ETV Bharat / state

ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ರೈಲ್ವೆ ಯೋಜನೆ ಬಹುದೊಡ್ಡದು: ಪ್ರತಿ ವರ್ಷ ರೈಲ್ವೆ ಯೋಜನೆಗೆ 3 ಲಕ್ಷ ಕೋಟಿ ವೆಚ್ಚ- ವಿ ಸೋಮಣ್ಣ

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ರೈಲ್ವೆ ಯೋಜನೆ ಕುರಿತು ಮಾತನಾಡಿದ್ದಾರೆ.

v-somanna
ಚನ್ನರಾಯಪಟ್ಟಣದಲ್ಲಿ ರೈಲ್ವೆ ನಿಲುಗಡೆಗೆ ಹಸಿರು ನಿಶಾನೆ ತೋರಿದ ಸಚಿವ ವಿ ಸೋಮಣ್ಣ (ETV Bharat)
author img

By ETV Bharat Karnataka Team

Published : June 1, 2026 at 9:52 AM IST

3 Min Read
Choose ETV Bharat

ಹಾಸನ: ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಹುದೊಡ್ಡ ಯಂತ್ರ ಎಂದರೆ ಅದು ರೈಲ್ವೆ ಯೋಜನೆ. ಅದನ್ನ ಪ್ರಧಾನಿ ನರೇಂದ್ರ ಮೋದಿ ಕೇವಲ ಹತ್ತು ವರ್ಷದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಪ್ರತಿ ವರ್ಷ ರೈಲ್ವೆ ಯೋಜನೆಗೆ 3 ಲಕ್ಷ ಕೋಟಿ ವೆಚ್ಚ : ಹಾಸನ ಸೊಲ್ಲಾಪುರ ರೈಲು ಸಂಖ್ಯೆ 11312 ರೈಲನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಅವರು ಮಾತನಾಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪ್ರತಿಕ್ರಿಯೆ (ETV Bharat)

ಒಂದು ದೇಶ ಅಭಿವೃದ್ಧಿಯಾಗಬೇಕಾದರೆ, ರಾಜ್ಯ ಅಭಿವೃದ್ಧಿ ಆಗಬೇಕು, ಒಂದು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಅಭಿವೃದ್ಧಿಯಾಗಬೇಕಾದರೆ, ಗ್ರಾಮೀಣ ಭಾಗಗಳು ಅಭಿವೃದ್ಧಿ ಆದಾಗ ಮಾತ್ರ ಸಾಧ್ಯ. ಹಾಗಾಗಿ, ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಹುದೊಡ್ಡ ಯೋಜನೆ ಎಂದರೆ ಅದು ರೈಲ್ವೆ ಯೋಜನೆ. ಹಾಗಾಗಿ, ಕೇಂದ್ರ ಸರ್ಕಾರ ರೈಲ್ವೆ ಯೋಜನೆಗೆ ಒಂದು ವರ್ಷಕ್ಕೆ 2,94,000 ಕೋಟಿ ಖರ್ಚು ಮಾಡುತ್ತಿದೆ. ಈ ಮೂಲಕ ಪ್ರತಿ ಗ್ರಾಮೀಣ ಭಾಗಕ್ಕೂ ರೈಲು ಸಂಪರ್ಕ ದೊರಕಲಿ, ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಲಿ ಎಂಬ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದರು.

ಹಾಸನ ರೈಲ್ವೆ ಯೋಜನೆಗೆ ದೇವೇಗೌಡರ ಪರಿಶ್ರಮ ದೊಡ್ಡದು : ಹಾಸನ ರೈಲು ನಿಲ್ದಾಣದಿಂದ ನಿತ್ಯ 34 ರೈಲುಗಳು ಸಂಚಾರ ಮಾಡುತ್ತಿದ್ದು, ಜೂನ್ 3 ರಿಂದ ಒಂದೇ ಭಾರತ್ ರೈಲು ಕೂಡ ತಾತ್ಕಾಲಿಕವಾಗಿ ಸಂಚಾರ ಆರಂಭಿಸಲಿದೆ. ಈ ಭಾಗದಲ್ಲಿ ಇಷ್ಟೊಂದು ರೈಲು ಸಂಚಾರ ಮಾಡಲು ಅಂದು ಪ್ರಧಾನಿಯಾಗಿದ್ದ ದೇವೇಗೌಡರ ಶ್ರಮ ಬಹಳಷ್ಟು ಇದೆ. ಅದನ್ನು ನಾವು ಸ್ಮರಿಸಬೇಕಿದೆ ಎಂದು ಹಾಡಿ ಹೊಗಳಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಹಾಸನ ಜಿಲ್ಲೆ ಸೂರ್ಯ ಚಂದ್ರ ಇರುವ ತನಕ ಹೆಸರಿರುತ್ತದೆ ಎಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಎಂಬುದನ್ನ ನಾವು ಮರೆಯುವಂತಿಲ್ಲ ಎಂದರು.

ಹತ್ತು ವರ್ಷದಲ್ಲಿ 13,800 ರೈಲ್ವೆ ಕ್ರಾಸಿಂಗ್ ಗೇಟ್ ನಿರ್ಮಾಣ : ಹಿಂದೆ ರೈಲ್ವೆ ಮೇಲ್ಸೆತುವೆಗಳ ನಿರ್ಮಾಣ ಕಾಮಗಾರಿ ಆಗಬೇಕು ಎಂದರೆ 15-20 ವರ್ಷಗಳಾಗುತ್ತಿದ್ದವು. ಆದರೆ, ಇಂದು ಒಂದೆರಡು ವರ್ಷಗಳಲ್ಲಿ ನಿರ್ಮಾಣವಾಗುತ್ತಿದೆ. ಜೊತೆಗೆ ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ 13,800 ರೈಲ್ವೆ ಕ್ರಾಸಿಂಗ್ ಗೇಟ್​ಗಳನ್ನ ಅಳವಡಿಸಿರುವುದು ನಮ್ಮ ಬಿಜೆಪಿ ಸರ್ಕಾರದ ಬಹುದೊಡ್ಡ ಕ್ರಾಂತಿಕಾರಿ ಯೋಜನೆ. ಕರ್ನಾಟಕದಲ್ಲಿ ನಾನು ರಾಜ್ಯ ರೈಲ್ವೆ ಖಾತೆ ಸಚಿವನಾದ ಮೇಲೆ 707 ರೈಲ್ವೆ ಕ್ರಾಸಿಂಗ್ ಗೇಟ್​ಗಳ ಕಾಮಗಾರಿಗಳನ್ನು ಮುಗಿಸಿದ್ದು, 400 ಕಾಮಗಾರಿಗಳು ಪ್ರಾರಂಭವಾಗಿದೆ ಎಂದು ಹೇಳಿದರು.

ಒಂದು ತಿಂಗಳಲ್ಲಿ ಪ್ರತಿ ಗಂಟೆಗೆ 120 ಕಿಲೋಮೀಟರ್ ವೇಗ ಹೆಚ್ಚಳ: ನಾನು ರೈಲ್ವೆ ಖಾತೆ ಸಚಿವನಾದ ಮೇಲೆ 12 ಭೋಗಿಗಳನ್ನ ಪ್ರಸ್ತುತ 21 ಭೋಗಿಗಳಿಗೆ ಮೇಲ್ದರ್ಜೆಗೇರಿಸಿದ್ದು, ಮಂಗಳೂರು - ಹಾಸನ - ಬೆಂಗಳೂರು ನಡುವಿನ ರೈಲು ಮಾರ್ಗವನ್ನು ಪ್ರತಿ ಗಂಟೆಗೆ 120 ರಿಂದ 130 ಕಿಲೋಮೀಟರ್ ವೇಗ ಹೆಚ್ಚಿಸುವ ಕಾರ್ಯವನ್ನು ಇನ್ನೂ ಒಂದು ತಿಂಗಳಲ್ಲಿ ಮಾಡಲಾಗುವುದು ಎಂದರು.

ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳ ಹೆಬ್ಬಾಗಿಲು : ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಬಹು ದೊಡ್ಡ ಇತಿಹಾಸವಿದೆ. ಕೃಷಿ ಉತ್ಪಾದನೆಗೆ ಹೆಚ್ಚು ಒತ್ತು ಕೊಡುವಂತಹ ತಾಲೂಕು ಇದಾಗಿದೆ. ಶ್ರವಣಬೆಳಗೊಳದ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆವುಳ್ಳ ಬೇಲೂರು ಹಳೇಬೀಡು ಸಂಪರ್ಕಿಸುವ ಹೆಬ್ಬಾಗಿಲು ಚನ್ನರಾಯಪಟ್ಟಣ. ಹಾಸನ, ಸೊಲ್ಲಾಪುರ ರೈಲು ನಿಲುಗಡೆಗೆ ಇಂದಿನಿಂದ ಚಾಲನೆ ಸಿಕ್ಕಿದ್ದು, ನಿತ್ಯ ಸಾವಿರಾರು ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.

2 ಸಾವಿರ ಕೋಟಿ ವೆಚ್ಚದಲ್ಲಿ 61 ರೈಲು ನಿಲ್ದಾಣಗಳ ಅಭಿವೃದ್ಧಿ: ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ 37 ರೈಲುಗಳ ಸಂಚಾರ ಸ್ಥಗಿತಗೊಂಡಿದ್ದವು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಹಲವಾರು ಸಭೆಗಳನ್ನು ನಡೆಸಿದ ಬಳಿಕ ರಾಜ್ಯದಲ್ಲಿ ಮತ್ತೆ 37 ರೈಲುಗಳನ್ನು ಪುನರಾರಂಭಗೊಳಿಸಲಾಗಿದೆ. ಇನ್ನು ದೇಶದಲ್ಲಿ ಸುಮಾರು 2 ಸಾವಿರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿದ್ದು, ರಾಜ್ಯದಲ್ಲಿ ಸುಮಾರು 2000 ಕೋಟಿ ವೆಚ್ಚದಲ್ಲಿ 61 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹಾಸನ, ಅರಸೀಕೆರೆ ಹಾಗೂ ಸಕಲೇಶಪುರ ರೈಲು ನಿಲ್ದಾಣಗಳನ್ನು ಅಮೃತ ಭಾರತ್ ಯೋಜನೆ ಅಡಿ ಅಭಿವೃದ್ಧಿ ಮಾಡಲಾಗಿದೆ ಎಂದರು.

ಹಾಸನ ತಿರುಪತಿಗೆ ನೂತನ ರೈಲು : ಹಾಸನದಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ನೂತನ ರೈಲು ಓಡಿಸಬೇಕೆಂಬ ಶಾಸಕ, ಸಂಸದರು ಮತ್ತು ಪ್ರಯಾಣಿಕರ ಮನವಿಯ ಬಗ್ಗೆ ನಾನು ಕೇಂದ್ರ ರೈಲ್ವೆ ಸಚಿವರೊಂದಿಗೆ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ಬೆಂಗಳೂರು - ಮಂಗಳೂರು ವಂದೇ ಭಾರತ್ ರೈಲಿನ ಜೂನ್ 3ರ ಪ್ರಾಯೋಗಿಕ ಸಂಚಾರ ರದ್ದು; ಕಾರಣ?