ಡಿಕೆಶಿ ಬಣದಿಂದ ಡಿನ್ನರ್ ಪಾರ್ಟಿ, 40 ಜನ ಶಾಸಕರು ಒಂದೇ ಕಡೆ ಸೇರಿದ್ದೆವು: ಶಾಸಕ ಶಿವಗಂಗಾ ಬಸವರಾಜ್
ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿದ್ಯೋ ಇಲ್ವೋ ಎಂದು ಹೈಕಮಾಂಡ್ ಸ್ಪಷ್ಟಪಡಿಸಲಿ. ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಹೈಕಮಾಂಡ್ ಮಾಡಬೇಕಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.

Published : February 28, 2026 at 5:25 PM IST
ದಾವಣಗೆರೆ: ಮೊನ್ನೆ ಡಿ.ಕೆ. ಶಿವಕುಮಾರ್ ಅವರ ಬಣದಿಂದ ಡಿನ್ನರ್ ಪಾರ್ಟಿ ಸೇರಿದ್ದೆವು. ಇದರಲ್ಲಿ ಯಾವುದೇ ರಾಜಕೀಯ ಮಾಡೋದು ಬೇಡಾ, ಬಾಲಕೃಷ್ಣ ಅವರ ಹುಟ್ಟುಹಬ್ಬದ ಹಿನ್ನೆಲೆ ಊಟಕ್ಕೆ ಸೇರಿದ್ದೆವು. ಊಟಕ್ಕೆ ಕರೆದಿದ್ದರು ಹೋಗಿದ್ದೆವು.
40 ಜನ ಶಾಸಕರು ಕೂಡ ಒಂದೇ ಕಡೆ ಸೇರಿದ್ದೆವು ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಡಿನ್ನರ್ ಪಾರ್ಟಿ ಮುಗಿದ ಮೇಲೆ ದೆಹಲಿಗೆ ಹೋಗುತ್ತಾರೆ ಎನ್ನುವ ಸುದ್ದಿ ಬಂದಿದೆ. ನಾವು ಯಾವುದೇ ಕಾರಣಕ್ಕೂ ದೆಹಲಿಗೆ ಹೋಗೋದಿಲ್ಲ. ಏನಾದರೂ ವೈಯಕ್ತಿಕ ಕೆಲಸಗಳು ಇದ್ದರೆ ದೆಹಲಿಗೆ ಹೋಗುತ್ತಾರೆ ಎಂದ ಅವರು, ಡಿಕೆಶಿ ಸಿಎಂ ಆಗುವ ವಿಚಾರಕ್ಕೆ ಹಿನ್ನಡೆಯಾಗುತ್ತಿಲ್ಲ, ಎಲ್ಲಾ ಒಳ್ಳೆಯದಾಗುತ್ತೆ. ಹೈಕಮಾಂಡ್ ತೀರ್ಮಾನ ಮಾಡಿದರೆ ಇಂದೇ ಆಗುತ್ತದೆ ಎಂದರು.
ಸೂರ್ಯ ಪಥ ಬದಲಾವಣೆಯಾದಾಗ ನಮ್ಮ ಮಾತುಗಳು ಕೂಡ ಬದಲಾವಣೆಯಾಗಿವೆ. ಹೈಕಮಾಂಡ್ ತಲೆಯಲ್ಲಿ ಏನ್ ಇದ್ಯೋ ಗೊತ್ತಿಲ್ಲ, ಅವರನ್ನೇ ಕೇಳಬೇಕು. ಸಿಎಂ ಬದಲಾವಣೆ ವಿಚಾರವಾಗಿ ನಾವು ಎಲ್ಲಾರಿಗೂ ಉತ್ತರ ಕೊಡಬೇಕು. ಎಲ್ಲಾ ಕಡೆ ಹೋದಾಗ ಜನರು ಕೂಡ ಕೇಳುತ್ತಾರೆ. ಹೈಕಮಾಂಡ್ ಒಪ್ಪಂದ ಆಗಿದ್ಯೋ ಇಲ್ವೋ ಎಂದು ಸ್ಪಷ್ಟಪಡಿಸಲಿ. ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಹೈಕಮಾಂಡ್ ಮಾಡಬೇಕಿದೆ. ಸಿಎಂ ಸ್ಥಾನ ಸಿದ್ದರಾಮಯ್ಯನವರು ಅಂತ ಅಲ್ಲ ಪಕ್ಷದಲ್ಲಿ ಯಾರಿಗೇ ಕೊಟ್ಟರು ನಾವು ಬದ್ಧ. ಮನಃಪೂರ್ವಕವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಶಾಸಕ ಬಾಲಕೃಷ್ಣ ಅವರು ಹೇಳಿದ್ದು ಸರಿ ಇದೆ. ಕೂಡಲೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಅಧಿಕಾರಕ್ಕೆ ಬರೋದು ಕಷ್ಟ ಆಗುತ್ತದೆ ಎನ್ನುವ ಹೇಳಿಕೆ ಸತ್ಯ ಇದೆ ಎಂದು ಸಮರ್ಥಿಸಿಕೊಂಡರು.
ಕುರ್ಚಿ ಕಿತ್ತಾಟದಿಂದ ಸರ್ಕಾರ ಬರೋದು ಡೌಟು: 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಉತ್ತಮವಾದ ವಾತಾವರಣ ಇದೆ. ಗ್ಯಾರಂಟಿ ಯೋಜನೆಗಳಿಂದ ಮತ್ತೆ ಈಗ ಘೋಷಣೆ ಮಾಡಿದ ಗ್ಯಾರಂಟಿಗಳು ಜಾರಿಗೆ ಬಂದರೆ ವಿರೋಧ ಪಕ್ಷವೇ ಇರೋದಿಲ್ಲ. ಆ ರೀತಿ ಜನರ ಬೆಂಬಲ ಸಿಗುತ್ತದೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆದರೆ ನಮ್ಮಲ್ಲಿ ಕುರ್ಚಿ ಕಿತ್ತಾಟದ ಎನ್ನುವ ಆರೋಪವಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಕುರ್ಚಿ ಕಿತ್ತಾಟದಿಂದ ಜನರು ಕಾಂಗ್ರೆಸ್ ಕಡೆ ಒಲವು ತೋರಿಸಿದ್ದರು. ಈಗ ನಾವು ಕೂಡ ಅದೇ ದಾರಿಯಲ್ಲಿ ಹೋದರೆ ಅದರ ಎಫೆಕ್ಟ್ ನಮಗೂ ಕೂಡ ತಟ್ಟಬಹುದು ಎನ್ನುವ ರೀತಿ ಬಾಲಕೃಷ್ಣ ಹೇಳಿರಬಹುದು ಎಂದರು.
ಸಚಿವ ಸ್ಥಾನ ನೀಡಿ ಎಂದು ಹೊಸ ಶಾಸಕರು ಪತ್ರ ಬರೆದಿದ್ದೆವು. ಅದರಲ್ಲಿ ನಾನು ಕೂಡ ಸಹಿ ಹಾಕಿದ್ದೇನೆ. ಮಂಡ್ಯದಲ್ಲಿ ರವಿ ಗಣಿಗ ಇದಾರೆ ಅವರು ಅಕ್ಟಿವ್ ಪರ್ಸನ್ ಅವರಿಗಾದ್ರು ಕೊಡ್ಲಿ. ಮೊದಲ ಬಾರಿ ಗೆದ್ದ ಶಾಸಕರು ಇದ್ದೇವೆ ನಮಗೆ ಕೊಟ್ಟರೆ ಒಳ್ಳೆಯದು. ಹಳೇ ಬೇರು ಹೊಸ ಚಿಗುರು ಎನ್ನುವಂತೆ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ. ಕೊಟ್ಟರೆ ಒಳ್ಳೆಯದು ಇಲ್ಲವಾದ್ರೆ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪಂಚ ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗಿದೆ: ಪಂಚ ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗಿದೆ. ಹಾಗಂತ ನಾವು ಯಾವುದೇ ಗ್ಯಾರಂಟಿಯನ್ನು ನಿಲ್ಲಿಸಿಲ್ಲ. 52 ಸಾವಿರ ಕೋಟಿ ಹಣ ಹೊಂದಿಸಬೇಕು ಎಂದರೆ ಸಣ್ಣ ಮೊತ್ತ ಅಲ್ಲ. ಹೊರೆಯಾಗಿದೆ ಅಂತ ಹೆದರಿಲ್ಲ, ಮೂರು ವರ್ಷ ಕೊಟ್ಟಿದ್ದೇವೆ ಇನ್ನು ಎರಡು ವರ್ಷ ಕೊಡುತ್ತೇವೆ. ಗ್ಯಾರಂಟಿಯನ್ನು ಬಿಡಿ ಎಂದು ಕಾಂಗ್ರೆಸ್ನಲ್ಲಿ ಯಾರು ಹೇಳಿಲ್ಲ. ಸದನದಲ್ಲಿ ಬಿಜೆಪಿ ಶಾಸಕ ಶರಣು ಸಲಗಾರ್ ನಮಗೆ ಗ್ಯಾರಂಟಿ ಬೇಡ ಅನುದಾನ ಕೊಡಿ ಎಂದಿದ್ದಾರೆ. ಅವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ನಮಗೆ ಗ್ಯಾರಂಟಿ ಬೇಡ ಅಂತ ಬರೆದುಕೊಡಲಿ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಿ ಎಂದು ರಾಜ್ಯ ನಾಯಕರಿಗೆ ಒತ್ತಾಯಿಸಿದ ಶಿವಗಂಗಾ ಬಸವರಾಜ್ ಅವರು, ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ಅದೇ ರೀತಿ ಇಲ್ಲಿ ಕೂಡ ಮುಸ್ಲಿಂ ಸಮುದಾಯಕ್ಕೆ ಅವಕಾಶ ಮಾಡಿ ಕೊಡಲಿ. ಹೈಕಮಾಂಡ್ ಮೊದಲ ಆದ್ಯತೆ ಮುಸ್ಲಿಂ ಸಮುದಾಯಕ್ಕೆ ನೀಡಲಿ. ಮುಸ್ಲಿಮರು ಹಿಂದೂಗಳು ಒಟ್ಟಾಗಿ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇವುಗಳನ್ನೂ ಓದಿ:

