ETV Bharat / state

ಪ್ರೀತಿಸುವಂತೆ ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ ; ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಪ್ರೀತಿಸುವಂತೆ ಅಪ್ರಾಪ್ತೆಯ ಮೇಲೆ ಪಾಗಲ್ ಪ್ರೇಮಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

a-crazy-lover-arrested-for-attacked-a-minor-girl-to-make-her-fall-in-love
ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಹಿಡಿದುಕೊಂಡಿರುವ ಸ್ಥಳೀಯರು (ETV Bharat)
author img

By ETV Bharat Karnataka Team

Published : July 5, 2026 at 3:38 PM IST

2 Min Read
Choose ETV Bharat

ಚಿಕ್ಕಮಗಳೂರು : ನಗರದ ಹೃದಯ ಭಾಗದಲ್ಲಿರುವ ಎಸ್‌ಪಿ ಹಾಗೂ ಡಿಸಿ ಕಚೇರಿ ಪಕ್ಕದ ಜಿಲ್ಲಾ ಕ್ರೀಡಾಂಗಣದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಹುಚ್ಚು ಪ್ರೇಮಿಯೊಬ್ಬ ಹಲ್ಲೆ ನಡೆಸಿದ ಘಟನೆ ಆತಂಕ ಸೃಷ್ಟಿಸಿದೆ. ಸಾರ್ವಜನಿಕರ ಸಮಯೋಚಿತ ಮಧ್ಯ ಪ್ರವೇಶದಿಂದ ವಿದ್ಯಾರ್ಥಿನಿ ಅಪಾಯದಿಂದ ಪಾರಾಗಿದ್ದು, ಸ್ಥಳದಿಂದ ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಕಡೂರು ಮೂಲದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿ ವಾಸವಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ರೋಹಿತ್ ಎಂಬ ಯುವಕ ಕೆಲ ದಿನಗಳಿಂದ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಆದರೆ, ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಆತ, ಜಿಲ್ಲಾ ಕ್ರೀಡಾಂಗಣದಲ್ಲಿ ಆಕೆಯನ್ನು ಅಡ್ಡಗಟ್ಟಿ ನೆಲಕ್ಕೆ ಕೆಡವಿ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ಪ್ರೀತಿಸುವಂತೆ ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು (ETV Bharat)

ಘಟನೆಯನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ವಿದ್ಯಾರ್ಥಿನಿಯ ನೆರವಿಗೆ ಧಾವಿಸಿದ್ದಾರೆ. ಸ್ಥಳೀಯರು ಬರುತ್ತಿರುವುದನ್ನು ಕಂಡ ಆರೋಪಿಯು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸಾರ್ವಜನಿಕರು ಬೆನ್ನಟ್ಟಿ ಎಸ್‌ಪಿ ನಿವಾಸದ ಸಮೀಪ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಯ ಕಿರುಕುಳ ಇದೇ ಮೊದಲಲ್ಲ. ಈ ಹಿಂದೆಯೂ ಬಾಲಕಿಯ ಮನೆಗೆ ತೆರಳಿ ಪ್ರೀತಿಸುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಲ್ಲದೆ, ಆಕೆಯ ಪೋಷಕರಿಗೂ ಕರೆ ಮಾಡಿ ಧಮ್ಕಿ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ವಿದ್ಯಾರ್ಥಿನಿ ಉಳಿದುಕೊಂಡಿದ್ದ ಹಾಸ್ಟೆಲ್ ಬಳಿಗೂ ಬಂದು ಗಲಾಟೆ ಮಾಡಿದ್ದರಿಂದ ಹಾಸ್ಟೆಲ್ ವಾರ್ಡನ್ ಕೂಡ ಈ ಬಗ್ಗೆ ವಿದ್ಯಾರ್ಥಿನಿಗೆ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾರ್ವಜನಿಕರ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ನಗರದ ಮಧ್ಯ ಭಾಗದಲ್ಲೇ ನಡೆದಿರುವುದರಿಂದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಮತ್ತೆ ಆತಂಕ ಮೂಡಿದೆ.

ಈ ಕುರಿತು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, 'ಈ ಕುರಿತು ಆರೋಪಿ ರೋಹಿತ್ ಮೇಲೆ ಅಪ್ರಾಪ್ತೆ ದೂರು ನೀಡಿದ್ದು, ಆರೋಪಿಯ ಮೇಲೆ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಾಲಕಿ ನೀಡಿರುವ ಮಾಹಿತಿಯ ಪ್ರಕಾರ ಅಪ್ರಾಪ್ತ ಬಾಲಕಿ ಹಾಗೂ ಆರೋಪಿ ದೂರದ ಸಂಬಂಧಿಕರಾಗಿದ್ದು, ಹಲವು ಬಾರಿ ಇದೇ ರೀತಿ ಮಾಡಿದ್ದ ಎಂಬ ಅಂಶಗಳು ಈಗ ಬೆಳಕಿಗೆ ಬಂದಿವೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ಯುವಕನಾಗಿದ್ದು, ಈತನನ್ನು ಈಗ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಮುಂದುವರಿಸಲಾಗಿದೆ' ಎಂದಿದ್ದಾರೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಉಪನ್ಯಾಸಕನ ಬಂಧನ