ಬಳ್ಳಾರಿಯಲ್ಲಿ 7ನೇ ಶತಮಾನಕ್ಕೆ ಸೇರಿದ ಬಂಡೆಗಲ್ಲು ಶಾಸನ ಪತ್ತೆ
ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಿಂದ ಸುಮಾರು ಆರರಿಂದ ಏಳನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.

Published : May 6, 2026 at 10:16 AM IST
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಬಳಿಯ ಸುಕ್ರದಪ್ಪನ ಬೆಟ್ಟದ ಬಳಿಯ ಹೊಲದಲ್ಲಿ ಬಂಡೆಗಲ್ಲು ಶಾಸನ ಪತ್ತೆಯಾಗಿದೆ.
ಈಗ ಸಿಕ್ಕಿರುವ ಶಾಸನ ನಿಟ್ಟೂರಿನಲ್ಲಿರುವ ಅಶೋಕನ ಶಿಲಾಶಾಸನ ಪತ್ತೆಯಾಗಿರುವ ಸ್ಥಳದಿಂದ ಸುಮಾರು 1 ಕಿ.ಮೀ ದೂರದಲ್ಲಿದೆ. ಈ ಬಂಡೆಗಲ್ಲು ಶಾಸನವನ್ನು ಸಂಶೋಧನಾರ್ಥಿಗಳಾದ ಅಶೋಕ್ ಅಬಕಾರಿ, ಮನೋಹರ ಸಿ.ಎಂ. ಅವರು ಗುರುತಿಸಿ, ಕ್ಷೇತ್ರ ಅಧ್ಯಯನಕ್ಕೆ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಹಾಗೂ ಹಿರೇಬೆಣಕಲ್ ಮಂಜುನಾಥ ದೊಡ್ಡಮನಿ ಅವರ ಗಮನಕ್ಕೆ ತಂದರು.
ಶಾಸನವು ಬೃಹತ್ ಆಕಾರದ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಶಾಸನದಲ್ಲಿ ಸುಮಾರು ಏಳು ಸಾಲುಗಳಿವೆ.
ಈ ಪ್ರದೇಶವನ್ನು ಮೌರ್ಯರ ಆಳ್ವಿಕೆಯನ್ನು ಒಳಗೊಂಡಿರುವ ಪ್ರದೇಶವೆಂದು ಗುರುತಿಸಲಾಗಿತ್ತು. ಸದ್ಯ ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಿಂದ ಸುಮಾರು ಆರರಿಂದ ಏಳನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.
ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನ ನಡೆಸುತ್ತಿದ್ದು, ಶಾಸನದ ಕುರಿತು ಶೀಘ್ರದಲ್ಲಿಯೇ ಮಾಹಿತಿ ಒದಗಿಸಲಾಗುವುದು ಎಂದು ಲಿಪಿತಜ್ಞ ಮಾರುತಿ ಭಜಂತ್ರಿ ತಿಳಿಸಿದ್ದಾರೆ.
ಶಾಸನ ಪತ್ತೆಕಾರ್ಯದಲ್ಲಿ ಸ್ಥಳೀಯ ಇತಿಹಾಸ ಮಂಜುನಾಥ, ಕಾಡಸಿದ್ದ, ಹೊನ್ನೂರ, ಗಂಗಾವತಿಯ ಹರನಾಯಕ, ಚಂದ್ರಶೇಖರ್ ಕುಂಬಾರ, ಮದ್ದಾನೆಪ್ಪ ಹೊಸಳ್ಳಿ ಭಾಗವಹಿಸಿದ್ದರು.
ವಿಜಯನಗರ ಸಾಮ್ರಾಜ್ಯ ಕಾಲದ ಶಾಸನ ಪತ್ತೆ: ವಿರುಪಾಪುರ ವ್ಯಾಪ್ತಿಯ ಹಿರೇಜಂತಕಲ್ ಪ್ರದೇಶದಲ್ಲಿರುವ ವೀರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯೊಂದರ ಮೇಲೆ ವಿಜಯನಗರ ಸಾಮ್ರಾಜ್ಯದ ಕಾಲದ, ಅದರಲ್ಲೂ ಶ್ರೀ ಕೃಷ್ಣ ದೇವರಾಯನ ಆಳ್ವಿಕೆಯ ಕಾಲಘಟ್ಟಕ್ಕೆ ಸೇರಿದ್ದು ಎನ್ನಲಾದ ಶಿಲಾಶಾಸನವೊಂದು ಇತ್ತೀಚೆಗೆ ಪತ್ತೆಯಾಗಿತ್ತು.
ಈ ಶಿಲಾ ಶಾಸನವನ್ನು ಗಂಗಾವತಿ ಚಾರಣ ಬಳಗ ಪತ್ತೆಮಾಡಿದ್ದು, ಹಿರಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಶಾಸನವನ್ನು ಪರಿಶೀಲಿಸಿ ಕಾಲಘಟ್ಟದ ಬಗ್ಗೆ ಅಧ್ಯಯನ ನಡೆಸಿ ದೃಢಪಡಿಸಿದ್ದರು. ವಿಜಯನಗರವನ್ನು ಆಳಿದ ಪ್ರಮುಖ ಅರಸರ ಪೈಕಿ ಪ್ರೌಢದೇವರಾಯ ಮತ್ತು ಸದಾಶಿವದೇವರಾಯನ ಶಾಸನಗಳು ಮಾತ್ರ ಗಂಗಾವತಿಯ ಸುತ್ತಲಿನ ಪ್ರದೇಶದಲ್ಲಿ ಇದುವರೆಗೂ ಸಿಕ್ಕಿದ್ದವು. ಆದರೆ, ಇದೇ ಮೊದಲ ಬಾರಿಗೆ ಶ್ರೀಕೃಷ್ಣದೇವರಾಯನ ಕಾಲಘಟ್ಟಕ್ಕೆ ಸೇರಿದ ಶಾಸನ ಪತ್ತೆಯಾಗಿರುವುದು ಕುತೂಹಲ ಮೂಡಿಸಿತ್ತು.
ಪ್ರಾಕೃತಿಕವಾಗಿ ಸೃಷ್ಟಿಯಾಗಿರುವ ಕಲ್ಲು ಬಂಡೆಯ ಮೇಲೆ ಈ ಶಿಲಾ ಶಾಸನ ಕೆತ್ತಲಾಗಿದೆ. ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಪ್ರಾಕೃತ ಲಿಪಿಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ.
ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಸನವು ಶಾಲಿವಾಹನ 1448ನೆಯ ಸಂವತ್ಸರದ ಮಾಘ ಶುದ್ಧ 7ರ ಕಾಲವನ್ನು ಉಲ್ಲೇಖಿಸುತ್ತದೆ. ಅದು ಪ್ರಸ್ತುತ ಸಾಮಾನ್ಯ ಶಕೆ 1527ಕ್ಕೆ ಸರಿಯಾಗುತ್ತದೆ ಎಂದು ಡಾ.ಶರಣಬಸಪ್ಪ ಕೊಲ್ಕಾರ ತಿಳಿಸಿದ್ದರು.
ಇದನ್ನೂ ಓದಿ: ಕೊಪ್ಪಳ: ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ; ಭೂ ದಾನದ ಉಲ್ಲೇಖ

