ಎಐ ಯುಗದಲ್ಲೂ ಕಥೆ ಬರೆದ ಲಿಟಲ್ ಸ್ಟಾರ್ಸ್: ಹುಬ್ಬಳ್ಳಿಯ 38 ಮಕ್ಕಳು ಬರೆದ 3 ಪುಸ್ತಕ ಪ್ರಕಟ, ಅಮೆಜಾನ್, ಪ್ಲಿಪ್ಕಾರ್ಟ್ಗಳಲ್ಲಿ ಲಭ್ಯ
ಸೇಂಟ್ ಆಂಥೋನಿ ಪಬ್ಲಿಕ್ ಶಾಲೆಯ 38 ಮಕ್ಕಳು 38 ವಿಭಿನ್ನ ಕಥೆಗಳನ್ನು ಬರೆದಿದ್ದು, ಅವರು ಬರೆದ ಮೂರು ಕಥಾ ಪುಸ್ತಕಗಳನ್ನು ಸ್ವಪ್ನಾ ಬುಕ್ ಹೌಸ್, ಅಮೆಜಾನ್ ಹಾಗೂ ಪ್ಲಿಪ್ಕಾರ್ಟ್ಗಳಲ್ಲಿ ಲಭ್ಯವಿದೆ. ವರದಿ: ಹೆಚ್.ಬಿ.ಗಡ್ಡದ

Published : June 4, 2026 at 2:45 PM IST
ಹುಬ್ಬಳ್ಳಿ: ವಿದ್ಯಾನಗರದಲ್ಲಿರುವ ಸೇಂಟ್ ಆಂಥೋನಿ ಪಬ್ಲಿಕ್ ಶಾಲೆ, ಮಕ್ಕಳ ಮನಸ್ಸಿನಲ್ಲಿರುವ ಆಲೋಚನೆ, ಕನಸು ಹಾಗೂ ಬರವಣಿಗೆಯ ಶೈಲಿಯನ್ನು ಅಭಿವ್ಯಕ್ತಪಡಿಸಲು 'ಬಡ್ಡಿಂಗ್ ಆಥರ್ಸ್ ಕಲೆಕ್ಷನ್' ಅಡಿ ತಮ್ಮ ಶಾಲಾ ಮಕ್ಕಳೇ ಬರೆದ 3 ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ. ಎಐ ಕಾಲದಲ್ಲಿ ಮಕ್ಕಳಲ್ಲಿ ಇತ್ತೀಚೆಗೆ ಸಾಹಿತ್ಯದ ಬಗ್ಗೆ ಅಭಿರುಚಿ ಕಡಿಮೆಯಾಗುತ್ತಿದೆ ಎಂಬ ಬೇಸರವನ್ನು ದೂರ ಮಾಡಿದೆ.
7 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು ತಾವೇ ಬರೆದ 38 ಕಥೆಗಳನ್ನೊಳಗೊಂಡ ಮೂರು ಸೃಜನಶೀಲ ಕಥೆಗಳ ಪುಸ್ತಕಗಳನ್ನು ಸ್ವಪ್ನ ಬುಕ್ ಹೌಸ್ ಪ್ರಕಟಿಸುವ ಮೂಲಕ ಮಕ್ಕಳ ಕಥೆಗಳಿಗೆ ಪ್ರೋತ್ಸಾಹ ನೀಡಿದೆ.
ಮಕ್ಕಳಲ್ಲಿರುವ ಸೂಪ್ತವಾದ ಬರವಣಿಗೆಯನ್ನು ಗುರುತಿಸಿ ಅವರನ್ನು ಉದಯೋನ್ಮುಖ ಬರಹಗಾರರನ್ನಾಗಿ ಮಾಡಿದೆ. ಈ ಶಾಲೆಯ 38 ಮಕ್ಕಳು 38 ವಿಭಿನ್ನ ಕಥೆಗಳನ್ನು ಬರೆದಿದ್ದು, ಅವರು ಬರೆದ ಮೂರು ಕಥಾ ಪುಸ್ತಕಗಳನ್ನು ಸ್ವಪ್ನಾ ಬುಕ್ ಹೌಸ್ ಸೇರಿದಂತೆ ಆನ್ಲೈನ್ ವೇದಿಕೆಯಾದ ಅಮೆಜಾನ್ ಹಾಗೂ ಪ್ಲಿಪ್ಕಾರ್ಟ್ಗಳಲ್ಲಿ ಲಭ್ಯವಿದೆ.
ಮಕ್ಕಳ ಪ್ರತಿಭೆ, ಉತ್ಸಾಹ ಮತ್ತು ಭವಿಷ್ಯದ ಯಶಸ್ಸಿನ ಸಾಮರ್ಥ್ಯದ ಆರಂಭಿಕ ಚಿಹ್ನೆಗಳನ್ನು ಗುರುತಿಸುವ ಕಾರ್ಯವನ್ನು ಇಲ್ಲಿನ ಶಿಕ್ಷಕರು ಮಾಡಿದ್ದಾರೆ. ಮಕ್ಕಳಿಗೆ ವಾರಕ್ಕೊಂದು ಕಥೆಗಳನ್ನು ಬರೆದುಕೊಂಡು ಬರಲು ಹೇಳಲಾಗುತ್ತಿತ್ತು. ಹೀಗೆ ಮಕ್ಕಳು ಬರೆದು ತಂದ ಆಯ್ಧ ಉತ್ತಮ ಕಥೆಗಳನ್ನು ಶಾಲಾ ನೋಟಿಸ್ ಬೋರ್ಡ್ನಲ್ಲಿ ಹಾಕಲಾಗುತ್ತಿತ್ತು. ಆದರೆ, ಸೇಂಟ್ ಆಂಥೋನಿ ಪಬ್ಲಿಕ್ ಸ್ಕೂಲ್ ಹಾಗೂ ಬೆಂಗಳೂರಿನ 'ಸ್ಟೋರಿಸ್ ಬೈ ಚಿಲ್ಡ್ರನ್' ಎಂಬ ಗ್ರೂಪ್ಗೆ ಸೇರ್ಪಡೆಯಾದ ಮೇಲೆ ಮಕ್ಕಳ ಕಥೆಗಳು ಪುಸ್ತಕ ರೂಪ ಪಡೆದುಕೊಂಡಿವೆ.
- ಲಿಟಲ್ ಸ್ಪಾರ್ಕ್ಸ್ (Little Sparks): 5 ರಿಂದ 10 ವರ್ಷದ ಮಕ್ಕಳಿಗಾಗಿ ನೀತಿ ಕಥೆಗಳು
- ಶೈನಿಂಗ್ ಸ್ಟಾರ್ಸ್ (Shining Stars): 11 ರಿಂದ 14 ವರ್ಷದ ಪ್ರಿ-ಟೇನ್‌ಗಳಿಗಾಗಿ ಸೃಜನಶೀಲ ಕಥೆಗಳು
- ಬ್ರೈಟ್ ಮೈಂಡ್ಸ್ (Bright Minds): ರೋಮಾಂಚಕಾರಿ, ಮಿಸ್ಟರಿ ಮತ್ತು ಸಸ್ಪೆನ್ಸ್ ಕಥೆಗಳನ್ನು ಒಳಗೊಂಡಿವೆ.
ಈ ಶಾಲೆಯ 2ನೇ ತರಗತಿಯಿಂದ 12ನೇ ತರಗತಿವರೆಗೆ ಮಕ್ಕಳು ಬರೆದ ಪುಸ್ತಕಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರಕಟಿಸಲಾಗಿದೆ. ಲಿಟಲ್ ಸ್ಪಾರ್ಕ್ಸ್ ಎಂಬ ಪುಸ್ತಕದಲ್ಲಿ 11 ಕಥೆಗಳಿದ್ದು, ಪ್ರೈಮರಿ ಸ್ಕೂಲ್ ಮಕ್ಕಳು ಬರೆದ ಕಥೆಗಳನ್ನು ಒಳಗೊಂಡಿದೆ.
ಶೈನಿಂಗ್ ಸ್ಟಾರ್ಸ್ ಪುಸ್ತಕ 10 ಕಥೆಗಳಿದ್ದು, ಮಿಡಲ್ ಕ್ಲಾಸ್ ಮಕ್ಕಳು ಬರೆದ ಕಥೆಗಳನ್ನು ಒಳಗೊಂಡಿದೆ. ಬ್ರೈಟ್ ಮೈಂಡ್ಸ್ ಪುಸ್ತಕ 17 ಕಥೆಗಳಿದ್ದು, ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಬರೆದ ಕಥೆಗಳನ್ನು ಒಳಗೊಂಡಿದೆ.
ಈ ಕುರಿತಂತೆ ಸೇಂಟ್ ಆಂಥೋನಿ ಪಬ್ಲಿಕ್ ಶಾಲೆ ಅಧ್ಯಕ್ಷ ಕೆ ಎ ಪ್ರಸಾದ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಅದನ್ನು ಅಭಿವ್ಯಕ್ತಪಡಿಸಲು ಒಂದು ವಾತಾವರಣ ಬೇಕಾಗುತ್ತದೆ. ಅವರಲ್ಲಿನ ಅನುಭೂತಿ, ಅನುಭವ, ಪ್ರೀತಿ, ಆತ್ಮೀಯತೆ, ಅನುಬಂಧಗಳನ್ನು ಅವರ ಬರವಣಿಗೆ ಮೂಲಕ ಪ್ರಕಟಿಸಲು ಅವಕಾಶ ನೀಡಲಾಗಿದೆ. ಮಕ್ಕಳು ಈ ಮೂಲಕ ಉದಯೋನ್ಮುಖ ಬರಹಗಾರಗಾರರಾಗಲು ಸಹಕಾರಿಯಾಗಿದೆ ಎಂದರು.
ಶಾಲಾ ಪ್ರಾಂಶುಪಾಲರಾದ ದೇವ ಪ್ರಸಾದ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳಿಗಾಗಿ ಒಂದು ಕ್ಲಬ್ ಮಾಡಿ ಪ್ರತಿ ವಾರ ಒಂದೊಂದು ಕಥೆ ಬರೆಯಲು ಹೇಳಲಾಗುತ್ತಿತ್ತು. ಅದರಲ್ಲಿ ಆಯ್ಕೆಯಾದ ಬೆಸ್ಟ್ ಸ್ಟೋರಿಯನ್ನು ನೋಟಿಸ್ ಬೋರ್ಡ್ಗೆ ಹಾಕಲಾಗುತ್ತಿದೆ. ಆದರೆ, ಇತ್ತೀಚಿಗೆ ಬೆಂಗಳೂರಿನ ಸ್ಟೋರಿ ಬೈ ಚಿಲ್ಡ್ರನ್ ಎಂಬ ಗುಂಪಿಗೆ ಸೇರ್ಪಡೆಯಾದ ಮೇಲೆ ಬೆಸ್ಟ್ ಸ್ಟೋರಿಗಳನ್ನು ಆಯ್ಕೆ ಮಾಡಿಕೊಂಡು ಅವರೇ ಪಬ್ಲಿಷ್ ಮಾಡುತ್ತಿದ್ದಾರೆ. ನಮ್ಮ ಶಾಲೆಯ 38 ಮಕ್ಕಳು ಬರೆದಂತಹ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಕ್ಕಳು ಕೇವಲ ಪಠ್ಯದ ಬಗ್ಗೆ ಗಮನಹರಿಸದೇ ಸಾಹಿತ್ಯ, ಕಥೆ, ಕವನ ಬರವಣಿಗೆ ವೃದ್ದಿಸಿಕೊಳ್ಳುತ್ತಿದ್ದಾರೆ. ಈಗ ಇಂಗ್ಲಿಷ್ ಕಥೆಗಳನ್ನು ಮಾತ್ರ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲೂ ಕಥೆಗಳನ್ನು ಬರೆಯಲು ಪ್ರೇರೆಪಿಸಲಾಗುತ್ತದೆ. ನಮ್ಮ ಶಾಲೆಯ ಮಕ್ಕಳು ಆಥರ್ಸ್ ಆಗಿದ್ದಾರೆ. ಡಿಜಿಟಲ್ ಕಾಲದಲ್ಲಿಯೂ ಕೂಡ ಕೈಯಾರೆ ಕಥೆಗಳನ್ನು ಬರೆಯುವ ಆಸಕ್ತಿ ಮೂಡಿಸಿಕೊಳ್ಳುತ್ತಿರುವುದು ನಮ್ಮ ಶಾಲೆಗೆ ಹೆಮ್ಮೆ ತಂದಿದೆ ಎಂದರು.
ವಿದ್ಯಾರ್ಥಿನಿ ವೈಷ್ಣವಿ ಮಾತನಾಡಿ, ನಾಲ್ಕು ಜನ ಸ್ನೇಹಿತರು ಕಳ್ಳತನ ಭೇದಿಸುವ ಕಥೆ ಬರೆದಿದ್ದು, ಈ ಕಥೆ ಬರೆಯಲು ನನಗೆ ಶಾಲಾ ಶಿಕ್ಷಕರು ಹಾಗೂ ಪೋಷಕರ ಸಹಕಾರವೇ ಕಾರಣ. ಶಾಲೆಯ ಶಿಕ್ಷಕರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಕಥೆ ಬರೆಯಲು ಸಾಧ್ಯವಾಗಿದೆ ಎಂದರು.
ಪಲ್ಲವಿ ವರ್ಣೆಕರ್ ಮಾತನಾಡಿ, ನನಗೆ ಕಥೆ ಬರೆಯಲು ನಮ್ಮ ಶಿಕ್ಷಕರೇ ಪ್ರೋತ್ಸಾಹ ನೀಡಿದರು. ಇದರಿಂದ ನಾನು ಅಡ್ವೆಂಚರ್ಸ್ ಕಥೆಗಳನ್ನು ಬರೆಯಲು ಸಾಧ್ಯವಾಯಿತು. ಇದಕ್ಕೆ ನಮ್ಮ ಪೋ಼ಷಕರು ಹಾಗೂ ಶಿಕ್ಷಕರ ಸಹಕಾರ ಪ್ರಮುಖ ಕಾರಣ ಎಂದರು.
ವಿದ್ಯಾರ್ಥಿ ಅಕ್ಷತ್ ಮಾತನಾಡಿ, ಬ್ರೈಟ್ ಮೈಂಡ್ ಪುಸ್ತಕದಲ್ಲಿ ನನ್ನ ಕಥೆ ಪ್ರಕಟವಾಗಿರುವುದು ಖುಷಿಯಾಗಿದೆ. ಥ್ರಿಲ್ಲರ್ ಕಥೆ ಬರೆದಿದ್ದು, ಓದುಗರನ್ನು ನೈಜತೆಗೆ ಕರೆದುಕೊಂಡು ಹೋಗುತ್ತದೆ. ಈ ಅವಕಾಶ ಕೊಟ್ಟು ಕಥೆ ಬರೆಯಲು ಪ್ರೇರಣೆ ನೀಡಿದ ಶಿಕ್ಷಕರಿಗೆ ಧನ್ಯವಾದ ಅರ್ಪಿಸಿದರು.
ವಿದ್ಯಾರ್ಥಿನಿ ಮಹಿತಿ ಮಾತನಾಡಿ, ಕಥೆ ಬರೆಯಲು ನಾನು ತುಂಬಾ ಉತ್ಸುಕಳಾಗಿದ್ದೆ. ಅದರಂತೆ ನಾನು ಕಥೆ ಆಯ್ಕೆ ಮಾಡಿಕೊಂಡು ಬರೆದಿದ್ದು, ಕಥೆ ಸಾಕಷ್ಟು ತಿರುವುಗಳನ್ನು ಒಳಗೊಂಡಿದೆ. ಕಲ್ಪನಾತೀತವಾದ ಕಥೆಯಾಗಿದ್ದು, ನನಗೆ ಬರೆಯಲು ಹೊಸ ಅನುಭವ ನೀಡಿತು ಎಂದರು.
ಕೆ ಸಾಯಿಚರಣ್ ಮಾತನಾಡಿ, ನನಗೆ ಕಥೆ ಹಾಗೂ ಕವನ ಬರೆಯಲು ಸಾಕಷ್ಟು ಆಸಕ್ತಿ ಇತ್ತು. ಈ ಮಧ್ಯೆ ನಮ್ಮ ಇಂಗ್ಲಿಷ್ ಶಿಕ್ಷಕರು ಕಥೆ ಬರೆಯಲು ಹೇಳಿದಾಗ ನಾನು ಕೂಡ ಕಷ್ಟಪಟ್ಟು ಕಥೆ ಬರೆದಿದ್ದು, ಶೈನಿಂಗ್ ಸ್ಟಾರ್ಸ್ ಪುಸ್ತಕದಲ್ಲಿ ಪ್ರಟಕವಾಗಿದೆ. ತುಂಬಾ ಖುಷಿ ತಂದಿದೆ ಎಂದರು.
ವಿದ್ಯಾರ್ಥಿನಿ ಯುಕ್ತಿ ಮಾತನಾಡಿ, ನಾನು ಸಿಂಪಲ್ ಆಗಿರುವ ಘಟನೆ ಆಯ್ಕೆ ಮಾಡಿಕೊಂಡು ಕಥೆ ಬರೆದಿದ್ದೇನೆ. ಕಥೆ ಬರೆಯಲು ಅಷ್ಟೊಂದು ಕಷ್ಟವಾಗಲಿಲ್ಲ. ಸ್ಟೋರಿ ಬೈ ಚಿಲ್ಡ್ರನ್ ನನ್ನ ಆಥರ್ಸ್ ಮಾಡಿದ್ದು ತುಂಬಾ ಸಂತೋಷವಾಗಿದೆ ಎಂದರು.
ಇದನ್ನೂ ಓದಿ: ಈ ಶಾಲೆಯಲ್ಲಿದ್ದಾರೆ ಅವಳಿ-ತ್ರಿವಳಿಗಳ ಜೋಡಿ: ಅವರನ್ನು ಗುರುತಿಸುವುದೇ ಶಿಕ್ಷಕರು-ಮಕ್ಕಳಿಗೆ ಸವಾಲು!

