೆದು ಇದ್ದಂತಹ ಹಣವನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲು ಮಾಡಿದ್ದೆ."
ಸುರೇಶ್ ಅವರ ಸ್ನೇಹಿತ ಪ್ರಕಾಶ್ ಮಾತನಾಡಿ, "ನಾನು ವೆಂಕಟ ಸುರೇಶ್ ಅವರನ್ನು 6 ವರ್ಷಗಳಿಂದ ನೋಡಿಕೊಳ್ಳುತ್ತಿದ್ದೇನೆ. ನಮ್ಮದು ಚಳ್ಳಕೆರೆ ತಾಲೂಕಿನ ತಳಕು ಗ್ರಾಮ. ದಾವಣಗೆರೆಯಲ್ಲಿ ಖಾಸಗಿ ಕಾಲೇಜಿನಲ್ಲಿ ವಾಚ್ಮನ್ ಆಗಿ ಕೆಲಸ ಮಾಡುವ ವೇಳೆ ಇವರ ಕಷ್ಟ ನೋಡಲಾರದೆ ಅವರಿಗೆ ಸಹಾಯ ಮಾಡುವುದು, ಸ್ನಾನ ಮಾಡಿಸುವುದು ಎಲ್ಲವನ್ನು ನಾನೇ ಮಾಡುತ್ತೇನೆ. ಅವರಿಗೆ ಸಹಕಾರಿಯಾಗಿರುವ ವ್ಹೀಲ್ ಚೇರ್ ಹದಗೆಟ್ಟಿದ್ದು, ಯಾರಾದರೂ ದಾನಿಗಳು ಕೊಡಿಸಬೇಕಾಗಿದೆ. ಅಂಗಡಿಯೇ ಅವರಿಗೆ ಜೀವನಾಧಾರ" ಎಂದು ತಿಳಿಸಿದರು.
ಇದನ್ನೂ ಓದಿ: ರಸ್ತೆಗೆ ಬಿದ್ದ ತಾಯಿ, ಮಗು ರಕ್ಷಣೆಗೆ ಟ್ರಿಪ್ ಕಡಿತಗೊಳಿಸಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಖಾಸಗಿ ಬಸ್ ಸಿಬ್ಬಂದಿ

