ETV Bharat / sports

ವಿಚಿತ್ರ ರೀತಿಯಲ್ಲಿ ರನೌಟ್​ ಆದ ತಿಲಕ್​ ವರ್ಮಾ; ವಿಡಿಯೋ ವೈರಲ್​

ವೆಸ್ಟ್​ ಇಂಡೀಸ್​ ವಿರುದ್ಧ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ತಿಲಕ್​ ವರ್ಮಾ ವಿಚಿತ್ರ ರೀತಿಯಲ್ಲಿ ರನೌಟ್​ ಆಗಿದ್ದು ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ತಿಲಕ್​ ವರ್ಮಾ
ತಿಲಕ್​ ವರ್ಮಾ (IANS)
author img

By ETV Bharat Sports Team

Published : October 12, 2026 at 11:39 AM IST

2 Min Read
Choose ETV Bharat

Tilak Varma Run Out Video: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ, ಭಾರತದ ಉಪನಾಯಕ ತಿಲಕ್ ವರ್ಮಾ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದಾರೆ. ಚೆಂಡು ಬೌಂಡರಿಗೆ ಹೋಗಿದೆ ಎಂದು ಭಾವಿಸಿ ಕ್ರೀಸ್​ ತೊರೆದಿದ್ದ ತಿಲಕ್​ ಕೊನೆಗೆ ರನೌಟ್​ ಬಲೆಗೆ ಬಿದ್ದಿದ್ದಾರೆ. ಅವರು ಔಟಾದ ರೀತಿ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಈ ಘಟನೆಯ ಸಂಪೂರ್ಣ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯ ಭಾನುವಾರ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ಭಾರತ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ, ವೆಸ್ಟ್ ಇಂಡೀಸ್ ಬೌಲರ್ ಗುಡಕೇಶ್ ಮೋತಿ, ಅಕ್ಷರ್ ಪಟೇಲ್ ಅವರಿಗೆ ಲೆಗ್ ಸೈಡ್ ಕಡೆಗೆ ಬೌಲ್ ಮಾಡಿದರು. ಅಕ್ಷರ್​ ಚೆಂಡನ್ನು ಬಲವಾಗಿ ಹೊಡೆದರು. ನಂತರ ಚೆಂಡು ಬೌಂಡರಿ ಲೈನ್​ ದಾಟಿದೆ ಎಂದು ಭಾವಿಸಿ, ಅಕ್ಷರ್ ಪಟೇಲ್ ಮತ್ತು ತಿಲಕ್ ವರ್ಮಾ ರನ್ ಪೂರ್ಣಗೊಳಿಸದೆ ಪಿಚ್​ ಮಧ್ಯೆ ನಿಂತು ಪರಸ್ಪರ ಅಭಿನಂದಿಸಿದರು. ಆದಾಗ್ಯೂ, ವೆಸ್ಟ್ ಇಂಡೀಸ್ ಫೀಲ್ಡರ್ ಕಾಮಿಲ್ ಪೂರನ್ ವೇಗವಾಗಿ ಚೆಂಡನ್ನು ಬೌಂಡರಿಗೆ ತಲುಪದಂತೆ ತಡೆದು ಚೆಂಡನ್ನು ಕೀಪರ್‌ಗೆ ನೀಡಿದರು.

ಈ ವೇಳೆ ಅಕ್ಷರ್ ಪಟೇಲ್ ಸಮಯಕ್ಕೆ ಸರಿಯಾಗಿ ಕ್ರೀಸ್ ಒಳಗೆ ತಲುಪಿದರು. ಈ ವೇಳೆ ಕೀಪರ್ ಹೋಪ್ ಚೆಂಡನ್ನು ಬೌಲರ್‌ನತ್ತ ಎಸೆದರು ಸ್ಟಂಪ್​ಗೆ ಅಂಟಿಸಲು ಹೇಳಿದರು. ಚೆಂಡನ್ನು ಸ್ವೀಕರಿಸಿದ ಗುಡಕೇಶ್ ಮೋತಿ ವಿಕೆಟ್​ಗಳನ್ನು ಉರುಳಿಸಿದರು. ಈ ವೇಳೆ ತಿಲಕ್ ವರ್ಮಾ ಇನ್ನೂ ಕ್ರೀಸ್‌ನ ಹೊರಗಿದ್ದರು. ನಂತರ ವೆಸ್ಟ್​ ಇಂಡೀಸ್​ ಆಟಗಾರರು ರನ್​ ಔಟ್​ಗೆ ಅಪೀಲ್​ ಮಾಡಿದರು. ಈ ವೇಳೆ ಮೂರನೇ ಅಂಪೈರ್ ಪರಿಶೀಲಿಸಿ ಅವರನ್ನು ರನ್ ಔಟ್ ಎಂದು ಘೋಷಿಸಿದರು. ಇದರಿಂದಾಗಿ ತಿಲಕ್ ವರ್ಮಾ ವಿಚಿತ್ರ ರೀತಿಯಲ್ಲಿ ವಿಕೆಟ್​ ಕಳೆದುಕೊಂಡರು. ಇದಾದ ಬೆನ್ನಲ್ಲೆ ಅಕ್ಷರ್​ ಪಟೇಲ್​ ಸಹ ರನ್​ ಔಟ್​ ಆಗಿ ಪೆವಿಲಿಯನ್​ ಸೇರಿದರು.

ಈ ಹಿಂದೆಯೂ ಸಂಭವಿಸಿದ್ದ ಘಟನೆ

ಈ ಘಟನೆ ಸಂಭವಿಸಿದ್ದು ಇದೆ ಮೊದಲಲ್ಲ. ಈ ಹಿಂದೆ 2011ರ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲಿ, ಇಂಗ್ಲೆಂಡ್ ಬ್ಯಾಟರ್ ಇಯಾನ್ ಬೆಲ್ ಇದೇ ರೀತಿಯಾಗಿ ರನೌಟ್ ಆಗಿದ್ದರು. ತಮ್ಮ ತಂಡದ ಸಹ ಆಟಗಾರ ಇಯಾನ್ ಮಾರ್ಗನ್ ಹೊಡೆದ ಚೆಂಡು ಬೌಂಡರಿಗೆ ಹೋಗಿದೆ ಎಂದು ಅವರು ಭಾವಿಸಿದರು. ತಪ್ಪಾಗಿ ಅರ್ಥೈಸಿಕೊಂಡ ಅವರು ಎಸೆತ ಪೂರ್ಣಗೊಳ್ಳುವ ಮೊದಲೆ ಕ್ರೀಸ್ ಬಿಟ್ಟು ತಮ್ಮ ಸಹ ಆಟಗಾರನ ಜೊತೆ ಮಾತನಾಡಲು ಪ್ರಾರಂಭಿಸಿದರು.

ಈ ವೇಳೆ ಭಾರತೀಯ ಫೀಲ್ಡರ್‌ಗಳು ಚೆಂಡನ್ನು ಪಡೆದು ವಿಕೆಟ್​ಗೆ ಅಂಟಿಸುವ ಮೂಲಕ ರನ್ ಔಟ್​ಗೆ ಮನವಿ ಮಾಡಿದ್ದರು. ಆದಾಗ್ಯೂ, ಅಂದಿನ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾನವೀಯತೆ ಮೆರೆದು ತಂಡದ ಮನವಿಯನ್ನು ವಾಪಸ್​ ಪಡೆದುಕೊಂಡಿದ್ದರು. ಇದರಿಂದಾಗಿ ಬೆಲ್‌ ಮತ್ತೆ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡರು.

ಭಾರತ ವೆಸ್ಟ್​ ಇಂಡೀಸ್​ 3ನೇ ಪಂದ್ಯ ಫಲಿತಾಂಶ

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಟಿ20ಐನಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು 14 ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ 224 ರನ್‌ಗಳ ಗುರಿಯನ್ನು ನಿಗದಿ ಪಡಿಸಿತು. ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 7 ವಿಕೆಟ್‌ಗೆ 209 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ: ಧೋನಿ ದಾಖಲೆ ಮುರಿದು ಅಗ್ರಸ್ಥಾನ ತಲುಪಿದ ಶ್ರೇಯಸ್ ಅಯ್ಯರ್​