ತುಮಕೂರು: ಪ್ರಸಿದ್ಧ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಕೋತಿಗಳ ದಾರುಣ ಸಾವು
ತುಮಕೂರು ನಗರದ ಪ್ರಸಿದ್ಧ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಕೋತಿಗಳ ದಾರುಣ ಸಾವು ಸಂಭವಿಸಿವೆ.

Published : January 6, 2026 at 2:48 PM IST
ತುಮಕೂರು : ನಗರದ ಹೊರವಲಯದಲ್ಲಿರುವ ಪ್ರಸಿದ್ಧ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಕೋತಿಗಳ ದಾರುಣ ಸಾವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಜನವರಿ 2ರಂದು ಸಂಜೆ ಕೋತಿಗಳು ಮೃತಪಟ್ಟಿರುವ ಬಗ್ಗೆ ಮೆಸೇಜ್ ಬಂತು. ನಂತರ ನಾನು ಹಾಗೂ ನನ್ನ ಸಹೋದ್ಯೋಗಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ ಸುಮಾರು 7 ಕೋತಿಗಳು ಮೃತಪಟ್ಟಿರುವುದು ಕಂಡು ಬಂತು. ಅದಾದ ನಂತರ ಶನಿವಾರವೂ ಆ ಜಾಗವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಮತ್ತೆ ನಾಲ್ಕು ಮಂಗಗಳ ಶವ ಸಿಕ್ಕಿರುತ್ತದೆ ಎಂದಿದ್ದಾರೆ.
ಎರಡು ಜಾತಿಯ ಕೋತಿಗಳು ಮೃತಪಟ್ಟಿರುವುದು ಕಂಡು ಬಂದಿದೆ. ನಂತರ ಎಲ್ಲ ಕೋತಿಗಳ ಶವ ಪರೀಕ್ಷೆಯನ್ನು ನಡೆಸಲಾಗಿದೆ. ಅಲ್ಲದೇ, ಸ್ಯಾಂಪಲ್ ಅನ್ನು ಮಡಿವಾಳ ಎಫ್ಎಸ್ಎಲ್ಗೆ ಕಳುಹಿಸಿದ್ದೇವೆ. ವರದಿ ಬಂದ ನಂತರ ಕೋತಿ ಸಾವಿಗೆ ಕಾರಣ ಏನಿರಬಹುದು ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಅಂತರದಲ್ಲಿ 11 ಕೋತಿಗಳು ಸಾವನ್ನಪ್ಪಿರುವುದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ. 500-200 ಮೀಟರ್ ಅಂತರದಲ್ಲಿ ಒಂಬತ್ತು ಮಂಗ ಹಾಗೂ ಎರಡು ಲಂಗೂರ ಮಂಗಗಳ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಂದು ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಸಮೀಕ್ಷೆ ನಡೆಸಿದ್ದಾರೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಪ್ರಾಥಮಿಕವಾಗಿ ಕೋತಿಗಳು ಅನ್ನವನ್ನು ಸೇವಿಸಿರುವುದು ಪತ್ತೆಯಾಗಿದೆ. ಅಲ್ಲದೇ, ಅನ್ನದಲ್ಲಿ ಯಾರಾದರೂ ವಿಷ ಬೆರೆಸಿದ್ದಾರೆಯೇ ಎಂಬುದನ್ನು ಕೂಡ ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ಕೂಡ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಚಿಂತಾಮಣಿಯಲ್ಲಿ 60ಕ್ಕೂ ಹೆಚ್ಚು ಕುರಿಗಳ ಅನುಮಾನಾಸ್ಪದ ಸಾವು
60ಕ್ಕೂ ಹೆಚ್ಚು ಕುರಿಗಳ ಅನುಮಾನಾಸ್ಪದ ಸಾವು : ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಕಾಚಹಳ್ಳಿಯಲ್ಲಿ ಸುಮಾರು 60ಕ್ಕಿಂತ ಹೆಚ್ಚು ಕುರಿಗಳು ಕಳೆದ ಶುಕ್ರವಾರ ಸಂಜೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿತ್ತು. ಸಾವಿಗೆ ಕಾರಣ ಗೊತ್ತಾಗಿರಲಿಲ್ಲ. ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ವೈದ್ಯರು ಸ್ಥಳಕ್ಕೆ ತೆರಳಿ ಎಲ್ಲಾ ಕುರಿಗಳಿಗೆ ಚಿಕಿತ್ಸೆ ನೀಡಿದ್ದರು.
ಗ್ರಾಮದ ಜಾಫರ್ ಖಾನ್, ಖುರ್ಷಿದ್ ಮತ್ತು ಮಾಲಿಕ್ ಮೂರು ಜನರು ಸುಮಾರು 200 ಕುರಿಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ಹೊರಗಡೆ ಮೇಯಿಸಿಕೊಂಡು ಬಂದಿದ್ದರು. ಸಾಯಂಕಾಲ ಮನೆಗೆ ಬರುತ್ತಲೇ ಒಂದೊಂದಾಗಿ ಸುಮಾರು 50 ಕುರಿಗಳು ಸತ್ತಿದ್ದವು. ಕೂಡಲೇ ಪಶುವೈದ್ಯಕೀಯ ಇಲಾಖೆಯ ವೈದ್ಯರಿಗೆ ಮಾಹಿತಿ ನೀಡಿದ್ದರು.
ವೈದ್ಯರು ಸ್ಥಳಕ್ಕೆ ಬಂದು ಉಳಿದ ಎಲ್ಲಾ ಕುರಿಗಳಿಗೆ ಚುಚ್ಚುಮದ್ದು ನೀಡಿದ್ದರು. ಸಾವಿಗೆ ಕಾರಣ ಗೊತ್ತಾಗಿರಲಿಲ್ಲ. ಯಾವುದಾದರೂ ರಾಸಾಯನಿಕವನ್ನು ಸಿಂಪಡಿಸಿದ್ದ ಹುಲ್ಲನ್ನು ತಿಂದಿರಬಹುದು ಅಥವಾ ನೀರನ್ನು ಕುಡಿದಿರಬಹುದು ಎಂಬ ಅನುಮಾನವಿದೆ ಎಂದು ಮಾಲೀಕ ಜಾಫರ್ ಖಾನ್ ತಿಳಿಸಿದ್ದರು.

