ಗದಗ: ಚಂದ್ರ ಗ್ರಹಣದ ದಿನವೇ ದಾಂಪತ್ಯಕ್ಕೆ ಕಾಲಿಟ್ಟ ಸರ್ವಧರ್ಮದ 19 ಜೋಡಿ!
ಗದಗದಲ್ಲಿ ಚಂದ್ರ ಗ್ರಹಣದ ದಿನವೇ 19 ಜೋಡಿ ಸಪ್ತಪದಿ ತುಳಿದು ನವ ದಾಂಪತ್ಯಕ್ಕೆ ಕಾಲಿಟ್ಟರು.

Published : March 4, 2026 at 9:11 AM IST
|Updated : March 4, 2026 at 9:47 AM IST
ಗದಗ: ಉತ್ತರ ಕರ್ನಾಟಕದ ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿ ಅವರ 112ನೇ ಜಯಂತ್ಯೋತ್ಸವವನ್ನು ಮಂಗಳವಾರ ಗದಗ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಇದರ ಅಂಗವಾಗಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಚಂದ್ರ ಗ್ರಹಣದ ದಿನವೇ 19 ಜೋಡಿ ನವ ದಾಂಪತ್ಯ ಆರಂಭಿಸಿದರು.
ಇದಕ್ಕೂ ಮುನ್ನ ನಗರದ ಎಪಿಎಂಸಿ ಆವರಣದಲ್ಲಿರುವ ಗವಾಯಿಗಳ ಮಠದಲ್ಲಿ ವಿಶೇಷ ಪೂಜೆ, ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಮಠದ ಗದ್ದುಗೆಯನ್ನು ವಿವಿಧ ಬಣ್ಣದ ಹೂಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಹೋಳಿ ಹುಣ್ಣಿಮೆ ಹಾಗೂ ಚಂದ್ರ ಗ್ರಹಣದ ಮೂಢನಂಬಿಕೆಗಳನ್ನು ದೂರ ಮಾಡುವ ಉದ್ದೇಶದಿಂದ ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಜೋಡಿಗಳು ಒಂದೇ ವೇದಿಕೆಯಲ್ಲಿ ವಿವಾಹವಾದರು. ಮದುಮಕ್ಕಳಿಗೆ ಉಚಿತವಾಗಿ ಮಂಗಲ್ಯ ಹಾಗೂ ವಸ್ತ್ರ ವಿತರಿಸಲಾಯಿತು.
112 ಕೆ.ಜಿ. ದೊಡ್ಡ ಕೇಕ್ ಕತ್ತರಿಸಲಾಯಿತು. 1012 ಸುಮಂಗಲೆಯರಿಂದ ಭವ್ಯ ಕುಂಭಮೇಳ ಜರುಗಿತು. ಹಲಿಗೆಮೇಳ, ಡೊಳ್ಳುಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದವು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ, ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಶ್ರೀ ಸೇರಿದಂತೆ ಹಲವು ಮಠಾಧೀಶರು, ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು. ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ–ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಭಕ್ತರಿಗೆ ಬೂಂದಿ, ಬದನೆಕಾಯಿ ಪಲ್ಯ, ಅನ್ನ–ಸಾರು ಸೇರಿದಂತೆ ಪ್ರಸಾದ ವಿತರಿಸಲಾಯಿತು. ನಗರದೆಲ್ಲೆಡೆ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಲಾಯಿತು.
ಪುಣ್ಯಾಶ್ರಮ ಪೀಠಾಧಿಪತಿ ಕಲ್ಲಯ್ಯಜ್ಜ ಮಾತನಾಡಿ, ''ಪುಟ್ಟರಾಜ ಗವಾಯಿಗಳವರ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗಿದ್ದು, ವಿವಿಧ ಮಠಾಧೀಶರು ಭಾಗಿಯಾಗಿ ಎಲ್ಲರನ್ನೂ ಹರಸಿದ್ದಾರೆ. ಪ್ರತಿವರ್ಷ ಈ ರೀತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಖುಷಿಯ ವಿಚಾರ. ನಾಡಿನ ಜನತೆಗೆ ಒಳ್ಳೆಯದಾಗಲಿ'' ಎಂದು ಆಶೀರ್ವದಿಸಿದರು.

ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಶ್ರೀ ಮಾತನಾಡಿ, ''ತ್ರಿಭಾಷಾ ಕವಿಗಳಾದ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮವೆಂದರೆ ಭಕ್ತರ ಶ್ರದ್ಧಾ ಕೇಂದ್ರವಾಗಿತ್ತು. ಈಗ ಸಾಂಸ್ಕೃತಿಕ ಕೇಂದ್ರವಾಗಿ ಬೆಳಗುತ್ತಿದೆ. ಇಂತಹ ಕೇಂದ್ರಗಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ನಡೆಸುವ ಮೂಲಕ ಅನೇಕ ಬಡ ಜನರ ಹೊರೆ ಕಡಿಮೆ ಮಾಡಲಾಗುತ್ತಿದೆ. ಖರ್ಚು-ವೆಚ್ಚವಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಇಂತಹ ಸಾಮೂಹಿಕ ವಿವಾಹಗಳಿಂದ ಸಮಯ ಹಾಗೂ ಹಣ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಪೀಠಾಧಿಪತಿ ಕಲ್ಲಯ್ಯಜ್ಜನವರ ನೇತೃತ್ವ ಹಾಗೂ ದಿವಂಗತ ಕೆ.ಎಚ್.ಪಾಟೀಲ್ ಅಭಿಮಾನಿಗಳ ಸಹಯೋಗದಲ್ಲಿ ನಡೆದುಕೊಂಡು ಬರುತ್ತಿರುವ ಇಲ್ಲಿನ ಸಾಮಾಜಿಕ ಸೇವಾ ಕಾರ್ಯಗಳು ಮಾದರಿಯಾಗುತ್ತಿವೆ. ದುಂದು ವೆಚ್ಚ ಮಾಡದೇ ನಮ್ಮ ಬದುಕನ್ನು ಸರಾಗವಾಗಿ ಮುಂದುವರಿಸಿಕೊಂಡು ಹೋಗುವುದು ಮುಖ್ಯ" ಎಂದರು.
ದಿವಂಗತ ಕೆ.ಎಚ್.ಪಾಟೀಲ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪೀರಸಾಬ್ ಕೌತಾಳ ಮಾತನಾಡಿ, "ಪುಟ್ಟರಾಜ ಗವಾಯಿಗಳ ಜಯಂತ್ಯೋತ್ಸವ ನಿಮಿತ್ತ ಕಳೆದ ಏಳು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಹಲವು ಜೋಡಿಗಳು ಸಪ್ತಪದಿ ತುಳಿದು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುಮಕ್ಕಳಿಗೆ ಉಚಿತ ಮಂಗಲ್ಯ, ವಸ್ತ್ರ ವಿತರಿಸಲಾಯಿತು. ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾಧ್ಯಮದವರು ಸೇರಿದಂತೆ ಎಲ್ಲ ಭಕ್ತರು ಸಹಾಯ ನೀಡಿದ್ದರಿಂದ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಕಳೆದ ಹಲವು ವರ್ಷಗಳಿಂದ ನಾನು ಪುಟ್ಟರಾಜ ಗವಾಯಿಗಳ ಭಕ್ತರಾಗಿ ಸೇವೆ ಸಲ್ಲಿಸುತ್ತಿದ್ದೇನೆ" ಎಂದು ತಿಳಿಸಿದರು.

"ಧಾರ್ಮಿಕ ಸಾಮರಸ್ಯ ಇಂದು ಅತ್ಯವಶ್ಯಕ. ಗದಗದಲ್ಲಿ ನಡೆದ ಈ ಕಾರ್ಯಕ್ರಮದಂತೆ ಇಡೀ ರಾಷ್ಟ್ರದಲ್ಲಿ ನಡೆಯಬೇಕು ಅನ್ನೋದು ನನ್ನ ಆಸೆ. ಅಂದಾಗ ಮಾತ್ರ ದೇಶದಲ್ಲಿ ಭಾವೈಕ್ಯತೆ ಹೆಚ್ಚು ಮೂಡಲು ಸಾಧ್ಯವಿದೆ. ಎಲ್ಲರೂ ಅವರವರ ಗ್ರಾಮಗಳಲ್ಲಿ ಆರಾಧ್ಯ ದೇವರ ಹಾಗೂ ಗುರುಗಳ ಪುಣ್ಯಸ್ಮರಣೆ, ಜಯಂತ್ಯೋತ್ಸವ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಧಾರ್ಮಿಕ ಸಾಮರಸ್ಯ ಸಾರಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕೊಂಗಳ್ಳಿ ಬೆಟ್ಟದಲ್ಲಿ ಕೊಂಡೋತ್ಸವ: ಇದು ಪುರುಷರ ಜಾತ್ರೆ! ರಾಗಿ ಮುದ್ದೆಯೇ ಇಲ್ಲಿ ಪ್ರಸಾದ

