ವಿಧಾನಸಭೆಯಲ್ಲಿ ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ ಸೇರಿ 12 ವಿವಿಧ ಬಿಲ್ಗಳು ಅಂಗೀಕಾರ
ವಿಧಾನಸಭೆಯಲ್ಲಿ ಕರ್ನಾಟಕ ಬಾಡಿಗೆ ತಿದ್ದುಪಡಿ ಮಸೂದೆ ಸೇರಿ 12 ವಿವಿಧ ಬಿಲ್ಗಳು ಅಂಗೀಕಾರಗೊಂಡಿವೆ. ಈ ಕುರಿತ ವರದಿ.

Published : December 16, 2025 at 2:00 PM IST
ಬೆಳಗಾವಿ: ವಿಧಾನಸಭೆಯಲ್ಲಿ ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ ಸೇರಿದಂತೆ 12 ವಿವಿಧ ವಿಧೇಯಕಗಳು ಅಂಗೀಕಾರಗೊಂಡವು.
ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು. ಹಳೆಯ ಬಾಡಿಗೆ ಕಾಯ್ದೆಯಲ್ಲಿ ಬಾಡಿಗೆದಾರ-ಮಾಲೀಕರ ನಡುವಿನ ವ್ಯಾಜ್ಯಗಳಲ್ಲಿ ಸಣ್ಣ ಪುಟ್ಟ ಅಪರಾಧಗಳಿಗೆ ಜೈಲು ಸಜೆ ಇತ್ತು. ಈಗ ಹೊಸ ಮಸೂದೆಯಲ್ಲಿ ಜೈಲು ಸಜೆ ತೆಗೆಯಲಾಗಿದೆ. ಹೊಸ ನಿಯಮದಂತೆ ಬಾಡಿಗೆದಾರರು, ಮಾಲೀಕರು ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ.
ಈ ವಿಧೇಯಕದಲ್ಲಿ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವಿವಾದಗಳನ್ನು ಬಗೆಹರಿಸಲು, ಪಾರದರ್ಶಕತೆ ತರಲು ತಿದ್ದುಪಡಿ ತರಲಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯಿಸುತ್ತವೆ. ಮುಖ್ಯವಾಗಿ, ಬಾಡಿಗೆ ಮನೆಯನ್ನು ಮಾಲೀಕರ ಅನುಮತಿ ಇಲ್ಲದೆ ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಈಗಿನ ದಂಡದ ಮೊತ್ತವನ್ನು 5000 ರೂಪಾಯಿಯಿಂದ 50,000 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದು ಶೇಕಡಾ 90ರಷ್ಟು ಹೆಚ್ಚಳವಾಗಲಿದೆ. ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬ್ರೋಕರ್‌ಗಳಿಗೂ ಈ ಮಸೂದೆ ನಿಯಂತ್ರಣ ಹೇರಲಿದೆ. ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ನೋಂದಣಿ ಮಾಡಿಸದ ಬ್ರೋಕರ್‌ಗಳಿಗೆ ದಿನಕ್ಕೆ 25,000 ರೂ. ದಂಡ ವಿಧಿಸಲಾಗುವುದು. ಈ ಮೊದಲು, ಇದು 2,000 ರೂಪಾಯಿ ದಂಡ ಇತ್ತು. ಮತ್ತೆ ಮತ್ತೆ ತಪ್ಪು ಮಾಡಿದರೆ, ದಿನಕ್ಕೆ 20,000 ರೂಪಾಯಿ ಹೆಚ್ಚುವರಿ ದಂಡ ವಿಧಿಸಲಾಗುವುದು.
2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಅಂಗೀಕಾರ: ಪ್ರಸ್ತಾಪಿತ ಕಾಯ್ದೆ ತಿದ್ದುಪಡಿ ಮೂಲಕ ಇನ್ನು ಮುಂದೆ 10 ಮತ್ತು ಅದಕ್ಕಿಂತ ಹೆಚ್ಚಿಗೆ ಕಾರ್ಮಿಕರು ಹೊಂದಿರುವ ಅಂಗಡಿ, ಸಂಸ್ಥೆಗಳಿಂದಲೂ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಕೆ ಸಂಗ್ರಹಿಸಲು ಅನುವಾಗುವಂತೆ ರಾಜ್ಯ ಸರ್ಕಾರ ತಿದ್ದುಪಡಿ ತರಲಿದೆ. ಈವರೆಗೆ 50 ಹಾಗೂ ಅದಕ್ಕಿಂತ ಹೆಚ್ಚು ಕಾರ್ಮಿಕರು ಹೊಂದಿರುವ ಅಂಗಡಿ, ಸಂಸ್ಥೆಗಳಿಂದ ವಂತಿಕೆ ಸಂಗ್ರಹ ಮಾಡಲಾಗುತ್ತಿತ್ತು. ಇನ್ನು ಮುಂದೆ ಕನಿಷ್ಠ 10 ಕಾರ್ಮಿಕರು ಇರುವ ಸಣ್ಣ ಪ್ರಮಾಣದ ಅಂಗಡಿ, ಸಂಘ ಸಂಸ್ಥೆ, ಕಂಪನಿಗಳು ವಂತಿಕೆ ಸಂಗ್ರಹದ ವ್ಯಾಪ್ತಿಗೆ ಬರಲಿವೆ.
ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕ ಅಂಗೀಕಾರ: ಕೊಡಗು ಜಿಲ್ಲೆಯಲ್ಲಿ ಬ್ರಿಟಿಷ್ ಕಾಲದ ಕಂದಾಯ ಕಾನೂನುಗಳಿದ್ದವು. ಕರ್ನಾಟಕದಲ್ಲಿ ಇಡೀ ರಾಜ್ಯಕ್ಕೆ 1964 ರಲ್ಲಿ ಭೂಕಂದಾಯ ಕಾನೂನು ಜಾರಿಯಾಯ್ತು. ಆದ್ರೆ ಕೊಡಗಿನಲ್ಲಿ ಬ್ರಿಟಿಷ್ ಪದ್ಧತಿಯಂತೆಯೇ 2000 ರ ವರೆಗೂ ಪಹಣಿ ದಾಖಲೆಗಳು ಮುಂದುವರೆಸಲಾಯ್ತು. ಕೊಡಗಿನಲ್ಲಿ 2000 ರವರೆಗೂ ಇದ್ದ ಬ್ರಿಟಿಷ್ ಕಾನೂನುಗಳಡಿ ಸಮಸ್ಯೆಗಳು, ಗೊಂದಲಗಳಿವೆ. ಇದನ್ನು ಸರಿಪಡಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಅಂಗೀಕಾರ: ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ಪರಿಷತ್ ಸದಸ್ಯರುಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರಾಗಿ ಸೇರ್ಪಡೆಗೊಳಿಸುವ ಹಾಗೂ ಕೆಲ ನಿಯಮಗಳಿಗೆ ತಿದ್ದುಪಡಿ ತರುವ ಉದ್ದೇಶದಿಂದ ಮಸೂದೆ ರೂಪಿಸಲಾಗಿದೆ ಎಂದು ಡಿಸಿಎಂ ಡಿಕೆಶಿ ವಿವರಿಸಿದರು. ಈ ವೇಳೆ ಸುರೇಶ್ ಕುಮಾರ್, 20 ಸಾವಿರ ಜನರಿಗೆ ಒಬ್ಬರನ್ನು ನಾಮಿನೇಟೆಡ್ ಕಾರ್ಪೊರೇಟರ್ ನೇಮಕ ಮಾಡೋದ್ರ ಬಗ್ಗೆ ಆಕ್ಷೇಪಿಸಿದರು. ಅಧಿಕೃತ ಕಾರ್ಪೋರೇಟರ್ಗಳಿಗಿಂತ ಹೆಚ್ಚಾಗಿ ನಾಮಿನೇಟೆಡ್ ಕಾರ್ಪೊರೇಟರ್ಗಳು ಆಗ್ತಾರೆ ಅಂತ ವಿರೋಧಿಸಿದರು. ನಾಮಿನೇಟೆಡ್ ಕಾರ್ಪೊರೇಟರ್ ವಿಚಾರ ಕೈ ಬಿಡೋದಾಗಿ ಡಿಸಿಎಂ ಡಿಕೆಶಿ ಒಪ್ಪಿಕೊಂಡರು.
ರಾಜ್ಯಸಭಾ ಸದಸ್ಯರು ಆಗಾಗ ವಿಳಾಸ ಬದಲಿಸಿಕೊಳ್ತಾರೆ, ಇದಕ್ಕೆ ಒಂದು ಕಡಿವಾಣ ಹಾಕಿ. ಚುನಾವಣೆ ಬಂದಾಗ ಅಡ್ರಸ್ ಬದಲಿಸ್ತಾರೆ ಅಂತ ಆರ್.ಅಶೋಕ್ ಪ್ರಸ್ತಾಪಿಸಿದರು. ಆ ವಿಚಾರ ಪರಿಶೀಲನೆ ಮಾಡೋದಾಗಿ ಡಿಸಿಎಂ ಭರವಸೆ ನೀಡಿದರು. 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕೃತಗೊಂಡಿತು.
ಅಂಗೀಕಾರಗೊಂಡ ಇತರ ಮಸೂದೆಗಳ ವಿವರ: 2025ನೇ ಸಾಲಿನ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕಗಳನ್ನು ಪರ್ಯಾಲೋಚಿಸಿ ಅಂಗೀಕಾರ ಮಾಡಲಾಯಿತು.
ಇದನ್ನೂ ಓದಿ: ಈಗಲೂ ನಾನೇ, ಮುಂದೆನೂ ನಾನೇ ಮುಖ್ಯಮಂತ್ರಿ: ಸದನದಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ
ಕಾಂಗ್ರೆಸ್ ಸರ್ಕಾರ ಬಂದ ಬಳಿಕ 32 ಎಸ್ಐಟಿ ರಚನೆ: ಎಸ್ಐಟಿ ಪ್ರಕರಣದ ವಿಶೇಷ ಅಭಿಯೋಜಕರಿಗೆ ಕೋಟಿ ಕೋಟಿ ಸಂಭಾವನೆ!

