ETV Bharat / state

'ಪ್ರತಿದಿನ 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹ'

ಘನತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹಣೆಯಲ್ಲಿಯೂ ಮಹತ್ತರ ಪ್ರಗತಿ ಸಾಧಿಸಲಾಗಿದೆ ಎಂದು ಸಿಇಒ ಕರೀಗೌಡ ತಿಳಿಸಿದ್ದಾರೆ.

Solid Waste Management Limited CEO Karigowda
ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಿಇಒ ಕರೀಗೌಡ (ETV Bharat)
author img

By ETV Bharat Karnataka Team

Published : March 3, 2026 at 10:52 AM IST

3 Min Read
Choose ETV Bharat

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪ್ರಮಾಣದಲ್ಲಿ ಗಣನೀಯ ವೃದ್ಧಿ ಕಂಡುಬಂದಿದ್ದು, ಪ್ರತಿನಿತ್ಯ ಸುಮಾರು 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಸಿಇಒ ಕರೀಗೌಡ ತಿಳಿಸಿದ್ದಾರೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ಸಂಬಂಧಿಸಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರತಿದಿನ ಸರಾಸರಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಸುಮಾರು 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತಿದ್ದು, ಈ ಪ್ರಮಾಣವನ್ನು 1,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಜಾಗೃತಿಗಾಗಿ ಕೈಗೊಂಡ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳ ಪರಿಣಾಮವಾಗಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಇದರೊಂದಿಗೆ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹಣೆಯಲ್ಲಿಯೂ ಮಹತ್ತರ ಪ್ರಗತಿ ಸಾಧಿಸಲಾಗಿದೆ. ಪ್ಲಾಸ್ಟಿಕ್ ವಿಂಗಡಣೆ ಹೆಚ್ಚಿದಂತೆ ಲ್ಯಾಂಡ್‌ಫಿಲ್‌ಗೆ ಸಾಗುವ ತ್ಯಾಜ್ಯದ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಇದು ಘನತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಂಡ ದಿಟ್ಟ ಕ್ರಮಗಳ ಫಲವಾಗಿದೆ ಎಂದು ಹೇಳಿದರು.

ಅಕ್ಟೋಬರ್-2025ಕ್ಕೂ ಮೊದಲು ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (RDF) ಸಂಗ್ರಹಣೆ ಸುಮಾರು ಶೇ. 10ರಷ್ಟಿತ್ತು. ಅಕ್ಟೋಬರ್-2025ರಿಂದ ಜಾರಿಗೆ ತಂದ ಜಾಗೃತಿ ಕಾರ್ಯಕ್ರಮಗಳು ಹಾಗೂ ಕಟ್ಟುನಿಟ್ಟಿನ ಕ್ರಮಗಳ ಫಲವಾಗಿ ಸಂಗ್ರಹಣೆಯ ಪ್ರಮಾಣವು ಸುಮಾರು 50 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಪ್ರತಿದಿನ 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (RDF) ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್ 9ರಿಂದ ಫೆ.26ರವರೆಗೆ ಒಟ್ಟು 19,470 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಟೆಂಡರ್ ಒಪ್ಪಂದದಡಿ ಸಿಮೆಂಟ್ ಘಟಕಗಳಿಗೆ ಸಹ-ಸಂಸ್ಕರಣೆಯ ಮೂಲಕ ವಿಲೇವಾರಿ ಮಾಡಲು ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸ್ವಚ್ಛ ಸರ್ವೇಕ್ಷಣ್ ಗಾಗಿ ರಾಯಭಾರಿಗಳ ನೇಮಕ: ಜಿಬಿಎ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ನಾಗರಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ರಾಯಭಾರಿಗಳಾಗಿ ನೇಮಿಸಲಾಗುತ್ತಿದೆ. ಈ ಸಂಬಂಧ ಟೌನ್ ಹಾಲ್‌ನಲ್ಲಿ ಮಾರ್ಚ್ 9ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಯಭಾರಿಗಳ ಮೂಲಕ ನಗರದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ದಂಡದ ಹಣದಿಂದ ಟ್ರ್ಯಾಕ್ಟರ್ ಖರೀದಿ: ಜಿಬಿಎ ವ್ಯಾಪ್ತಿಯಲ್ಲಿ ರಸ್ತೆಬದಿ ಕಸ ಬಿಸಾಡುವ ಹಾಗೂ ಕಸ ವಿಂಗಡಿಸದೆ ನೀಡುವವರಿಂದ ಪ್ರತಿ ತಿಂಗಳು ಸರಾಸರಿ ರೂ. 60 ಲಕ್ಷ ದಂಡ ಸಂಗ್ರಹಿಸಲಾಗುತ್ತಿದೆ. ಈ ದಂಡದ ಹಣದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಟ್ರ್ಯಾಕ್ಟರ್ ಖರೀದಿಸಲಾಗಿದೆ. ಟ್ರ್ಯಾಕ್ಟರ್‌ಗಳ ಮೂಲಕ ಬಲ್ಕ್ ವೇಸ್ಟ್ ತೆರವುಗೊಳಿಸಲಾಗುತ್ತಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ 6,000 ಮೆಟ್ರಿಕ್ ಟನ್‌ಕ್ಕಿಂತ ಹೆಚ್ಚು ಬಲ್ಕ್ ವೇಸ್ಟ್ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ ಜಾಗ ಗುರುತು: ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಳ ಹೋಬಳಿಯ ಗುಂಡಲಹಳ್ಳಿ ಗ್ರಾಮದ ಟೆರ್ರಾ ಫಾರ್ಮ್ ಪ್ರದೇಶ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಸರ್ಕಾರಿ ಜಾಗ ಸೇರಿದಂತೆ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗಾಗಿ ಎರಡೂ ಕಡೆ 100 ಎಕರೆಗೂ ಹೆಚ್ಚು ಜಾಗವನ್ನು ಗುರುತಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ಭೂಪರಿಹಾರವನ್ನು ನೀಡಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಶೀಘ್ರದಲ್ಲೇ ಕಾಮಗಾರಿಗಳನ್ನು ಪ್ರಾರಂಭವಾಗುವುದೆಂದು ತಿಳಿಸಿದರು.

ಕಸದ ಸಮಸ್ಯೆ ಇದ್ದರೆ ದೂರು ನೀಡಿ: ಜಿಬಿಎ ವ್ಯಾಪ್ತಿಯ ಯಾವುದೇ ಪ್ರದೇಶದಲ್ಲಿ ಕಸದ ಸಮಸ್ಯೆ ಇದ್ದರೆ, ಸಹಾಯ 2.0 ತಂತ್ರಾಂಶ, ಜಿಬಿಎ ಸಹಾಯವಾಣಿ ಸಂಖ್ಯೆ 1533 ಅಥವಾ ವಾಟ್ಸ್​ ಆ್ಯಪ್ ಚಾಟ್‌ ಬಾಟ್ ಸಂಖ್ಯೆ 94481 97197 ಗೆ ಸಂದೇಶ ಕಳುಹಿಸಬಹುದು. ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ದೂರುಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ ಹಾಗೂ ಸಮಸ್ಯೆ ಶೀಘ್ರ ಪರಿಹರಿಸಲಾಗುತ್ತದೆ ಎಂದರು.

ಇದನ್ನೂ ಓದಿ: ವಿಲೇವಾರಿ ವಿರೋಧಿಸುವವರ ಕ್ಷೇತ್ರದ ಕಸ ತೆಗೆಸುವುದಿಲ್ಲ: ಡಿಸಿಎಂ ಡಿಕೆಶಿ