ರಾಮನಗರ: ಅರ್ಕಾವತಿ ನದಿ ಕೆಸರಿನ ಕಳೆಗೆ ಸಿಲುಕಿ 2 ಕಾಡಾನೆಗಳ ಸಾವು
ಕಳೆಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ ಎರಡು ಕಾಡಾನೆಗಳು ಪ್ರಾಣಬಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ.

Published : November 9, 2025 at 8:10 PM IST
ರಾಮನಗರ: ನದಿದಾಟಲು ಹೋಗಿ ಎರಡು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಕುನೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕುನೂರು ಅರಣ್ಯ ವ್ಯಾಪ್ತಿಯ ಅರ್ಕಾವತಿ ನದಿ ದಾಟುವಾಗ ಕೆಸರಿನ ಕಳೆಗೆ ಸಿಲುಕಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಕಳೆಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ ಕಾಡಾನೆಗಳು ಪ್ರಾಣಬಿಟ್ಟಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಕಾಡಾನೆಗಳನ್ನು ಅರಣ್ಯಾಧಿಕಾಗಳು ಹೊರ ತೆಗೆದಿದ್ದು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.
ಅಧಿಕಾರಿಗಳು ಹೇಳಿದ್ದು ಹೀಗೆ: "ಕಳೆದ ರಾತ್ರಿ ವೇಳೆ ಒಟ್ಟು ಆರು ಆನೆಗಳು ಅರ್ಕಾವತಿ ನದಿ ದಾಟುವ ಸಂದರ್ಭದಲ್ಲಿ ಅರ್ಕಾವತಿ ನದಿಯಲ್ಲಿರುವ ಕೆಸರಿನ ಜೊತೆಗೆ ನದಿಯಲ್ಲಿ ಬೆಳೆದಿರುವ ಕಳೆ(ಜೊಂಡು)ಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ ಕಾಡಾನೆಗಳು ಪ್ರಾಣಬಿಟ್ಟಿರುವ ಸಾಧ್ಯತೆ ಇದೆ. ಸ್ಥಳಕ್ಕೆ ವೈದ್ಯರ ತಂಡ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ" ಎಂದು ಡಿಎಫ್ಒ ರಾಮಕೃಷ್ಣಪ್ಪ ಹಾಗೂ ಆರ್ಎಫ್ಒ ಮಲ್ಲೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ: ಕ್ಯಾಪ್ಟನ್-ಭೀಮನ ಭೀಕರ ಕಾಳಗದಲ್ಲಿ ಕೋರೆ ಕಳೆದುಕೊಂಡ ದೈತ್ಯ ಕಾಡಾನೆ
ಇನ್ನು ಹಾಸನದಲ್ಲಿ 2 ಮದಗಜಗಳಾದ ಭೀಮ ಹಾಗೂ ಕ್ಯಾಪ್ಟನ್ ಊರಲ್ಲೇ ಭೀಕರ ಕಾಳಗ ನಡೆಸಿದ್ದು ಭೀಮನ ಒಂದು ದಂತ ಮುರಿದಿದೆ. ಹೌದು, ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ ಭಾನುವಾರ (ನ.9) ಘಟನೆ ನಡೆದಿದೆ. ಸಲಗಗಳು ಪರಸ್ಫರ ಹೊಡೆದಾಡಿಕೊಂಡಿದ್ದು, ಕೆಲ ಗ್ರಾಮಸ್ಥರ ಕೃಷಿಗೆ ಹಾನಿಯಾಗಿದೆ. ಕಾಡಿನಿಂದ ಶುರುವಾದ ಕಾಳಗ ಗ್ರಾಮ, ಮನೆ ಎದುರು, ಗದ್ದೆಯಲ್ಲೂ ಮುಂದುವರೆದು ಕೊನೆಗೆ ಭೀಮನ ದಂತವೇ ಮುರಿದು ಹೋಗಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪಟಾಕಿ ಸಿಡಿಸಿ 2 ಕಾಡಾನೆಗಳನ್ನು ಕಾಡಿಗಟ್ಟಿಸಿದ್ದಾರೆ. ಇತ್ತ ಜನರು ದೈತ್ಯ 2 ಆನೆಗಳ ಫೈಟ್ ಕಂಡು ಎದ್ನೋ-ಬಿದ್ನೋ ಅಂತ ಜೀವ ಉಳಿಸಿಕೊಂಡಿದ್ದು, ಸ್ಥಳೀಯರು ವಿಡಿಯೋ ಸಹ ಸೆರೆ ಹಿಡಿದಿದ್ದಾರೆ.
ಒಂದೆರಡು ಹಸುಗಳು ಹಗ್ಗ ಕಿತ್ತುಕೊಂಡು ಓಡಿ ಪ್ರಾಣ ಉಳಿಸಿಕೊಂಡವು. ತಮ್ಮ ಜಗಳದಲ್ಲಿ ಮನೆ ಮುಂದಿದ್ದ ನೀರಿನ ಸಿಂಟೆಕ್ಸ್ ಟ್ಯಾಂಕನ್ನು ತನ್ನ ದಂತಗಳಿಂದ ಒಡೆದು ಕ್ಯಾಪ್ಟನ್ ಆಕ್ರೋಶದಿಂದ ಛಿದ್ರಗೊಳಿಸಿದ. ಅದಾದ ಬಳಿಕ ಪಕ್ಕದಲ್ಲಿದ್ದ ಎತ್ತಿನ ಗಾಡಿಯತ್ತ ನುಗ್ಗಿ ತನ್ನ ಸೊಂಡಿಲಿನಿಂದ ಗಾಡಿಯನ್ನು ಎತ್ತಿ ಕುಕ್ಕಿ, ಹಾನಿಗೊಳಿಸಿದೆ.

