ETV Bharat / state

ನರೇಗಾ ಯೋಜನೆ ವಿರುದ್ಧ ಗ್ರಾಮ ಸಭೆಗಳ ಸೋಷಿಯಲ್ ಆಡಿಟ್‍ನಲ್ಲಿ 10.51 ಲಕ್ಷ ದೂರುಗಳು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ವಿಬಿ-ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ (Press meet)
author img

By ETV Bharat Karnataka Team

Published : January 9, 2026 at 9:45 AM IST

6 Min Read
Choose ETV Bharat

ಬೆಂಗಳೂರು: ನರೇಗಾ ಯೋಜನೆ ಸಂಬಂಧ ಗ್ರಾಮ ಸಭೆಗಳ ಸೋಷಿಯಲ್ ಆಡಿಟ್‍ನಲ್ಲಿ 10 ಲಕ್ಷ 51 ಸಾವಿರ ದೂರುಗಳು ಬಂದಿವೆ. ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ದುಡ್ಡು ತಿನ್ನುವ ವ್ಯವಸ್ಥೆ ಇದರಲ್ಲಿ ಇತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ವಿಬಿ-ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಗ್ರಾಮ ಸಭಾಗಳ ಸೋಷಿಯಲ್ ಆಡಿಟ್‍ನಲ್ಲಿ 10 ಲಕ್ಷ 51 ಸಾವಿರ ದೂರುಗಳು ಬಂದಿವೆ. 3 ವರ್ಷದ ವಿವರ ಇವು. ನಮಗೆ ಕೂಲಿ ಸಿಕ್ಕಿಲ್ಲ. ನಮ್ಮಲ್ಲಿ ಕೆಲಸ ಆಗಿಲ್ಲ; ದುಡ್ಡು ಹೊಡೆದಿದ್ದಾರೆ ಎಂಬ ದೂರುಗಳಿವು. ಮೊಬೈಲ್ ಟ್ರ್ಯಾಕಿಂಗ್, ಜಿಪಿಎಸ್ ಟ್ರ್ಯಾಕ್ ಮಾಡಿದರೆ, ನಿಮ್ಮ ಸಮಸ್ಯೆ ಏನು? ಎಂದು ಕೇಳಿದರು.

ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಇದರ ಬಗ್ಗೆ ಕಾಂಗ್ರೆಸ್ ಪಕ್ಷವು 10ರಿಂದ ಹೋರಾಟ ಮಾಡಲು ಕರೆ ನೀಡಿದೆ. 20 ವರ್ಷಗಳ ಹಿಂದೆ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ, ದೇಶ- ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು. ವಿಕಸಿತ ಭಾರತ ಆದಾಗ ಮೂಲಭೂತ ಸೌಕರ್ಯ, ದೀರ್ಘಾವಧಿಯ ಆಸ್ತಿಗಳಿರುವ ವಿಕಸಿತ ಗ್ರಾಮವೂ ಆಗದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿ ಆಗಲಿವೆ ಎಂಬ ಮಹತ್ವದ ಅಂಶವೂ ಇದರಲ್ಲಿದೆ. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಅವರೂ ಮಾಡಿದ್ದಾರೆ. ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಇದು ಕಸಿಯಲಿದೆ ಎಂಬ ಸುಳ್ಳನ್ನು ಅವರು ಹೇಳುತ್ತಿದ್ದಾರೆ. ಇದು ಶುದ್ಧಾಂಗ ಸುಳ್ಳು. ಇದು ಯಾವುದೇ ರೀತಿಯ ಕೇಂದ್ರದ ಯೋಜನೆ ಅಥವಾ ಕೇಂದ್ರ ಪ್ರಾಯೋಜಿತ ಯೋಜನೆ ಮಾಡಲು ಕಾನೂನಿನ ಅಗತ್ಯವಿಲ್ಲ. ವಿಬಿ-ಜಿ ರಾಮ್ ಜಿ ಎಂಬುದು ಸಂಸತ್ತಿನ ಕಾಯ್ದೆ ಎಂದು ತಿಳಿಸಿದರು. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ. ಇದನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಹೇಳಿದರು.

ಸರಿಯಾಗಿ ಕೆಲಸ ಕೊಟ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡುವ ಪ್ರತಿ ರಾಜ್ಯಕ್ಕೆ 17 ಸಾವಿರ ಕೋಟಿ ರೂ. ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಅಂದಾಜು ಮೂಲಕ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಮನರೇಗಾ ಇದ್ದಾಗಲೂ ಬೇರೆ ಬೇರೆ ರಾಜ್ಯ ಸರ್ಕಾರಗಳ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಉದ್ಯೋಗ ಕೊಟ್ಟಿದ್ದರು. ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದ ಬಹಳಷ್ಟು ಉದಾಹರಣೆಗಳಿವೆ ಎಂದರು.

ಹಿಂದೆ ಕೇಂದ್ರ ಸರ್ಕಾರದ ದುಡ್ಡು ತಿನ್ನುವ ವ್ಯವಸ್ಥೆ: ಹಿಂದೆ ಒಂದು ಪೈಸೆಯನ್ನೂ ರಾಜ್ಯ ಸರ್ಕಾರ ಕೊಡುತ್ತಿರಲಿಲ್ಲ. ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ದುಡ್ಡು ತಿನ್ನುವ ವ್ಯವಸ್ಥೆ ಇದರಲ್ಲಿ ಇತ್ತು. ಗುರಿ ತಲುಪದ ಅಧಿಕಾರಿಗಳ ಮೇಲೆ ಕ್ರಮ ಆಗುತ್ತಿದ್ದುದು ನಿಮಗೂ ತಿಳಿದಿದೆ. ಈಚೆಗೆ ನೇರ ಕೂಲಿ ಪಾವತಿ ಆಗುತ್ತಿದ್ದರೂ, ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ. ಆ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಕೇಂದ್ರೀಕೃತ ಪಾವತಿ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಬಹಳ ವಿಸ್ತೃತವಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಈ ಯೋಜನೆಯಲ್ಲೂ ಹಗರಣ ಮುಂದುವರೆಸುವ ಇಚ್ಛೆ ಇದ್ದುದರಿಂದ ಅವರು ವಿರೋಧಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಪಾರದರ್ಶಕ ಮಾಡಿದ್ದಕ್ಕಾಗಿ ಅವರ ಹೋರಾಟ. ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳೇ ನಿರ್ಧಾರ ಮಾಡುತ್ತವೆ. ಯಾವ ಹಳ್ಳಿಯಲ್ಲಿ ಯಾವ ಮೂಲಭೂತ ಸೌಕರ್ಯ ನಿರ್ಮಾಣ ಆಗಲಿದೆ ಎಂದು ತಿಳಿದುಕೊಳ್ಳುವ ಅವಕಾಶ ಇರುವ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಇದನ್ನು ತರಲಾಗಿದೆ. ಗತಿ ಶಕ್ತಿ ಯೋಜನೆಯಡಿ ಬೇರೆ ಬೇರೆ ಉದ್ದೇಶದ 85 ಲಕ್ಷ ಕೋಟಿ ಹೂಡಿಕೆಯ ವಿಭಿನ್ನ ಯೋಜನೆಗಳು ಮಂಜೂರಾಗಿವೆ. ಇಲ್ಲವಾದರೆ ಅವು ಹಾಗೇ ಬಿದ್ದಿರುತ್ತಿದ್ದವು ಎಂದು ತಿಳಿಸಿದರು.

ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ: 100 ದಿನ ಇದ್ದುದನ್ನು 125 ದಿನ ಮಾಡಿದರೆ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ?. ಹಿಂದೆ ಕೂಲಿ ಪಾವತಿಗೆ ನಿಗದಿತ ಕಾಲಾವಧಿ ಇರಲಿಲ್ಲ. ಈಗ 14 ದಿನದಲ್ಲಿ ಕೊಡಬೇಕು. ಇಲ್ಲವೇ ದಂಡ ಹಾಕುತ್ತಾರೆ. ಈಗ ಜಗತ್ತಿನ ಅತಿದೊಡ್ಡ 4ನೇ ಆರ್ಥಿಕ ಶಕ್ತಿಯಾಗಿ ನಾವು ಪರಿವರ್ತನೆಗೊಂಡಿದ್ದೇವೆ. ಅತಿ ಶೀಘ್ರವೇ ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಈ ಹಿಂದೆ ಕೆಲಸ ಆಗಲೀ, ಇಲ್ಲದೇ ಇರಲಿ; ದುಡ್ಡು ಪಾವತಿ ಆಗುತ್ತಿತ್ತು. ಮೇಲ್ವಿಚಾರಣೆಯಿಂದ ಇದು ಬಂದ್ ಆಗಲಿದೆ ಎಂದರು.

ಜೆಸಿಬಿ ಮೂಲಕ ಕೆಲಸ ಮಾಡಿ ವಸೂಲಿ: ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ ತಯಾರಿಸಿ ವಿಕಸಿತ್ ಭಾರತ್ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಅಡಿ ಸೇರಿಸುತ್ತಾರೆ. ಇದರಲ್ಲಿ ಗುಣಮಟ್ಟ ಮತ್ತು ಎಷ್ಟು ಕೆಲಸ ಎಂಬುದಕ್ಕೆ ಆದ್ಯತೆ ಕೊಡುತ್ತೇವೆ. ಮೊದಲು ಕೇವಲ ಎಷ್ಟು ಕೆಲಸ ಎಂಬುದನ್ನಷ್ಟೇ ಗಮನಿಸುತ್ತಿದ್ದರು. ಜೆಸಿಬಿ ಮೂಲಕ ಕೆಲಸ ಮಾಡಿ ವಸೂಲಿ ಮಾಡುತ್ತಿರಲಿಲ್ಲ ಎಂದು ಒಬ್ಬರಾದರೂ ಹೇಳಲಿ. 20, 30, 40 ರೂ. ಕಾರ್ಮಿಕರಿಗೆ ಕೊಟ್ಟು ಅದನ್ನೆಲ್ಲ ವಸೂಲು ಮಾಡಿರಲಿಲ್ಲವೇ? ಎಂದು ಕೇಳಿದರು.

ಅನುಷ್ಠಾನಕ್ಕೆ ತಂದ ಕಾಮಗಾರಿಯ ನಿರ್ವಹಣೆಗೆ ಇದರಡಿ ಅವಕಾಶ ಇದೆ. ಇವತ್ತು ಮಾಡುವುದು, ಮರೆತುಬಿಡುವ ಪದ್ಧತಿ ಅಲ್ಲ. ನೀರಾವರಿ, ರಸ್ತೆ, ಶಾಲಾ ಕಟ್ಟಡ ಮಾಡಿದ್ದರೆ, ಇಂತಿಷ್ಟು ವರ್ಷ ನಿರ್ವಹಣೆ ಮಾಡಬೇಕೆಂಬ ಸೂಚನೆ ಇರುತ್ತದೆ. ಇದರಲ್ಲಿ ನಿಮ್ಮದೇನು ಸಮಸ್ಯೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಆಡಳಿತಾತ್ಮಕ ವೆಚ್ಚ ಶೇ.6 ಇತ್ತು. ಹೀಗಾಗಿ ಸಿಬ್ಬಂದಿಗಳಿಗೆ ವೇತನ ಸಿಗುತ್ತಿರಲಿಲ್ಲ. ಸಿಬ್ಬಂದಿಗಳಿಗೆ ನೇರ ವೇತನ ಕೊಡುವ ವ್ಯವಸ್ಥೆ ಮಾಡಿ, ಅದನ್ನು ಶೇ 9ಕ್ಕೆ ಏರಿಸಿದ್ದೇವೆ. ಕಳೆದ 20 ವರ್ಷಗಳಲ್ಲಿ ಸರಾಸರಿ 100 ದಿನ, 100 ದಿನ ಸೋನಿಯಾಗಾಂಧಿ ಯೋಜನೆ ಎಂದು ಭಾಷಣ ಮಾಡಿದ್ದಾರೆ. ಇದರ ಕುರಿತು ಚರ್ಚೆ ನಡೆದಾಗ ರಾಹುಲ್ ಗಾಂಧಿ ಹಾಜರಿರಲಿಲ್ಲ. ಅವರೇನು ಗಂಭೀರತೆ ಉಳ್ಳ ರಾಜಕಾರಣಿಯೇ. ವಿದೇಶಕ್ಕೆ ಹೋಗಿದ್ದರು. ಯಾಕೆ ವಿದೇಶಕ್ಕೆ ಹೋಗಿದ್ದೀರಿ ಎಂದು ಕಿಡಿ ಕಾರಿದರು.

ಸೋಷಿಯಲ್ ಆಡಿಟಿಂಗ್ ಇನ್ನು ಮುಂದೆ ಆರು ತಿಂಗಳಿಗೊಮ್ಮೆ ನಡೆಯಲಿದೆ. ಮೊದಲು ಇದನ್ನು ಸಾಕ್ಷ್ಯವಾಗಿ ಪರಿಗಣಿಸುತ್ತಿರಲಿಲ್ಲ. ಇನ್ನು ಮುಂದೆ ಈ ವರದಿಯನ್ನು ಡಿಜಿಟಲ್ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಇದೆಲ್ಲವೂ ತಾಂತ್ರಿಕ ಆಧರಿತ ಆಗಿರುವ ಕಾರಣ ಇದರಿಂದ ಇವರ ಭ್ರಷ್ಟಾಚಾರಕ್ಕೆ, ಇವರ ಮಧ್ಯವರ್ತಿಗಳಿಗೆ ತೊಂದರೆ ಆಗಲಿದೆ. ಗರಿಗರಿ ಅಂಗಿ, ಬಿಳಿ ಟೊಪ್ಪಿ ಹಾಕಿ ಓಡಾಡುವ ಕಾಂಗ್ರೆಸ್ಸಿನ ಜನ ಇದ್ದಾರಲ್ಲವೇ?. ಅವರಿಗೆ ತೊಂದರೆ ಆಗಲಿದೆ. ಇನ್ನು ಮೇಲೆ ಅವರಿಗೆ ದುಡ್ಡು ಸಿಗಲಾರದು ಎಂದು ನುಡಿದರು.

ಯಾವುದಾದರೂ ದೂರು (ಅಹವಾಲು) ಇದ್ದಲ್ಲಿ ಇಂತಿಷ್ಟು ತಿಂಗಳಲ್ಲಿ ಬಹುಹಂತದ ದೂರು ಪರಿಹಾರ ವ್ಯವಸ್ಥೆಯ ಮೂಲಕ ಪರಿಹರಿಸಲಾಗುವುದು. ತನಿಖೆ ನಡೆಸಿ ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕಾನೂನಿನಡಿ ಅವಕಾಶ ಕಲ್ಪಿಸಿದ್ದೇವೆ. ಯಾರಾದರೂ ಕೋರ್ಟಿಗೆ ಹೋದರೆ ಸಂಬಂಧಿತ ಅಧಿಕಾರಿಗೆ ಶಿಕ್ಷೆ ಆಗಲಿದೆ ಅಥವಾ ಇಲಾಖಾ ತನಿಖೆಯಡಿ ಶಿಕ್ಷೆ ಸಿಗಲಿದೆ. ನೀವೇನು ಅಸಂಬದ್ಧ ಮಾತನಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.

ಅಹವಾಲು ಸ್ವೀಕಾರದಿಂದ ಆರಂಭಿಸಿ ಅಹವಾಲು ಪರಿಹಾರದವರೆಗೆ ಪಾರದರ್ಶಕತೆಯನ್ನು ಇದರೊಳಗೆ ತಂದಿದ್ದೇವೆ. ಕೆಲಸವೇ ನಡೆಯದೇ ಹಣ ಪಾವತಿಸಿದ ಘಟನೆಗಳು ಪಶ್ಚಿಮ ಬಂಗಾಲದ 19 ಜಿಲ್ಲೆಗಳಲ್ಲಿ ಹಿಂದೆ ಪತ್ತೆಯಾಗಿದ್ದವು. ಹಣ ದುರ್ಬಳಕೆ ಕಾರಣಕ್ಕಾಗಿ ಅಲ್ಲಿ ಯೋಜನೆಯೇ ತಾತ್ಕಾಲಿಕವಾಗಿ ಬಂದ್ ಆಗಿತ್ತು. 2025-26ರಲ್ಲಿ 23 ರಾಜ್ಯಗಳಲ್ಲಿ ಮೇಲ್ವಿಚಾರಣೆ ನಡೆಸಿದಾಗ ಎಷ್ಟೋ ಯೋಜನೆಗಳು ಇರಲೇ ಇಲ್ಲ. ಅಥವಾ ಆದ ವೆಚ್ಚಕ್ಕೆ ಇರುವುದಕ್ಕೂ ಸಂಬಂಧವೇ ಇಲ್ಲದಂತಿತ್ತು. ಮನಸ್ಸಿಗೆ ಬಂದಂತೆ ಕೆಲಸ, ಯಂತ್ರಗಳ ಬಳಕೆಯೂ ನಡೆದಿದೆ ಎಂದು ವರದಿಯನ್ನು ಉಲ್ಲೇಖಿಸಿ ತಿಳಿಸಿದರು.

ಆಧಾರ್ ಸೇರ್ಪಡೆ 2014ರವರೆಗೆ 76 ಲಕ್ಷ ಇತ್ತು. ಈಗ ಅದನ್ನು 12.11 ಕೋಟಿಗೆ ಏರಿಸಿದ್ದೇವೆ. ಯಾರು ಬರುತ್ತಾರೋ ಅವರಿಗೆ ಕೆಲಸ ಕೊಡುತ್ತೇವೆ. ಹಿಂದೆ ಡಿಜಿಟಲ್ ಇ ಪಾವತಿ ಶೇ 37ರಷ್ಟಿತ್ತು. ಇವರು ದುಡ್ಡು ಹಾಗೇ ಕೈಯಲ್ಲಿ ಕೊಡುತ್ತಿದ್ದರು. ನಾವು ಡಿಜಿಟಲ್ ಪಾವತಿ ಪ್ರಮಾಣವನ್ನು ಶೇ 99ಕ್ಕೆ ಏರಿಸಿದ್ದೇವೆ. ಆ ಕಾರಣದಿಂದ ಬಜೆಟ್‍ನಲ್ಲಿ ಮತ್ತು ಜವಾಬ್ದಾರಿಯಲ್ಲಿ ಭಾಗೀದಾರಿಕೆ ಅನಿವಾರ್ಯ. ನಾವು 125 ದಿನಕ್ಕೆ ನಮ್ಮ ಮೊತ್ತ ಹೆಚ್ಚಿಸುತ್ತೇವೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಜಾಸ್ತಿ ಹಣ ಸಿಗಲಿದೆ ಎಂದು ವಿಶ್ಲೇಷಿಸಿದರು.

ನೀರು, ಶೌಚಾಲಯ ಸಂಬಂಧಿತ ವ್ಯವಸ್ಥೆ, ಇತರ ಅವಶ್ಯಕತೆ ಆಧರಿಸಿ ಗ್ರಾಮ ಪಂಚಾಯಿತಿಗೆ ಯೋಜನೆ ರೂಪಿಸಲು ವಿಶೇಷ ಅಧಿಕಾರ ಇರಲಿದೆ. ಈ ಯೋಜನೆಗಳನ್ನು ನಾವು ಯೋಜಿತ ರೀತಿಯಲ್ಲಿ ಮಾಡಿದ್ದೇವೆ. ದೇಶದ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಲ್ರ್ಡ್ ಬ್ಯಾಂಕ್, ನೀತಿ ಆಯೋಗದ ವರದಿ ಪ್ರಕಾರ ನಮ್ಮ ದೇಶದ ಬಡತನ, ಬಹು ಆಯಾಮದ ಬಡತನದಿಂದ 25 ಕೋಟಿ ಜನರು ಹೊರಕ್ಕೆ ಬಂದಿದ್ದಾರೆ. ಅದರರ್ಥ ದೇಶ ನಂದನವನ ಆಗಿದೆ ಎಂದಲ್ಲ. ಇನ್ನಷ್ಟು ಕೆಲಸ ಆಗಬೇಕಿದೆ. ಅದಕ್ಕೆ ಮೂಲಭೂತ ಸೌಕರ್ಯ ಬೇಕು. ಅದಕ್ಕಾಗಿ ನೀರಾವರಿ ಬೇಕು. ಇದೆಲ್ಲ ಆಗಲು ಉತ್ತಮ ಗುಣಮಟ್ಟದ ವಿದ್ಯುತ್ ಅವಶ್ಯವಾಗಿ ಬೇಕಾಗಲಿದೆ. ಇಂಥ ಅನೇಕ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ನಾವು ಒಂದು ವಿಶೇಷವಾದ ಯೋಜನೆಯನ್ನು ಈ ವ್ಯವಸ್ಥೆಯಡಿ ಮಾಡಿದ್ದೇವೆ. ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರ ಹೀಗೇ ಮುಂದುವರೆಯಬೇಕು. ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶ, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಹೇಳಿಕೊಂಡು ಜಗತ್ತಿನ ಮುಂದೆ ನಾವು ಹೀಗೇ ಅಡ್ಡಾಡಬೇಕು. ಇವರ ಮಧ್ಯವರ್ತಿಗಳು ಶ್ರೀಮಂತರಾಗಬೇಕು ಎಂಬ ಕಾರಣದಿಂದ ಈ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ನಿಮಗೆ ಬುದ್ಧಿ ಬೇಡವೇ?: 80 ವರ್ಷದ ಕಾರ್ಮಿಕರೂ ಇದ್ದಾರೆ. ಅವರ ಹೆಸರಿಗೆ ದುಡ್ಡು ಹಾಕಿದ್ದಾರೆ. ಹಳೆ ಕಲ್ಲು ಹೊಸ ಬಿಲ್ -ಇದು ಎಲ್ಲ ಕಡೆ ನಡೆದಿದೆ. 100 ದಿನಗಳ ಕಾಲ ಕೆಲಸ ಕೊಡಬೇಕಾದ ದಲಿತ ಮಹಿಳೆಯೊಬ್ಬರ ಹೆಸರಿನಲ್ಲಿ ದುಡ್ಡು ಹೊಡೆದಿದ್ದರು. ಸಿದ್ದರಾಮಯ್ಯರ ಮೊದಲ ಅವಧಿಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ದುಡ್ಡು ಹೊಡೆದ ಇಂಥ ಸಾವಿರ ಉದಾಹರಣೆಗಳಿವೆ. ಇದರಲ್ಲಿ ಬದಲಾವಣೆ, ಪಾರದರ್ಶಕತೆ ಬೇಡವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ನಿಮಗೆ ಬುದ್ಧಿ ಬೇಡವೇ ಸಿದ್ದರಾಮಯ್ಯನವರೇ? ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ನರೇಗಾ ಹೆಸರು ಬದಲಾಯಿಸಿ ಕೇಂದ್ರ ಸರ್ಕಾರ ಬಡವರ ಬದುಕಿಗೆ ಬರೆ ಹಾಕಿದೆ: ಸಿಎಂ ಸಿದ್ದರಾಮಯ್ಯ