F1 ರೇಸ್ ಕಾರಿನ ವೈಶಿಷ್ಟ್ಯಗಳೇನು? ಇದು ಯಾಕಿಷ್ಟು ದುಬಾರಿ?
ಎಫ್1 ರೇಸ್ನಲ್ಲಿ ಬಳಸಲಾಗುವ ಕಾರುಗಳು ಮತ್ತು ಸಾಮಾನ್ಯ ಕಾರುಗಳಿಗಿರುವ ವ್ಯತ್ಯಾಸ ಏನು? ಇವು ಏತಕ್ಕೆ ಇಷ್ಟು ದುಬಾರಿ ಆಗಿರುತ್ತವೆ. ಇವುಗಳ ಬೆಲೆ ಎಷ್ಟು ಮತ್ತು ವೈಶಿಷ್ಟ್ಯಗಳೇನು ಎಂಬ ಪ್ರಮುಖ ಮಾಹಿತಿ ಈ ಕೆಳಗಿದೆ.

Published : May 31, 2026 at 11:00 PM IST
ಕಾರುಗಳ ಸ್ಪರ್ಧೆ ಎಂದಾಕ್ಷಣ ತಕ್ಷಣಕ್ಕೆ ನೆನಪಿಗೆ ಬರುವುದು ವಿಶ್ವ ಪ್ರಸಿದ್ದ ಫಾರ್ಮುಲಾ ಒನ್ ಅಥವಾ F1 ರೇಸ್. ಇದು ದೇಶ ಸೇರಿದಂತೆ ವಿದೇಶಗಳಲ್ಲಿ ದೊಡ್ಡ ಫ್ಯಾನ್ಬೇಸ್ ಹೊಂದಿದೆ. ಅದರಲ್ಲೂ ವಿದೇಶಿಗರು ಇದನ್ನು ಪ್ರತಿಷ್ಠೆಯ ಗೇಮ್ ಆಗಿ ಕಾಣುತ್ತಾರೆ. ಇಂತಹ ಖ್ಯಾತ ಕ್ರೀಡೆ ಹೇಗೆ ಹುಟ್ಟಿಕೊಂಡಿತು, ಸಾಮಾನ್ಯ ಕಾರುಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿರುವ ವೈಶಿಷ್ಟ್ಯತೆಗಳೇನು? ಇವುಗಳಿಗೆ ಬಳಕೆ ಮಾಡುವ ಟೈರ್‌ಗಳು ಯಾವವು ಮತ್ತು ಪ್ರತಿ ರೇಸ್ ಬಳಿಕ ಏಕೆ ಡ್ರೈವರ್ಗಳು 2 ರಿಂದ 3 ಕೆಜೆ ತೂಕ ಕಳೆದುಕೊಳ್ಳುತ್ತಾರೆ ಎಂಬಿತ್ಯಾಧಿ ವಿಷಯಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ.
ಎಫ್ 1 ಇತಿಹಾಸ: ಫಾರ್ಮುಲಾ ಒನ್ ಕ್ರೀಡೆಯೂ 1920 ಮತ್ತು 30ರ ನಡುವೆ ಹುಟ್ಟಿಕೊಂಡಿತು. ಆರಂಭದಲ್ಲಿ ಇದನ್ನು ಯುರೋಪಿಯನ್ ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್ ರೇಸಿಂಗ್ ಎಂದು ಕರೆಯಲಾಗುತಿತ್ತು. ಕಾಲನಂತರದಲ್ಲಿ ಇದನ್ನು ಫಾರ್ಮುಲಾ 1 ಆಗಿ ಬದಲಾಯಿಸಲಾಗಿದೆ. 1950 ಮೇ 13ರಂದು ಇಂಗ್ಲೆಂಡ್‌ನ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಯಿತು ಅಂದಿನಿಂದ ದಿನ ಕಳೆದ ಖ್ಯಾತಿ ಪಡೆಯುತ್ತ ಸಾಗಿತು.

ಆರಂಭದಲ್ಲಿ ಬಳಕೆ ಮಾಡುತ್ತಿದ್ದ ಕಾರುಗಳು ಸಾಮಾನ್ಯವಾಗಿದ್ದವು. ನಂತರ ತಂತ್ರಜ್ಞಾನ, ಸುರಕ್ಷತೆ ಮತ್ತು ವೇಗದ ವಿಷಯದಲ್ಲಿ F1 ನಿರಂತರವಾಗಿ ಅಭಿವೃದ್ಧಿ ಹೊಂದುತ್ತ ಸಾಗಿತು. ಇಂದು ಈ ಕಾರುಗಳಲ್ಲಿ ಹೈಬ್ರಿಡ್ ಎಂಜಿನ್, ಅತ್ಯಾಧುನಿಕ ಏರೋಡೈನಾಮಿಕ್ಸ್ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತದೆ ಇದೇ ಕಾರಣಕ್ಕೆ ಇದನ್ನು ರಸ್ತೆ ಮೇಲೆ ಚಲಿಸುವ ವಿಮಾನ ಎಂದು ಕರೆಯಲಾಗುತ್ತದೆ.
F1 ರೇಸ್ ಕಾರ್‌ನ ವೈಶಿಷ್ಟ್ಯಗಳು
ಈ ಕಾರುಗಳಲ್ಲಿ ಬಳಕೆ ಮಾಡುವ ಎಂಜಿನಿಂದ ಹಿಡಿದು ಪ್ರತಿಯೊಂದು ಭಾಗವೂ ಸಾಮಾನ್ಯ ಕಾರುಗಳಿಗಿಂತ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುತ್ತವೆ.
ಕಾರ್ಬನ್-ಫೈಬರ್ ಮೊನೊಕಾಕ್: ಈ ಕಾರಿನಲ್ಲಿ ಚಾಲಕನ ರಕ್ಷಣೆಗಾಗಿ ಮಾಡಲ್ಪಟ್ಟಿರುವ ಅತ್ಯಾಧುನಿಕ ಸಾಧನ ಇದಾಗಿದೆ. ಈ ಫೈಬರ್ ಮೊನೊಕಾಕ್ ಹಗುರವಾದ ಮತ್ತು ಅತ್ಯಂತ ಬಲವಾದ ಪ್ರಮುಖ ಭಾಗವಾಗಿದ್ದು, ಅಪಘಾತಗಳ ಸಮಯದಲ್ಲಿ ಚಾಲಕನನ್ನು ರಕ್ಷಿಸಲು ಕಾಕ್‌ಪಿಟ್ ಮತ್ತು ಇಂಧನ ಟ್ಯಾಂಕ್ ಅನ್ನು ಸುರಕ್ಷಿತವಾಗಿರಿಸುತ್ತದೆ.

ಹಾಲೋ ಸುರಕ್ಷತಾ ಕವಚ: ಕಾರಿನಲ್ಲಿ ಬಳಕೆ ಚಾಲಕನ ತಲೆಯ ಮೇಲ್ಭಾಗದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಇದು ಟೈಟಾನಿಯಂನಿಂದ ಮಾಡಿದ ರಕ್ಷಣಾ ಕವಚವಾಗಿದೆ. ಎಷ್ಟೇ ಭೀಕರ ಅಪಘಾತ ಸಂಭವಿಸಿದರೂ ಚಾಲಕನ ತಲೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹ್ಯಾನ್ಸ್ ಸಾಧನ: ಇದು ಕಾರಿನಲ್ಲಿ ಚಾಲಕನ ಹೆಡ್ ಅಂಡ್ ನೆಕ್ ರಕ್ಷಕವಚವಾಗಿದೆ. ಅಪಘಾತಗಳ ಸಂದರ್ಭದಲ್ಲಿ ಚಾಲಕನ ಕುತ್ತಿಗೆ ಮತ್ತು ತಲೆಗೆ ಗಾಯವಾಗದಂತೆ ತಡೆಯುತ್ತದೆ.
ಎಂಜಿನ್: ಈ ಕಾರಿನಲ್ಲಿ 1.6-ಲೀಟರ್ V6 ಟರ್ಬೋಚಾರ್ಜ್ಡ್ ಎಂಜಿನ್ ಬಳಕೆ ಮಾಡಲಾಗುತ್ತದೆ. ಇದು 15,000 RPM ವರೆಗೆ ಚಲಿಸಬಲ್ಲ ಅತ್ಯಂತ ಶಕ್ತಿಯುತ ಇಂಧನ ಎಂಜಿನ್ ಆಗಿದೆ.
ಹೈಬ್ರಿಡ್ ಎನರ್ಜಿ ರಿಕವರಿ ಸಿಸ್ಟಮ್: ಸಮಾನ್ಯವಾಗಿ ಎಫ್ 1 ರೇಸ್ನಲ್ಲಿ ಕಾರುಗಳು ಅತ್ಯಂತ ವೇಗವಾಗಿ ಚಲಿಸುವ ಕಾರಣ ಬ್ರೇಕ್ ಹಾಕಿದಾಗ ಹೆಚ್ಚಿನ ಫ್ಯೂಲ್ ಕನ್ಸಪ್ಷನ್ ಆಗುತ್ತದೆ. ಆಗ ಚಲನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ಬ್ಯಾಟರಿಯಲ್ಲಿ ಸಂಗ್ರಹಿಸಲು ಈ ಸಾಧನ ಸಹಾಯಕವಾಗಿರುತ್ತದೆ. ಇದು ಕಾರ್ ವೇಗವನ್ನು ಹೆಚ್ಚಿಸಲು ಹೆಚ್ಚುವರಿ ಬೂಸ್ಟ್ ನೀಡುತ್ತದೆ.

ಸ್ಥಿರ ಇಂಧನ: ಈ ಕಾರುಗಳು 100 ರಷ್ಟು ಪರಿಸರ ಸ್ನೇಹಿ ಆಗಿರಲಿದ್ದು ಕಾರ್ಬನ್-ನ್ಯೂಟ್ರಾಲ್ ಇಂಧನದಿಂದ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಸೆಮಿ-ಅಟೋಮ್ಯಾಟಿಕ್ ಗೇರ್‌ಬಾಕ್ಸ್: ಈ ತಂತ್ರಜ್ಞಾನದಿಂದ ಸ್ಟೀರಿಂಗ್ ವೀಲ್‌ನಲ್ಲಿರುವ ಪ್ಯಾಡಲ್ ಶಿಫ್ಟರ್‌ಗಳ ಸಹಾಯದಿಂದ ಕೇವಲ ಕೆಲವೆ ಮಿಲಿ ಸೆಕೆಂಡ್ಗಳಲ್ಲಿ 8-ಸ್ಪೀಡ್ ಗೇರ್‌ಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
ಆಕ್ಟಿವ್ ಏರೋಡೈನಾಮಿಕ್ಸ್: ತಿರುವುಗಳಲ್ಲಿ ಕಾರು ರಸ್ತೆಗೆ ಕಚ್ಚಿ ಹಿಡಿಯಲು (High Downforce) ಮತ್ತು ನೇರ ರಸ್ತೆಯಲ್ಲಿ ಗಾಳಿಯ ತಡೆಯನ್ನು ಕಡಿಮೆ ಮಾಡಿ ವೇಗವಾಗಿ ಹೋಗಲು ಮುಂದಿನ ಮತ್ತು ಹಿಂದಿನ ರೆಕ್ಕೆಗಳು (Wings) ತಾವಾಗಿಯೇ ಹೊಂದಿಕೊಳ್ಳುತ್ತವೆ.
ಅಂಡರ್‌ಬಾಡಿ ಡಿಫ್ಯೂಸರ್: ಕಾರಿನ ಕೆಳಭಾಗದಲ್ಲಿ ಗಾಳಿಯ ವೇಗವನ್ನು ಹೆಚ್ಚಿಸುವ ಮೂಲಕ ತಿರುವುಗಳಲ್ಲಿಯೂ ಸ್ಥಿರವಾಗಿರಲು ಕಾರುಗಳಿಗೆ ಸಹಾಯ ಮಾಡುತ್ತದೆ.

ಅತ್ಯಾಧುನಿಕ ಸ್ಟೀರಿಂಗ್ ವೀಲ್: ಎಫ್1 ಕಾರಿನಲ್ಲಿ ವಿಶ್ವದ ಅತ್ಯಂತ ದುಬಾರಿ ಸ್ಟೀರಿಂಗ್ ಅಳವಡಿಸಲಾಗಿರುತ್ತದೆ. ಇದರಲ್ಲಿ ಡಿಜಿಟಲ್ ಡಿಸ್ಪ್ಲೇ ಮತ್ತು ಹಲವಾರು ಬಟನ್‌ಗಳಿರುತ್ತವೆ. ಇವುಗಳ ಮೂಲಕ ಚಾಲಕನು ಬ್ರೇಕ್ ಬ್ಯಾಲೆನ್ಸ್, ಎಂಜಿನ್ ಮೋಡ್ ಮತ್ತು ಕಾರು ಚಲಾಯಿಸುತ್ತಲೇ ಸಂವಹನ ನಡೆಸಬಹುದಾಗಿದೆ.
ಬ್ರೇಕಿಂಗ್ ವ್ಯವಸ್ಥೆ ಮತ್ತು ಟೈರ್‌ಗಳು
ಕಾರ್ಬನ್ ಡಿಸ್ಕ್ ಬ್ರೇಕ್‌ಗಳು: ಇವು 1,000°C ಗಿಂತ ಹೆಚ್ಚಿನ ತಾಪಮಾನದಲ್ಲೂ ಕಾರ್ಯನಿರ್ವಹಿಸುತ್ತವೆ. ಇದು ಕಾರನ್ನು 300 ಕಿಮೀ ವೇಗದಿಂದ ಕೆಲವೆ ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ನಿಲ್ಲಿಸಲು ಸಹಾಯ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಅದಾಗ್ಯೂ ಬ್ರೇಕಿಂಗ್ ವೇಳೆ ಚಾಲಕರು ಹೆಚ್ಚಿನ ಶಕ್ತಿ ಕಳೆದುಕೊಳ್ಳುತ್ತಾರೆ.
ಎಫ್1 ರೇಸ್ನಲ್ಲಿ ಬಳಕೆಯಾಗುವ ಟೈರ್‌ಗಳು: ಫಾರ್ಮುಲಾ 1 ರೇಸಿಂಗ್‌ನಲ್ಲಿ ಟೈರ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿ ಬಳಕೆ ಮಾಡುವ ಟೈರ್ಗಳನ್ನು ಪಿರೆಲ್ಲಿ (Pirelli) ಸಂಸ್ಥೆ ತಯಾರಿಸುತ್ತದೆ. ಪಿರೆಲ್ಲಿ ಸಂಸ್ಥೆಯು ಒಟ್ಟು 5 ಬಗೆಯ ರಬ್ಬರ್ ಟೈರ್ಗಳನ್ನು ತಯಾರಿಸುತ್ತದೆ. ಇದರಲ್ಲಿ ಅತ್ಯಂತ ಗಡುಸಾದ (Hard) ಮತ್ತು ಅತ್ಯಂತ ಮೃದುವಾದ (Soft) ಟೈರ್ ಒಳಗೊಂಡಿರುತ್ತದೆ. ಪ್ರತಿ ರೇಸ್‌ಗೆ ತಕ್ಕಂತೆ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಎಫ್1 ರೇಸ್ ಕಾರಿಗೆ ಬಳಸುವ ಟೈರ್‌ಗಳು 18 ಇಂಚಿನದ್ದಾಗಿರುತ್ತವೆ ಇವು ನಾವು ಸಾಮಾನ್ಯ ಕಾರುಗಳಲ್ಲಿ ಬಳಸುವ ಟೈರ್‌ಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಕೇವಲ 60 ರಿಂದ 120 ಕಿಲೋಮೀಟರ್‌ಗಳವರೆಗೆ ಮಾತ್ರ ಬಾಳಿಕೆ ಬರುತ್ತವೆ.

ಡ್ರೈ ಟೈರ್ಸ್ ಅಥವಾ ಸ್ಲಿಕ್ ಟೈರ್ಸ್ (Dry / Slick Tires)
ಇದು ಒಣ ರಸ್ತೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಟೈರ್‌ಗಳ ಮೇಲೆ ಯಾವುದೇ ಗೆರೆಗಳು ಇರುವುದಿಲ್ಲ ಇವುಗಳನ್ನು ಸ್ಲಿಕ್ ಟೈರ್ಸ್ ಎನ್ನಲಾಗುತ್ತದೆ. ಇವುಗಳು ರಸ್ತೆಯಲ್ಲಿ ಹೆಚ್ಚಿನ ಹಿಡಿತ ಸಾಧಿಸಲು ವಿನ್ಯಾಸಗೊಳಿಸಲಾಗಿದೆ.
ಸಾಫ್ಟ್ ಟೈರ್ (ಕೆಂಪು ಬಣ್ಣ)
ಇದು ಅತ್ಯಂತ ಮೃದುವಾದ ರಬ್ಬರ್‌ನಿಂದ ಮಾಡಲ್ಪಟ್ಟಿರುತ್ತದೆ. ಅತ್ಯಂತ ವೇಗವಾಗಿ ಚಲಿಸುತ್ತದೆ ಹೆಚ್ಚಿನ ಹಿಡಿತ ನೀಡುತ್ತದೆ. ಇವುಗಳನ್ನು ಹೆಚ್ಚಾಗಿ ಕ್ವಾಲಿಫೈರ್ ರೌಂಡ್‌ನಲ್ಲಿ ಬಳಸುತ್ತಾರೆ. ಆದರೆ ಇದು ಬೇಗ ಸವೆದುಹೋಗುತ್ತದೆ
ಮೀಡಿಯಂ ಟೈರ್ (ಹಳದಿ ಬಣ್ಣ)
ಇದು ಸಾಫ್ಟ್ ಮತ್ತು ಹಾರ್ಡ್ ಟೈರ್‌ಗಳ ನಡುವೆ ಇರುತ್ತದೆ. ಉತ್ತಮ ವೇಗ ಮತ್ತು ಸಾಧಾರಣ ಬಾಳಿಕೆ ಎರಡನ್ನೂ ನೀಡುತ್ತದೆ. ರೇಸ್ ಸ್ಟ್ರಾಟಜಿಯಲ್ಲಿ ಇದು ಅತ್ಯಂತ ಪ್ರಮುಖವಾದ ಟೈರ್ ಆಗಿದೆ.
ಹಾರ್ಡ್ ಟೈರ್ (ಬಿಳಿ ಬಣ್ಣ)
ಇದು ಅತ್ಯಂತ ಗಟ್ಟಿಯಾದ ಟೈರ್ ಆಗಿರುತ್ತದೆ. ಹೆಚ್ಚು ಬಾಳಿಕೆ ಬರುತ್ತದೆ. ಜೊತೆಗೆ ಪಿಟ್-ಸ್ಟಾಪ್ ಮಾಡದೆ ಹೆಚ್ಚು ಲ್ಯಾಪ್‌ಗಳನ್ನು ಓಡಿಸಲು ಇದನ್ನು ಬಳಸಲಾಗುತ್ತದೆ. ಆದರೆ ರಸ್ತೆಯ ಮೇಲೆ ಹಿಡಿತ ಮತ್ತು ವೇಗ ಕಡಿಮೆ ಇರುತ್ತದೆ.

ವೆಟ್ ಟೈರ್ಸ್: ಮಳೆ ಬಂದಾಗ ರಸ್ತೆಯ ಕಾರು ಸ್ಕಿಡ್ ಆಗದಂತೆ ತಡೆಯಲು ಈ ಟೈರ್ಗಳನ್ನು ಬಳಸುತ್ತಾರೆ. ಈ ಟೈರ್‌ಗಳ ಮೇಲೆ ವಿಶೇಷ ಗೆರೆಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ ಇವು ಹೆಚ್ಚಿನ ಗ್ರಿಪ್ ನೀಡುತ್ತದೆ. ಇವುಗಳಲ್ಲಿ ಎರಡು ಬಗೆ ಇಂಟರ್ಮಿಡಿಯೇಟ್ (ಹಸಿರು ಬಣ್ಣ) ಮತ್ತ ಫುಲ್ ವೆಟ್ (ನೀಲಿ ಬಣ್ಣ) ಟೈರ್ಗಳಿರುತ್ತವೆ. ಇಂಟರ್ಮಿಡಿಯಟ್ ಟೈರ್ ರಸ್ತೆ ಪೂರ್ತಿ ಒಣಗಿರದ ಅಥವಾ ಲಘು ಮಳೆಯಾಗುತ್ತಿರುವ ಸಂದರ್ಭದಲ್ಲಿ ಬಳಸಲಾಗುತ್ತದೆ. ಫುಲ್ವೆಟ್ ಟೈರ್ ವಿಪರೀತ ಮಳೆ ಸುರಿಯುತ್ತಿರುವಾಗ ಇದನ್ನು ಬಳಸಲಾಗುತ್ತದೆ. ಇದರ ಮೇಲಿರುವ ಆಳವಾದ ಗೆರೆಗಳು ಕಾರು ಜಾರದಂತೆ ತಡೆಯುತ್ತವೆ.
ಎಫ್ 1ನಲ್ಲಿ ಬಳಸುವ ಕಾರುಗಳು: ಫಾರ್ಮುಲಾ ಒನ್ನಲ್ಲಿ ಒಟ್ಟು 20 ಚಾಲಕರನ್ನೊಳಗೊಂಡ 10 ತಂಡಗಳು ಭಾಗವಹಿಸುತ್ತವೆ. ಈ ಗೇಮ್ನಲ್ಲಿ ಬಳಸಲಾಗುವ ಕಾರುಗಳೆಂದರೇ ಫೆರಾರಿ (1950 ರ ಸೀಸನ್ನಿಂದಲೂ ಈ ಕಾರನ್ನು ಬಳಸಲಾಗುತ್ತಿದೆ) ಮತ್ತು ಮೆಕ್‌ಲಾರೆನ್ ಮತ್ತು ಹಾಸ್ ಕಾರನ್ನು ಈ ಕ್ರೀಡೆಯಲ್ಲಿ ಬಳಸಲಾಗುತ್ತದೆ.
ಎಫ್1 ರೇಸ್ ಚಾಕರು ತೂಕ ಕಳೆದುಕೊಳ್ಳಲು ಕಾರಣ ಏನು?
ಎಫ್1 ರೇಸ್ ವೇಳೆ ಚಾಲಕರು 2 ರಿಂದ 4 ಕೆಜಿ ತೂಕ ಕಳೆದುಕೊಳ್ಳುತ್ತಾರೆ. ಕಾರಣ ರೇಸ್ ವೇಳೆ ಕಾಕ್‌ಪಿಟ್ ತಾಪಮಾನವೂ 50 ರಿಂದ 60 ಡಿಗ್ರಿ ಸೆಲ್ಸಿಯಸ್ಗೆ ತಲುಪುತ್ತದೆ. ಬೆಂಕಿ-ನಿರೋಧಕ ರೇಸಿಂಗ್ ಸೂಟ್‌ಗಳು, ಕೈಗವಸುಗಳು ಮತ್ತು ಹೆಲ್ಮೆಟ್ ಧರಿಸುವದರಿಂದ ಇದು ದೇಹದ ಊಷ್ಟವನ್ನು ಹೆಚ್ಚಿಸುತ್ತದೆ. ಅಲ್ಲದೇ ಬ್ರೇಕಿಂಗ್ ಮತ್ತು ಗೇರ್ ಹಾಕಲು ಹೆಚ್ಚಿನ ಬಲ ವ್ಯವಯಿಸಬೇಕಾಗುತ್ತದೆ. ರೇಸ್ ವೇಳೆ ದೇಹ ನಿರ್ಜಲಿಕರಣಗೊಳ್ಳುವುದರಿಂದ ಪ್ರತಿ ಪಂದ್ಯದ ಬಳಿಕ ಚಾಲಕರು 2 ರಿಂದ 4 ಕೆಜೆ ತೂಕ ಕಳೆದುಕೊಳ್ಳುತ್ತಾರೆ.
F1 ರೇಸ್ ಕಾರುಗಳನ್ನು ತಯಾರಿಸುವ ಕಂಪನಿಗಳು
Ferrari ಮತ್ತು Mercedes ಕಾರುಗಳನ್ನು ತಯಾರಿಸುತ್ತವೆ. McLaren ಚಾಸಿಸ್ ವಿನ್ಯಾಸಗೊಳಿಸಿದರೇ, Red Bull Racing ಏರೋಡೈನಾಮಿಕ್ ವಿನ್ಯಾಸಗೊಳಿಸತ್ತದೆ.

F1 ಕಾರಿನ ಪ್ರಮುಖ ಭಾಗಗಳ ಮತ್ತು ಅದರ ಬೆಲೆ
ಎಂಜಿನ್ (Power Unit): ₹40 ರಿಂದ 130 ಕೋಟಿ
ಕಾರ್ಬನ್ ಫೈಬರ್ ಚಾಸಿಸ್: ₹5 ರಿಂದ 6 ಕೋಟಿ
ಗಿಯರ್‌ಬಾಕ್ಸ್: ₹2 ರಿಂದ 3 ಕೋಟಿ
ಮುಂಭಾಗ ಮತ್ತು ಹಿಂಭಾಗದ ವಿಂಗ್‌ಗಳು: ₹1 ರಿಂದ 2 ಕೋಟಿ
ಹ್ಯಾಲೋ ಸುರಕ್ಷತಾ ವ್ಯವಸ್ಥೆ: ₹10 ರಿಂದ 15 ಲಕ್ಷ+
ಸ್ಟೇರಿಂಗ್ - 40+ ಲಕ್ಷ
ಬ್ರೇಕ್ ಸಿಸ್ಟಮ್ - 2+ ಕೋಟಿ
ಟೈರ್ - ಎಫ್ ರೇಸ್ನಲ್ಲಿ ಬಳಕೆ ಮಾಡುವ ಒಂದು ಟೈರ್ ಬೆಲೆ 3 ಲಕ್ಷ ಕ್ಕೂ ಅಧಿಕವಾಗಿರುತ್ತದೆ. ಸಂಪೂರ್ಣ ಸೆಟ್ 12 ಲಕ್ಷ ಆಗಿರಲಿದೆ.
F1 ಇತ್ತೀಚಿನ ವಿಶ್ವ ಚಾಂಪಿಯನ್ನರ ಪಟ್ಟಿ
1950 ರಿಂದ ಇದುವರೆಗೆ ಕೇವಲ 35 ಚಾಲಕರು ಮಾತ್ರ F1 ವಿಶ್ವಚಾಂಪಿಯನ್ಗಳಾಗಿದ್ದಾರೆ. 2016 ರಿಂದ 2025ರ ವರೆಗೆ ಲ್ಯಾಂಡೊ ನಾರ್ರಿಸ್, ಮ್ಯಾಕ್ಸ್ ವರ್ಸ್ಟಪ್ಪೆನ್, ಮ್ಯಾಕ್ಸ್ ವರ್ಸ್ಟಪ್ಪೆನ್, ಮ್ಯಾಕ್ಸ್ ವರ್ಸ್ಟಪ್ಪೆನ್, ಮ್ಯಾಕ್ಸ್ ವರ್ಸ್ಟಪ್ಪೆನ್, ಲೂಯಿಸ್ ಹ್ಯಾಮಿಲ್ಟನ್, ಲೂಯಿಸ್ ಹ್ಯಾಮಿಲ್ಟನ್, ಲೂಯಿಸ್ ಹ್ಯಾಮಿಲ್ಟನ್, ಲೂಯಿಸ್ ಹ್ಯಾಮಿಲ್ಟನ್, ನಿಕೊ ರೋಸ್‌ಬರ್ಗ್ ಚಾಂಪಿಯನ್ಗಳಾಗಿದ್ದಾರೆ.

ಎಫ್1 ಕಾರಿನ ಬೆಲೆ: ಒಂದು F1 ರೇಸ್ ಕಾರಿನ ಬೆಲೆ $15 ರಿಂದ 20 ಮಿಲಿಯನ್ ಡಾಲರ್ ಆಗಿರಲಿದೆ. ಭಾರತೀಯ ರೂಪಾಯಿಯಲ್ಲಿ 100 ರಿಂದ 170 ಕೋಟಿ ವರೆಗೆ ಇರಲಿದೆ.
ಎಫ್ 1 ಸಮಯ: ಫಾರ್ಮುಲಾ ಒನ್ ರೇಸ್ ಸಾಮಾನ್ಯವಾಗಿ ಒಂದೂವರೆ ಗಂಟೆ ಮತ್ತು ಎರಡು ಗಂಟೆಗಳ ಕಾಲ ನಡೆಯುತ್ತದೆ. ಪ್ರತಿ ಓಟದ ಅಂತರವು 305 ಕಿಲೋಮೀಟರ್‌ಗಳನ್ನು ಮೀರಿರುತ್ತದೆ.
ಇದನ್ನೂ ಓದಿ: ಫಿಫಾ ಮಹಾಕುಂಭಕ್ಕೆ ವೈಭವಯುತ ಚಾಲನೆ..! ಕಣ್ಮನ ಸೆಳೆದ ಉದ್ಘಾಟನಾ ಸಮಾರಂಭ

