ETV Bharat / state

ಮೈಸೂರಿನಲ್ಲಿ 3 ದಿನ ಕಿಸಾನ್ ಸ್ವರಾಜ್ ಸಮ್ಮೇಳನ: 11 ರಾಜ್ಯಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 6ನೇ ಕಿಸಾನ್ ಸ್ವರಾಜ್ ಸಮ್ಮೇಳನ ನಡೆಯುತ್ತಿದೆ.

KISAN SWARAJ CONFERENCE
ಕಿಸಾನ್ ಸ್ವರಾಜ್ ಸಮ್ಮೇಳನ (ETV Bharat)
author img

By ETV Bharat Karnataka Team

Published : February 28, 2026 at 7:17 PM IST

2 Min Read
Choose ETV Bharat

ಮೈಸೂರು: ಮೈಸೂರಿನ ಮುಕ್ತ ವಿವಿಯ ಕ್ಯಾಂಪಸ್​​​ನಲ್ಲಿ ಮೂರು ದಿನಗಳ ಕಾಲ 6ನೇ ಕಿಸಾನ್ ಸ್ವರಾಜ್ ಸಮ್ಮೇಳನ ಫೆಬ್ರವರಿ 27 ರಿಂದ 3 ದಿನಗಳ ಕಾಲ ನಡೆಯುತ್ತಿದ್ದು, ಈ ಸಮ್ಮೇಳನದಲ್ಲಿ ಕೃಷಿ ವಲಯ ಎದುರಿಸುತ್ತಿರುವ ಸವಾಲು ಹಾಗೂ ಅದಕ್ಕೆ ಪರಿಹಾರ ಕಂಡುಹಿಡಿಯುವ ಗೋಷ್ಠಿಗಳ ಜೊತೆಗೆ ಸಾವಯವ ಕೃಷಿಕರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ದೇಶದ ವಿವಿಧ 11 ರಾಜ್ಯಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೃಷಿಯಲ್ಲಿ ಉತ್ತಮ ಆಯ್ಕೆಗಳ ಕುರಿತು ವಿಚಾರ ವಿನಿಮಯ ನಡೆಯುತ್ತಿದೆ. ಸಾವಯವ ಕೃಷಿಕರ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಈ ಸಮ್ಮೇಳನವನ್ನು 'ಸುಸ್ಥಿರ ಮತ್ತು ಕೃಷಿ ಮೈತ್ರಿಕೂಟ (ಆಶಾ)-ಕಿಸಾನ್ ಸ್ವರಾಜ್ ಹಾಗೂ ಕೆಎಸ್‌ಒಯು ಪ್ರಸಾರಾಂಗದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಈ ವೇದಿಕೆಗಳಲ್ಲಿ ಕನ್ನಡ, ತಮಿಳು, ತೆಲುಗಿನ ವಿಚಾರ ಸಂಕೀರ್ಣಗಳು ಕೂಡ ನಡೆಯುತ್ತಿವೆ.

ಕಿಸಾನ್ ಸ್ವರಾಜ್ ಸಮ್ಮೇಳನ (ETV Bharat)

ಕೃಷಿ ಪ್ರದರ್ಶನಗಳು: ಸಾರ್ವಜನಿಕರು ಹಾಗೂ ರೈತರಿಗಾಗಿ ಕೃಷಿ ಕಲಿಕಾ ಪ್ರದರ್ಶನವಿರಲಿದೆ. ನೈಸರ್ಗಿಕ, ಸಾವಯವ ಕೃಷಿಕರು ಮತ್ತು ರೈತ ಒಕ್ಕೂಟದವರು ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಮಾರಾಟಕ್ಕೆಂದು ತಂದಿದ್ದಾರೆ. ಸಾವಯವ ಆಹಾರ ಮಳಿಗೆಗಳು ಇವೆ. ಆಂಧ್ರ ಪ್ರದೇಶದ ಪೊಂಡೂರಿನ ಮಹಿಳೆಯರು 'ಪಟ್ನುಲು' ನೂಲು ತೆಗೆಯುವ ನೇರ ಪ್ರಾತ್ಯಕ್ಷಿಕೆ ಇವೆ. ಎತ್ತುಗಳಿಂದ ಸಾಂಪ್ರದಾಯಿಕ ಎಣ್ಣೆಗಾಣದ ಪ್ರದರ್ಶನ ಇದೆ.

30 ಬೀಜ ಸಂರಕ್ಷಕ ರೈತರಿಂದ ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಬೀಜಗಳ ತಳಿಗಳು, ವಿವಿಧ ಬಗೆಯ ಗೆಡ್ಡೆ-ಗೆಣಸು, ಅಪರೂಪದ ತರಕಾರಿಗಳನ್ನು ವೀಕ್ಷಿಸಬಹುದು. ಬೀಜವೈವಿಧ್ಯದ ಮಾಹಿತಿ ಪಡೆದು ಕೊಳ್ಳಬಹುದು. ಹಲವು ಬಗೆಯ ದೇಸಿ ಬೀಜ, ಹಣ್ಣು-ಕಾಯಿ, ತೆನೆಗಳ ಪ್ರದರ್ಶನ ಇರಲಿದ್ದು, ಖರೀದಿಗೂ ಅವಕಾಶವಿದೆ. ರಾಗಿ ಶಾವಿಗೆ, ಜೋಳದ ರೊಟ್ಟಿ, ಬೆರಕೆಸೊಪ್ಪಿನ ಪಲ್ಯ, ಬೇಲದ ಹಣ್ಣು, ಫ್ಯಾಷನ್ ಫ್ರೂಟ್ಸ್, ನೆಲ್ಲಿಕಾಯಿ ಜ್ಯೂಸ್‌ಗಳನ್ನು ಸವಿಯಬಹುದು.

ಸರ್ಕಾರಕ್ಕೆ ನಿರ್ಣಯ ಸಲ್ಲಿಕೆ: ಕೃಷಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎದುರಾಗಿರುವ ಪ್ರಮುಖ ಸವಾಲುಗಳ ಬಗ್ಗೆ ಚರ್ಚೆ-ಸಂವಾದ ನಡೆಯುತ್ತಿದ್ದು, ಬೀಜ ಸ್ವಾಯತ್ತತೆ, ರೈತರ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು, ಕಳೆನಾಶಕ ಸಹಿಷ್ಣು ಬೆಳೆಗಳ ಪರಿಣಾಮ, ಕೃಷಿ ಕಾರ್ಮಿಕರ ಸಮಸ್ಯೆಗಳು ಮತ್ತು ಮಾನವ-ಪ್ರಾಣಿ ಸಂಘರ್ಷದಂತ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮ್ಮೇಳನದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ನಿರ್ಣಯ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಇವುಗಳನ್ನೂ ಓದಿ: