ಶಸ್ತ್ರಚಿಕಿತ್ಸೆಗೆ ಒಳಗಾದ ತಿಲಕ್ ವರ್ಮಾ; ನ್ಯೂಜಿಲೆಂಡ್ ಟಿ-20 ಸರಣಿಯಿಂದ ಹೊರಗುಳಿದ ಸ್ಟಾರ್ ಬ್ಯಾಟ್ಸ್‌ಮನ್
ಭಾರತದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ, ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಿಗೆ ಅವರು ಆಡುವುದು ಅನುಮಾನವಾಗಿದೆ.

By ANI
Published : January 8, 2026 at 3:08 PM IST
ನವದೆಹಲಿ: ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ, 2025ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದೆ. ಅಲ್ಲದೇ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ.
23 ವರ್ಷದ ಆಟಗಾರ ವಿಜಯ್ ಹಜಾರೆ ಟ್ರೋಫಿ ಏಕದಿನ ಚಾಂಪಿಯನ್‌ಶಿಪ್‌ಗಾಗಿ ಹೈದರಾಬಾದ್ ತಂಡದೊಂದಿಗೆ ರಾಜ್‌ಕೋಟ್‌ನಲ್ಲಿ ಆಡುವಾಗ ತೀವ್ರ ನೋವಿನಿಂದ ಬಳಲುತ್ತಿದ್ದ ಕಾರಣ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಮೊದಲಿಗೆ ಅವರನ್ನು ಗೋಕುಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಯಿತು. ಈ ವೇಳೆ ಅವರಿಗೆ ವೃಷಣ ತಿರುಚುವಿಕೆ (ಹಠಾತ್, ತೀವ್ರವಾದ ನೋವು) ಇರುವುದು ಪತ್ತೆಯಾಯಿತು. ಹೀಗಾಗಿ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಲಾಯಿತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವರ್ಷದಿಂದ ಟಿ-20 ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ವರ್ಮಾ ಗುರುತಿಸಿಕೊಂಡಿದ್ದಾರೆ. ಸ್ಟೈಲಿಶ್ ಎಡಗೈ ಬ್ಯಾಟ್ಸ್‌ಮನ್ 2025ರ ಏಷ್ಯಾಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅಲ್ಲಿ ಅವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅಜೇಯ 69 ರನ್ಗಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
23 ವರ್ಷದ ಆಟಗಾರ ಆಗಸ್ಟ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ T20 ಪಂದ್ಯದೊಂದಿಗೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಅಂದಿನಿಂದ, ಅವರು 40 ಪಂದ್ಯಗಳ 37 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 144.09 ಸ್ಟ್ರೈಕ್ ರೇಟ್‌ನೊಂದಿಗೆ 49.29 ರ ಅದ್ಭುತ ಸರಾಸರಿಯಲ್ಲಿ 1183 ರನ್‌ಗಳನ್ನು ಗಳಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಎರಡು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಏತನ್ಮಧ್ಯೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿಯು ಜನವರಿ 21 ರಿಂದ ಜನವರಿ 31 ರವರೆಗೆ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಟಿ-20 ಪಂದ್ಯಗಳನ್ನು ನಾಗ್ಪುರ, ರಾಯ್‌ಪುರ, ಗುವಾಹಟಿ, ವಿಶಾಖಪಟ್ಟಣ ಮತ್ತು ತಿರುವನಂತಪುರಂ ಆಯೋಜಿಸಲಿವೆ.
ಎರಡೂ ದೇಶಗಳ ನಡುವಿನ ಟಿ20 ಸರಣಿಯು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಸಿದ್ಧತೆ ನಡೆಸಲು ಸಹಾಯ ಮಾಡುತ್ತದೆ. ಹಾಲಿ ಚಾಂಪಿಯನ್ ಭಾರತ ತಂಡವು ನಮೀಬಿಯಾ, ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ಅಮೆರಿಕ ತಂಡಗಳೊಂದಿಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ.
ಮೆನ್ ಇನ್ ಬ್ಲೂ ತಂಡವು ಫೆಬ್ರವರಿ 7 ರಂದು ಯುಎಸ್ಎ ವಿರುದ್ಧ ಟಿ20 ವಿಶ್ವಕಪ್ 2026 ರ ಗುಂಪು ಹಂತದ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ, ಫೆಬ್ರವರಿ 15 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮತ್ತು ಫೆಬ್ರವರಿ 18 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ : ಆರ್ಸಿಬಿ ಆಟಗಾರನಿಗೆ ಅನ್ಯಾಯ! 5 ಪಂದ್ಯಗಳಲ್ಲಿ 514ರನ್ ಗಳಿಸಿದರು ತಂಡದಲ್ಲಿಲ್ಲ ಸ್ಥಾನ

