ಮನೆಮಂದಿಯ ಜೀವ ಕಾಪಾಡಿದ 10ನೇ ತರಗತಿ ವಿದ್ಯಾರ್ಥಿ! ಸಮಯಪ್ರಜ್ಞೆ, ಧೈರ್ಯಶಾಲಿಗೆ ಒಲಿದುಬಂತು ಹೊಯ್ಸಳ ಶೌರ್ಯ ಪ್ರಶಸ್ತಿ
ಉಡುಪಿಯ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ತನ್ನ ಚಾತುರ್ಯ, ಸಮಯಪ್ರಜ್ಞೆ ಮತ್ತು ಧೈರ್ಯಶಾಲಿ ಕಾರ್ಯಕ್ಕಾಗಿ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಭಾಜನನಾಗಿದ್ದಾನೆ.

Published : December 2, 2025 at 7:17 PM IST
ವರದಿ: ರಹೀಂ ಉಜಿರೆ
ಉಡುಪಿ: ನಗರದ ಟಿ.ಎ. ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಮತ್ತು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಸದಸ್ಯ ದೀಪೇಶ್ ದೀಪಕ್ ಶೆಣೈ ಈಗ ಸುದ್ದಿಯಲ್ಲಿದ್ದಾನೆ. ಕಾರಣ ಈತನ ಧೈರ್ಯ, ಶೌರ್ಯ ಹಾಗೂ ಸಾಹಸ! ತನ್ನ ಜೀವ ಅಪಾಯದಲ್ಲಿಯೂ ಮನೆಯವರಿಗೆ ಜೀವ ಉಳಿಸಲು ತೋರಿದ ಈ ವಿದ್ಯಾರ್ಥಿಯ ಧೈರ್ಯ ಹಾಗೂ ನಿಸ್ವಾರ್ಥ ಸೇವೆಗಾಗಿ ರಾಜ್ಯಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿ ಲಭಿಸಿದೆ.
ಘಟನೆಯ ಹಿನ್ನೆಲೆ: ವಿದ್ಯಾರ್ಥಿ ದೀಪೇಶ್ ಮನೆಗೆ ಇತ್ತೀಚೆಗೆ ಹಾವೊಂದು ನುಗ್ಗಿ ಬಂದಿತ್ತು. ತಕ್ಷಣ ಅರಣ್ಯ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಿದರೂ ಸಹಾಯ ಸಿಗದಾಗ ಅಳುತ್ತಾ ಕೂರದ ದೀಪೇಶ್, ತನ್ನ ಜೀವವನ್ನೇ ಪಣಕ್ಕಿಟ್ಟು ಮನೆಯ ಹಿರಿಯರು, ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ಭೀತಿಯ ವಾತಾವರಣದಿಂದ ಪಾರು ಮಾಡಿ ಧೈರ್ಯ ತೋರಿದ್ದ. ಈತನ ಸಾಹಸದ ಯಶೋಗಾಥೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು: ದೀಪೇಶ್ ನೋಡಲು ಮಾಮೂಲಿ ವಿದ್ಯಾರ್ಥಿಯಾಗಿದ್ದರೂ ಚುರುಕಿನ ಹುಡುಗ. ವಿದ್ಯಾಭ್ಯಾಸ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಮುಂದು. ಉಡುಪಿ ತಾಲೂಕಿನ ಬಡಗಬೆಟ್ಟು ಗ್ರಾಮದ ಕುಕ್ಕಿಕಟ್ಟೆಯಲ್ಲಿ ಈತನ ವಾಸ. ಜೂನ್ 2025ರಂದು ಮಧ್ಯಾಹ್ನ ತಂದೆ ಮತ್ತು ಚಿಕ್ಕಪ್ಪ ಮನೆಯಿಂದ ಹೊರಹೋಗಿದ್ದರು. ಈ ವೇಳೆ ಮನೆಯಲ್ಲಿ 82 ವರ್ಷದ ಅಜ್ಜಿ ಮತ್ತು ತನ್ನ ತಾಯಿ ಹಾಗೂ 10 ವರ್ಷದ ಸಹೋದರ ಮಾತ್ರ ಇದ್ದರು. ಇಂತಹ ಸಮಯದಲ್ಲಿ ಇದ್ದಕ್ಕಿದ್ದಂತೆ ಹಾವೊಂದು ಮನೆಯನ್ನು ಪ್ರವೇಶಿಸಿತ್ತು. ಮನೆಯಲ್ಲಿದ್ದ ಎಲ್ಲರಿಗೆ ವಿಶೇಷವಾಗಿ ಅಜ್ಜಿ ಮತ್ತು ತಮ್ಮನ ಸುರಕ್ಷತೆಗೆ ಅತೀವ ಜೀವ ಭಯ ಉಂಟಾಗಿತ್ತು. ಕ್ಷಣ ಮಾತ್ರದಲ್ಲಿ ಆತಂಕ ಆವರಿಸಿತ್ತು. ತಕ್ಷಣವೇ ತನ್ನ ತಂದೆಗೆ ಕರೆ ಮಾಡಿದ್ದ. ಆದರೆ, ಅವರು ಮನೆಗೆ ಬರುವ ಅರ್ಧ ದಾರಿಯಲ್ಲಿದ್ದರು. ಆದರೆ, ಮನೆಯಲ್ಲಿ ಜೀವಭಯ ಹೆಚ್ಚಾಗುತ್ತಲೇ ಇತ್ತು. ಅಮ್ಮನ ಸಹಕಾರ ಮತ್ತು ತಂದೆಯ ಮಾರ್ಗದರ್ಶನದಿಂದ ತಕ್ಷಣ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926 ಕರೆ ಮಾಡಿದ್ದನು. ಅವರು ಒದಗಿಸಿದ ಅನೇಕ ಮೊಬೈಲ್ ಸಂಖ್ಯೆಗೆ ಎಷ್ಟೇ ಕರೆಮಾಡಿದರೂ ಯಾರೊಬ್ಬರೂ ಸ್ವಂದಿಸಲಿಲ್ಲ. ಅನೇಕ ಬಾರಿ ಕರೆ ಮಾಡಿದರೂ ಯಾವುದೇ ಸಹಾಯ ಕೂಡ ಸಿಗಲಿಲ್ಲ. ಸಹಾಯಕ್ಕೆ ಸಂಪರ್ಕಿಸಿದರೂ ಯಾವ ಅಧಿಕಾರಿಗಳೂ ಸಿಗದ ಕಾರಣ, ''ಸಿದ್ಧರಾಗಿರಿ'' ಎಂಬ ಮೌಲ್ಯಗಳನ್ನು ತನ್ನೊಳಗೆ ಬಿಂಬಿಸಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿಯ ಬಲದಿಂದ, ಹಾವನ್ನು ಸುರಕ್ಷಿತವಾಗಿ ಹಿಡಿಯುವ ಮೂಲಕ ಮನೆಯಲ್ಲಿ ನೆಲೆಸಿದ್ದ ಆತಂಕವನ್ನು ದೂರ ಮಾಡಿದ್ದನು.

ತಂದೆ ಮನೆಗೆ ಬಂದಾಗ ಎಲ್ಲವೂ ನಡೆದು ಹೋಗಿತ್ತು. ತಾನು ತೆಗೆದ ಹಾವಿನ ಒಂದೇ ಚಿತ್ರವನ್ನು ಸ್ಥಳೀಯ ವನ್ಯಜೀವಿಪ್ರಿಯರಿಗೆ ಕಳಿಸಿ ಅದರ ಬಗ್ಗೆ ಕೇಳಿದಾಗ ಅದು ''ಪಟ್ಟೆ ಬೆನ್ನೇಣು'' ಹಾವು ಆಗಿದ್ದು ''Buff-Striped Keelback'' ಎಂಬ ವಿಷರಹಿತ ಜಾತಿ ಪ್ರಭೇದಕ್ಕೆ ಸೇರಿದ್ದೆಂದು ಗೊತ್ತಾಯಿತು. ಅದೃಷ್ಟವಶಾತ್, ಯಾರಿಗೂ ಜೀವ ಹಾನಿಯಾಗರಲಿಲ್ಲ. ಅವರ ಮಾರ್ಗದರ್ಶನದ ಬಳಿಕ ಆ ಹಾವನ್ನು ಕಾಡಿಗೆ ಬಿಡಲಾಗಿತ್ತು.
ತನ್ನ ಅನುಭವದ ಮೂಲಕ, ಧೈರ್ಯ, ಜ್ಞಾನದಿಂದ ತುರ್ತು ಸಹಾಯದ ವಿಫಲತೆಯಲ್ಲಿಯೂ ಮಕ್ಕಳು ಅಳುತ್ತಾ ಕೂರಬಾರದು. ಹೇಗೆಲ್ಲ ಸ್ವಾಭಿಮಾನದಿಂದ ಕಾರ್ಯ ನಿರ್ವಹಿಸಿ ನೈತಿಕತೆ ತೋರಬಹುದು ಎಂಬುದಕ್ಕೆ ದೀಪೇಶ್ ದೀಪಕ್ ಶೆಣೈ ಸಾಕ್ಷಿಯಾಗಿದ್ದ. ಘಟನೆಯ ಬಳಿಕ ಈ ವಿದ್ಯಾರ್ಥಿಯ ಸಾಹಸವು ಎಲ್ಲರಿಗೂ ಪ್ರೇರಣೆ ಎಂದು ಸಾರ್ವಜನಿಕರು ಪ್ರಶಂಸೆಯ ಸುರಿಮಳೆ ಹರಿಸಿದ್ದರು.

ಬಳಿಕ ತಂದೆಯ ಸಹಾಯದಿಂದ ಕರ್ನಾಟಕ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926 ಕರೆ ಮಾಡಲಾಯಿತು. ಮುಖ್ಯಮಂತ್ರಿ ಕಚೇರಿಯಿಂದ ಹಿಡಿದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಉಡುಪಿ ನಗರಸಭೆ (ದೂರು ಸಂಖ್ಯೆ 24456 dtd 08/06/2025 ಹೀಗೆ ಎಲ್ಲಾ ಸಂಬಂಧಪಟ್ಟ ಕಚೇರಿಗೆ ಇಮೇಲ್ ಮೂಲಕ ತಿಳಿಸಿ ದೂರು ದಾಖಲು ಮಾಡಲಾಯಿತು. ತಕ್ಷಣಕ್ಕೆ ಸಂಬಂಧಿಸಿದ ಇಲಾಖೆಯಿಂದ ತನಗೆ ಸ್ಪಂದನೆ ಸಿಗದ ಹಿನ್ನೆಲೆ ಬಾಲಕ ಈ ದೂರನ್ನು ನೀಡಿದ್ದಾನೆ.
ಹೊಯ್ಸಳ ಶೌರ್ಯ ಪ್ರಶಸ್ತಿ: ನಾಲ್ಕು ದಿನಗಳ ನಂತರ ಉಡುಪಿ ವಲಯ ಮುಖ್ಯ ಅರಣ್ಯ ಅಧಿಕಾರಿಗಳ ತಂಡ ಮನೆಗೆ ಭೇಟಿ ನೀಡಿತ್ತು. ಈ ಘಟನೆಯಿಂದ ನೀತಿ ಮತ್ತು ನೈಜ ಸೇವೆ ನಡುವೆ ಅಂತರವಿದೆ. ಅಲ್ಲದೇ ಸಹಾಯವಾಣಿ ಇದ್ದರೂ, ಅತಿ ಮುಖ್ಯವಾದ ಕ್ಷಣದಲ್ಲಿ ನೆರವು ಮಾತ್ರ ಸಿಕ್ಕಿರಲಿಲ್ಲ ಎಂಬುದು ಸಾಬೀತಾಗಿತ್ತು. ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈನ ಈ ಚಾತುರ್ಯ, ಸಮಯಪ್ರಜ್ಞೆ ಮತ್ತು ಧೈರ್ಯಶಾಲಿ ಪರಿಗಣಿಸಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಡಮಾಡುವ ರಾಜ್ಯ ಹೊಯ್ಸಳ ಶೌರ್ಯ ಪ್ರಶಸ್ತಿ ಸಿಕ್ಕಿದೆ.
''ತನ್ನ ಜೀವ ಅಪಾಯದಲ್ಲಿಯೂ ಮನೆಯವರ ಜೀವ ಉಳಿಸಲು ಮಾಡಿದ ನಿಸ್ವಾರ್ಥ ಸೇವೆ'' ಗಾಗಿ ರಾಜ್ಯ ಸರ್ಕಾರ ಈ ಬಾಲಕನಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರದಾನ ಮಾಡಿದ್ದು ವಿಶೇಷ.

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ, ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾ, ಆ ಕ್ಷಣದಲ್ಲಿ ನನಗೆ ಬೇರೆ ದಾರಿ ಇರಲಿಲ್ಲ. ಈ ಹಿಂದೆಯೂ ಅಂತಹ ಅನುಭವ ಆಗಿರಲಿಲ್ಲ. ಮನೆಯಲ್ಲಿದ್ದವರನ್ನು ಆತಂಕದಿಂದ ದೂರ ಮಾಡಬೇಕಾಗಿ ಬಂತು. ನಾನು ಧೈರ್ಯದಿಂದ ಹಾವನ್ನು ಹಿಡಿದೆ ಎಂದು ಹೇಳಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ಕೈಯಿಂದ ಪ್ರಶಸ್ತಿ ಪಡೆಯುವಾಗ ಖುಷಿ ಆಯ್ತು. ನನ್ನ ಪೋಷಕರ ಮತ್ತು ಶಾಲೆಯ ಬೆಂಬಲವೂ ನನ್ನ ಈ ಶೌರ್ಯದ ಹಿಂದೆ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ವಿನೋದಾ ಶೆಟ್ಟಿ ಮಾತನಾಡಿ, ಈ ಹುಡುಗ ಶೌರ್ಯ ಮೆರೆದು ರಾಜ್ಯ ಮಟ್ಟದ ಪ್ರಶಸ್ತಿ ತಂದಿದ್ದು ನಮ್ಮ ಶಾಲೆಗೂ ಹೆಮ್ಮೆಯ ವಿಷಯ. ಓದಿನಲ್ಲಿಯೂ ಈ ವಿದ್ಯಾರ್ಥಿ ಮುಂಚೂಣಿಯಲ್ಲಿದ್ದಾನೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾನೆ. ತಮ್ಮ 30ಕ್ಕೂ ಹೆಚ್ಚು ವರ್ಷಗಳ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಯೊಬ್ಬ ರಾಜ್ಯ ಮಟ್ಟದ ಪ್ರಶಸ್ತಿ ತಂದಿದ್ದು ಇದೇ ಮೊದಲ ಬಾರಿ. ನಮಗೆಲ್ಲ ಹೆಮ್ಮೆ ಮತ್ತು ಖುಷಿ ಕೊಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹೊಯ್ಸಳ ಪ್ರಶಸ್ತಿ ಪಡೆಯಲು ಕಾರಣವಾದ ಅಂಶಗಳು:
- ಅಪಾಯದ ನಡುವೆ ಅಸಾಧಾರಣ ಧೈರ್ಯ: ಅಧಿಕೃತ ಮಾರ್ಗಗಳು ವಿಫಲವಾದಾಗ ಅಳುತ್ತಾ ಕೂರದೆ ತಕ್ಷಣ ನಿರ್ಧಾರ ಕೈಗೊಂಡದ್ದು.
- ಸಾಮಾಜಿಕ ಪರಿಣಾಮ: ಜೀವಗಳನ್ನು ರಕ್ಷಿಸಿ, ಹಾವನ್ನು ಬಿಡುಗಡೆ ಮಾಡಿದ್ದು.
- ಮಾದರಿಯ ಶಕ್ತಿ: ಗ್ರಾಮೀಣ–ನಗರ ಮಕ್ಕಳಿಗೆ, ಶಾಂತ ಚಿತ್ತ ಮತ್ತು ಸೇವೆಯ ಶಕ್ತಿ ಏನು ಮಾಡಬಹುದು ಎಂಬುದನ್ನು ತೋರಿಸಿದ್ದು.
- ಮೌಲ್ಯಯುತ ಸೇವೆ: ನಿಸ್ವಾರ್ಥ ಧೈರ್ಯ, ವೇಗದ ಚಿಂತನೆ, ಸಮಾಜಕ್ಕೆ ಪ್ರಯೋಜನ ಮನವರಿಕೆ ಮಾಡಿದ್ದು.
- ಕಲಿತ ಕೌಶಲ್ಯದ ಬಳಕೆ: ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಲೆಯಲ್ಲಿ ಕಲಿತ ಪಾಠಗಳು ಬದುಕು ಉಳಿಸುವ Practically Tool ಆಗಿ ಪರಿವರ್ತಿಸಿಕೊಂಡಿದ್ದು.
- ಗ್ರಾಮೀಣ ತರುಣರಿಗೆ ಪ್ರೇರಣೆ: ತರುಣರು ಸಹ ಕಷ್ಟದ ಸಮಯಲ್ಲಿಯೂ ಹೇಗೆ ಜವಾಬ್ದಾರಿಯಿಂದ ನಡೆದು ಸಮಾಜಕ್ಕೆ ಮಾದರಿಯಾಗಬಹುದೆಂದು ಸಾಬೀತುಪಡಿಸಿದ್ದು.
ಇದನ್ನೂ ಓದಿ: 100 ದೇಶದ ಅಂಚೆಪತ್ರ, 130 ದೇಶಗಳ 2 ಸಾವಿರ ಅಂಚೆಚೀಟಿ ಸಂಗ್ರಹಿಸಿದ ದಾವಣಗೆರೆ ಬಾಲಕ

