ಫಿಟ್ ಮೈಸೂರು ವಾಕಥಾನ್‌ಗೆ ಭಾರಿ ಬೆಂಬಲ; 12 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಮೈಸೂರು ನಗರದಲ್ಲಿ ಆಯೋಜಿಸಲಾಗಿದ್ದ ವಾಕಥಾನ್‌ನಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

Published : January 11, 2026 at 4:07 PM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜಿಸಿದ್ದ ಸಾಮೂಹಿಕ ಆರೋಗ್ಯ ಹಾಗೂ ಜಾಗೃತಿ ನಡಿಗೆ ಫಿಟ್ ಮೈಸೂರು ವಾಕಥಾನ್‌ನಲ್ಲಿ 12 ಸಾವಿರಕ್ಕೂ ಹೆಚ್ಚು ಮಂದಿ ಹೆಜ್ಜೆ ಹಾಕಿದರು.
ಮೈಸೂರನ್ನು ಫಿಟ್, ಆರೋಗ್ಯಕರ, ಸ್ವಚ್ಛ, ಹಸಿರು, ಸುರಕ್ಷಿತ ನಗರವನ್ನಾಗಿಸುವ ಧ್ಯೇಯದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಜಿಮ್ ಅಸೋಸಿಯೇಷನ್, ಜಿಎಸ್ಎಸ್ ಸಮೂಹ ಸಂಸ್ಥೆಗಳ ಜತೆಗೆ ಹತ್ತಾರು ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಯೋಜಿಸಿದ್ದ 5 ಕಿ.ಮೀ.ಗಳ ವಾಕಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಫಂದನೆ ವ್ಯಕ್ತವಾಯಿತು.

12 ಸಾವಿರ ಮಂದಿ ಭಾಗಿ : ಆರೋಗ್ಯವಂತ ಮೈಸೂರಿನ ನಿರ್ಮಾಣದ ಸದುದ್ದೇಶದೊಂದಿಗೆ ಆಯೋಜಿಸಿದ್ದ ಈ ವಾಕಥಾನ್‌ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಕಥಾನ್‌ನಲ್ಲಿ 10 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಿದ್ದ ಆಯೋಜಕರು, ಕಾರ್ಯಕ್ರಮಕ್ಕೂ ಮುನ್ನವೇ 7-8 ಸಾವಿರಕ್ಕೂ ಜನರ ನೋಂದಣಿ ಮಾಡಿಸಿದ್ದರು. ಆದರೆ ಭಾನುವಾರ ಮುಂಜಾನೆ ನಡೆದ ವಾಕಥಾನ್‌ನಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಯೋಗಪಟುಗಳು, ಹವ್ಯಾಸಿ ಕ್ರೀಡಾಪಟುಗಳು ವಯಸ್ಸಿನ ಮಿತಿ ಇಲ್ಲದೆ 12 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ವಾಕಥಾನ್ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸಿದರು.
ಉತ್ಸುಕರಾಗಿ ಹೆಜ್ಜೆ ಹಾಕಿದರು : ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಜನರು ನಿರಾಯಾಸವಾಗಿ ಹೆಜ್ಜೆಹಾಕಿ ಗಮನ ಸೆಳೆದರು. ನಸುಕಿನಲ್ಲೇ ಆರಂಭಗೊಂಡ ವಾಕಥಾನ್‌ಗೆ ಗಣ್ಯರು ಹಸಿರು ನಿಶಾನೆ ತೋರುತ್ತಿದ್ದಂತೆ, ಸಾವಿರಾರು ಜನರು ಅತ್ಯಂತ ಉತ್ಸಾಹದಿಂದ ಸಾಗಿದರು. ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಿಂದ ಆರಂಭವಾದ ನಡಿಗೆ, ಬೋಗಾದಿ ರಸ್ತೆ, ಸರಸ್ವತಿಪುರಂ ಅಗ್ನಿಶಾಮಕ ಠಾಣೆ ರಸ್ತೆ, ಮಹಾರಾಜ ಕಾಲೇಜು ಮೈದಾನ ವೃತ್ತ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಹುಣಸೂರು ಮುಖ್ಯರಸ್ತೆ, ಪಡುವಾರಹಳ್ಳಿ ಜಂಕ್ಷನ್ ಮಾರ್ಗವಾಗಿ ಸಂಚರಿಸಿ ಸೆನೆಟ್ ಭವನದ ಆವರಣದಲ್ಲಿ ಅಂತ್ಯಗೊಂಡಿತು.

ಉಸ್ತುವಾರಿ ಸಚಿವರ ಚಾಲನೆ : ವಾಕಥಾನ್ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಹಸಿರು ನಿಶಾನೆ ತೋರಿದರು. ನಂತರ ಮಾತನಾಡಿದ ಅವರು, 'ಮೈಸೂರನ್ನು ಆರೋಗ್ಯಕರ ಮತ್ತು ಸ್ವಚ್ಛ ನಗರವನ್ನಾಗಿ ಮಾಡುವ ಉದ್ದೇಶದಿಂದ ಆಯೋಜಿಸಿದ್ದ ಫಿಟ್ ಮೈಸೂರು ವಾಕಥಾನ್ ಅತ್ಯಂತ ಯಶಸ್ವಿಯಾಗಿದೆ. ಎಲ್ಲರಿಗೂ ಆರೋಗ್ಯವೇ ಮುಖ್ಯವೆಂಬ ಸಂದೇಶವನ್ನು ವಾಕಥಾನ್ ಮೂಲಕ ನೀಡಲಾಗಿದ್ದು, ವಾಕಥಾನ್‌ನಲ್ಲಿ ಭಾಗವಹಿಸಿದ್ದು ಖುಷಿ ನೀಡಿದೆ' ಎಂದು ಹೇಳಿದರು.
ಸಂಸದ ಸುನೀಲ್ ಬೋಸ್ ಮಾತನಾಡಿ, 'ಸ್ವಚ್ಛ, ಆರೋಗ್ಯಕರ, ಹಸಿರು ಮೈಸೂರು ನಿರ್ಮಿಸುವ ಉದ್ದೇಶದಿಂದ ಆಯೋಜನೆ ಮಾಡಿದ್ದ ವಾಕಥಾನ್‌ನಲ್ಲಿ ಪ್ರತಿಯೊಬ್ಬರು ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ಆ ಮೂಲಕವಾಗಿ ಫಿಟ್ ಮೈಸೂರು ವಾಕಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದ್ದು ಸಂತಸ ನೀಡಿದೆ' ಎಂದರು.
ಕಾರ್ಯಕ್ರಮದಲ್ಲಿ ಸಂಸದ ಸುನೀಲ್ ಬೋಸ್, ಶಾಸಕರಾದ ಟಿ. ಎಸ್. ಶ್ರೀವತ್ಸ, ಸಿ. ಎನ್. ಮಂಜೇಗೌಡ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟಿಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತಿತರರು ಇದ್ದರು.
ಇದನ್ನೂ ಓದಿ : ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿ ಕೆ ಶಿವಕುಮಾರ್

